ಮುಂಬೈ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಶಿವಸೇನಾ(ಶಿಂದೆ ಬಣ) ಮುಖ್ಯಸ್ಥ ಏಕನಾಥ ಶಿಂದೆ ಅವರು ಈ ಹಿಂದೆ ಕಾಂಗ್ರೆಸ್ ಸೇರಲು ಬಯಸಿದ್ದರು ಎಂದು ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವುತ್ ಶನಿವಾರ ಹೇಳಿದ್ದಾರೆ.
ನನ್ನ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಈಗ ಅಹ್ಮದ್ ಪಟೇಲ್ ಇಲ್ಲ. ಆದ್ದರಿಂದ ಈ ವಿಷಯದಲ್ಲಿ ಹೆಚ್ಚಿಗೆ ಏನನ್ನೂ ಹೇಳಲು ಬಯಸುವುದಿಲ್ಲ. ಅಹ್ಮದ್ ಪಟೇಲ್ ಅವರು 2020ರ ನವೆಂಬರ್ 25ರಂದು ನಿಧನ ಹೊಂದಿದ್ದಾರೆ. ಈ ಬಗ್ಗೆ ಮತ್ತಷ್ಟು ಪ್ರಶ್ನಿಸಿಲು ಮುಂದಾದಾಗ, ಈ ಬಗ್ಗೆ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಅವರನ್ನು ಕೇಳಿ ಎಂದು ಹೇಳಿದ್ದಾರೆ.
ಇದೇ ವೇಳೆ ಮಹಾರಾಷ್ಟ್ರ ಮಾಜಿ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಅವರ ಮೈತ್ರಿ ಆಹ್ವಾನದ ಬಗ್ಗೆ ಪ್ರತಿಕ್ರಿಯಿಸಿದ ರಾವುತ್, ರಾಜಕೀಯದಲ್ಲಿ ಯಾವುದು ಅಸಾಧ್ಯವಲ್ಲ ಎಂದಿದ್ದಾರೆ. ಏಕನಾಥ ಶಿಂದೆ ಮತ್ತು ಎನ್‌ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನದ ‘ಆಫರ್’ ನೀಡಿದ್ದ ನಾನಾ ಪಟೋಲೆ, ಕಾಂಗ್ರೆಸ್ ಜೊತೆ ಮೈತ್ರಿಯಾಗುವಂತೆ ಶುಕ್ರವಾರ ಬಹಿರಂಗ ಆಹ್ವಾನ ನೀಡಿದ್ದರು.
2019ರಲ್ಲಿ ಮಹಾ ವಿಕಾಸ ಅಘಾಡಿ ಸ್ಥಾಪನೆಯಾಗುತ್ತದೆ, 2022ರಲ್ಲಿ ಶಿಂದೆ ನೇತೃತ್ವದಲ್ಲಿ ‘ಅಸಂವಿಧಾನಿಕ’ ಸರ್ಕಾರ ರಚನೆಯಾಗುತ್ತದೆ, 2024 ದೇವೇಂದ್ರ ಫಡಣವೀಸ್ ಅವರು ಸಂಪೂರ್ಣ ಬಹುಮತ ಪಡೆಯುತ್ತಾರೆ ಎಂಬುದನ್ನು ಯಾರೂ ಊಹಿಸಿರಲಿಲ್ಲ ಎಂದು ರಾವುತ್ ಹೇಳಿದ್ದಾರೆ. ಬಾಳಾಸಾಹೇಬ್ ಠಾಕ್ರೆ ಅವರು ಕೇಸರಿ ಧ್ವಜಕ್ಕೂ ಶಿಂದೆಗೂ ಯಾವುದೇ ಸಂಬಂಧವಿಲ್ಲ. ಶಿಂದೆ ಮತ್ತು ಅಜಿತ್ ಪವಾರ್ ಅವರು ಬಿಜೆಪಿ ಧ್ವಜವನ್ನು ಹೊತ್ತುಕೊಂಡಿದ್ದಾರೆ’ ಎಂದು ಕಿಡಿಕಾರಿದ್ದಾರೆ.