ಬೆಂಗಳೂರು: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಾದಿಯಲ್ಲೇ ಸಾಗುತ್ತಿದ್ದು, ಯತೀಂದ್ರ ಸಿದ್ದರಾಮಯ್ಯ ಅವರು ಮೆಚ್ಚುಗೆಯ ಮಾತುಗಳನ್ನಾಡಿರಬಹುದು. ಆದರೆ ಎಲ್ಲಿಯೂ ಅವರನ್ನು ತಮ್ಮ ತಂದೆಯ ಉತ್ತರಾಧಿಕಾರಿ ಎಂದು ಹೇಳಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಇಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಅಹಿಂದ ಸಂಘಟನೆ ಮಾಡುವಾಗ ಸಿದ್ದರಾಮಯ್ಯ ಅವರಿಗೆ ಸತೀಶ್ ಜಾರಕಿಹೊಳಿ ಸಾಥ್ ನೀಡಿದ್ದರು. ಆ ದೃಷ್ಟಿಯಿಂದ ಯತೀಂದ್ರ ಹೇಳಿರಬಹುದುದೇ ಹೊರತು ಮುಖ್ಯಮಂತ್ರಿ ಹುದ್ದೆಗೆ ಸೂಚಿಸಿದ್ದಾರೆ ಎಂದು ವ್ಯಾಖ್ಯಾನಿಸುವುದು ಸರಿಯಲ್ಲ ಎಂದರು.
ಯತೀಂದ್ರ ಹೇಳಿರುವುದರಲ್ಲಿ ಯಾವುದೇ ತಪ್ಪು ಕಾಣಿಸುತ್ತಿಲ್ಲ. 2028 ಇನ್ನೂ ದೂರವಿದೆ. ಹಾಗಾಗಿ ಸಧ್ಯದ ಪರಿಸ್ಥಿತಿ ಕುರಿತು ಯೋಚಿಸುವುದು ಸೂಕ್ತ. ನಾಯಕತ್ವ ಬದಲಾವಣೆ ಇಲ್ಲ ಎಂದು ಎಲ್ಲರೂ ನೂರು ಬಾರಿ ಸ್ಪಷ್ಟನೆ ನೀಡಿದ್ದಾರೆ. ಆದರೂ ಪದೇ ಪದೇ, ಇದೇ ವಿಚಾರ ಕುರಿತು ಮಾಧ್ಯಮಗಳು ಚರ್ಚೆ ಮಾಡುತ್ತಿರುವುದು ಸರಿ ಅಲ್ಲ ಎಂದರು.
ಒಂದು ವೇಳೆ ನಾಯಕತ್ವ ಬದಲಾವಣೆಯ ಸಂದರ್ಭ ಬಂದರೆ, ಪಕ್ಷದ ಶಾಸಕಾಂಗ ಸಭೆ ಕರೆಯಬೇಕು. ಹೈಕಮಾಂಡ್ ನಿಂದ ವರಿಷ್ಠರು ಆಗಮಿಸಬೇಕು. ಅವರು ಶಾಸಕರ ಅಭಿಪ್ರಾಯ ಸಂಗ್ರಹಿಸಬೇಕು. ನಂತರ ದೆಹಲಿಯ ವರಿಷ್ಠರಿಗೆ ವರದಿ ನೀಡಬೇಕು. ಆ ನಂತರ ಹೈಕಮಾಂಡ್ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡುತ್ತದೆ. ಇದು ಕಾಂಗ್ರೆಸ್‌ನ ಪದ್ಧತಿ ಎಂದು ತಿಳಿಸಿದರು.
ಚಿತ್ತಾಪುರದಲ್ಲಿ ಪಥ ಸಂಚಲನಕ್ಕೆ ಅನುಮತಿ ನೀಡುವಂತೆ ಆರ್‌ಎಸ್‌ಎಸ್ ಸೇರಿದಂತೆ ಹಲವು ಸಂಘಟನೆಗಳು ಅನುಮತಿ ಕೇಳಿವೆ. ಅನುಮತಿ ನೀಡುವ ಬಗ್ಗೆ ಸ್ಥಳೀಯ ಆಡಳಿತ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಸರ್ಕಾರ ಇತ್ತೀಚೆಗೆ ಯಾವುದೇ ಖಾಸಗಿ ಸಂಘ ಸಂಸ್ಥೆಗಳು, ಸರ್ಕಾರಿ ಸ್ವತ್ತುಗಳಲ್ಲಿ ಚಟುವಟಿಕೆ ನಡೆಸಲು ನಿಯಂತ್ರಿಸುವ ಸುತ್ತೋಲೆ ಹೊರಡಿಸಿದೆ. ಆ ಆದೇಶದಲ್ಲಿ ಆರ್‌ಎಸ್‌ಎಸ್ ಎಂಬ ಪದವನ್ನೇ ಬಳಸಿಲ್ಲ . ಆದರೂ ಸರ್ಕಾರದ ವಿರುದ್ಧ ಅಪಪ್ರಚಾರ ನಡೆಯುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.