ಬೆಂಗಳೂರು: ಈ ಹಿಂದಿನ ಯಾವುದೇ ವರ್ಷ ಅಥವಾ ಯಾವುದೇ ಸರ್ಕಾರಕ್ಕೆ ಹೋಲಿಸಿದರೆ 2023-24ರ ಸಾಲಿನಲ್ಲಿ ಅತಿಹೆಚ್ಚು ರೈತರಿಗೆ ಬರ ಪರಿಹಾರ ನೀಡಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ವಿಧಾನ ಪರಿಷತ್‌ಗೆ ಮಾಹಿತಿ ನೀಡಿದರು.
ವಿಧಾನ ಪರಿಷತ್‌ನಲ್ಲಿ ಪ್ರಶ್ನೋತ್ತರ ವೇಳೆ ಬಿಜೆಪಿ ಸದಸ್ಯ ಕೇಶವ ಪ್ರಸಾದ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, “ಈ ವರ್ಷ ಸುಮಾರು 38,78,525 ರೈತರಿಗೆ ಬರ ಪರಿಹಾರ ನೀಡಲಾಗಿದೆ. ಈ ಹಿಂದೆ 23,42,667 ರೈತರಿಗೆ ಪರಿಹಾರ ನೀಡಿದ್ದೇ ದಾಖಲೆಯಾಗಿತ್ತು. ಅಲ್ಲದೆ, ಕಳೆದ ಸರ್ಕಾರದ ನಾಲ್ಕು ವರ್ಷದ ಅವಧಿಯಲ್ಲಿ ನೀಡಿದ್ದು, 14,41,049 ರೈತರಿಗೆ ಪರಿಹಾರ ನೀಡಿದ್ದೇ ದೊಡ್ಡ ಸಂಖ್ಯೆಯಾಗಿತ್ತು. ಆದರೆ, ಯಾವುದೇ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಎರಡರಷ್ಟು ರೈತರಿಗೆ ಬರ ಪರಿಹಾರ ನೀಡುವ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸದನಕ್ಕೆ ಮಾಹಿತಿ ನೀಡಿದರು.
“ಅಧಿಕಾರಿಗಳು ಸ್ಥಳಕ್ಕೇ ತೆರಳಿ ಬೆಳೆ ಸಮೀಕ್ಷೆ ಆ್ಯಪ್ ಮೂಲಕ ಬೆಳೆ ಆಗಿದ್ಯಾ, ಇಲ್ವಾ? ಅಂತ ಸಮೀಕ್ಷೆ ನಡೆಸಿ ಡಿಜಿಟಲ್ ಮೂಲಕ ನೇರವಾಗಿ ರೈತರ ಖಾತೆಗಳಿಗೆ ಬರ ಪರಿಹಾರ ಹಣ ಜಮೆ ಮಾಡಲಾಗಿದೆ. ಶೇ.33ರಷ್ಟು ಬೆಳೆ ನಷ್ಟ ಅನುಭವಿಸಿದ ಎಲ್ಲಾ ರೈತರಿಗೂ ಪರಿಹಾರ ನೀಡಲಾಗಿದೆ. ನೀರಾವರಿ ಆಶ್ರಿತ ಜಮೀನಿದ್ರೆ ಯಾರಿಗೆಲ್ಲ ನಾಲೆಯಲ್ಲಿ ನೀರು ಹರಿಸಲು ಸಾಧ್ಯವಾಗಿಲ್ಲ ಅಂತಾವ್ರಿಗೂ ಪರಿಹಾರ ನೀಡಿದ್ದೇವೆ. ಬಹುವಾರ್ಷಿಕ ತೋಟಗಾರಿಕಾ ಬೆಳೆಗಳಿಗೂ ಪರಿಹಾರ ನೀಡಲಾಗಿದೆ” ಎಂದು ಅವರು ಮಾಹಿತಿ ನೀಡಿದರು.
ಕರ್ನಾಟಕ ರಾಜ್ಯದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಜೀವನೋಪಾಯ ನಷ್ಟವನ್ನೂ ರೈತರಿಗೆ ಭರಿಸಲು ಸರ್ಕಾರ ಮುಂದಾಗಿದೆ. ಈವರೆಗೆ ರಾಜ್ಯಾದ್ಯಂತ 17,80,000 ರೈತ ಕುಟುಂಬಗಳನ್ನು ಗುರುತಿಸಿದ್ದು, ಜೀವನೋಪಾಯ ನಷ್ಟಕ್ಕೆ ಹಣ ಪಾವತಿ ಮಾಡುವ ಕೆಲಸ ಚಾಲ್ತಿಯಲ್ಲಿದೆ. ಇದಕ್ಕಾಗಿ 531ಕೋಟಿ ರೂಪಾಯಿಯನ್ನು ತೆಗೆದಿರಿಸಲಾಗಿದೆ. ಬರ ಪರಿಹಾರ ಕೆಲಸಕ್ಕೆ ಈವರೆಗೆ 4047 ಕೋಟಿ ರೂಪಾಯಿ ಹಣ ರೈತರಿಗೆ ಪರಿಹಾರವಾಗಿ ಕೊಟ್ಟಿದ್ದೇವೆ. ಅಥವಾ ಚಾಲ್ತಿಯಲ್ಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಮಾಹಿತಿ ನೀಡಿದರು.
ಕೆಲವು ವಿಮಾ ಕಂಪೆನಿಗಳು ರೈತರಿಗೆ ಬೆಳೆ ವಿಮೆ ನೀಡಲು ನಿರಾಕರಿಸುತ್ತಿವೆ. ಈ ಬಗ್ಗೆ ಬಿಜೆಪಿ ಸದಸ್ಯ ಕೇಶವ ಪ್ರಸಾದ್ ಅವರು ಸದನದ ಗಮನ ಸೆಳೆದರು. ಈ ಪ್ರಶ್ನೆಗೂ ಉತ್ತರಿಸಿದ ಸಚಿವ ಕೃಷ್ಣ ಬೈರೇಗೌಡ ಅವರು, “ಕೇಂದ್ರ ಸರ್ಕಾರ ಗೊತ್ತಿದ್ದೋ ಗೊತ್ತಿಲ್ಲದೆಯೋ ಸರ್ಕಾರದಿಂದ ಬೆಳೆ ಪರಿಹಾರ ಪಡೆಯುವ ರೈತರಿಗೆ ಬೆಳೆ ವಿಮೆ ನೀಡುವಂತಿಲ್ಲ ಎಂದು ಬರ ಕೈಪಿಡಿಯಲ್ಲಿ ಹೇಳಿದ್ದಾರೆ. ಕಳೆದ ವರ್ಷ ಕೇಂದ್ರ ಗೃಹ ಮಂತ್ರಿಗಳು ಸಭೆ ಕರೆದಿದ್ದರು. ನಾನೂ ಆ ಸಭೆಯಲ್ಲಿ ಪಾಲ್ಗೊಂಡಿದ್ದೆ. ಸಭೆಯಲ್ಲಿ ಬರ ಕೈಪಿಡಿಯಲ್ಲಿ ಉಲ್ಲೇಖಿಸಿರುವ ಬೆಳೆ ವಿಮೆ ವಿಚಾರದ ಬಗ್ಗೆ ನಾನು ಗಮನ ಸೆಳೆದಿದ್ದೆ.
ಬೆಳೆ ವಿಮೆಗೂ ನಾವು ಕೊಡುವ ಪರಿಹಾರಕ್ಕೂ ಸಂಬಂಧ ಇಲ್ಲ, ಇದು ತಪ್ಪಾಗುತ್ತದೆ. ಸರ್ಕಾರದ ಇಂತಹ ನಡೆ ವಿಮಾ ಕಂಪೆನಿಗೆ ದುರ್ಲಾಭ ಮಾಡಿಕೊಟ್ಟಂತಾಗುತ್ತದೆ ಎಂದು ನಾನು ಹೇಳಿದಾಗ ಕೇಂದ್ರ ಸರ್ಕಾರ ಗಾಬರಿಯಾಗಿ ಇದು ಹೇಗಾಯ್ತು ಎಂದು ಕಳೆದ ಅಕ್ಟೋಬರ್ ನಲ್ಲಿ ಡಿಲಿಟ್ ಮಾಡಿದ್ದಾರೆ. ಹೀಗಾಗಿ ಹಳೆಯ ಕೈಪಿಡಿ ಆಧಾರದಲ್ಲಿ ಯಾರಾದ್ರೂ ಬೆಳೆ ವಿಮೆ ನೀಡಲು ನಿರಾಕರಿಸಿದರೆ ಅದು ತಪ್ಪಾಗುತ್ತೆ. ಅಂತಹ ಪ್ರಕರಣಗಳು ಇದ್ರೆ ನಮ್ಮ ಗಮಕ್ಕೆ ತನ್ನಿ ನಾವು ಜಿಲ್ಲಾಧಿಕಾರಿಗಳ ಜೊತೆಗೆ ಮಾತನಾಡಿ ಸರಿಪಡಿಸುತ್ತೇವೆ” ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ಸದಸ್ಯರು ಬರ ವಿಚಾರದಲ್ಲಿ ರಾಜ್ಯ ಸರ್ಕಾರ ಏನೂ ಮಾಡಿಲ್ಲ. ಸರ್ಕಾರದ ಬೊಕ್ಕಸದಿಂದ ಏನೂ ಖರ್ಚು ಮಾಡಿಲ್ಲ ಎಂದು ಆರೋಪಿಸಿದರು. ವಿಪಕ್ಷ ನಾಯಕರ ಆರೋಕ್ಕೆ ತಕ್ಕ ತಿರುಗೇಟು ನೀಡಿದ ಸಚಿವರು, “ಬರ ಪರಿಹಾರಕ್ಕಾಗಿ ರಾಜ್ಯದಿಂದ ಒಟ್ಟು 1296 ಕೋಟಿ ರೂಪಾಯಿ ಹಣವನ್ನು ಖರ್ಚು ಮಾಡಲಾಗಿದೆ. ಇದರಲ್ಲಿ ರೈತರಿಗೆ ಪರಿಹಾರ ನೀಡುವ ಬಾಬತ್ತಿನ ಜೊತೆಗೆ ಮೇವು ಕುಡಿಯುವ ನೀರಿಗೆ 85 ಕೋಟಿ ರೂಪಾಯಿ ಅಲ್ಲದೆ, ದೀರ್ಘಾವಧಿಯ ಬರ ಪರಿಹಾರ ಕಾಮಗಾರಿಗೂ 200 ಕೋಟಿ ರೂಪಾಯಿ ನೀಡಲಾಗಿದೆ. ಅಲ್ಲದೆ, ಇನ್ನೂ ಹಣ ಖರ್ಚಾಗುವಂತದ್ದಿದ್ದು, ರಾಜ್ಯ ಸರ್ಕಾರ ಏನು ಮಾಡಲು ಸಾಧ್ಯವೋ ಅದೆಲ್ಲವನ್ನೂ ಮಾಡುತ್ತಿದೆ” ಎಂದರು.
“ಬರ ಪರಿಹಾರದಂತಹ ಗಂಭೀರ ವಿಚಾರದ ಬಗ್ಗೆ ವಿಪಕ್ಷಗಳು ಪ್ರಶ್ನೆ ಮಾಡಿದರೆ, ನಾವು ಉತ್ತರ ನೀಡಬಹುದು. ಆದರೆ, ಈ ವಿಚಾರದಲ್ಲೂ ರಾಜಕೀಯ ಮಾಡಿದರೆ ಹೇಗೆ? ಎಂದು ಅಸಮಾಧಾನ ಹೊರಹಾಕಿದ ಅವರು, ವಿಪಕ್ಷಗಳು ಸದನದಲ್ಲಿ ರಾಜಕೀಯ ಮಾತನಾಡಿದರೆ ನಾವೂ ಅದನ್ನೇ ಮಾಡಬೇಕಾಗುತ್ತದೆ. ಕಳೆದ ವರ್ಷ ಬರ ಪರಿಹಾರ ಕೋರಿ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ ಕೇಂದ್ರ ಸರ್ಕಾರಕ್ಕೆ ಮೆಮೊರಾಂಡಂ ಸಲ್ಲಿಸಿತ್ತು. ಆದರೆ, ಕೇಂದ್ರ ಸರ್ಕಾರ ಯಾವ ರಾಜ್ಯಕ್ಕೂ ಬರ ಪರಿಹಾರ ಹಣವನ್ನು ನೀಡುವ, ರೈತರ ಕಷ್ಟಕ್ಕೆ ನೆರವಾಗುವ ಮನಸ್ಸನ್ನೇ ಮಾಡಲಿಲ್ಲ” ಎಂದು ಕೇಂದ್ರದ ವಿರುದ್ಧ ಹರಿಹಾಯ್ದರು.
“ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಕರ್ನಾಟಕ ಬರ ಪರಿಹಾರ ಹಣ ಕೇಳಿ ಸುಪ್ರೀಂ ಮೊರೆಹೋದ ನಂತರ ರಾಜ್ಯಕ್ಕೆ 3454 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿತ್ತು. ನಾವು ಸುಪ್ರೀಂ ಕೋರ್ಟ್ ಕದ ತಟ್ಟಿದಕ್ಕೆ ನಮಗೆ ಹಣ ಬಂದಿದೆ. ಒಂದು ವೇಳೆ ನಾವು ಸುಪ್ರೀಂ ಕೋರ್ಟ್‌ಗೆ ಹೋಗದೆ ಇದ್ದಿದ್ರೆ ರಾಜ್ಯಕ್ಕೆ ನಯಾಪೈಸೆಯೂ ಬರ್ತಾ ಇರಲಿಲ್ಲ. ನಮಗೆ ಹಣ ಕೊಡುವ ಮನಸ್ಸೂ ಕೇಂದ್ರಕ್ಕೆ ಇರಲಿಲ್ಲ. ರಾಜ್ಯ ಸರ್ಕಾರದ ಬಗ್ಗೆ ದೂಷಣೆ ಮಾಡಲು ಹೋದ್ರೆ ರಾಜಕೀಯ ಬೆರೆಸಲು ಹೋದ್ರೆ ನಾವೂ ಕೇಂದ್ರದ ನಡೆಯ ಬಗ್ಗೆ ದೂಷಣೆ ಮಾಡಲೇಬೇಕಾಗುತ್ತೆ” ಎಂದು ಸಚಿವ ಕೃಷ್ಣ ಬೈರೇಗೌಡ ಅವರು ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.