ಭ್ರಷ್ಟಾಚಾರದ ಆರೋಪ: ಸಾಗರದ ಸರ್ಕಾರಿ ಆಸ್ಪತ್ರೆ ಹೆರಿಗೆ ಡಾಕ್ಟರ್ ನಾಗೇಂದ್ರಪ್ಪ ವರ್ಗಾವಣೆ

ಶಿವಮೊಗ್ಗ: ಸಾಗರ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ. ನಾಗೇಂದ್ರಪ್ಪ ಎಂ.ಬಿ. ಅವರನ್ನು ಕರ್ತವ್ಯ ಲೋಪ ಹಾಗೂ ಸಾರ್ವಜನಿಕರಿಂದ ಬಂದ ದೂರುಗಳ ಹಿನ್ನೆಲೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆಗೊಳಿಸಿ ಸರ್ಕಾರ ಆದೇಶಿಸಿದೆ. 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯ ಈ ಕುರಿತು ಆದೇಶ ಹೊರಡಿಸಿದ್ದು, ಡಾ. ನಾಗೇಂದ್ರಪ್ಪ ಅವರು ಇನ್ನು ಮುಂದೆ ಸಾಗರದಲ್ಲಿ ಕರ್ತವ್ಯ ನಿರ್ವಹಿಸದೆ ಬೆಂಗಳೂರಿನ ಆರೋಗ್ಯ ಸೌಧದಲ್ಲಿರುವ ಆಯುಕ್ತಾಲಯಕ್ಕೆ ವರದಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.

ವೈದ್ಯರ ವಿರುದ್ಧ ದೂರು, ತನಿಖೆ

ಡಾ. ನಾಗೇಂದ್ರಪ್ಪ ಅವರು ಕಳೆದ ಐದು ವರ್ಷಗಳಿಂದ ಸಾಗರದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಆದರೆ ಇತ್ತೀಚೆಗೆ ರೋಗಿಗಳಿಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿದ್ದವು. ಈ ಸಂಬಂಧ ಸಾರ್ವಜನಿಕರಿಂದ ದೂರುಗಳು ಬಂದಿದ್ದಲ್ಲದೆ, ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಾಗಿತ್ತು. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ವೈದ್ಯರ ಕರ್ತವ್ಯ ನಿರ್ವಹಣೆ ಕುರಿತು ವಿಡಿಯೋಗಳು ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿತ್ತು.

ಗಂಗಮ್ಮ ಬಿನ್ ಲಿಂಗರಾಜು ಎಂಬುವರು ನೀಡಿದ ದೂರಿನ ಆಧಾರದ ಮೇಲೆ ಶಿವಮೊಗ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತನಿಖೆ ನಡೆಸಿದ್ದರು.

ತನಿಖಾ ವರದಿಯಲ್ಲಿ, ಸರ್ಕಾರಿ ಕರ್ತವ್ಯದ ಅವಧಿಯಲ್ಲಿ ಅಗತ್ಯವಿದ್ದರೆ ನುರಿತ ಸರ್ಜನ್‌ಗಳ ನೆರವು ಪಡೆಯಬಹುದಾಗಿತ್ತು ಹಾಗೂ ಹೆರಿಗೆ ಸಂದರ್ಭದಲ್ಲಿ ಗಂಭೀರ ತೊಡಕು ಎದುರಾದಾಗ ರೋಗಿಯನ್ನು ಸೂಕ್ತ ಮೇಲ್ಮಟ್ಟದ ಆಸ್ಪತ್ರೆಗೆ ಶಿಫಾರಸು ಮಾಡಬೇಕಾಗಿತ್ತು ಎಂಬ ಅಂಶವನ್ನು ಉಲ್ಲೇಖಿಸಲಾಗಿದೆ.

ಶಾಸಕರಿಂದಲೂ ವರ್ಗಾವಣೆಗೆ ಮನವಿ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾದ ಹಿನ್ನೆಲೆಯಲ್ಲಿ, ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಲೂರು ಅವರು ವೈದ್ಯರನ್ನು ಜಿಲ್ಲೆಯಿಂದ ವರ್ಗಾಯಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು.

ಈ ಎಲ್ಲಾ ಬೆಳವಣಿಗೆಗಳನ್ನು ಪರಿಗಣಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯ, ಡಾ. ನಾಗೇಂದ್ರಪ್ಪ ಅವರನ್ನು ಸಾಗರದ ಹುದ್ದೆಯಿಂದ ಬಿಡುಗಡೆ ಮಾಡಿ ಬೆಂಗಳೂರಿನ ಆನಂದರಾವ್ ವೃತ್ತದ ಸಮೀಪದ ಆರೋಗ್ಯ ಸೌಧಕ್ಕೆ ವರದಿ ಮಾಡಿಕೊಳ್ಳುವಂತೆ ಆದೇಶಿಸಿದೆ. ಈ ವರ್ಗಾವಣೆ ಆದೇಶ ತಕ್ಷಣದಿಂದಲೇ ಜಾರಿಗೆ ಬರಲಿದೆ.

 ಅಶೋಕ ಬರದವಳ್ಳಿ ನೇತೃತ್ವದ ಹೋರಾಟಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರತಿಕ್ರಿಯೆ

 ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ. ನಾಗೇಂದ್ರಪ್ಪ ಅವರ ವಿರುದ್ಧ ಕೇಳಿಬಂದಿರುವ ಕರ್ತವ್ಯ ಲೋಪದ ಆರೋಪಗಳಿಗೆ ಸಂಬಂಧಿಸಿದಂತೆ ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಅಶೋಕ ಬರದವಳ್ಳಿ ನೇತೃತ್ವದಲ್ಲಿ ನಡೆದ ಹೋರಾಟ ನಡೆಸಿದ್ದು,  ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರಿಂದ ವಿವಿಧ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ವೈದ್ಯರ ವಿರುದ್ಧದ ಆರೋಪಗಳ ಹಿನ್ನೆಲೆಯಲ್ಲಿ ಸರ್ಕಾರ ಕೈಗೊಂಡಿರುವ ವರ್ಗಾವಣೆ ಕ್ರಮದ ಕುರಿತು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದು, ವರ್ಗಾವಣೆ ಮಾತ್ರ ಸಾಕಾಗುವುದಿಲ್ಲ. ಆರೋಪಗಳ ಕುರಿತು ಸೂಕ್ತ ತನಿಖೆ ನಡೆಸಿ, ತಪ್ಪು ಸಾಬೀತಾದರೆ ಅಮಾನತು ಸೇರಿದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹಲವರು ಒತ್ತಾಯಿಸಿದ್ದಾರೆ.

‘ವರ್ಗಾವಣೆ ಸಾಕಾಗಲ್ಲ, ಅಮಾನತು ಮಾಡಿ’

ಫೇಸ್‌ಬುಕ್‌ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಮೇಘರಾಜ್ ಎಂಬುವವರು, ಎರಡು ವರ್ಷಗಳ ಹಿಂದೆ ಪಡಗೋಡಿನಲ್ಲಿ ನಡೆದ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದಂತೆ ವೈದ್ಯರ ವಿರುದ್ಧ ಆರೋಪವೊಂದನ್ನು ಮಾಡಿದ್ದಾರೆ. ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಹೆಚ್ಚಿನ ಜನರನ್ನು ಹೋರಾಟಕ್ಕೆ ಕರೆತರಬೇಕು ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಭು ಪ್ರಿನ್ಸ್ ಎಂಬುವವರು, ಕೇವಲ ವರ್ಗಾವಣೆ ಮಾಡುವ ಬದಲು ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಇದೇ ವೇಳೆ, ಆಸ್ಪತ್ರೆಯಲ್ಲಿ ಉತ್ತಮವಾಗಿ ಸೇವೆ ಸಲ್ಲಿಸುತ್ತಿರುವ ಮತ್ತೊಬ್ಬ ವೈದ್ಯೆಯ ಸೇವೆಯನ್ನು ಶ್ಲಾಘಿಸಿದ್ದಾರೆ.

‘ಬೇರೆ ಊರಿಗೆ ವರ್ಗಾಯಿಸಿದರೆ ಸಮಸ್ಯೆ ಪರಿಹಾರವಾಗುತ್ತಾ?’

ಶಶಿಧರ ಮೆಂಪಿನಮಠ ಅವರು, ವರ್ಗಾವಣೆ ಮಾಡಿದರೆ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದು, ವೈದ್ಯರ ವಿರುದ್ಧ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಇದೇ ಅಭಿಪ್ರಾಯ ವ್ಯಕ್ತಪಡಿಸಿರುವ ಕೆ. ಸತ್ಯಾ ಭಟ್, ‘ವರ್ಗಾವಣೆ ಮಾಡಿದರೆ ಸಮಸ್ಯೆ ಪರಿಹಾರವಾಗುತ್ತದೆಯೇ?’ ಎಂದು ಪ್ರಶ್ನಿಸಿ, ಸಂತ್ರಸ್ತರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

‘ಮೊದಲು ಸಸ್ಪೆಂಡ್ ಮಾಡಿ’

ಮುಕ್ತಾ ಪ್ರವೀಣ್ ಅವರು ವೈದ್ಯರ ವಿರುದ್ಧದ ಆರೋಪಗಳ ಕುರಿತು ಕಠಿಣ ಕ್ರಮದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರೆ, ನಾಗರಾಜ್ ಮುಕ್ತ ಅವರು ‘ಮೊದಲು ಸಸ್ಪೆಂಡ್ ಮಾಡಿ’ ಎಂದು ಒತ್ತಾಯಿಸಿದ್ದಾರೆ.

ಸರ್ಕಾರದ ವರ್ಗಾವಣೆ ಕ್ರಮದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿರುವ ಈ ಪ್ರತಿಕ್ರಿಯೆಗಳು, ಪ್ರಕರಣದ ಕುರಿತು ಸಾರ್ವಜನಿಕ ವಲಯದಲ್ಲಿ ಇನ್ನಷ್ಟು ಚರ್ಚೆಗೆ ಕಾರಣವಾಗಿವೆ. ವೈದ್ಯರ ವಿರುದ್ಧದ ಆರೋಪಗಳ ಸತ್ಯಾಸತ್ಯತೆ ತನಿಖೆ ಹಾಗೂ ಅಧಿಕೃತ ಕ್ರಮಗಳ ಮೂಲಕವೇ ಸ್ಪಷ್ಟವಾಗಬೇಕಿದೆ.

More articles

Latest article

Most read