ಬೆಂಗಳೂರು: ಇಲ್ಲಿಯವರೆಗೆ ಬಹುಪಾಲು ಬೆಂಗಳೂರು ನಗರಕ್ಕೆ ಸೀಮಿತವಾಗಿದ್ದ ಅನ್ಯಭಾಷಿಕರಿಗೆ ಕನ್ನಡ ಕಲಿಕಾ ಕಾರ್ಯಕ್ರಮವನ್ನು ರಾಜ್ಯಾದ್ಯಂತ ವಿಸ್ತರಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ತೀರ್ಮಾನಿಸಿದ್ದು, ಪೂರ್ವಭಾವಿ ಕ್ರಮಗಳಿಗೆ ಚಾಲನೆ ನೀಡಲು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.
ಕೇಂದ್ರೋದ್ಯಮಗಳು, ಬ್ಯಾಂಕುಗಳು, ಕೇಂದ್ರ ಸರ್ಕಾರಿ ಕಚೇರಿಗಳು ರಾಜ್ಯಾದ್ಯಂತ ಇದ್ದು, ಈ ಸಂಸ್ಥೆಗಳಲ್ಲಿ ಹಲವಾರು ಅನ್ಯಭಾಷಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ವ್ಯಾಪಾರ-ವ್ಯವಹಾರಗಳಿಗೆ ಬೇರೆ ರಾಜ್ಯಗಳಿಂದ ಬಂದು ಕರ್ನಾಟಕದಲ್ಲಿ ನೆಲೆಕಂಡುಕೊಂಡಿರುವ ಹಲವು ಅನ್ಯಭಾಷಿಕರು ಇದ್ದಾರೆ. ಈ ಸಮುದಾಯಗಳನ್ನು ಪ್ರತಿ ಜಿಲ್ಲೆಗಳಲ್ಲಿ ಗುರುತಿಸಿ ಅವರುಗಳಿಗೆ ಕನ್ನಡ ಕಲಿಸುವ ಪ್ರಯತ್ನವನ್ನು ಮಾಡಲು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ನಿರ್ಣಯಿಸಿದ್ದು, ಈ ಬೃಹತ್ ಅಭಿಯಾನಕ್ಕೆ ರಾಜ್ಯಾದ್ಯಂತ ಇರುವ ಆಸಕ್ತ ಸಂಘ ಸಂಸ್ಥೆಗಳು ಸಂಬಂಧಪಟ್ಟ ಜಿಲ್ಲಾಡಳಿತದೊಂದಿಗೆ ನೋಂದಾಯಿಸಿಕೊಳ್ಳಬಹುದಾಗಿದೆ ಎಂದಿರುವ ಡಾ. ಬಿಳಿಮಲೆ, ಜಿಲ್ಲಾಡಳಿತಗಳು ತರಗತಿ ನಡೆಸುವ ಸ್ಥಳಾವಕಾಶವನ್ನು ಒದಗಿಸಲಿವೆ ಎಂದಿದ್ದಾರೆ. ಜಿಲ್ಲಾಡಳಿತಗಳಿಂದ ನೇಮಿಸಲ್ಪಡುವ ಶಿಕ್ಷಕರುಗಳಿಗೆ ಗೌರವ ಸಂಭಾವನೆಯನ್ನು ಪ್ರಾಧಿಕಾರವೇ ನೀಡಲಿದೆ ಎಂದಿರುವ ಬಿಳಿಮಲೆ, ಈ ಕುರಿತಂತೆ ವಿಶೇಷ ಪಠ್ಯಕ್ರಮವನ್ನು ನಿರೂಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಅನ್ಯಭಾಷಿಕರಿಗೆ ವಾರದಲ್ಲಿ 3 ದಿನದಂತೆ 3 ತಿಂಗಳು ತರಗತಿಗಳನ್ನು ನಡೆಸಲಾಗುವುದಿದ್ದು, ಕಲಿಕಾರ್ಥಿಗಳಿಂದ ಶಿಕ್ಷಕರ ಬೋಧನಾ ಗುಣಮಟ್ಟವನ್ನು ಅಳೆಯಲು ತೀರ್ಮಾನಿಸಲಾಗಿದ್ದು, ಈ ಪ್ರಯತ್ನದಲ್ಲಿ ವೃತ್ತಿಪರತೆ ಮತ್ತು ಪಾರದರ್ಶಕತೆಯನ್ನು ಕಾಯ್ದುಕೊಳ್ಳಲಾಗುವುದು ಎಂದು ಬಿಳಿಮಲೆ ತಿಳಿಸಿದ್ದಾರೆ.
ಗ್ರೇಟರ್ ಬೆಂಗಳೂರಿಗೆ ಕನ್ನಡದ ಹೆಸರಿಡಿ:
ನಾಲ್ಕು ದಿಕ್ಕುಗಳಲ್ಲಿ ಅತಿವೇಗವಾಗಿ ವಿಸ್ತರಣೆಯಾಗುತ್ತಿರುವ ಬೆಂಗಳೂರು ನಗರದ ಆಡಳಿತವನ್ನು ಸಮರ್ಪಕವಾಗಿ ನಿರ್ವಹಿಸುವ ಸಲುವಾಗಿ ಸರ್ಕಾರವು ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನು ರಚಿಸಿರುವುದು ಸ್ವಾಗತಾರ್ಹ ಪ್ರಯೋಗವೆಂದು ಬಿಳಿಮಲೆ ಹೇಳಿದ್ದಾರೆ.
ಈ ಹಿಂದೆ ಗ್ರೇಟರ್ ಬೆಂಗಳೂರು ವಿಧೇಯಕ ಉಭಯ ಸದನಗಳಲ್ಲಿ ಮಂಡಿಸುವ ಸಂದರ್ಭದಲ್ಲಿ ಉದ್ದೇಶಿತ ವಿಧೇಯಕವು ಪಾಲಿಕೆಗಳ ಆಡಳಿತಕ್ಕೆ ಕನ್ನಡಿಗ ಮಹಾಪೌರರು ಹಾಗೂ ಉಪ ಮಹಾಪೌರರನ್ನು ಆಯ್ಕೆ ಮಾಡುವ ಷರತ್ತನ್ನು ಹೊಂದಿರುವ ರೀತಿಯಲ್ಲಿ ರೂಪಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಆಗ್ರಹಿಸಿತ್ತು ಎಂದು ಸ್ಮರಿಸಿರುವ ಬಿಳಿಮಲೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಎನ್ನುವ ಹೆಸರು ಹೆಚ್ಚಾಗಿ ಆಂಗ್ಲಭಾಷೆಯನ್ನು ಪ್ರತಿಬಿಂಬಿಸುತ್ತಿದ್ದು, ಈ ಪದಕ್ಕೆ ಇನ್ನಷ್ಟು ಕನ್ನಡತನದ ಅವಶ್ಯಕತೆ ಇದೆ ಎನ್ನುವ ಅಂಶವನ್ನು ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ ಎಂದು ಹೇಳಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಪರ್ಯಾಯವಾದ ಕನ್ನಡ ಪದವನ್ನು ಬಳಸುವ ನಿಟ್ಟಿನಲ್ಲಿ ಸರ್ಕಾರವು ಗಂಭೀರವಾಗಿ ಆಲೋಚಿಸಬೇಕಿದ್ದು, ಸಾರ್ವಜನಿಕರಿಂದ ಸೂಕ್ತ ಹೆಸರುಗಳನ್ನು ಸೂಚಿಸಲು ಸರ್ಕಾರವು ಸಲಹೆಗಳನ್ನು ಆಹ್ವಾನಿಸಬೇಕೆಂದು ಬಿಳಿಮಲೆ ಆಗ್ರಹಿಸಿದ್ದು, ಸಾರ್ವಜನಿಕರು ಸೂಚಿಸಿದ ಹೆಸರುಗಳಲ್ಲಿ ಅತ್ಯುತ್ತಮವಾದ ಹೆಸರನ್ನು ಉದ್ದೇಶಿತ ಪ್ರಾಧಿಕಾರಕ್ಕೆ ಇಡುವ ಮೂಲಕ ಕನ್ನಡಿಗರ ಹೆಮ್ಮೆಯ ಸಂಸ್ಥೆಯಾಗಿ ಉಳಿಯುವಲ್ಲಿ ಕ್ರಮವಹಿಸಬೇಕೆಂದು ಬಿಳಿಮಲೆ ಸರ್ಕಾರವನ್ನು ಕೋರಿದ್ದಾರೆ.