ಬೆಂಗಳೂರು: ಕರೆದು ಚಾಲಕನ ಕೆಲಸ ಕೊಟ್ಟ ಮಾಲೀಕರ ನಂಬಿಕೆಗೆ ದ್ರೋಹ ಬಗೆದು ರೂ.1.50 ಕೋಟಿ ಹಣದೊಂದಿಗೆ ಪರಾರಿಯಾಗಿದ್ದ ಕಾರು ಚಾಲಕನನ್ನು ನಗರದ ವೈಯಾಲಿಕಾವಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶ ಮೂಲದ ರಾಜೇಶ್ (45) ಬಂಧಿತ ಆರೋಪಿ. ಪೊಲೀಸರು ಈತನಿಂದ 1,48,36,500 ರೂ. ನಗದು ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಚಾರ್ಟರ್ಡ್ ಅಕೌಂಟೆಂಟ್ ಒಬ್ಬರ ಬಳಿ 10 ವರ್ಷಗಳಿಂದ ರಾಜೇಶ್ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಈತನನ್ನು ಮಾಲೀಕರು ನಂಬಿದ್ದರು.
ಇತ್ತೀಚೆಗೆ ಚಾರ್ಟರ್ಡ್ ಅಕೌಂಟೆಂಟ್ ಅವರು ತಮ್ಮ ಗ್ರಾಹಕರ ತೆರಿಗೆಯನ್ನು ಪಾವತಿ ಮಾಡುವ ಸಲುವಾಗಿ ರೂ. 1.51 ಕೋಟಿ ಹಣದ ಬ್ಯಾಗ್ ಅನ್ನು ಕಾರ್ ನಲ್ಲಿಡಲು ಚಾಲಕನಿಗೆ ನೀಡಿದ್ದರು. ಆದರೆ ಕಾರು ಚಾಲಕನು ಹಣದ ಬ್ಯಾಗ್ ಅನ್ನು ಕಾರ್ ನಲ್ಲಿಡದೆ ತನ್ನ ದ್ವಿಚಕ್ರ ವಾಹನದಲ್ಲಿಟ್ಟುಕೊಂಡು ಪರಾರಿಯಾಗಿದ್ದ. ಹಣವನ್ನು ಕೋದಂಡರಾಮಪುರದಲ್ಲಿರುವ ತನ್ನ ಮನೆಯಲ್ಲಿ ಬಚ್ಚಿಟ್ಟು ರೂ. 2 ಲಕ್ಷ ಹಣವನ್ನು ಮಾತ್ರ ತೆಗೆದುಕೊಂಡು ಪತ್ನಿಯೊಂದಿಗೆ ಪುಣ್ಯ ಕ್ಷೇತ್ರಗಳಿಗೆ ತೆರಳಿದ್ದ.
ಚಾರ್ಟೆಡ್ ಅಕೌಂಟೆಂಟ್ ಬ್ಯಾಂಕಿನ ಬಳಿ ಹೋಗಿ ಹಣ ನೋಡಿಕೊಂಡಾಗ ಕಾರಿನಲ್ಲಿ ಹಣ ಇರಲಿಲ್ಲ. ತಮ್ಮ ಕಾರು ಚಾಲಕನನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಆತ ಮೊಬೈಲ್ ಕರೆ ಸ್ವೀಕರಿಸಿರಲಿಲ್ಲ. ಕೂಡಲೇ ಅವರು ಪೊಲೀಸರಿಗೆ ದೂರು ನೀಡಿದ್ದರು.
ತನಿಖೆಯನ್ನು ಮುಂದುವರಿಸಿದ ಪೊಲೀಸರು ಮಾಹಿತಿ ಕಲೆಹಾಕಿ ಕಾರು ಚಾಲಕನಿಗೆ ನೋಟಿಸ್ ಜಾರಿ ಮಾಡಿದ್ದರು. ಕಾರು ಚಾಲಕನು ಠಾಣೆಗೆ ಹಾಜರಾಗಿ ಹಣ ಕಳುವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಹಣವನ್ನು ಟಿ.ಟಿ.ಡಿ ದೇವಸ್ಥಾನದ ಬಳಿ ಇರುವ ತನ್ನ ಮನೆಯಲ್ಲಿ ಬಚ್ಚಿಟ್ಟಿರುವುದಾಗಿ ತಿಳಿಸಿದ್ದಾನೆ. ಪೊಲೀಸರು ಆತನ ಮನೆಗೆ ತೆರಳಿ ಪರಿಶೀಲಿಸಿದಾಗ 1.48 ಕೋಟಿ ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಆಂಧ್ರಪ್ರದೇಶದಲ್ಲಿ ಮನೆ ಕಟ್ಟಲು ಮಾಲೀಕರ ಹಣವನ್ನು ಕಳವು ಮಾಡಿದ್ದಾಗಿ ರಾಜೇಶ್ ಒಪ್ಪಿಕೊಂಡಿದ್ದಾನೆ.