ನವದೆಹಲಿ: ದೇಶಾದ್ಯಂತ ಮತ ಕಳ್ಳರು ಮತ್ತು ಪ್ರಜಾಪ್ರಭುತ್ವವನ್ನು ನಾಶಪಡಿಸುವವರನ್ನು ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಕ್ಷಿಸುತ್ತಲೇ ಬರುತ್ತಿದ್ದಾರೆ ಎಂದು ಕಾಂಗ್ರೆಸ್ ವರಿಷ್ಠ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಗಂಭೀರ ಅರೋಪ ಮಾಡಿದ್ದಾರೆ.
ಅವರು ಇಂದು ದೆಹಲಿಯ ಇಂದಿರಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮತದಾರರ ಹೆಸರನ್ನು ಹೇಗೆ ಅಳಿಸಿ ಹಾಕಲಾಗುತ್ತಿದೆ ಎಂದು ಉದಾಹರಣೆಗಳ ಸಹಿತ ವಿವರಿಸಿದರು.
ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕರ್ನಾಟಕದ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ 6,018 ಮಂದಿಯ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲು ಪ್ರಯತ್ನ ನಡೆದಿತ್ತು. ಇದಕ್ಕಾಗಿ ಬೇರೆ ರಾಜ್ಯಗಳ ಮೊಬೈಲ್ ನಂಬರ್ ಬಳಕೆ ಮಾಡಲಾಗಿದೆ. ಉದ್ದೇಶಪೂರ್ವಕವಾಗಿ ಕಾಂಗ್ರೆಸ್ ಮತಗಳನ್ನೇ ಗುರಿಯಾಗಿಸಿಕೊಳ್ಳಲಾಗಿದೆ. ವೋಟ್ ಗೋದಾಬಾಯಿ ಎಂಬುವವರ ಮತ ಡಿಲೀಟ್ ಮಾಡಲಾಗಿದೆ. ಆದರೆ ಅವರು ನನ್ನ ಮತವನ್ನು ಪಟ್ಟಿಯಿಂದ ತೆಗೆದು ಹಾಕಲು ಅರ್ಜಿಯನ್ನೇ ಹಾಕಿಲ್ಲ ಎಂದಿದ್ದಾರೆ ಎಂದರು.
ಚುನಾವಣಾ ಆಯೋಗವು ಈ ಅಕ್ರಮವನ್ನು ನಿಲ್ಲಿಸಬೇಕು. ಕೇಂದ್ರ ಚುನಾವಣಾ ಆಯೋಗಕ್ಕೆ ಕರ್ನಾಟಕದ ಸಿಐಡಿ 18 ನೋಟಿಸ್ ಕಳುಹಿಸಿದೆ. ಆದರೆ ಆಯೋಗ ಇದುವರೆಗೂ ಉತ್ತರ ನೀಡಿಲ್ಲ. ಅಕ್ರಮ ನಡೆದಿಲ್ಲ ಎಂದಾದರೆ ಸಿಐಡಿ ಕೇಳಿರುವ ಮಾಹಿತಿಯನ್ನು ಒದಗಿಸಲು ಸಮಸ್ಯೆ ಏನು ಎಂದು ಪ್ರಶ್ನಿಸಿದರು. ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ಚುನಾವಣಾ ಅಕ್ರಮಗಳು ಹೇಗೆ ನಡೆಯುತ್ತವೆ ಎಂಬುದನ್ನುತಿಳಿದುಕೊಳ್ಳಲು ಇದು ಮಹತ್ವದ ಉದಾಹರಣೆಯಾಗಿದೆ. ನಾನು ಈ ಹಿಂದೆ ಹೇಳಿದ್ದ ‘ಹೈಡ್ರೊಜೆನ್ ಬಾಂಬ್’ ಇದಲ್ಲ. ಅದನ್ನೂ ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ.
ಚುನಾವಣಾ ಅಕ್ರಮ ಎಸಗುವವರನ್ನು ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಕ್ಷಣೆ ಮಾಡುತ್ತಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ಸಂಪೂರ್ಣ ಮಾಹಿತಿ ಇದೆ. ಆದರೂ ಆಯುಕ್ತರು ಪ್ರಜಾಪ್ರಭುತ್ವದ ಹಂತಕರ ರಕ್ಷಣೆಯಲ್ಲಿ ನಿರತರಾಗಿದ್ದಾರೆ ಎಂದು ಟೀಕಿಸಿದರು.