ಸಾಮರಸ್ಯ, ಉದ್ಯೋಗ, ಘನತೆಯ ಬದುಕಿಗಾಗಿ ಎಂಬ ಘೋಷಣೆಯೊಂದಿಗೆ ಇಂದಿನಿಂದ ಮೂರು ದಿನಗಳ ಕಾಲ (ಫೆಬ್ರವರಿ 25, 26, 27) ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಉಳ್ಳಾಲದ ಕಲ್ಲಾಪು ಬಳಿ ಇರುವ ಯುನಿಟಿ ಸಭಾಂಗಣದಲ್ಲಿ ಡಿವೈಎಫ್ಐನ 12ನೇ ರಾಜ್ಯ ಸಮ್ಮೇಳನ ನಡೆಯಲಿದೆ.
ಸಮ್ಮೇಳನದ ಉದ್ಘಾಟನೆ ರಾಜ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭವು 25ರಂದು ಬೆಳಿಗ್ಗೆ 10ಕ್ಕೆ ಯುನಿಟಿ ಹಾಲ್‌ನ ಪ್ರೊಫೆಸರ್ ಅಮೃತ ಸೋಮೇಶ್ವರ ವೇದಿಕೆ, ಡಾ ವಿಠಲ್ ಭಂಡಾರಿ ಸಭಾಂಗಣದಲ್ಲಿ ನಾಗೇಶ್ ಕುಮಾರ್ ನಗರದಲ್ಲಿ ನಡೆಯಲಿದ್ದು, ಕರ್ನಾಟಕದ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ನಾಗಮೋಹನ್ ದಾಸ್ ರವರು ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಡಿವೈಎಫ್ಐ ಅಖಿಲ ಭಾರತ ಅಧ್ಯಕ್ಷರು ಹಾಗೂ ರಾಜ್ಯಸಭಾ ಸದಸ್ಯ ಎ ಎ ರಹೀಮ್ ಅವರು ಭಾಗವಹಿಸಲಿದ್ದಾರೆ. ಡಿವೈಎಫ್ಐ ಕರ್ನಾಟಕ ರಾಜ್ಯ ಅಧ್ಯಕ್ಷ ಮುನೀರ್ ಕಾಟಿಪಳ್ಳ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಕಾರ್ಯದರ್ಶಿ ಬಸವರಾಜ್ ಪೂಜಾರ್, ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ರಾಜೇಶ್ ವೆಲ್ಲಾಟ್, ಕರ್ನಾಟಕ ರಾಜ್ಯ ಸಮಿತಿ ಸದಸ್ಯರುಗಳಾದ ರೇಣುಕಾ ಕಹರ್ ಭಾಗವಹಿಸಲಿದ್ದಾರೆ.
ಸಮ್ಮೇಳನದ ಸಮಾರೋಪವು 27ರಂದು ನಡೆಯಲಿದ್ದು, ಆ ದಿನ ಸಂಜೆ 3ಕ್ಕೆ ಕುತ್ತಾರ್ ಜಂಕ್ಷನ್‌ನಿಂದ ಕಲ್ಲಾಪು ಯುನಿಟಿ ಹಾಲ್ ಮೈದಾನದವರೆಗೆ ಯುವಜನರ ವರ್ಣರಂಜಿತ ಮೆರವಣಿಗೆ ನಡೆಯಲಿದೆ.
ರಾಜ್ಯ ಸಮ್ಮೇಳನದ ಬಹಿರಂಗ ಸಭೆಯು ತೊಕ್ಕೊಟ್ಟು ಯುನಿಟಿ ಮೈದಾನದ ಭಾಸ್ಕರ ಕುಂಬಳೆ ವೇದಿಕೆ, ಶ್ರೀನಿವಾಸ್ ಬಜಾಲ್ ನಗರದಲ್ಲಿ ನಡೆಯಲಿದ್ದು, ಇದರ ಪ್ರಧಾನ ಭಾಷಣಕಾರರಾಗಿ ಸಿಪಿಐಎಂ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಬಹು ಭಾಷಾ ಚಲನಚಿತ್ರ ನಟ ಪ್ರಕಾಶ್ ರೈ, ರಾಜ್ಯಸಭಾ ಸದಸ್ಯರು ಹಾಗೂ ಡಿವೈಎಫ್ಐನ ಅಖಿಲ ಭಾರತ ಅಧ್ಯಕ್ಷ ಎ ಎ ರಹೀಂ ಅವರು ಪ್ರಧಾನ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ.