ಮಾಜಿ ಕೇಂದ್ರ ಸಚಿವ ಜೈರಾಮ್ ರಮೇಶ್ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ರಾಜ್ಯಸಭಾ ಸದಸ್ಯರು. ಚುನಾವಣಾ ಆಯೋಗವು ಚುನಾವಣಾ ಬಾಂಡ್ ಗಳ ವಿವರಗಳನ್ನು ಪ್ರಕಟಿಸಿದ ಬಳಿಕ ಬಹಿರಂಗ ಗೊಂಡಿರುವ ಮಾಹಿತಿಗಳು ಏನು ಹೇಳುತ್ತಿವೆ ಎಂಬುದನ್ನು ವಿಶ್ಲೇಷಣೆ ನಡೆಸಿ ಅವರು ಟ್ವೀಟ್ ಮಾಡುತ್ತಿದ್ದಾರೆ. ಚುನಾವಣಾ ಬಾಂಡ್ (ಎಲೆಕ್ಟೋರಲ್ ಬಾಂಡ್) ವಿಷಯದಲ್ಲಿ ಗೃಹಮಂತ್ರಿ ಅಮಿತ್ ಶಾ ಭಾರಿ ಸುಳ್ಳುಗಳನ್ನು ಹೇಳಿ ಜನರನ್ನು ದಾರಿ ತಪ್ಪಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಇಂದು ಜೈರಾಮ್ ರಮೇಶ್ ಅವರು ಅಮಿತ್ ಷಾ ಹೇಳುತ್ತಿರುವ ಸುಳ್ಳುಗಳನ್ನು ವಿವರಿಸಿದ್ದಾರೆ.
ಚುನಾವಣಾ ಬಾಂಡ್ (ಎಲೆಕ್ಟೋರಲ್ ಬಾಂಡ್) ವಿಷಯದಲ್ಲಿ ಗೃಹಮಂತ್ರಿ ಅಮಿತ್ ಶಾ ಇವರು ಎಂದಿನಂತೆ ತಮ್ಮ ಮೂಲ ಜುಮ್ಲಾ ಬುದ್ದಿ ತೋರಿಸುತ್ತಾ ಭಾರಿ ಸುಳ್ಳುಗಳನ್ನು ಹೇಳಿ ಭಾರತದ ಜನರನ್ನು ದಾರಿ ತಪ್ಪಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಮೂಲತಃ ಅವರು ಹೇಳುತ್ತಿರುವ ಅಂಕಿ ಸಂಖ್ಯೆ ಹಾಗೂ ಸಂದರ್ಭಗಳೆಲ್ಲಾ ಪೂರ್ಣ ತಪ್ಪು. ವಾಸ್ತವ ಸಂಗತಿ ಈ ಕೆಳಗಿನಂತಿದೆ :
1) ಮೊದಲನೆಯದಾಗಿ, ಚುನಾವಣಾ ಬಾಂಡುಗಳಲ್ಲಿ ಸಂಗ್ರಹವಾದ ಒಟ್ಟು ಮೊತ್ತದಲ್ಲಿ ರೂ.6,000 ಕೋಟಿ ನೇರವಾಗಿ ಬಿಜೆಪಿ ಪಕ್ಷದ ಪಾಲಾಗಿದೆ. ಈ ಹಣವನ್ನು ಕಂಪನಿಗಳು ಸ್ವಂತ ಇಚ್ಛೆಯಿಂದ ಕೊಟ್ಟಿದ್ದಲ್ಲವೇ ಅಲ್ಲ. ಅದು ನಿಜವಾಗಿ ಭ್ರಷ್ಟಾಚಾರ ಮತ್ತು ಸುಲಿಗೆಯಿಂದ ಬಂದಿದೆ ಎಂಬುದಕ್ಕೆ ಸಾಕಷ್ಟು ಪುರಾವೆಗಳು ಬಯಲಾಗಿವೆ.
2) ಅಮಿತ್ ಷಾ ಅವರು ರೂ.14,000 ಕೋಟಿ ಪ್ರತಿಪಕ್ಷಗಳ ಪಾಲಾಗಿದೆ ಎಂದು ಆಧಾರ ರಹಿತ ಹೇಳಿಕೆ ಕೊಟ್ಟಿದ್ದಾರೆ. ಆದರೆ ಅವರ ಸರಕಾರವು ಮೊದಲಿನಿಂದಲೂ ಎಲ್ಲಾ ತರದ ಅಂಕಿ ಸಂಖ್ಯೆಗಳನ್ನು ತಿರುಚಿ ಉತ್ಪ್ರೇಕ್ಷೆ ಮಾಡಿ ತಮ್ಮ ಸರಕಾರಕ್ಕೆ ಹಾಗೂ ತಮ್ಮ ಪಕ್ಷಕ್ಕೆ ಅನುಕೂಲವಾಗುವಂತೆ ಬಳಸುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ಕರಾಳ ಸತ್ಯ. ನಿಜವಾಗಿ ಬಿಜೆಪಿಯೇತರ ಪಕ್ಷಗಳು ಪಡೆದ ಒಟ್ಟು ಮೊತ್ತ ರೂ.14,000 ಆಗಿರದೆ ಅದು ಒಟ್ಟು ರೂ. 6,000 ಕೋಟಿ ಅಷ್ಟೇ.
3) ಪ್ರತಿಪಕ್ಷಗಳಿಗೆ ಸಿಕ್ಕ ಈ ರೂ. 6,000 ಕೋಟಿಗಳಲ್ಲಿ ಸುಮಾರು ರೂ. 2,700 ಕೋಟಿ ಸ್ವತಃ ಬಿಜೆಪಿಯದೇ ಬಿ-ಟೇಮಿಗೆ ಹೋಗಿದೆ. ಈ ಬಿ-ಟೀಮುಗಳಲ್ಲಿ ಕೆಲವು ನೇರವಾಗಿ ಎನ್‌ಡಿಏ ಸದಸ್ಯ ಪಕ್ಷಗಳೆ ಆಗಿದ್ದರೆ, ಕೆಲವು ಪರೋಕ್ಷವಾಗಿ ಎನ್‌ಡಿಏ ಸಹಯೋಗಿ ಪಕ್ಷಗಳು. ಈ ಬಿ-ಟೀಮ್ ಪಡೆದ ಚು.ಬಾಂಡ್ ಮೊತ್ತವನ್ನು ಕಳೆದರೆ ನೈಜ ಪ್ರತಿಪಕ್ಷಗಳಿಗೆ ಹೋಗಿರುವ ಬಾಂಡ್ ಮೊತ್ತ ಕೇವಲ ರೂ. 3,300 ಕೋಟಿ ಅಷ್ಟೇ.
4) ಬಿಜೆಪಿ ಪಕ್ಷವು 300 ಕ್ಕೂ ಹೆಚ್ಚು ಸಂಸದರನ್ನು ಹೊಂದಿರುವುದರಿಂದ ಚು.ಬಾಂಡ್‌ಗಳಲ್ಲಿ ಹೆಚ್ಚಿನ ಪಾಲನ್ನು ತಮ್ಮ ಪಕ್ಷ ಪಡೆದಿರುವುದು ಸ್ವಾಭಾವಿಕ ಎಂದು ಗೃಹ ಸಚಿವರು ಸಮರ್ಥಿಸಿಕೊಂಡಿದ್ದಾರೆ. ಈ ಅಸಂಬದ್ಧ ಸಮರ್ಥನೆಯನ್ನು ಬದಿಗಿಟ್ಟು ಆಲೋಚಿಸಿದಾಗ ಗೃಹ ಸಚಿವರು ಇಂತಹಾ ಪ್ರಮುಖ ವಿಚಾರದಲ್ಲಿಯೂ ಭಾರತದ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂಬುದು ಅರ್ಥವಾಗುತ್ತದೆ. ಮೂಲತಃ ಬಿಜೆಪಿಗೆ ಎಷ್ಟು ಚಂದಾ ಸಿಕ್ಕಿದೆ, ಹಾಗೂ ಆದನ್ನು ಅವರು ಹೇಗೆ ಪಡೆದುಕೊಂಡಿದ್ದಾರೆ ಎಂಬುದನ್ನು ವಿಶ್ಲೇಷಿಸಿದಾಗ ಅವರ ಕರಾಳ ಭ್ರಷ್ಟ ಮಾರ್ಗಗಳು ಬಹಿರಂಗವಾಗುತ್ತವೆ.
ಬಿಜೆಪಿ ಪಕ್ಷವು ಎಲ್ಲಾ ಎಲೆಕ್ಟೋರಲ್ ಬಾಂಡ್‌ಗಳಲ್ಲಿ 50% ಕ್ಕಿಂತ ಹೆಚ್ಚು ಪಡೆದಿರುವುದು ಆಶ್ಚರ್ಯವಲ್ಲ. ಯಾಕೆಂದರೆ ಬಿಜೆಪಿ ಸರಕಾರವೇ 100% ಈಡಿ (ಜಾರಿ ನಿರ್ದೇಶನಾಲಯ), 100% ಸಿಬಿಐ ಮತ್ತು 100% ಆದಾಯಕರ ಇಲಾಖೆಯನ್ನು ತನ್ನ ಕಪಿಮುಷ್ಟಿಯಿಂದ ನಿಯಂತ್ರಿಸುತ್ತದೆ. ಅದಕ್ಕಿಂತ ಮಿಗಿಲಾಗಿ ಅತ್ಯಂತ ಫಲವತ್ತಾದ 100% ರಕ್ಷಣಾ ಒಪ್ಪಂದಗಳು, 100% ರಾಷ್ಟ್ರೀಯ ಹೆದ್ದಾರಿ ಗುತ್ತಿಗೆಗಳು ಮತ್ತು 100% ರೈಲ್ವೆ & ಬಂದರು ಗುತ್ತಿಗೆಗಳನ್ನು ಬಿಜೆಪಿ ಪಕ್ಷವೇ ತಾನೇ ನಿಯಂತ್ರಿಸುತ್ತಿರುವುದು. ಕೇಂದ್ರ ಸರಕಾರದ ಈ ಸರಕಾರಿ ಸಂಸ್ಥೆಗಳ ನಿಯಂತ್ರಣದ ಮೂಲಕವೇ ಜನರು ಹೇಳುತ್ತಿರುವ ಈ ಕೆಳಗಿನ ಭ್ರಷ್ಟ ಆಚರಣೆಗಳಲ್ಲಿ ಬಿಜೆಪಿ ತೊಡಗಿಸಿಕೊಂಡಿದೆ.
1) ಚಂದಾ ಕೊಡಿ ಧಂಧೆ ಪಡೆಯಿರಿ. (ಕ್ವಿಡ್ ಪ್ರೋ ಕೊ)
2) ಹಫ್ತಾ ವಸೂಲಿ (ಸರಕಾರಿ ಇಲಾಖೆಗಳಿಂದ ತನಿಖೆ ನಿವಾರಣೆ ಶುಲ್ಕ)
3) ಲಂಚ ಕೊಡಿ ಸರಕಾರಿ ಗುತ್ತಿಗೆ ಪಡೆಯಿರಿ (ಕಿಕ್‌ಬ್ಯಾಕ್ಸ್)
4) ಕಪ್ಪು ಹಣ ಬಿಳಿ ಮಾಡುವ ಶೆಲ್ ಕಂಪನಿಗಳಿಗೆ ಕಾನೂನಿನ ಕುಣಿಕೆಯಿಂದ ರಕ್ಷಣೆ.
ಬಿಜೆಪಿ ಪಕ್ಷವು ಇಷ್ಟೆಲ್ಲ ಭಾರಿ ಮೊತ್ತವನ್ನು ಭ್ರಷ್ಟಾಚಾರದ ಮೂಲಕ ತನ್ನ ಪ್ರಚಾರದ ಬೊಕ್ಕಸಕ್ಕೆ ತುಂಬಿಸಿಕೊಳ್ಳುವುದರ ಜತೆಗೆ, ಚುನಾವಣೆಗೂ ಮುನ್ನ ಪ್ರತಿಪಕ್ಷಗಳ ಬ್ಯಾಂಕ್ ಖಾತೆಗಳಿಗೆ ನಿರ್ಬಂಧ ಹಾಕಿ ಕಾಂಗ್ರೆಸ್ ಮತ್ತು ವಿರೋಧಿ ಪಕ್ಷಗಳನ್ನು ಕಾನೂನಿನ ಕರಾಳ ದುರುಪಯೋಗದ ಮೂಲಕ ಆರ್ಥಿಕವಾಗಿ ಕಟ್ಟಿ ಹಾಕಿ ಮನೋಬಲ ಕುಗ್ಗಿಸುವ ಪ್ರಯತ್ನವನ್ನು ಬಿಜೆಪಿ ಮಾಡಿದೆ. ತಮ್ಮ ಈ ನೀಚ ಕೆಲಸಕ್ಕೆ ಮಡಿಲ ಮಾಧ್ಯಮಗಳ ಮೂಲಕ ಹಾಗೂ ಐಟಿ ಸೆಲ್ ಮುಖಾಂತರ ಬಾಲಿಶ ಸಮರ್ಥನೆಗಳನ್ನೂ ಬಿಜೆಪಿ ಮಾಡಿಕೊಳ್ಳುತ್ತಿದೆ.
ಚುನಾವಣಾ ಬಾಂಡ್ ಹಗರಣವು ಭಾರತದ ಇತಿಹಾಸದಲ್ಲಿ ಅತಿದೊಡ್ಡ ಹಗರಣವೆಂದು ಬಹಿರಂಗವಾಗಿದೆ ಮತ್ತು ಭಾರತದ ಸರ್ವೋಚ್ಚ ನ್ಯಾಯಾಲಯದಿಂದ ಅಸಾಂವಿಧಾನಿಕವೆಂದು ಘೋಷಿಸಲ್ಪಟ್ಟಿದೆ, ಇದಕ್ಕೆ ದೇಶದ ಪ್ರಧಾನ ಮಂತ್ರಿಯ ನೇರ ಹೊಣೆ ಎಂಬುದು ಸ್ಪಷ್ಟ. ಹಾಗಾಗಿ ದೇಶದ ಅತ್ಯುಚ್ಚ ವ್ಯಕ್ತಿಯೇ ನೇರವಾಗಿ ಜವಾಬ್ದಾರಿ ಆಗಿರುವ ಈ ಹಗರಣದ ಸಂಪೂರ್ಣ ಆಳ-ಅಗಲವನ್ನು ಬಹಿರಂಗಪಡಿಸಲು ಸುಪ್ರೀಂ ಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ಸ್ವತಂತ್ರ ತನಿಖೆ ಅತ್ಯಗತ್ಯ.
ಕನ್ನಡಕ್ಕೆ: ಪ್ರವೀಣ್ ಎಸ್ ಶೆಟ್ಟಿ