ಟಿಬೆಟ್‌ ನಲ್ಲಿ ಭೂಕಂಪ; 6.8 ರಷ್ಟು ತೀವ್ರತೆ ದಾಖಲು; 95 ಮಂದಿ ಸಾವು

Most read

ಬೀಜಿಂಗ್‌‌: ನೇಪಾಳ– ಟಿಬೆಟ್‌ ಗಡಿಯಲ್ಲಿ ಮಂಗಳವಾರ ಬೆಳಿಗ್ಗೆ 9.05ರ ವೇಳೆಗೆ 6.8 ರಷ್ಟು ತೀವ್ರತೆಯ ಭೂಕಂಪನ ಸಂಭವಿಸಿದ್ದು, 95ಕ್ಕೂ ಹೆಚ್ಚು ಮಂದಿ ಅಸುನೀಗಿದ್ದಾರೆ. ಚೀನಾ ಸ್ವಾಯತ್ತ ಟಿಬೆಟ್‌ನ ಕ್ಸಿಗಾಜ್ ನಗರದ ಡಿಂಗ್ರಿ ಕೌಂಟಿ ಭೂಕಂಪದ ಕೇಂದ್ರಬಿಂದುವಾಗಿದೆ. 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಚೀನಾದ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಭೂಕಂಪದ ಕೇಂದ್ರವನ್ನು 28.5 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 87.45 ಡಿಗ್ರಿ ಪೂರ್ವ ರೇಖಾಂಶದಲ್ಲಿ ಗುರುತಿಸಲಾಗಿದೆ. ಚೀನಾ ಭೂಕಂಪ ನೆಟ್‌ವರ್ಕ್ಸ್ ಸೆಂಟರ್ ನೀಡಿದ ವರದಿಯ ಆಧಾರದಲ್ಲಿ 10 ಕಿಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ತಿಳಿದು ಬಂದಿದೆ. ಭೂಕಂಪದ ತೀವ್ರತೆಗೆ ಹಲವಾರು ಮರಗಳು ಧರೆಗುರುಳಿವೆ. ಕೆಲವು ಕಟ್ಟಡಗಳು ಕುಸಿದು ಬಿದ್ದಿದ್ದರೆ ಇನ್ನೂ ಕೆಲವು ಕಟ್ಟಡಗಳು ಭಾಗಶಃ ಹಾನಿಗೊಳಗಾಗಿವೆ.

8 ಲಕ್ಷಕ್ಕೂ ಹೆಚ್ಚು ಜನರು ವಾಸಿಸುವ ಟಿಬೆಟ್‌ನ ಇಡೀ ಶಿಗಾಟ್ಸೆ ಪ್ರದೇಶದಲ್ಲಿ ಕಂಪನದ ಅನುಭವಾಗಿದೆ. ಇದರೊಂದಿಗೆ ನೇಪಾಳದ ಕಠ್ಮಂಡು, ಭಾರತದ ಕೆಲ ಭಾಗ ಸೇರಿ ಭೂತಾನ್‌ನಲ್ಲೂ ಭೂಮಿ ಕಂಪಿಸಿದ ಅನುಭವಾಗಿದೆ. ಕಠ್ಮಂಡುವಿನಲ್ಲಿ ಬೆಳಿಗ್ಗೆ 6.50ರ ಹೊತ್ತಿಗೆ 7.1 ರಷ್ಟು ತೀವ್ರತೆಯ ಭೂಕಂಪವಾದ ಬಗ್ಗೆ ವರದಿಯಾಗಿತ್ತು.

ಮಂಗಳವಾರ ಬೆಳಗ್ಗೆ 6:35ಕ್ಕೆ ಉತ್ತರ ಭಾರತದ ಕೆಲವು ಭಾಗಗಳಲ್ಲೂ ಪ್ರಬಲ ಭೂಕಂಪನದ ಅನುಭವವಾಗಿದೆ. ನೇಪಾಳ, ಬಾಂಗ್ಲಾದೇಶ ಮತ್ತು ಚೀನಾದಲ್ಲೂ ಭೂಕಂಪದ ಅನುಭವವಾಗಿದೆ. ಭೂಕಂಪದ ತೀವ್ರತೆಗೆ ಚಳಿಯಲ್ಲಿ ಬೆಚ್ಚಗೆ ಮಲಗಿದ್ದವರೂ ನಿದ್ರೆಯಿಂದ ಏಳುವಂತಾಗಿದೆ. ಇನ್ನೂ ಕೆಲವು ಪ್ರದೇಶಗಳಲ್ಲಿ ಜನರು ಭಯದಿಂದ ಮನೆಯಿಂದ ಹೊರಬಂದು ರಸ್ತೆಯಲ್ಲೇ ಕಾಲ ಕಳೆದಿದ್ದಾರೆ. ಬಿಹಾರದ ಮುಜಾಫರ್‌ಪುರ, ಮೋತಿಹಾರಿ, ಬೆಟ್ಟಿಯಾ, ಮುಂಗೇರ್, ಅರಾರಿಯಾ, ಸೀತಾಮರ್ಹಿ, ಗೋಪಾಲ್‌ಗಂಜ್, ವೈಶಾಲಿ, ನಾವಡಾ ಮತ್ತು ನಳಂದಾ ಸೇರಿದಂತೆ ಬಿಹಾರದ ಹಲವು ಭಾಗಗಳಲ್ಲಿ ಸುಮಾರು 30 ಸೆಕೆಂಡ್‌ ಗಳ ಕಾಲ ಕಂಪನದ ಅನುಭವವಾಗಿದೆ.

More articles

Latest article