ಇ-ಸ್ವತ್ತು: ಆನ್‌ ಲೈನ್‌ ಮೂಲಕವೇ ಇ_ಖಾತಾ ಪಡೆಯಲು ಸುವರ್ಣಾವಕಾಶ: ಸಚಿವ ಪ್ರಿಯಾಂಕ್‌ ಖರ್ಗೆ

Most read

ಬೆಂಗಳೂರು: ಇ ಸ್ವತ್ತು ಅನುಷ್ಠಾನದಲ್ಲಿನ ಸವಾಲು ಮತ್ತು ಸಾಧ್ಯತೆಗಳ ಕುರಿತು ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ತಾಂತ್ರಿಕ ಸಮಸ್ಯೆಗಳು ಮತ್ತು ದೂರುಗಳನ್ನು ಅವಲೋಕಿಸಿ ಪರಿಹಾರ ಸೂತ್ರಗಳನ್ನು ರೂಪಿಸಲು ನಿರ್ದೇಶಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

ಇ ಸ್ವತ್ತು ಅನುಷ್ಠಾನ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ನಂತರ ಅವರು ಈ ಮಾಹಿತಿ ಹಂಚಿಕೊಂಡಿದ್ದಾರೆ.

ಇ-ಸ್ವತ್ತು 2.0 ತಂತ್ರಾಂಶದಲ್ಲಿ ನಮೂನೆ-11ಬಿ ಖಾತೆಗಳನ್ನು ಎರಡು ವಾರಗಳ ಕಾಲವಾಧಿಯಲ್ಲಿ ನಮೂನೆ-11ಎ ಖಾತೆಗಳನ್ನಾಗಿ ಪರಿವರ್ತನೆ ಮಾಡಿಕೊಳ್ಳಲು ಮತ್ತು ಹೊಸ ಬಡಾವಣೆ ಮತ್ತು ಬಹುಮಹಡಿ (ಅಪಾರ್ಟ್‌ಮೆಂಟ್‌) ಕಟ್ಟಡಗಳಿಗೆ ಅರ್ಜಿಗಳನ್ನು ಸಲ್ಲಿಸಲು ಮುಂದಿನ ಒಂದು ತಿಂಗಳ ಅವಧಿಯಲ್ಲಿ ಅವಕಾಶ ಕಲ್ಪಿಸಲಾಗುವುದು.

ಇ-ಸ್ವತ್ತು ಪ್ರಕ್ರಿಯೆ ಹಾಗೂ ತಂತ್ರಾಂಶವನ್ನು ಹೆಚ್ಚು ನಾಗರಿಕಸ್ನೇಹಿಯಾಗಿ ಅನುಷ್ಟಾನಗೊಳಿಸಲು ಇಲಾಖೆ ಬದ್ದವಾಗಿದ್ದು, ಅದರ ಅನ್ವಯ ತಂತ್ರಾಂಶವನ್ನು ಅಭಿವೃದ್ಧಿಪಡಿಸಿಲಾಗಿರುತ್ತದೆ.  ಈವರೆಗೆ ಆನ್‍ಲೈನ್ ಮೂಲಕ  21,429 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಅನುಮೋದನೆಗಾಗಿ ವಿವಿಧ ಹಂತದಲ್ಲಿ ಬಾಕಿ ಇರುತ್ತದೆ. ಕೆಲವೊಂದು ಅರ್ಜಿಗಳನ್ನು ಸಲ್ಲಿಸುವಾಗ ತಾಂತ್ರಿಕ ಸಮಸ್ಯೆಗಳು ಉಂಟಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಅವುಗಳನ್ನು ಸರಿಪಡಿಸುವಲ್ಲಿ ಕ್ರಮಕೈಗೊಳ್ಳಲಾಗುತ್ತಿದೆ, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಇ-ಸ್ವತ್ತು ತಂತ್ರಾಂಶದಲ್ಲಿರುವ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ, ಮತ್ತಷ್ಟು ಸರಳಿಕರಿಸಲು   ಕ್ರಮವಹಿಸಲಾಗುತ್ತಿದೆ.

ಸಾರ್ವಜನಿಕರಿಂದ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಅನುಮೋದನೆ ಮಾಡುವ ಪ್ರಕ್ರಿಯೆಯು ದಿನಾಂಕ:01.01.2026 ರಿಂದ ಆರಂಭಗೊಂಡಿದ್ದು, ಸಾರ್ವಜನಿಕರು ಇ-ಸ್ವತ್ತು 2.0 ತಂತ್ರಾಂಶದ ಆನ್-ಲೈನ್‌ ಪೋರ್ಟಲ್‌ ನ ಮೂಲಕ ತೆರಿಗೆ ಮತ್ತು ಪ್ರಿಟಿಂಗ್‌ ಶುಲ್ಕವನ್ನು ಪಾವತಿಸಿ, ಇ-ಖಾತಾವನ್ನು ಡೌನ್-ಲೋಡ್‌ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಇ-ಸ್ವತ್ತು ಅರ್ಜಿ ಸಲ್ಲಿಸಲು ಯಾವುದೇ ಕಾಲಾವಧಿಯನ್ನು ನಿಗದಿಪಡಿಸಲಾಗಿರುವುದಿಲ್ಲ, ಸಾರ್ವಜನಿಕರು ಗ್ರಾಮ ಪಂಚಾಯಿತಿಗೆ ಭೇಟಿ ನೀಡದೆಯೇ ತಾವಿರುವಲ್ಲಿಯೇ ತಮ್ಮ ಆಸ್ತಿಗೆ ಸಂಬಂಧಿಸಿದಂತೆ ನಮೂನೆಗಳನ್ನು ಇ-ಸ್ವತ್ತು ತಂತ್ರಾಂಶದ ಮೂಲಕ ಪಡೆಯಲು ಅವಕಾಶ ಕಲ್ಪಿಸಲಾಗಿದೆ, ಸಮಸ್ಯೆ/ಸಂದೇಹಗಳನ್ನು ಬಗೆಹರಿಸಲು ಸರ್ಕಾರ ಬದ್ದವಾಗಿದ್ದು, ಈ ಬಗ್ಗೆ ಸಾರ್ವಜನಿಕರು ಸಹಕರಿಸಬೇಕೆಂದು.

ಇ-ಸ್ವತ್ತು 2.0 ರಡಿ ಅರ್ಜಿ ಸಲ್ಲಿಸಲು, ಸಂಬಂಧಿತ ದಾಖಲಾತಿ / ಪ್ರಕ್ರಿಯೆಯಲ್ಲಿ / ತಂತ್ರಾಂಶದ ಬಳಕೆಯ ಕುರಿತು ಸಂದೇಹಗಳಿದ್ದಲ್ಲಿ ತಮ್ಮ ಜಿಲ್ಲಾ ಸಹಾಯವಾಣಿಗೆ ಕರೆ ಮಾಡಬಹುದಾಗಿದೆ. ಜಿಲ್ಲಾ ಸಹಾಯವಾಣಿಗಳ ಸಂಖ್ಯೆಯನ್ನು“ಸಂಪರ್ಕಿಸಿ” ಶೀರ್ಷಿಕೆಯಡಿ ಮುಂದಿನ ಲಿಂಕ್ ಮೂಲಕ eswathu.karnataka.gov.in/Login.aspx ಪಡೆಯಬಹುದಾಗಿದೆ. ಹಾಗೂ  panchatantra.karnataka.gov.in ರಲ್ಲಿಯೂ  ಪ್ರಕಟಿಸಲಾಗಿದೆ.

More articles

Latest article