ಬೆಂಗಳೂರು: ಹೊಸ ವರ್ಷದ ಆಚರಣೆ ಸಂದರ್ಭದಲ್ಲಿ ಮಾರಾಟ ಮಾಡಲು ಸಂಗ್ರಹಿಸಲಾಗಿದ್ದ ಸುಮಾರು 23 ಕೋಟಿ ರೂ. ಮೌಲ್ಯದ 11 ಕೆಜಿ ಮಾದಕವಸ್ತುಗಳನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ವಿದೇಶಿ ಮೂಲದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.
ಖಚಿತ ಮಾಹಿತಿಯನ್ನು ಆಧರಿಸಿ ದಾಳಿ ನಡೆಸಿದ ಪೊಲೀಸರು 11.50 ಕೆಜಿ ಎಂಡಿಎಂಎ ಕ್ರಿಸ್ಟಲ್, ಮತ್ತು 1040 ಎಕಸ್ಟೆಸಿ ಮಾತ್ರೆಗಳನ್ನು ಜಪ್ತಿ ಮಾಡಲಾಗಿದೆ. ಡ್ರಗ್ಸ್ ಸಂಗ್ರಹ ಆರೋಪದಡಿಯಲ್ಲಿ ನೈಜೀರಿಯಾ ಮೂಲದ ಎಜಿಕೆ ನೈಗೂ ಒಕಾಫಾರ್ (42) ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ.
ಈತ 2017ರಲ್ಲಿ ವ್ಯಾಪಾರ ಸಂಬಂಧ ವೀಸಾ ಪಡೆದು ಭಾರತಕ್ಕೆ ಬಂದಿದ್ದ. ನಂತರ ಬೆಂಗಳೂರಿಗೆ ಆಗಮಿಸಿ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಆರೋಪಿಯು ದೆಹಲಿಯಿಂದ ಕಡಿಮೆ ಬೆಲೆಗೆ ಡ್ರಗ್ಸ್ ತರಿಸಿಕೊಂಡು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು ಮಾತ್ರವಲ್ಲದೆ ಈತ ಚೆನ್ನೈ ಮತ್ತು ಹೈದರಾಬಾದ್ ಸೇರಿ ಹಲವು ನಗರಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಎಂಬ ಮಾಹಿತಿ ಹೊರಬಿದ್ದಿದೆ. ಆರೋಪಿಯು ಇತರ ಡ್ರಗ್ಸ್ ವ್ಯಾಪಾರಿಗಳ ಜತೆ ಸೇರಿಕೊಂಡು ಯುವಕರು ಹಾಗೂ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಡ್ರಗ್ಸ್ ಮಾರಾಟ ಮಾಡುತ್ತಿದ್ದ ಎಂದೂ ತಿಳಿದು ಬಂದಿದೆ.

