ಇಡಿ ಬಿಡುಗಡೆ ಮಾಡಿರುವುದು ಜಪ್ತಿ ಮಾಹಿತಿ; ತನಿಖಾ ವರದಿ ಅಲ್ಲ; ಸಿಎಂ ಸಿದ್ದರಾಮಯ್ಯ

Most read

ಮೈಸೂರು: ಮುಡಾ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಬಿಡುಗಡೆ ಮಾಡಿರುವುದು ಜಪ್ತಿ ಮಾಹಿತಿಯ ವರದಿ ಮಾತ್ರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನ ಸುತ್ತೂರಿನಲ್ಲಿ ಶುಕ್ರವಾರ ಮಾತನಾಡಿದ ಅವರು, ಹಣ ಅಕ್ರಮ ವಹಿವಾಟು ಪ್ರಶ್ನೆ ಈ ಪ್ರಕರಣದಲ್ಲಿ ಉದ್ಭವಿಸುವುದೇ ಇಲ್ಲ. ಮುಡಾ ಮಾಜಿ ಆಯುಕ್ತ ನಟೇಶ್‌ಗೆ ED ಕೊಟ್ಟಿದ್ದ ನೋಟಿಸ್‌ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಅದರರ್ಥ ಕಾನೂನು ಪ್ರಕಾರ ಇಲ್ಲ ಎಂದು ತಾನೆ? ಇಲ್ಲದಿದ್ದರೆ ನ್ಯಾಯಾಲಯವೇಕೆ ತಡೆಯಾಜ್ಞೆ ಕೊಡುತ್ತಿತ್ತು? ಎಂದು ಅವರು ಪ್ರಶ್ನಿಸಿದರು.

ನನ್ನ ಹೆಸರು ಕೆಡಿಸಲು ವಿಪಕ್ಷಗಳು ಇಷ್ಟೆಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. EDಯು ಗುರುವಾರ ಬಿಡುಗಡೆ ಮಾಡಿರುವುದು ತನಿಖಾ ವರದಿಯಲ್ಲ, ಅದು ಕೇವಲ ಜಪ್ತಿ ವರದಿ. ಇಡಿಯ ತನಿಖೆ ರಾಜಕೀಯ ಪ್ರೇರಿತ ಎಂಬುದು ಎಲ್ಲರಿಗೂ ಗೊತ್ತಿದೆ. ನನ್ನ ವಿಚಾರದಲ್ಲಿ ಮಾತನಾಡಲು ವಿರೋಧ ಪಕ್ಷದವರಿಗೆ ಏನೂ ಸಿಕ್ಕಿಲ್ಲ. ಹೀಗಾಗಿ ಈ ವಿಚಾರ ಇಟ್ಟುಕೊಂಡು ಹೆಸರಿಗೆ ಮಸಿ ಬಳಿಯುವ ಯತ್ನ ಮಾಡುತ್ತಿದ್ದಾರೆ. ಆದರೆ ಬಿಜೆಪಿ ಯಶಸ್ವಿ ಅಗುವುದಿಲ್ಲ. ಮುಡಾ ವಿಚಾರದಲ್ಲಿ ನಾನು, ನಮ್ಮ ಕುಟುಂಬದವರು ಯಾವ ತಪ್ಪನ್ನೂ ಮಾಡಿಲ್ಲ ಎಂದು ಮತ್ತೊಮ್ಮೆ ತಿಳಿಸಿದರು.

ಮುಖ್ಯಮಂತ್ರಿ ಸ್ಥಾನ ಬದಲಾವಣೆ ಕರಿತು ಕೇಳಿದ ಪ್ರಶ್ನೆಗೆ ಗರಂ ಆದ ಅವರು, ನನಗೆ ಮತ್ತೆ ಮತ್ತೆ ಅದೇ ಪ್ರಶ್ನೆಯನ್ನು ಕೇಳಬೇಡಿ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೆಯೋ ಅದೇ ಅಂತಿಮ. ಎಲ್ಲವನ್ನೂ ತೀರ್ಮಾನ ಮಾಡುವುದು ಹೈಕಮಾಂಡ್. ಈ ವಿಚಾರದ ಬಗ್ಗೆ ನಾನು ಎಷ್ಟು ಬಾರಿ ಸ್ಪಷ್ಟೀಕರಣ ಕೊಡಲಿ ಹೇಳಿ? ಎಂದರು. ಇಬ್ಬರು, ಮೂವರು ಸಚಿವರು ಜೊತೆಯಲ್ಲಿ ಕುಳಿತು ಮಾತನಾಡಿದ ತಕ್ಷಣ ಚರ್ಚೆ ನಡೆದಿರುವುದು ಇದೇ ವಿಚಾರ ಎಂದು ಏಕೆ ಗ್ರಹಿಸಬೇಕು? ಊಹಾ ಪತ್ರಿಕೋದ್ಯಮ ಬಿಟ್ಟು ಬಿಡಿ. ಮೂರು ನಾಲ್ಕು ಜನ ಸೇರಿದಾಗ ರಾಜಕೀಯ ಚರ್ಚೆ ಮಾಡುತ್ತೇವೆ. ನನ್ನ ಪ್ರಕಾರ ಡಿನ್ನರ್ ಮೀಟಿಂಗ್ ಅಥವಾ ಸಭೆ ಮಾಡುವುದರಲ್ಲಿ ತಪ್ಪೇ ಇಲ್ಲ. ನೀವು ಅದರಲ್ಲಿ ಹುಡುಕುವ ಗ್ರಹಿಕೆ ಸರಿ ಇಲ್ಲ ಅಷ್ಟೇ ಎಂದರು.

ಕೇಂದ್ರ ಬಜೆಟ್‌ನಿಂದ ನಾನು ಏನನ್ನೂ ನಿರೀಕ್ಷೆ ಮಾಡುವುದಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ದುಡ್ಡು ಕೊಡುತ್ತೇನೆಂದು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರು. ಆದರೆ ಒಂದೇ ಒಂದು ರೂಪಾಯಿಯನ್ನೂ ಕೊಟ್ಟಿಲ್ಲ. ಹೀಗಾಗಿ ನಾನು ಏನನ್ನೂ ನಿರೀಕ್ಷೆ ಮಾಡುವುದಿಲ್ಲ. ಕೇಂದ್ರದಿಂದ ನಮ್ಮ ರಾಜ್ಯಕ್ಕೆ ಅನ್ಯಾಯವಾಗಿದೆ‌. ನಾಲ್ಕು ಲಕ್ಷ ಕೋಟಿ ರೂಪಾಯಿ ತೆರಿಗೆ ಕೊಡುತ್ತೇವೆ. ಕೇವಲ ರೂ. 68ಸಾವಿರ ಕೋಟಿ ತೆರಿಗೆ ನಮಗೆ ಕೊಡುತ್ತಾರೆ. ಕರ್ನಾಟಕಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿದೆ‌. ನಮ್ಮಗೆ ಈ ಬಾರಿಯೂ ಅನ್ಯಾಯ ಮಾಡುತ್ತಾರೆ ಎಂದರು.

ಮೈಕ್ರೊ ಫೈನಾನ್ಸ್ ಸಂಸ್ಥೆಗಳ ವಿಚಾರ ಕುರಿತು ಮಾತನಾಡಿದ ಅವರು, ಜನ ಎಲ್ಲಿ ಸಾಲ ಸಿಗುತ್ತದೆಯೋ ಅಲ್ಲಿಗೆ ಹೋಗುತ್ತಿದ್ದಾರೆ. ಹೆಚ್ಚು ಬಡ್ಡಿ ಹಾಕುತ್ತಿದ್ದಾರೆ. ಹೊರಗುತ್ತಿಗೆ ಮೂಲಕ ಗೂಂಡಾಗಳನ್ನು ಬಳಸಿಕೊಂಡ ಹಣ ವಸೂಲಿ ಮಾಡುತ್ತಿದ್ದಾರೆ. ಮೈಕ್ರೊ ಫೈನಾನ್ಸ್‌ಗಳು ಆರ್‌ಬಿಐ ನಿಯಮದಡಿ ಬರುತ್ತದೆ. ಕಡಿವಾಣ ಹಾಕಲು ಇನ್ನೂ ಸುಗ್ರೀವಾಜ್ಞೆ ಹೊರಡಿಸಿಲ್ಲ‌. ಸುಗ್ರೀವಾಜ್ಞೆ ಹೊರಡಿಸಿದ ನಂತರ ಇದಕ್ಕೆ ಕಡಿವಾಣ ಬೀಳಲಿದೆ ಎಂದು ತಿಳಿಸಿದರು.

ಶೇ. 28, 29, 30ರಷ್ಟು ಬಡ್ಡಿ ವಸೂಲಿ ಮಾಡುತ್ತಿದ್ದಾರೆ. ಇದರಿಂದ ಬೇಸತ್ತು ಸಾಲಗಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಯಾರು ವೀಪರೀತವಾಗಿ ಬಡ್ಡಿ ವಸೂಲಿ ಮಾಡುತ್ತಿದ್ದಾರೆಯೋ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಜನರು ಆತ್ಮಹತ್ಯೆ ಮಾಡಿಕೊಳ್ಳಬಾರದು. ಸರ್ಕಾರ ನಮ್ಮ ಪರವಿದೆ ಎಂದು ಹೇಳಿದರು.

ಕುಂಭಮೇಳ ಟೀಕಿಸುವ ಕಾಂಗ್ರೆಸ್‌ನವರು ಆಯೋಗ್ಯರು ಎಂಬ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿಕೆಗೆ ತಿರುಗೇಟು ನೀಡಿದರು. ಕುಂಭಮೇಳ ನಡೆಯುತ್ತಿರುವುದು ಎಲ್ಲಿ? ಹಾಗಾದರೆ ಅವರು ಅಯೋಗ್ಯರಾ? ಟೀಕೆ ಮಾಡಬಾರದು ಎಂದರೆ ಏನರ್ಥ? ವಿಜಯೇಂದ್ರ ಹೇಳಿಕೆ ಬಾಲಿಶವಾದುದು ಎಂದರು.

More articles

Latest article