ಬೆಂಗಳೂರು: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ, ಕಂದಾಯ ಭೂಮಿಗಳಲ್ಲಿ ವಾಸವಿದ್ದು, ಕರ್ನಾಟಕ ಭೂ ಕಂದಾಯ ಕಾಯ್ದೆಯ ಅನ್ವಯ ಸಕ್ರಮಗೊಂಡ ನಿವೇಶನ, ಮನೆಗಳಿಗೆ ಇ–ಸ್ವತ್ತು ನೀಡಲು ಕ್ರಮ ಕೈಗೊಳ್ಳುವಂತೆ ಗ್ರಾಮೀಣಾಭಿವೃದ್ಧಿ ಇಲಾಖೆ ಸುತ್ತೋಲೆ ಹೊರಡಿಸಿದೆ.
ಸಕ್ರಮಗೊಂಡ ನಿವೇಶನ, ಮನೆಗಳಿಗೆ ಅಧಿಕೃತ ಖಾತೆ ನೀಡಲು ಅನುಕೂಲವಾಗುವಂತೆ ಕಂದಾಯ ಇಲಾಖೆ ಇ–ಸ್ವತ್ತು ತಂತ್ರಾಂಶ ಅಭಿವೃದ್ಧಿಪಡಿಸಿದ್ದು, ಎಲ್ಲ ಪಂಚಾಯಿತಿಗಳ ಪಿಡಿಒಗಳು ಈ ತಂತ್ರಾಂಶದ ಮೂಲಕ ಇ–ಸ್ವತ್ತು (ನಮೂನೆ–9 ಮತ್ತು ನಮೂನೆ 11–ಎ) ನೀಡಬೇಕು ಎಂದು ಸೂಚನೆ ನೀಡಲಾಗಿದೆ.
ತಹಶೀಲ್ದಾರ್ ಮೂಲಕ ಅನುಮೋದನೆಗೊಂಡು ವಿಸ್ತೀರ್ಣ, ಚಕ್ಕುಬಂಧಿ ಒಳಗೊಂಡ ಎಲ್ಲ ಸ್ವತ್ತುಗಳಿಗೂ ಖಾತೆ ನೀಡಬೇಕು. ತಹಶೀಲ್ದಾರ್ ಅವರಿಂದ ಸ್ವೀಕೃತವಾದ ಹಕ್ಕುಪತ್ರದಲ್ಲಿ ತಪ್ಪು ಇದ್ದರೆ, ಮಾಹಿತಿ ಅಪೂರ್ಣವಾಗಿದ್ದರೆ ಅಂತಹ ಸ್ವತ್ತುಗಳಿಗೆ ಸಲ್ಲಿಕೆಯಾದ ಬೇಡಿಕೆಗಳನ್ನು ಇ–ಸ್ವತ್ತು ತಂತ್ರಾಶದಲ್ಲಿ ತಿರಸ್ಕರಿಸಬೇಕು. ಮುಂದಿನ ಕ್ರಮಕ್ಕಾಗಿ ತಾಲ್ಲೂಕು ಪಂಚಾಯಿತಿ ಇಒಗಳ ಮೂಲಕ ಆಯಾ ತಹಶೀಲ್ದಾರ್ ಅವರಿಗೆ ಸೂಕ್ತ ತಿದ್ದುಪಡಿಗಾಗಿ ಕಳುಹಿಸಬೇಕು ಎಂದು ಸುತ್ತೋಲೆಯಲ್ಲಿ ವಿವರಿಸಲಾಗಿದೆ.
15 ವರ್ಷಗಳವರೆಗೆ ಸ್ವತ್ತುಗಳನ್ನು ಪರಭಾರೆ ಮಾಡಬಾರದು ಎಂಬ ಹಕ್ಕುಪತ್ರಗಳ ಷರತ್ತುಗಳನ್ನು ಪಿಡಿಒಗಳು ದೃಢೀಕರಿಸಬೇಕು. ಪರಿಶಿಷ್ಟ ಜಾತಿ, ಪಂಗಡದ ಮನೆ, ನಿವೇಶನಗಳಿಗೆ ಪಿಟಿಸಿಎಲ್ ಕಾಯ್ದೆಯ ಅನ್ವಯ ಕ್ರಮ ಕೈಗೊಳ್ಳಬೇಕು ಎಂದೂ ಸೂಚಿಸಲಾಗಿದೆ.