ಶರಾವತಿ, ವಾರಾಹಿ ಪಂಪ್ಡ್ ಸ್ಟೋರೇಜ್ ಯೋಜನೆ ಕೈಬಿಡಲು ಸರ್ಕಾರಕ್ಕೆ “ಪರಿಸರಕ್ಕಾಗಿ ನಾವು” ಸಂಘಟನೆ ಆಗ್ರಹ

Most read

ಬೆಂಗಳೂರು: ಪಶ್ಚಿಮಘಟ್ಟಗಳ ಪರಿಸರ ಮತ್ತು ಜನಜೀವನದ ಹಿತದೃಷ್ಟಿಯಿಂದ ಶರಾವತಿ  ಮತ್ತು ವಾರಾಹಿ ಪಂಪ್ಡ್ ಸ್ಟೋರೇಜ್(ಪಿಎಸ್ ಪಿ) ಯೋಜನೆಗಳನ್ನು ಕೈಬಿಡುವಂತೆ “ಪರಿಸರಕ್ಕಾಗಿ ನಾವು” ಸಂಘಟನೆ ಒತ್ತಾಯಿಸಿದೆ. ಈ ಯೋಜನೆ ಏಕೆ ಕಾರ್ಯಸಾಧುವಲ್ಲ ಎಂದು ಸಂಘಟನೆಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿವರವಾದ ಪತ್ರ ಬರೆದಿದೆ.

ಪಶ್ಚಿಮಘಟ್ಟದ ಅತಿ ಸೂಕ್ಷ್ಮ ಶರಾವತಿ ನದಿ ಕಣಿವೆಯಲ್ಲಿ ಪ್ರಸ್ತಾವಿತ ಶರಾವತಿ ಮತ್ತು ವಾರಾಹಿ ಪಂಪ್ಡ್ ಸ್ಟೋರೇಜ್ ಯೋಜನೆಗಳಿಗೆ (PSPs) ಗಂಭೀರ ಆಕ್ಷೇಪಣೆ ದಾಖಲಿಸಲು ನಾವು ಬಯಸುತ್ತೇವೆ. ಈ ಯೋಜನೆಗಳು ಈಗಾಗಲೇ ಸರಣಿ ಜಲಾಶಯಗಳು ಮತ್ತು ಜಲವಿದ್ಯುತ್ ಯೋಜನೆಗಳಿಂದಾಗಿ ಅಪಾಯದಲ್ಲಿರುವ ಕಣಿವೆಯ ಪರಿಸರ ಮತ್ತು ಜನಜೀವನದ ಮೇಲೆ ಭಾರೀ ಆಘಾತವನ್ನು ಉಂಟುಮಾಡಲಿವೆ.

ಶರಾವತಿ ನದಿ ಕಣಿವೆ ಸೇರಿದಂತೆ ಪಶ್ಚಿಮಘಟ್ಟಗಳು ಕಾವೇರಿ, ಹೇಮಾವತಿ, ತುಂಗ-ಭದ್ರಾ, ವರದಾ ಸೇರಿದಂತೆ ಇಡೀ ರಾಜ್ಯದ ನೀರಾವರಿ ಮತ್ತು ಕುಡಿಯುವ ನೀರಿನ ಮೂಲಗಳಾಗಿರುವ ಬಹುತೇಕ ಎಲ್ಲ ನದಿಗಳ ಉಗಮಸ್ಥಾನಗಳು. ಹಾಗಾಗಿಯೇ ಘಟ್ಟಗಳನ್ನು ರಾಜ್ಯದ ನೀರಿನ ಬಟ್ಟಲು ಎಂದು ಕರೆಯಲಾಗುತ್ತಿದೆ. ರಾಜ್ಯದ ಒಟ್ಡಾರೆ ಮಳೆ ಹಂಚಿಕೆ, ಹವಾಗುಣ ಸಮತೋಲನ ಮತ್ತು ಶುದ್ಧ ಗಾಳಿಯನ್ನು ಖಾತರಿಪಡಿಸುವಲ್ಲಿ ಕೂಡ ಈ ಘಟ್ಡಶ್ರೇಣಿ ಮತ್ತು ಕಣಿವೆಗಳ ಪಾತ್ರ ಮಹತ್ವದ್ದು.

1) ಯೋಜನೆ ವನ್ಯಜೀವಿ ಕಾಯ್ದೆ-WLPA ಮಾನದಂಡವನ್ನು ಉಲ್ಲಂಘಿಸುತ್ತದೆ.

ಎರಡೂ ಯೋಜನೆಗಳನ್ನು ಅಧಿಸೂಚಿತ ವನ್ಯಜೀವಿ ಅಭಯಾರಣ್ಯಗಳ ಒಳಗೆ ಜಾರಿಮಾಡಲು ಪ್ರಸ್ತಾಪಿಸಲಾಗಿದೆ. ವನ್ಯಜೀವಿ (ರಕ್ಷಣೆ) ಕಾಯ್ದೆ, 1972 ರ ಸೆಕ್ಷನ್ 29 ರ ಅಡಿಯಲ್ಲಿ, ವನ್ಯಜೀವಿಗಳ ಪರಿಸ್ಥಿತಿ ಸುಧಾರಣೆ ಮತ್ತು ಉತ್ತಮ ನಿರ್ವಹಣೆಯ ಉದ್ದೇಶ ಹೊರತುಪಡಿಸಿ, ಅನ್ಯ ಉದ್ದೇಶಗಳಿಗೆ ವನ್ಯಜೀವಿಗಳು ಅಥವಾ ಆವಾಸಸ್ಥಾನಗಳ ನಾಶ ಅಥವಾ ಅಭಯಾರಣ್ಯದೊಳಗೆ ಅರಣ್ಯೇತರ ಚಟುವಟಿಕೆಗಳಿಗೆ ಅನುಮತಿ ಇರುವುದಿಲ್ಲ.

2) ಸರಿಪಡಿಸಲಾಗದ ಪಾರಿಸಾರಿಕ ಬಿಕ್ಕಟ್ಟು ಮತ್ತು ಅನಾಹುತಗಳಿಗೆ ಕಾರಣವಾಗಲಿದೆ

ಪ್ರಸ್ತಾವಿತ ಯೋಜನೆಯ ತಾಣಗಳು ಮಧ್ಯ ಪಶ್ಚಿಮಘಟ್ಟಗಳ ದಟ್ಟವಾದ, ನಿತ್ಯಹರಿದ್ವರ್ಣ ಕಾಡುಗಳ ನಟ್ಟನಡುವೆ ಇವೆ. ಆ ಘಟ್ಟ ಪ್ರದೇಶವು ಅಧಿಕ ಮಳೆ ಮತ್ತು ಕಡಿದಾದ ಕಣಿವೆಗಳಿಂದ ಉಂಟಾಗುವ ಭಾರೀ ಭೂ ಕುಸಿತಗಳಿಂದಾಗಿ ಅಪಾಯಕಾರಿ ಭೂ ಕುಸಿತ ವಲಯ ಎಂದು ಗುರುತಿಸಲ್ಪಟ್ಟಿದೆ. ಇಂತಹ ಸೂಕ್ಷ್ಮ ಪ್ರದೇಶದಲ್ಲಿ  ಬೃಹತ್ ಸುರಂಗಗಳು, ಭೂಗತ ಕಟ್ಟಡ ಮತ್ತು ರಸ್ತೆಗಳ ನಿರ್ಮಾಣ, ವಿದ್ಯುತ್ ಪ್ರಸರಣ ಮಾರ್ಗಗಳು, ಕ್ವಾರಿಗಳು ಮತ್ತು ತ್ಯಾಜ್ಯವಿಲೇ ಜಾಗಗಳು ಹಾಗೂ ಭಾರೀ ಪ್ರಮಾಣದ ಸ್ಫೋಟಕಗಳ ಬಳಕೆ ಇಡೀ ಕಣಿವೆ ಮತ್ತು ಘಟ್ಟ ವ್ಯಾಪ್ತಿಯಲ್ಲಿ ಸರಿಪಡಿಸಲಾಗದ ಪಾರಿಸಾರಿಕ ಬಿಕ್ಕಟ್ಟು ಮತ್ತು ಅನಾಹುತಗಳಿಗೆ ಕಾರಣವಾಗಲಿದೆ.

3) ಇತ್ತೀಚಿನ ವಿಪತ್ತುಗಳು ಎಚ್ಚರಿಕೆಯ ಪಾಠಗಳಾಗಿವೆ

ಕೊಡಗು (2018, ಕರ್ನಾಟಕ), ವಯನಾಡು (2024, ಕೇರಳ) ಮತ್ತು ಮಾಲಿನ್ (2014, ಮಹಾರಾಷ್ಟ್ರ)ನಲ್ಲಿ ಸಂಭವಿಸಿರುವ ಭಾರೀ ಭೂಕುಸಿತಗಳು ಸೂಕ್ಷ್ಮ ಕಣಿವೆಗಳಲ್ಲಿ ಮಾನವ ಹಸ್ತಕ್ಷೇಪದ ವಿಪತ್ತುಗಳನ್ನು ಸಾರಿ ಹೇಳಿವೆ. ಘಟ್ಟಸಾಲಿನಲ್ಲಿ ಸುರಂಗ ಮಾರ್ಗ, ಅಣೆಕಟ್ಟು ನಿರ್ಮಾಣ, ರಸ್ತೆ ಮತ್ತಿತರ ಉದ್ದೇಶಕ್ಕಾಗಿ ಘಟ್ಟಗಳನ್ನು ಸೀಳುವುದು ಎಂಥ ಅನಾಹುತಗಳಿಗೆ ಎಡೆಮಾಡಿಕೊಡಲಿದೆ ಎಂಬುದು ಈಗಾಗಲೇ ಮನವರಿಕೆಯಾಗಿದೆ. 4) ಕಾರ್ಯಸಾಧ್ಯವಾದ ಪರ್ಯಾಯಗಳಿವೆ.

ಅಧಿಕ ತಾಪಮಾನ ಹೊಂದಿರುವ ರಾಜ್ಯದಲ್ಲಿ ಸೌರಶಕ್ತಿ ಬಳಕೆಗೆ ಯಥೇಚ್ಛ ಅವಕಾಶಗಳಿವೆ. ಈಗಾಗಲೇ ರಾಜ್ಯದ ಪಾವಗಡದಲ್ಲಿ ಬಳಕೆಯಲ್ಲಿರುವ ಬೃಹತ್ ಸೌರಪಾರ್ಕ್ ಮಾದರಿಯನ್ನು ಬಯಲು ಪ್ರದೇಶಗಳಲ್ಲಿ ಇನ್ನಷ್ಟು ವಿಸ್ತರಿಸಬಹುದು.

ಬ್ಯಾಟರಿ ಶಕ್ತಿ ಸಂಗ್ರಹ ವ್ಯವಸ್ಥೆ (BESS) ಮೂಲಕ ‘ನಾನ್ ಪೀಕ್’ ವೇಳೆಯಲ್ಲಿ ಬಳಕೆಯಾಗದೇ ವ್ಯರ್ಥವಾಗುವ ವಿದ್ಯುತ್‌ ಸಂಗ್ರಹಿಸಿಟ್ಟುಕೊಂಡು ‘ಪೀಕ್’ ವೇಳೆಯಲ್ಲಿ ಬಳಸುವ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸುವ ಮೂಲಕ ಇಂಧನ ಕೊರತೆ ನೀಗಬಹುದು. ಈ ಯೋಜನೆಗಳನ್ನು ಪುನರ್ ಪರಿಶೀಲಿಸಲು, ಈ ವಿಷಯದಲ್ಲಿ ತಾವು ಮಧ್ಯೆ ಪ್ರವೇಶಿಸಬೇಕೆಂದು ಸಿಎಂ ಸಿದ್ದರಾಮಯ್ಯ ಅವರನ್ನು ಆಗ್ರಹಪಡಿಸಿದೆ.

More articles

Latest article