ಭಟ್ಕಳ: ದೇಶ ಉಳಿಸಿ ಸಂಕಲ್ಪ ಯಾತ್ರೆ ಜಾತಾ ಉತ್ತರ ಕನ್ನಡ ಜಿಲ್ಲೆಯ ಭಟ್ಕಳಕ್ಕೆ ಆಗಮಿಸಿದ್ದು ಇವರನ್ನು ಎದ್ದೇಳು ಕರ್ನಾಟಕ ಉತ್ತರ ಕನ್ನಡ ಜಿಲ್ಲಾ ಘಟಕವು ಬರಮಾಡಿಕೊಂಡಿತು.
ಇದೇ ಸಂದರ್ಭದಲ್ಲಿ ಡಾ.ಅಂಜಲಿ ಹೇಮಂತ್ ನಿಂಬಾಳ್ಕರ್ ರಚಿಸಿರುವ ʻಮನೆ ಮನೆಗೆ ಸಂವಿಧಾನʼ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಲಾಯಿತು.
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದಲೇ ಸಂವಿಧಾನ ಬದಲಾಯಿಸಬೇಕು ಎಂಬ ಹೇಳಿಕೆ ಹೊರಬಿದ್ದಿದೆ. ಈ ಕಳಂಕವನ್ನು ಉತ್ತರ ಕನ್ನಡ ಜನತೆ ತೊಳೆದುಕೊಳ್ಳಬೇಕಾಗಿದೆ. ಹೀಗಾಗಿ ಸಂವಿಧಾನ ಉಳಿಸಲು ಡಾ.ಅಂಜಲಿ ಹೇಮಂತ್ ನಿಂಬಾಳ್ಕರ್ ಅವರನ್ನು ಗೆಲ್ಲಿಸಬೇಕು ಎಂದು ಅನೇಕ ನಾಗರಿಕ ಸಂಘಟನೆಗಳ ಮುಖಂಡರು ಕರೆ ನೀಡಿದರು.
ದೇಶ ಉಳಿಸಿ ಸಂಕಲ್ಪ ಯಾತ್ರೆ ಭಟ್ಕಳಕ್ಕೆ ಆಗಮಿಸಿದ ನಂತರ ರಂಗಿನಕಟ್ಟೆಯಲ್ಲಿ ಇರುವ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ಸಮಾವೇಶಗೊಂಡಿತು. ಯಾತ್ರೆಯ ಮುಖ್ಯಸ್ಥರಾದ ಡಾ. ರಮೇಶ್, ಚಿಂತಕರಾದ ನಾಗೇಶ್ ಅವರು ಮಾತನಾಡಿ ಸಂವಿಧಾನ, ಪ್ರಜಾಪ್ರಭುತ್ವ, ಸ್ವಾತಂತ್ರ್ಯ ಉಳಿವಿಗಾಗಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ವನ್ನು ಸೋಲಿಸಬೇಕು ಎಂದು ಕರೆ ನೀಡಿದರು. ಸ್ಥಳೀಯ ಮುಖಂಡರಾದ ವಿಷ್ಣು ದೇವಾಡಿಗ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್ ನಾಯ್ಕ, ಜನರಲ್ ಸೆಕ್ರೆಟರಿ ಸುರೇಶ್ ನಾಯ್ಕ, ಮುಂತಾದ ಮುಖಂಡರುಗಳು ಇದ್ದರು.
ಸಂಕಲ್ಪ ಯಾತ್ರೆಯು ಹೊನ್ನಾವರ ಬಂದರಿನಲ್ಲಿ ಸಭೆ ನಡೆಸಿತು. ಸ್ಥಳೀಯ ಮುಖಂಡರಾದ ಲಾರ್ಸನ್ ಅವರು ಸಂಘಟಿಸಿದ್ದರು. ಡಾ. ರಮೇಶ್ ಮತ್ತು ನಾಗೇಶ್ ಮಾತನಾಡಿದರು. ನಂತರ ಯಾತ್ರೆಯು ಕುಮಟಾಕ್ಕೆ ಆಗಮಿಸಿದಾಗ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು ಮತ್ತು ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರು ಆದ ಹೊನ್ನಪ್ಪ ನಾಯಕ್ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಮನೆ ಮನೆಗೆ ಸಂವಿಧಾನ ಪುಸ್ತಕ ಬಿಡುಗಡೆಗೊಳಿಸಲಾಯಿತು.
ಎದ್ದೇಳು ಕರ್ನಾಟಕದ ಉತ್ತರ ಕನ್ನಡ ಜಿಲ್ಲಾ ಪ್ರಮುಖರಾದ ಕೆ ರಮೇಶ ಅಂಕೋಲ, ಸಿದ್ದು ಅಂಕೋಲ, ಸಂತೋಷ್ ಶೆಟ್ಟಿ. ವಸಂತಾ ಗೌಡ, ವಿಶಾಲಾಕ್ಷಿ ನಾಯ್ಕ, ರಾಧಿಕಾ , ಪ್ರದೀಪ್ ಕೇಣಿ ಇದ್ದರು.