ಕೆಂದ್ರ ಸರಕಾರಕ್ಕೆ ಮನವಿಗಳು, ಭೇಟಿಗಳು, ಒತ್ತಾಯ, ಒತ್ತಡ ಪ್ರತಿಭಟನೆಯನ್ನು ರಾಜ್ಯ ಸರಕಾರ ಮಾಡುತ್ತಲೇ ಬಂದಿದ್ದರೂ ಯಾವುದಕ್ಕೂ ಸ್ಪಂದಿಸದ ಕೇಂದ್ರ ಗೃಹಮಂತ್ರಿ ಅಮಿತ್ ಶಾ ರವರು ಲೋಕಸಭಾ ಚುನಾವಣೆಗೆ ಚಾಲನೆ ಕೊಡಲು ಕರ್ನಾಟಕಕ್ಕೆ ಬಂದು “ರಾಜ್ಯ ಸರಕಾರವೇ ನಿರ್ಲಕ್ಷ್ಯ ವಹಿಸಿತು, ಮನವಿ ಮಾಡುವಲ್ಲಿ ವಿಳಂಬ ಮಾಡಿತು” ಎಂದೆಲ್ಲಾ ಸುಳ್ಳು ಹೇಳಿ ಕರ್ನಾಟಕದ ಜನತೆಯ ದಿಕ್ಕು ತಪ್ಪಿಸಲು ನೋಡುತ್ತಿದ್ದಾರಲ್ಲಾ ಇಂತಹ ಸುಳ್ಳುಕೋರರ ಪಕ್ಷಕ್ಕೆ ಕರ್ನಾಟಕದ ಜನತೆ ಮತ ಹಾಕಬೇಕಾ? – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
“ಕರ್ನಾಟಕ ಬರದ ಸಂಕಷ್ಟಕ್ಕೆ ತುತ್ತಾಗಿದೆ. ಆದರೆ ಕಾಂಗ್ರೆಸ್ ಸರಕಾರ ಬರದ ಬಗ್ಗೆ ನಿರ್ಲಕ್ಷ ವಹಿಸಿದ್ದೂ ಅಲ್ಲದೇ, ಪರಿಹಾರಕ್ಕೆ ಮೂರು ತಿಂಗಳು ತಡವಾಗಿ ಮನವಿ ಸಲ್ಲಿಸಿದೆ. ಈಗ ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದೆ” ಎಂದು ಎಪ್ರಿಲ್ 2 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಅಮಿತ್ ಶಾ ಗುಡುಗಿದರು. ಇವರ ಮಾತಿಗೆ ಎದುರೇಟು ಕೊಟ್ಟ ಕರ್ನಾಟಕದ ಸಿಎಂ ಸಿದ್ದರಾಮಯ್ಯನವರು “ಶಾ ಅವರಿಗೆ ತಾಕತ್ತಿದ್ದರೆ ಬರ ಪರಿಹಾರದ ಕುರಿತು ಚರ್ಚೆಗೆ ಬರಲಿ. ಅಂಕಿ ಅಂಶಗಳ ಜೊತೆಗೆ ಉತ್ತರಿಸುತ್ತೇನೆ. ನಾನು ಸುಳ್ಳು ಹೇಳಿದ್ದರೆ ರಾಜೀನಾಮೆ ಕೊಡುತ್ತೇನೆ. ಅವರು ಸುಳ್ಳು ಹೇಳಿದ್ದರೆ ರಾಜಿನಾಮೆ ಕೊಡುತ್ತಾರಾ?” ಎಂದು ಪ್ರಶ್ನಿಸಿದರು.
ಈ ಇಬ್ಬರೂ ನಾಯಕರ ಮಾತುಗಳನ್ನು ಕೇಳಿದ ಕರ್ನಾಟಕದ ಜನರು ಗೊಂದಲಕ್ಕೆ ಬಿದ್ದರು. ಈ ಇಬ್ಬರಲ್ಲಿ ಯಾರು ಸತ್ಯ ಹೇಳುತ್ತಿದ್ದಾರೆ? ಇನ್ಯಾರು ಸುಳ್ಳು ಹೇಳುತ್ತಿದ್ದಾರೆ? ಎನ್ನುವ ಪ್ರಶ್ನೆ ಜನತೆಯನ್ನು ಕಾಡತೊಡಗಿತು. ಈ ಹಿನ್ನೆಲೆಯಲ್ಲಿ ಬರ ಪರಿಹಾರ ಕುರಿತು ವಿಚಾರವನ್ನು ವಿಶ್ಲೇಷಿಸುವ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡಲಾಗಿದೆ.
2023, ಸೆಪ್ಟಂಬರ್ 22 ಮತ್ತು ಅಕ್ಟೋಬರ್ 20 ನೇ ದಿನಾಂಕದಂದು ಕೇಂದ್ರಕ್ಕೆ ಮನವಿ ಮಾಡಲಾಗಿದೆ
ಕರ್ನಾಟಕವು ಈ ವರ್ಷ 122 ವರ್ಷಗಳಲ್ಲೇ ಎಂದೂ ಇಲ್ಲದ ತೀವ್ರವಾದ ಬರದಿಂದ ನರಳುತ್ತಿದೆ. ಮಳೆ ಪ್ರಮಾಣ ತೀವ್ರವಾಗಿ ಕಡಿಮೆಯಾಗಿದ್ದರಿಂದಾಗಿ ರಾಜ್ಯದ 240 ತಾಲ್ಲೂಕುಗಳಲ್ಲಿ 223 ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಸರಕಾರ ಘೋಷಿಸಿಯಾಗಿದೆ. ಇಂತಹ ಪ್ರಾಕೃತಿಕ ಅವಘಡ ಸಂಭವಿಸಿದಾಗ ಒಕ್ಕೂಟ ವ್ಯವಸ್ಥೆಯ ಯಾವುದೇ ರಾಜ್ಯ ಸರಕಾರವಿರಲಿ ಕೇಂದ್ರ ಸರಕಾರಕ್ಕೆ ಬರಪರಿಹಾರಕ್ಕಾಗಿ ಮನವಿ ಮಾಡಿಕೊಳ್ಳಬೇಕಾಗುತ್ತದೆ. ಅದೇ ರೀತಿ ಕರ್ನಾಟಕ ರಾಜ್ಯ ಸರಕಾರವೂ ಸಹ ನಿಯಮಾನುಸಾರ ಕೇಂದ್ರ ಸರಕಾರಕ್ಕೆ ಕೋರಿಕೆ ಸಲ್ಲಿಸಿದೆ. 35 ಸಾವಿರ ಕೋಟಿಯಷ್ಟು ಬೆಳೆ ನಷ್ಟ ಆಗಿದ್ದು ಕೇಂದ್ರ ಸರಕಾರ ಬರಪರಿಹಾರಕ್ಕೆ, ಕುಡಿಯುವ ನೀರು ಸರಬರಾಜಿಗೆ ಹಾಗೂ ಜಾನುವಾರು ನಿರ್ವಹಣೆಗಾಗಿ ಒಟ್ಟು 18 ಸಾವಿರ ಕೋಟಿ ಹಣವನ್ನು ಕೊಡಬೇಕೆಂದು 2023, ಸೆಪ್ಟಂಬರ್ 22 ಮತ್ತು ಅಕ್ಟೋಬರ್ 20 ನೇ ದಿನಾಂಕದಂದು ರಾಜ್ಯ ಸರಕಾರ ಪತ್ರದ ಮೂಲಕ ಕೇಂದ್ರಕ್ಕೆ ಮನವಿ ಸಲ್ಲಿಸಿತು.
ಬರ ನಿರ್ವಹಣಾ ಕೈಪಿಡಿಯಲ್ಲಿರೋದೇನು?
ರಾಜ್ಯ ಸರಕಾರವೊಂದು ಪರಿಹಾರಕ್ಕಾಗಿ ಮನವಿ ಸಲ್ಲಿಸಿದಾಗ ಕೇಂದ್ರ ಸರಕಾರ ಏನು ಮಾಡಬೇಕು ಎನ್ನುವ ನಿಯಮಾವಳಿಗಳು 2005 ರ ಬರನಿರ್ವಹಣಾ ಕೈಪಿಡಿಯಲ್ಲಿ ನಮೂದಾಗಿವೆ. ರಾಜ್ಯ ಸರಕಾರ ಪರಿಹಾರಕ್ಕಾಗಿ ಮನವಿ ಮಾಡಿದ ಒಂದು ವಾರದಲ್ಲಿ IMCT ಅಂದರೆ ಇಂಟರ್ ಮಿನಿಸ್ಟ್ರಿಯಲ್ ಸೆಂಟ್ರಲ್ ಟೀಂ ಒಂದನ್ನು ಕೇಂದ್ರ ಸರಕಾರ ರಚಿಸಬೇಕು ಹಾಗೂ ಈ ತಂಡವು ಖುದ್ದಾಗಿ ಬರ ಪೀಡಿತ ರಾಜ್ಯಕ್ಕೆ ಹೋಗಿ ಸರ್ವೇಕ್ಷಣೆ ಮಾಡಿ 10 ದಿನಗಳಲ್ಲಿ ಕೇಂದ್ರಕ್ಕೆ ವರದಿ ಸಲ್ಲಿಸಬೇಕು. ಈ ರೀತಿ ವರದಿ ಸಲ್ಲಿಸಿದ ಒಂದು ತಿಂಗಳ ಅಂತರದಲ್ಲಿ ಕೇಂದ್ರದ ಗೃಹಮಂತ್ರಿಗಳ ನೇತೃತ್ವದಲ್ಲಿ HCL ಅಂದರೆ ಉನ್ನತ ಮಟ್ಟದ ಸಮಿತಿ ಸಭೆ ನಡೆದು, ಪರಿಹಾರದ ಮೊತ್ತ ನಿಗದಿಯಾಗಿ NDRF ಅಂದರೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ ಹಣವನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಬೇಕು ಎನ್ನುವುದು ನಿಯಮ.
ಕೇಂದ್ರದ ಅಧಿಕಾರಿಗಳಿಂದ ಬರ ವೀಕ್ಷಣೆ
ಹಾಗೆಯೇ ಕರ್ನಾಟಕ ರಾಜ್ಯ ಸರಕಾರ ಈ ನಿಯಮಾವಳಿಗಳ ಪ್ರಕಾರವೇ ಮನವಿ ಮಾಡಿಕೊಂಡಿತ್ತು. ಕೇಂದ್ರದ ಅಧಿಕಾರಿಗಳ ತಂಡ ಅಕ್ಟೋಬರ್ 4 ರಿಂದ 9 ನೇ ತಾರೀಕಿನವರೆಗೂ ಕರ್ನಾಟಕಕ್ಕೆ ಬಂದು ಬರದ ಕುರಿತು ವೀಕ್ಷಣೆ ಮಾಡಿ ಗೃಹ ಸಚಿವಾಲಯಕ್ಕೆ ವರದಿ ಕೊಟ್ಟಿತ್ತು. 2023, ಸೆಪ್ಟಂಬರ್ 22 ರಿಂದ ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಾದ 2024, ಮಾರ್ಚ್ 16 ರವರೆಗೆ ಅಂದರೆ 5 ತಿಂಗಳು ಕಳೆದರೂ ಗೃಹ ಸಚಿವರು ಉನ್ನತ ಸಮಿತಿಯ ಸಭೆಯನ್ನು ಕರೆಯಲೇ ಇಲ್ಲ. ಬರಪರಿಹಾರ ಕರ್ನಾಟಕಕ್ಕೆ ದೊರೆಯಲೇ ಇಲ್ಲ. ಇದರಿಂದ ಆತಂಕಗೊಂಡ ರಾಜ್ಯ ಸರಕಾರದ ಸಚಿವರ ನಿಯೋಗವೊಂದು ಅಕ್ಟೋಬರ್ 25 ರಂದು ದೆಹಲಿಗೆ ತೆರಳಿ ಗೃಹ ಸಚಿವಾಲಯದ ಕಾರ್ಯದರ್ಶಿ ಹಾಗೂ ಕೃಷಿ ಇಲಾಖೆಯ ಕಾರ್ಯದರ್ಶಿಗಳನ್ನು ಭೇಟಿಯಾಗಿ ಮತ್ತೆ ಮನವಿ ಸಲ್ಲಿಸಿ ಪರಿಹಾರ ಬಿಡುಗಡೆಗಾಗಿ ಒತ್ತಾಯಿಸಿತು. ಆಗಲೂ ಏನೂ ಆಗಲಿಲ್ಲವಾದ್ದರಿಂದ ನವೆಂಬರ್ 15ಕ್ಕೆ ಸಿಎಂ ಸಿದ್ದರಾಮಯ್ಯನವರು ಗೃಹ ಸಚಿವ ಅಮಿತ್ ಶಾ ಹಾಗೂ ಸಂಬಂಧಿಸಿದ ಇತರ ಸಚಿವರಿಗೆ ಮತ್ತೆ ಪತ್ರ ಬರೆದು NDRF ನಿಂದ ಬರಪರಿಹಾರದ ಅನುದಾನ ಬಿಡುಗಡೆ ಮಾಡಬೇಕೆಂದು ನೆನಪಿಸಿ ಒತ್ತಾಯಿಸಿದರು. ಅದಕ್ಕೂ ಸಹ ಕೇಂದ್ರದಿಂದ ಯಾವುದೇ ಪ್ರತಿಕ್ರಿಯೆ ಬರಲೇ ಇಲ್ಲ.
ಗೃಹಸಚಿವರು ಸಭೆ ಕರೆಯಲೇ ಇಲ್ಲ!
ಆದರೂ ಛಲ ಬಿಡದ ತ್ರಿವಿಕ್ರಮನ ಹಾಗೆ ಕೇಂದ್ರ ಸರಕಾರದ ಬೆನ್ನತ್ತಿದ ಸಿದ್ದರಾಮಯ್ಯನವರು ಕಂದಾಯ ಹಾಗೂ ಕೃಷಿ ಸಚಿವರನ್ನು ನವೆಂಬರ್ 23 ರಂದು ದೆಹಲಿಗೆ ಕಳುಹಿಸಿ ಅನುದಾನ ಬಿಡುಗಡೆಗೆ ಒತ್ತಡ ತಂದರು. ಇಷ್ಟಾದರೂ ಕೇಂದ್ರದ ಗೃಹಸಚಿವರು ಒಂದೇ ಒಂದು ಸಭೆ ಕರೆಯದೇ ಇದ್ದುದರಿಂದ ಬೇಸರಗೊಂಡ ಸಿಎಂ ಸಿದ್ದರಾಮಯ್ಯನವರು ಕಂದಾಯ ಸಚಿವ ಕೃಷ್ಣ ಭೈರೇಗೌಡರನ್ನು ಕರೆದು ಕೊಂಡು ಡಿಸೆಂಬರ್ 19 ರಂದು ಪ್ರಧಾನ ಮಂತ್ರಿ ಮೋದಿಯವರನ್ನೇ ಭೇಟಿಯಾಗಿ ಎಲ್ಲವನ್ನೂ ವಿವರಿಸಿ ಮನವಿ ಸಲ್ಲಿಸಿದರು. ಅದರ ಮಾರನೆಯ ದಿನ ಅಮಿತ್ ಶಾರವರನ್ನೂ ಭೇಟಿಯಾಗಿ ಉನ್ನತ ಮಟ್ಟದ ಸಭೆ ಕರೆಯಲು ಒತ್ತಾಯಿಸಿದರು. “ಆಯ್ತು ಇನ್ನು ಮೂರು ದಿನಗಳ ನಂತರ (ಡಿ.23ರಂದು) ಸಭೆ ಕರೆಯುವುದಾಗಿ ಭರವಸೆ ಇತ್ತ ಗೃಹಸಚಿವರು ಸಭೆ ಕರೆಯುವ ಗೋಜಿಗೇ ಹೋಗದೆ ನಿರ್ಲಕ್ಷ್ಯ ತಾಳಿದರು.
ಇಶ್ಯೂ ಸುಪ್ರೀಂ ಕೋರ್ಟ್ ಮೆಟ್ಟಿಲಿಗೆ..
ಜನವರಿ 19 ನೇ ತಾರೀಕಿನಂದು ಸಿದ್ದರಾಮಯ್ಯನವರು ಪ್ರಧಾನ ಮಂತ್ರಿಗಳಿಗೆ ಮತ್ತೆ ಪತ್ರ ಬರೆದು ಎಲ್ಲವನ್ನೂ ವಿವರಿಸಿದರೂ ಆ ಕಡೆಯಿಂದ ಕನಿಷ್ಟ ಸೌಜನ್ಯದ ಉತ್ತರವೂ ಬರಲಿಲ್ಲ. ಇದೆಲ್ಲದರಿಂದಾಗಿ ಕರ್ನಾಟಕದ ಮುಖ್ಯ ಮಂತ್ರಿಗಳ ಸಹನೆ ಮಿತಿಮೀರಿತು. ಫೆಬ್ರುವರಿ 7 ನೇ ತಾರೀಕಿನಂದು ಸಿದ್ದರಾಮಯ್ಯನವರು ತಮ್ಮ ಇಡೀ ಸಚಿವ ಸಂಪುಟವನ್ನೇ ದೆಹಲಿಗೆ ಕರೆದುಕೊಂಡು ಹೋಗಿ ‘ನಮ್ಮ ತೆರಿಗೆ ನಮ್ಮ ಹಕ್ಕು’ ಎಂದು ಕೇಂದ್ರ ಸರಕಾರದ ವಿರುದ್ಧ ಬಹುದೊಡ್ಡ ಪ್ರತಿಭಟನೆಯನ್ನೇ ಮಾಡಿದರಾದರೂ ಮೊಂಡುಬಿದ್ದ ಕೇಂದ್ರ ಸರಕಾರ ತನ್ನ ನಿರ್ಲಕ್ಷ್ಯ ಧೋರಣೆಯನ್ನು ಮುಂದುವರೆಸಿತು. ಹೀಗೆ, ರಾಜ್ಯ ಸರಕಾರದ ಎಲ್ಲಾ ಪ್ರಯತ್ನಗಳು ವಿಫಲವಾದ ನಂತರ ಕೊನೆಗೆ ರಾಜ್ಯ ಸರಕಾರ ಕೇಂದ್ರದ ಅನ್ಯಾಯವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ನಿರ್ಣಯಕ್ಕೆ ಬಂದಿದೆ.
ಸುಳ್ಳುಕೋರರ ಪಕ್ಷಕ್ಕೆ ಮತ ಹಾಕಬೇಕಾ?
ಕೆಂದ್ರ ಸರಕಾರಕ್ಕೆ ಅಷ್ಟೆಲ್ಲಾ ಮನವಿಗಳು, ಇಷ್ಟೆಲ್ಲಾ ಭೇಟಿಗಳು, ಒತ್ತಾಯ, ಒತ್ತಡ ಪ್ರತಿಭಟನೆಯನ್ನು ರಾಜ್ಯ ಸರಕಾರ ಮಾಡುತ್ತಲೇ ಬಂದಿದ್ದರೂ ಯಾವುದಕ್ಕೂ ಸ್ಪಂದಿಸದ ಕೇಂದ್ರ ಗೃಹಮಂತ್ರಿ ಅಮಿತ್ ಶಾ ರವರು ಲೋಕಸಭಾ ಚುನಾವಣೆಗೆ ಚಾಲನೆ ಕೊಡಲು ಕರ್ನಾಟಕಕ್ಕೆ ಬಂದು “ರಾಜ್ಯ ಸರಕಾರವೇ ನಿರ್ಲಕ್ಷ್ಯ ವಹಿಸಿತು, ಮನವಿ ಮಾಡುವಲ್ಲಿ ವಿಳಂಬ ಮಾಡಿತು” ಎಂದೆಲ್ಲಾ ಸುಳ್ಳು ಹೇಳಿ ಕರ್ನಾಟಕದ ಜನತೆಯ ದಿಕ್ಕು ತಪ್ಪಿಸಲು ನೋಡುತ್ತಿದ್ದಾರಲ್ಲಾ ಇಂತಹ ಸುಳ್ಳುಕೋರರ ಪಕ್ಷಕ್ಕೆ ಕರ್ನಾಟಕದ ಜನತೆ ಮತ ಹಾಕಬೇಕಾ?
ಈ ರೀತಿಯ ದ್ವೇಷ ಏಕೆ?
ಯಾಕೆ ಕರ್ನಾಟಕದ ಮೇಲೆ ಕೇಂದ್ರ ಸರಕಾರಕ್ಕೆ ಈ ರೀತಿಯ ದ್ವೇಷ? ಯಾಕೆಂದರೆ ಕಳೆದ ಸಲ 2023 ರ ವಿಧಾನ ಸಭೆ ಚುನಾವಣೆಯಲ್ಲಿ ಈ ನಾಡಿನ ಜನತೆ ಬಿಜೆಪಿ ಪಕ್ಷವನ್ನು ಹೀನಾಯವಾಗಿ ಸೋಲಿಸಿ ಅಧಿಕಾರದಿಂದ ತೊಲಗಿಸಿತ್ತು. ಮತ್ತು ಈಗ ಮತ್ತೆ ಲೋಕಸಭಾ ಚುನಾವಣೆ ಇರುವುದರಿಂದ ಬರ ಪರಿಹಾರ ಬಿಡುಗಡೆ ಮಾಡಿದ್ದೇ ಆದರೆ ಕರ್ನಾಟಕದ ಕಾಂಗ್ರೆಸ್ ಸರಕಾರವು ಸಂಕಷ್ಟ ಪೀಡಿತ ಜನರಿಗೆ ಪರಿಹಾರ ಒದಗಿಸಿ ಮತಗಳನ್ನು ಪಡೆಯಬಹುದು ಎನ್ನುವ ಆತಂಕ. ಈ ಎರಡೂ ಪ್ರಮುಖ ಕಾರಣಗಳಿಗಾಗಿ ಬರ ಪರಿಹಾರ ಕೊಡುವುದಿರಲಿ ಕನಿಷ್ಠ ಸಭೆಯನ್ನೂ ನಡೆಸಲು ಸಹ ಕೇಂದ್ರ ಸರಕಾರವು ಸಿದ್ಧವಿರದೇ ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿತು. ಇದರಿಂದಾಗಿ ಈಗ ಈ ನಾಡಿನ ಜನತೆ ನೀರಿನ ಕೊರತೆಯಿಂದ ಬಳಲಿ, ಬೆಳೆ ನಾಶದಿಂದ ನರಳುವುದು ತಪ್ಪಲಿಲ್ಲ. ಕಾಂಗ್ರೆಸ್ ಸರಕಾರ ಕೊಡಮಾಡುವ ಗ್ಯಾರಂಟಿ ಯೋಜನೆಗಳು ಮಾತ್ರ ಕರ್ನಾಟಕದ ಪ್ರತಿ ಕುಟುಂಬಗಳನ್ನೂ ಕಾಡುವ ಆರ್ಥಿಕ ಸಂಕಷ್ಟಕ್ಕೆ ಸ್ವಲ್ಪ ಸಾಂತ್ವನ ಕೊಟ್ಟಿದ್ದು ಸುಳ್ಳಲ್ಲ.
ಈ ಅನ್ಯಾಯ ಇದೇ ಮೊದಲ ಸಲವೇನಲ್ಲ..
2017ರಲ್ಲಿಯೂ ಕರ್ನಾಟಕದಲ್ಲಿ ಬರಗಾಲ ಬಂದಿತ್ತು. ಇದರಿಂದಾಗಿ ಅಂದಾಜು ₹30,000 ಕೋಟಿಯಷ್ಟು ನಷ್ಟ ಉಂಟಾಗಿತ್ತು. ಆಗ ಕೇಂದ್ರ ಸರ್ಕಾರ ನೀಡಿದ್ದು ಕೇವಲ ₹1,435 ಕೋಟಿ ಪರಿಹಾರ. ಅದೇ ವರ್ಷ ಮಹಾರಾಷ್ಟ್ರಕ್ಕೆ ₹8,195 ಕೋಟಿ ಮತ್ತು ಗುಜರಾತ್‌ಗೆ ₹3,894 ಕೋಟಿ ಪರಿಹಾರ ನೀಡಲಾಗಿತ್ತು. 2019ರಲ್ಲಿ ರಾಜ್ಯದಲ್ಲಿ BJP ಪಕ್ಷದ್ದೇ ಸರ್ಕಾರವಿದ್ದಾಗಲೂ ಅತಿವೃಷ್ಟಿಯಿಂದಾಗಿರುವ ಹಾನಿಗೆ ಪರಿಹಾರ ನೀಡದೆ ಸತಾಯಿಸಿದ್ದೀರಿ. ಕನ್ನಡಿಗರು ನಿಮಗೆ ಏನು ಅನ್ಯಾಯ ಮಾಡಿದ್ದಾರೆ?. ಬಿಜೆಪಿಯನ್ನು ಸ್ವಂತ ಬಲದಿಂದ ಅಧಿಕಾರಕ್ಕೆ ಬರಲು ಅವಕಾಶ ನೀಡದಿರುವುದೇ ಅಪರಾಧವಾಗಿ ಹೋಯಿತೇ?” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಾಲತಾಣಗಳ ಮೂಲಕ ಪ್ರಶ್ನಿಸಿದ್ದಾರೆ. ಉತ್ತರಿಸಬೇಕಾದವರು ಚುನಾವಣೆಯಲ್ಲಿ ಸುಳ್ಳು ಹೇಳುವುದರಲ್ಲಿ ತಲ್ಲೀನರಾಗಿದ್ದಾರೆ.
ಪ್ರಶ್ನಿಸುವ ಧೈರ್ಯ ಬಿಜೆಪಿಯ 25 ಎಂಪಿ ಗಳಿಗೂ ಇಲ್ಲದೇ ಹೋಯಿತೇ?
ಕೇಂದ್ರ ಸರಕಾರದಿಂದ ನಮ್ಮ ನಾಡಿಗೆ ಇಷ್ಟೊಂದು ಅನ್ಯಾಯ ಆಗುತ್ತಿದ್ದರೂ ಪ್ರಶ್ನಿಸುವ ಧೈರ್ಯ ಹಾಗೂ ಒತ್ತಾಯಿಸುವ ಸ್ಥೈರ್ಯವು ಕರ್ನಾಟಕವನ್ನು ಪ್ರತಿನಿಧಿಸಿದ್ದ ಬಿಜೆಪಿಯ 25 ಎಂಪಿ ಗಳಿಗೂ ಇಲ್ಲದೇ ಹೋಗಿರುವುದು ಈ ನಾಡಿನ ದುರಂತ. ಇಷ್ಟೆಲ್ಲಾ ಅನ್ಯಾಯ ಮಾಡಿದ ಗೃಹಸಚಿವ ಅಮಿತ್ ಶಾ ಮತ್ತೆ ಮತ ಕೇಳಲು ಅದ್ಯಾವ ಮುಖ ಹೊತ್ತು ಕರ್ನಾಟಕಕ್ಕೆ ಬಂದರೋ ಗೊತ್ತಿಲ್ಲ. ‘ತಮ್ಮದೇನೂ ತಪ್ಪಿಲ್ಲ, ಎಲ್ಲ ರಾಜ್ಯ ಸರಕಾರದ ನಿರ್ಲಕ್ಷ್ಯವೇ ಕಾರಣ’ ಎಂದು ಹಸಿ ಸುಳ್ಳನ್ನು ಕನ್ನಡದ ನೆಲದ ಮೇಲೆ ನಿಂತು ಹೇಳುತ್ತಾರೆಂದರೆ ಇವರಿಗೆ ಸಂಕೋಚ ಮಾನ ಮರ್ಯಾದೆ ಒಂದೂ ಇಲ್ಲ. ಸುಳ್ಳುಗಳನ್ನು ಹೇಳಿ ಜನರನ್ನು ಭ್ರಮೆಯಲ್ಲಿಟ್ಟು ಅಧಿಕಾರಕ್ಕೆ ಬರುವ ಬಿಜೆಪಿ ಪಕ್ಷದ ಹುನ್ನಾರಗಳು ಈ ಸಲ ಕರ್ನಾಟಕದಲ್ಲಿ ಫಲ ನೀಡಲಾರದು. ಎಲ್ಲರನ್ನೂ ಎಲ್ಲಾ ಕಾಲಕ್ಕೂ ಮೋಸಗೊಳಿಸಲಾಗದು.
ಇದನ್ನೂ ಓದಿ- ಸುದ್ದಿ ಮಾಧ್ಯಮಗಳ ಮೇಲೆ ಸರ್ವಾಧಿಕಾರಿಯ ಹಿಡಿತ
ಬರಪರಿಹಾರ ಕೊಡುವುದು ಕೇಂದ್ರದ ಭಿಕ್ಷೆಯಲ್ಲಾ ಅದು ರಾಜ್ಯ ಸರಕಾರದ ಹಕ್ಕು. ಕರ್ನಾಟಕದಿಂದ ತೆರಿಗೆ ರೂಪದಲ್ಲಿ ನಾಲ್ಕು ಲಕ್ಷ ಕೋಟಿಗೂ ಹೆಚ್ಚು ಹಣ ಸಂಗ್ರಹಿಸುತ್ತಿರುವ ಕೇಂದ್ರ ಸರಕಾರವು ನಾಡಿನಲ್ಲಿ ತೀವ್ರ ಬರ ಇರುವಾಗ ಕೇವಲ 18 ಸಾವಿರ ಕೋಟಿ ಬರಪರಿಹಾರ ಕೊಡಿ ಎಂದು ಕಳೆದ ಐದು ತಿಂಗಳಿಂದ ಮನವಿಗಳ ಮೇಲೆ ಮನವಿಗಳನ್ನು ಮಾಡಿಕೊಂಡರೂ ನಿರ್ಲಕ್ಷ್ಯ ವಹಿಸಿರುವುದು ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕಕ್ಕೆ ಮಾಡಿದ ಅಪಮಾನವಲ್ಲದೆ ಬೇರೇನಿಲ್ಲ. ಸೇಡಿನ ರಾಜಕಾರಣ ಅಂದ್ರೆ ಇದೇನಾ? ಕರ್ನಾಟಕದ ಜನತೆಯ ಮೇಲೆ ಕೇಂದ್ರ ಸರಕಾರ ಈ ರೀತಿಯಲ್ಲಿ ದ್ವೇಷ ಸಾಧಿಸುವುದೇ ಆದರೆ ಕರ್ನಾಟಕದ ಜನತೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಎಲ್ಲಾ ಅಭ್ಯರ್ಥಿಗಳನ್ನು ಸೋಲಿಸುವ ಮೂಲಕ ಪ್ರತೀಕಾರ ತೀರಿಸಿಕೊಳ್ಳಲೇ ಬೇಕಿದೆ.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು