ಉತ್ತರಭಾರತದಲ್ಲಿ ದಟ್ಟ ಮಂಜು; ವಿಮಾನ ರೈಲು ಸಂಚಾರದಲ್ಲಿ ವ್ಯತ್ಯಯ

Most read

ನವದೆಹಲಿ: ದಟ್ಟವಾದ ಮಂಜು ಆವರಿಸಿಕೊಂಡಿರುವುದರಿಂದ  ಉತ್ತರ ಭಾರತದ ವಿವಿಧ ನಗರಗಳಲ್ಲಿ ವಿಮಾನ ಸಂಚಾರ ಮತ್ತು ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ. ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ, ಗೋಚರತೆ ಶೂನ್ಯಕ್ಕೆ ಇಳಿದಿದ್ದು, ಸುಮಾರು 202 ವಿಮಾನಗಳ ಹಾರಾಟದಲ್ಲಿ ವಿಳಂಬವಾಗಿದೆ. ಭಾರತೀಯ ಹವಾಮಾನ ಇಲಾಖೆ (ಐಐಂಡಿ) ಮಾಹಿತಿಯ ಪ್ರಕಾರ, ದೆಹಲಿಯಲ್ಲಿ 16 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ಇದ್ದು, ಸಾಮಾನ್ಯಕ್ಕಿಂತ ಮೂರು ಡಿಗ್ರಿಗಳಷ್ಟು ಕಡಿಮೆಯಾಗಿದೆ. ಕನಿಷ್ಠ ತಾಪಮಾನ 7.6 ಡಿಗ್ರಿ ಸೆಲ್ಸಿಯಸ್ ಗೆ ಇಳಿದಿದೆ.  ಪ್ರತಿಕೂಲ ಹವಾಮಾನದಿಂದಾಗಿ ಅಮೃತಸರ ಮತ್ತು ಗುವಾಹಟಿಗೆ ಬರುವ ಮತ್ತು ಹೋಗುವ ಎಲ್ಲಾ ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ ಎಂದು ಸ್ಪೈಸ್‌ಜೆಟ್ ಮಾಹಿತಿ ನೀಡಿದೆ. ದೆಹಲಿ, ಅಮೃತಸರ, ಲಕ್ನೋ, ಬೆಂಗಳೂರು ಮತ್ತು ಗುವಾಹಟಿ ಮಾರ್ಗಗಳ ಸಂಚಾರದಲ್ಲಿ ವಿಳಂಬವಾಗುತ್ತಿದೆ ಎಂದು ಇಂಡಿಗೋ ಸಂಸ್ಥೆ ಮಾಹಿತಿ ಹಂಚಿಕೊಂಡಿದೆ.

ಮಂಜಿನ ವಾತಾವರಣ ಕಡಿಎಮಯಾಗದಿದ್ದರೆ ವಿಮಾನಗಳ ಹಾರಾಟವೇ ರದ್ದಾಗಬಹುದು ಎಂದು ಬಹುತೇಕ ವಿಮಾನಯಾನ ಸಂಸ್ಥೆಗಳು ತಿಳಿಸಿವೆ.

ಇನ್ನು ಇದೇ ಕಾರಣಗಳಿಗೆ ರೈಲು ಸಂಚಾರದಲ್ಲೂ ವ್ಯತ್ಯಯವಾಗಿದೆ. ದೆಹಲಿಯಿಂದ ಹೊರಡುವ ಕನಿಷ್ಠ 24 ರೈಲುಗಳು ತಡವಾಗಿ ಹೊರಟಿವೆ.  ಅಯೋಧ್ಯೆ ಎಕ್ಸ್‌ ಪ್ರೆಸ್ 4ಗಂಟೆಗಳ ಕಾಲ ವಿಳಂಬವಾಗಿ ಹೊರಟಿದೆ. ಗೋರಖ್‌ಧಾಮ್ ಎಕ್ಸ್‌ ಪ್ರೆಸ್ 2 ಗಂಟೆ ತಡವಾಗಿ ಹೊರಟಿದ್ದರೆ  ಬಿಹಾರ ಕ್ರಾಂತಿ ಎಕ್ಸ್‌ ಪ್ರೆಸ್ ಮತ್ತು ಶ್ರಮ ಶಕ್ತಿ ಎಕ್ಸ್‌ ಪ್ರೆಸ್ 3 ಗಂಟೆಗಳಿಗೂ ಹೆಚ್ಚು ವಿಳಂಬವಾಗಿದೆ. ದೆಹಲಿ, ಲಕ್ನೋ, ಬೆಂಗಳೂರು, ಅಮೃತಸರ ಮತ್ತು ಗುವಾಹಟಿಯಲ್ಲಿ ದಟ್ಟವಾದ ಮಂಜು ಆವರಿಸಿದ್ದು ಮುಂಜಾನೆ ಸಮಯದಲ್ಲಿ ವಿಮಾನ ಮತ್ತು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ. ದೆಹಲಿ, ರಾಜಸ್ಥಾನದ ಕೋಟಾ, ಬುಂದಿ, ಸಿಕರ್, ಜುಂಜುನು, ಚುರು, ಶ್ರೀ ಗಂಗಾನಗರ ಮತ್ತು ಟೋಂಕ್, ಪಂಜಾಬ್‌ನ ಅಮೃತಸರ, ಗುರುದಾಸ್‌ಪುರ, ತರ್ನ್ ತರಣ್ ಮತ್ತು ಕಪುರ್ತಲ, ಮತ್ತು ಹರಿಯಾಣದ ಕುರುಕ್ಷೇತ್ರದಲ್ಲಿ ದಟ್ಟವಾದ ಮಂಜು ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ನೀಡಿದ್ದು, ಆರೆಂಜ್ ಅಲರ್ಟ್ ಘೋಷಿಸಿದೆ.

More articles

Latest article