ಕಾಬೂಲ್: ಅಫ್ಘಾನಿಸ್ತಾನದಲ್ಲಿ ಭಾನುವಾರ ರಾತ್ರಿ ಸಂಭವಿಸಿದ ಭೂಕಂಪದಲ್ಲಿ ಸುಮಾರು 622 ಮಂದಿ ಮೃತಪಟ್ಟಿದ್ದು, 500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಭೂಕಂಪದ ತೀವ್ರತೆ 6.0 ರಷ್ಟಿತ್ತು ಎಂದು ತಿಳಿದು ಬಂದಿದೆ.
ಸ್ಥಳೀಯ ಕಾಲಮಾನ ಭಾನುವಾರ ರಾತ್ರಿ 11:47ಕ್ಕೆ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರಬಿಂದು ಆಗ್ನೇಯ ಅಫ್ಘಾನಿಸ್ತಾನದಲ್ಲಿ 160 ಕಿ.ಮೀ ಆಳದಲ್ಲಿದೆ. ಭೂಕಂಪದ ತೀವ್ರತೆಗೆ ಕುನಾರ್ ಪ್ರಾಂತ್ಯದ ಮೂರು ಗ್ರಾಮಗಳು ಸಂಪೂರ್ಣವಾಗಿ ನೆಲಸಮಗೊಂಡಿವೆ. ಸುತ್ತಮುತ್ತಲಿನ ಇನ್ನೂ ಅನೇಕ ಗ್ರಾಮಗಳಲ್ಲೂ ಅಪಾರ ಹಾನಿ ಸಂಭವಿಸಿದೆ. ಸಾವುನೋವುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಆಫ್ಘನ್ ಆರೋಗ್ಯಸಚಿವಾಲಯ ವಕ್ತಾರ ಶರಫತ್ ಜಮಾನ್ ತಿಳಿಸಿದ್ದಾರೆ.
ತೀವ್ರ ಹಾನಿಗೊಳಗಾದ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಆದರೆ ಇದುವರೆಗೂ ಯಾವುದೇ ದೇಶಗಳಿಂದ ನೆರವಿನ ಭರವಸೆ ಬಂದಿಲ್ಲ ಎಂದೂ ಅವರು ಹೇಳಿದ್ದಾರೆ.