ಬೆಂಗಳೂರು: ಎರಡು ಲಾರಿಗಳ ಮಧ್ಯೆ ಸಿಲುಕಿದ ರಾಜಸ್ಥಾನ ಮೂಲದ ಚಾಲಕನೊಬ್ಬ ಮೃತಪಟ್ಟಿದ್ದು, ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ರಾಜಸ್ಥಾನದ ಅಜರುದ್ದೀನ್ (24) ಮೃತ ಚಾಲಕ. ರಾಜಸ್ಥಾನದಿಂದ ಬೆಳ್ಳುಳ್ಳಿ ತುಂಬಿಸಿಕೊಂಡು ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ಬಂದಿದ್ದರು. ಲಾರಿ ಚಾಲಕ ತಾಡಪಾಲ್ಗೆ ಕಟ್ಟಿದ್ದ ಹಗ್ಗವನ್ನು ಬಿಚ್ಚುತ್ತಿದ್ದರು. ಅದೇ ಸ್ಥಳದಲ್ಲಿ ಮತ್ತೊಂದು ಲಾರಿಯನ್ನು ನಿಲ್ಲಿಸಲಾಗಿತ್ತು. ಆ ಲಾರಿಯ ಚಾಲಕ ಅದೇ ವೇಳೆ ಲಾರಿಯನ್ನು ಹಿಂದಕ್ಕೆ ತೆಗೆದುಕೊಳ್ಳುತ್ತಿದ್ದಾಗ ಅಜರುದ್ದೀನ್ ಗೆ ಡಿಕ್ಕಿ ಹೊಡೆದಿದೆ. ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತ ನಡೆಸಿದ ಲಾರಿ ಚಾಲಕನೂ ರಾಜಸ್ಥಾನದವನೇ ಆಗಿದ್ದಾನೆ. ಅಪಘಾತ ನಡೆಯುತ್ತಿದ್ದಂತೆ ಆ ಲಾರಿಯ ಚಾಲಕ ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ ಎಂದು ಸಂಚಾರ ವಿಭಾಗದ ಪೊಲೀಸರು ತಿಳಿಸಿದ್ದಾರೆ. ಆರೋಪಿ ಚಾಲಕನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.