ಮುಂಬೈ: ಹೈದರಾಬಾದ್‌ನಿಂದ ಮುಂಬೈಗೆ ಬಸ್‌ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು ರೂ. 24 ಕೋಟಿ ಮೌಲ್ಯದ 16 ಕೆ.ಜಿ ಮೆಫೆಡೋನ್ ಮಾದಕ ವಸ್ತುವನ್ನು ಮುಂಬೈನ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ವಶಪಡಿಸಿಕೊಂಡಿದೆ. ಈ ಡ್ರಗ್ಸ್ ಸಾಗಿಸುತ್ತಿದ್ದ ಐವರನ್ನು ಬಂಧಿಸಲಾಗಿದೆ ಎಂದು ಡಿಆರ್‌ಐ ಅಧಿಕಾರಿಗಳು ತಿಳಿಸಿದ್ದಾರೆ.
ಇವರ ಬಳಿ ಇದ್ದ ರೂ.1.9 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ. ಗುಪ್ತಚರ ಮಾಹಿತಿಯ ಆಧಾರದ ಮೇಲೆ ಇಬ್ಬರು ಶಂಕಿತರ ಮೇಲೆ ಡಿಆರ್‌ಐ ನ ಮುಂಬೈ ವಲಯ ತಂಡವು ಕಣ್ಣಾವಲು ಇರಿಸಿತ್ತು. ಮಂಗಳವಾರ ಮುಂಜಾನೆ ಬಸ್‌ನಲ್ಲಿ ಆರೋಪಿಗಳು ಬಂದಿಳಿಯುತ್ತಿದ್ದಂತೆ ಅವರನ್ನು ಬಂಧಿಸಿ ಶೋಧ ನಡೆಸಲಾಗಿದೆ. ಶೋಧನೆ ಮಾಡುವಾಗ ಆರೋಪಿಗಳ ಲಗ್ಗೇಜ್ ಬ್ಯಾಗ್ ಗಳಲ್ಲಿ 16 ಕೆ.ಜಿ ಮೆಫೆಡೋನ್ ಪುಡಿಯನ್ನು ವಶಪಡಿಸಿಕೊಳ್ಳಲಾಗಿದೆ. ಇಬ್ಬರು ಆರೋಪಿಗಳ ವಿಚಾರಣೆಯ ಬಳಿಕ ಮಧ್ಯವರ್ತಿ ಸೇರಿದಂತೆ ಇನ್ನೂ ಮೂವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆರೋಪಿಗಳ ವಿರುದ್ಧ ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯಿದೆ ಎನ್ ಡಿಪಿಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.