ಎಎಪಿ ರಾಜ್ಯಸಭಾ ಸದಸ್ಯ ಸಂಜೀವ್ ಅರೋರಾ ಮತ್ತಿತರರ ವಿರುದ್ಧದ ಭೂ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಸೋಮವಾರ ಜಲಂಧರ್, ಲೂಧಿಯಾನ, ಗುರುಗ್ರಾಮ್ ಮತ್ತು ದೆಹಲಿಯ ಅನೇಕ ಸ್ಥಳಗಳಿಗೆ ದಾಳಿ ಮಾಡಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ,
ಲೂಧಿಯಾನ (ಪಂಜಾಬ್) ಮತ್ತು ಗುರುಗ್ರಾಮ್ ದಲ್ಲಿರುವ (ಹರಿಯಾಣ) 61 ವರ್ಷದ ಅರೋರಾ ಅವರ ಮನೆ ಸೇರಿದಂತೆ ಸುಮಾರು 17 ಕಡೆಗಳಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ.
ಜಲಂಧರ್‌ನಲ್ಲಿರುವ ರಿಯಲ್ ಎಸ್ಟೇಟ್ ಉದ್ಯಮಿ ಹೇಮಂತ್ ಸೂದ್ ಮತ್ತು ಮತ್ತೊಬ್ಬ ವ್ಯಕ್ತಿ ಚಂದ್ರಶೇಖರ್ ಅಗರವಾಲ್‌ಗೆ ಸಂಬಂಧಿಸಿದ ಮನೆಗಳಲ್ಲಿಯೂ ಶೋಧ ಕಾರ್ಯ ನಡೆಸಲಾಗುತ್ತಿದೆ ಎನ್ನಲಾಗಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಸಂಜೀವ್ ಅರೋರಾ, ಶೋಧ ಕಾರ್ಯಾಚರಣೆಗೆ ನಿಖರ ಕಾರಣ ತಿಳಿದುಬಂದಿಲ್ಲ. ನಾನು ಕಾನೂನು ಪಾಲಿಸುವ ನಾಗರಿಕನಾಗಿದ್ದೇನೆ, ಶೋಧ ಕಾರ್ಯಾಚರಣೆಯ ಕಾರಣದ ಬಗ್ಗೆ ನನಗೆ ಖಚಿತ ಮಾಹಿತಿ ಇಲ್ಲ. ಏಜೆನ್ಸಿಗಳೊಂದಿಗೆ ಸಂಪೂರ್ಣವಾಗಿ ಸಹಕರಿಸುತ್ತೇನೆ ಮತ್ತು ಅವರ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ನಮ್ಮ ಪಕ್ಷದ ಸಂಸದ, ಉದ್ಯಮಿ ವಿರುದ್ಧದ ದಾಳಿ ಪಕ್ಷವನ್ನು ಒಡೆಯುವ ಪ್ರಯತ್ನವಾಗಿದೆ. ಆದರೆ ಎಎಪಿ ಸದಸ್ಯರು ನಿಲ್ಲುವುದಿಲ್ಲ, ಮಾರಾಟವಾಗುವುದಿಲ್ಲ ಮತ್ತು ಹೆದರುವುದಿಲ್ಲ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮತ್ತು ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಫೋಸ್ಟ್ ಮಾಡಿದ್ದಾರೆ.