ಸುಪ್ರೀಂ ಮುಖ್ಯ ನ್ಯಾಯಾಧೀಶರ ನಿವಾಸಕ್ಕೆ ಹೋಗಿ ಪ್ರಧಾನಿಗಳು ಆರತಿ ಎತ್ತಿದ್ದರಿಂದ ನ್ಯಾಯಮೂರ್ತಿಗಳ ಮೇಲೆಯೇ ಸಂದೇಹ ಪಡುವಂತಾಗಿದೆ. ಇನ್ನು ಮುಂದೆ ಒಂದೇ ಒಂದು ತೀರ್ಪು ಮೋದಿ ಸರಕಾರದ ಪರವಾಗಿ ಸಿಜೆಐ ಚಂದ್ರಚೂಡರವರು ಕೊಟ್ಟಿದ್ದೇ ಆದರೆ ಶಾಸಕಾಂಗ ಮತ್ತು ನ್ಯಾಯಾಂಗದ ಮುಖ್ಯಸ್ಥರ ಒಳ ಒಪ್ಪಂದದ ಅನುಮಾನ ನಿಜ ಎನಿಸುತ್ತದೆ. ಇದೆಲ್ಲಾ ನ್ಯಾಯಮೂರ್ತಿಗಳಿಗೆ ಬೇಕಿತ್ತಾ? – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
ಈ ಬಿಜೆಪಿ ಸಂಘಿಗಳ ತರ್ಕಗಳೇ ಬಲು ವಿಚಿತ್ರ. “2009 ರಲ್ಲಿ ಪ್ರಧಾನಿಗಳಾಗಿದ್ದಾಗ ಮನಮೋಹನ್ ಸಿಂಗ್ ರವರು ಅಂದಿನ ಸಿಜೆಐ ಕೆ.ಜಿ.ಬಾಲಕೃಷ್ಣನ್ ರವರ ಜೊತೆಗೆ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದು ಸರಿ ಎನ್ನುವುದಾದರೆ ಮೋದಿಯವರು ಗಣೇಶ ಪೂಜೆಯಲ್ಲಿ ಭಾಗವಹಿಸಿದ್ದು ಹೇಗೆ ತಪ್ಪು?’ ಎಂಬುದು ಅವರ ಪ್ರಶ್ನೆ.
ಹೌದು.. ಇಫ್ತಾರ್ ಕೂಟದಲ್ಲಿ ಪಿಎಂ ಸಿಂಗ್ ರವರು ಮುಖ್ಯ ನ್ಯಾಯಮೂರ್ತಿಗಳ ಜೊತೆ ಭಾಗವಹಿಸಿದ್ದು ನಿಜ. ಆದರೆ ಆ ಕೂಟವು ಖಾಸಗಿ ಕಾರ್ಯಕ್ರಮವಾಗಿರಲಿಲ್ಲ. ಮುಸ್ಲಿಂ ಸಮುದಾಯದವರ ಸೌಹಾರ್ದಯುತ ಆಚರಣೆಗೆ ಆಗಿನ ಪ್ರಧಾನ ಮಂತ್ರಿ ಹಾಗೂ ಮುಖ್ಯ ನ್ಯಾಯಮೂರ್ತಿಗಳು ಭಾಗಿಯಾಗಿದ್ದರು. ಯಾಕೆಂದರೆ ಅವರು ಎಲ್ಲಾ ಧರ್ಮೀಯರನ್ನು ಪ್ರತಿನಿಧಿಸುವ ಉನ್ನತ ಸ್ಥಾನದಲ್ಲಿರುವವರು. ಇಷ್ಟಕ್ಕೂ ಮುಸಲ್ಮಾನ ಸಮುದಾಯದವರು ಆಚರಿಸುವ ಇಪ್ತಾರ್ ಕೂಟವು ವ್ಯಕ್ತಿಗತವಾದ ಕೌಟುಂಬಿಕ ಪೂಜೆ ಪುನಸ್ಕಾರ ಆಗಿರದೇ ಅದು ಸಾಮುದಾಯಿಕ ಸಾರ್ವಜನಿಕ ಆಚರಣೆಯಾಗಿದೆ.
ಆದರೆ.. ಹಾಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೋಗಿ ಆರತಿ ಎತ್ತಿ ಪೂಜೆ ಮಾಡಿದ್ದು ಈ ದೇಶದ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡರವರ ಖಾಸಗಿ ನಿವಾಸದಲ್ಲಿ. ಇದರಲ್ಲಿ ತಪ್ಪೇನಿದೆ. ಜಡ್ಜ್ ಒಬ್ಬರ ಆಹ್ವಾನದ ಮೇರೆಗೆ ಪ್ರಧಾನಿಗಳು ಗಣಪತಿ ಪೂಜೆಗೆ ಹೋಗಬಾರದೇ? ಎನ್ನುವುದು ಮೋದಿ ಭಕ್ತರು ಹಾಗೂ ಸಮರ್ಥಕರ ಪ್ರಶ್ನೆ.
ಪ್ರಧಾನಿಗಳಾಗಲೀ ಇಲ್ಲವೇ ಮುಖ್ಯ ನ್ಯಾಯಮೂರ್ತಿಗಳಾಗಲಿ ಸಾರ್ವಜನಿಕವಾಗಿ ಆಚರಿಸಲಾಗುವ ಇಪ್ತಾರ ಕೂಟಕ್ಕೋ ಇಲ್ಲಾ ಗಣೇಶನ ಪೂಜೆ ಮೆರವಣಿಗೆಗೋ ಹೋಗಿದ್ದರೆ ತಪ್ಪೇನಿರಲಿಲ್ಲ. ಅದು ಅವರ ವ್ಯಯಕ್ತಿಕ ಶೃದ್ದೆ ಭಕ್ತಿ ಹಾಗೂ ನಂಬಿಕೆ ಎನ್ನಬಹುದಾಗಿತ್ತು. ಆದರೆ ಈ ವಿಶ್ವಗುರುಗಳು ಹೋಗಿದ್ದು ಈ ದೇಶದ ಮುಖ್ಯ ನ್ಯಾಯಮೂರ್ತಿಗಳ ಖಾಸಗಿ ನಿವಾಸಕ್ಕೆ.
ಆಯ್ತು ಅವರು ಕರೆದರು, ಇವರು ಹೋದರು. ಆದರೆ ಜೊತೆಗೆ ವಿಡಿಯೋ ಕ್ಯಾಮರಾಗಳು ಯಾಕೆ ಬೇಕಿತ್ತು? ನಾಲ್ಕಾರು ಕೋನಗಳಲ್ಲಿ ಪ್ರಧಾನಿಗಳು ಪೂಜೆ ಮಾಡುವ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಯಾಕೆ ಹಂಚಿಕೊಳ್ಳಬೇಕಿತ್ತು?. ಯಾಕೆಂದರೆ ಮೋದಿಯವರಿಗೆ ಅದು ಬೇಕಾಗಿತ್ತು. ಯಾಕೆಂದರೆ ತಾವು ಮುಖ್ಯ ನ್ಯಾಯಾಧೀಶರಿಗೆ ಅದೆಷ್ಟು ಆತ್ಮೀಯರು ಎಂಬುದನ್ನು ಬಹಿರಂಗವಾಗಿ ಪ್ರದರ್ಶಿಸಬೇಕಾಗಿತ್ತು. ಅದಕ್ಕೆ ಪೂಜೆಯ ನೆಪದಲ್ಲಿ ಚಿತ್ರೀಕರಣ ಮಾಡಿಸಿ ವಿಡಿಯೋ ಹಂಚಲಾಗಿದೆ ಎಂಬ ಅನುಮಾನ ಕಾಡದಿರದು. ಇಂತಹ ಪ್ರಚಾರ ಮಾನ್ಯ ಚಂದ್ರಚೂಡರವರಿಗೆ ಬೇಕಿಲ್ಲದಿದ್ದರೂ ಮೋದಿಯವರಿಗೆ ಬೇಕಾಗಿತ್ತು. ವಿಶ್ವಗುರುವಿನ ಮಹಿಮೆ ಸಾರಲು ಮೋದಿ ಭಕ್ತಾದಿಗಳಿಗೆ ಅಗತ್ಯವಿತ್ತು. ಗೋದಿ ಮಾಧ್ಯಮಗಳು ಸಂಭ್ರಮಿಸಲು ಈ ಘಟನೆ ಬಳಕೆಯಾಯ್ತು. ಮಹಾರಾಷ್ಟದ ಚುನಾವಣೆಯ ಹೊಸ್ತಿಲಲ್ಲಿರುವಾಗ ಮಹಾರಾಷ್ಟ್ರ ಮೂಲದ ಮುಖ್ಯ ನ್ಯಾಯಮೂರ್ತಿಗಳ ಮನೆಗೆ ಹೋಗಿ ಪ್ರಚಾರ ಪಡೆಯುವುದು ಮೋದಿ ರಾಜಕಾರಣದ ಭಾಗವಾಗಿತ್ತು ಎಂಬ ಸಂದೇಹವೂ ಕಾಡುವಂತಾಯ್ತು.
ಆದರೆ.. ಈ ಗಣೇಶ ಪೂಜಾ ಪ್ರಸಂಗವು ಮುಖ್ಯ ನ್ಯಾಯಮೂರ್ತಿಗಳ ವಿಶ್ವಾಸಾರ್ಹತೆಯನ್ನು ಅನುಮಾನದಿಂದ ನೋಡುವಂತೆ ಮಾಡಿತು. ಈಗಾಗಲೇ ಈ ಹಿಂದೆ ಇದ್ದ ಕೆಲವು ನ್ಯಾಯಮೂರ್ತಿಗಳು ಸಂಘದ ಹಿಂದುತ್ವವಾದಿ ಹಿತಾಸಕ್ತಿಗೆ ಪೂರಕವಾಗಿ ತೀರ್ಪುಗಳನ್ನು ಕೊಟ್ಟಿರುವುದು ದಾಖಲೆಯಾಗಿದೆ. ಬಾಬರಿ ಮಸೀದಿ ಕೆಳಗೆ ಯಾವುದೇ ರಾಮ ಮಂದಿರದ ಕುರುಹುಗಳು ಸಿಗದೇ ಇದ್ದರೂ ಬಹುಸಂಖ್ಯಾತರ ಭಾವನೆಯ ನೆಪದಲ್ಲಿ ತೀರ್ಪು ಪ್ರಕಟಿಸಲಾಗಿದೆ. ಮೋದಿ ಸರಕಾರದ ಪರವಾಗಿ ತೀರ್ಪು ಕೊಟ್ಟ ನ್ಯಾಯಾಧೀಶರುಗಳು ನಿವೃತ್ತಿಯ ನಂತರ ಬಿಜೆಪಿ ಸೇರಿ ಪದವಿ ಪುರಸ್ಕಾರ ಅಧಿಕಾರದ ಫಲಾನುಭವಿಗಳಾಗಿರುವ ಉದಾಹರಣೆಗಳೂ ಇವೆ.
ಈಗ ಸುಪ್ರೀಂ ಮುಖ್ಯ ನ್ಯಾಯಾಧೀಶರ ನಿವಾಸಕ್ಕೆ ಹೋಗಿ ಪ್ರಧಾನಿಗಳು ಆರತಿ ಎತ್ತಿದ್ದರಿಂದ ನ್ಯಾಯಮೂರ್ತಿಗಳ ಮೇಲೆಯೇ ಸಂದೇಹ ಪಡುವಂತಾಗಿದೆ. ಇನ್ನು ಮುಂದೆ ಒಂದೇ ಒಂದು ತೀರ್ಪು ಮೋದಿ ಸರಕಾರದ ಪರವಾಗಿ ಸಿಜೆಐ ಚಂದ್ರಚೂಡರವರು ಕೊಟ್ಟಿದ್ದೇ ಆದರೆ ಶಾಸಕಾಂಗ ಮತ್ತು ನ್ಯಾಯಾಂಗದ ಮುಖ್ಯಸ್ಥರ ಒಳ ಒಪ್ಪಂದದ ಅನುಮಾನ ನಿಜ ಎನಿಸುತ್ತದೆ. ಇದೆಲ್ಲಾ ನ್ಯಾಯಮೂರ್ತಿಗಳಿಗೆ ಬೇಕಿತ್ತಾ?
ಈಗಾಗಲೇ ಮುಖ್ಯ ನ್ಯಾಯಾಧೀಶರ ನಿವಾಸದಲ್ಲಿ ಪ್ರಧಾನಿಗಳ ಪೂಜಾಚರಣೆಯನ್ನು ವಿಪಕ್ಷಗಳು ಪ್ರಶ್ನಿಸಿವೆ. ಸುಪ್ರೀಂ ಕೋರ್ಟ್ ವಕೀಲರ ಸಂಘವೂ ಖಂಡಿಸಿದೆ. ಪ್ರಜಾಪ್ರಭುತ್ವವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ನ್ಯಾಯಾಂಗದ ಮೇಲೆ ಈ ಖಾಸಗಿ ಪೂಜಾ ಕಾರ್ಯಕ್ರಮ ತಪ್ಪು ಸಂದೇಶವನ್ನು ಕೊಡುತ್ತದೆ ಎಂಬ ಪ್ರತಿಕ್ರಿಯೆಗಳೂ ವ್ಯಕ್ತವಾಗುತ್ತಿವೆ. ಆದರೂ ಮೋದಿಯವರ ನಡೆಯನ್ನು ಹಿಂದಿನಂತೆ ಇಂದೂ ಸಹ ಯಥಾಪ್ರಕಾರೇಣ ಬಿಜೆಪಿಗರು ಸಮರ್ಥಿಸಿಕೊಳ್ಳುತ್ತಿದ್ದಾರೆ. ವಿತಂಡ ವಾದ ಮಾಡುತ್ತಿದ್ದಾರೆ.
ಯಾರು ಎಷ್ಟೇ ಪರ ವಿರೋಧ ಮಾತಾಡಿದರೂ, ಈ ಘಟನೆ ಮುಖ್ಯ ನ್ಯಾಯಮೂರ್ತಿಗಳ ಮೇಲಿನ ವಿಶ್ವಾಸಾರ್ಹತೆಯನ್ನು ಅನುಮಾನದಿಂದ ನೋಡಲು ಆಸ್ಪದ ಕೊಟ್ಟಿದ್ದಂತೂ ದಿಟ. ಈ ಸಂದೇಹಕ್ಕೆ ಸಿಜೆಐ ಚಂದ್ರಚೂಡರವರು ಇನ್ನು ಮುಂದೆ ನ್ಯಾಯಾಧೀಶರಾಗಿ ತೆಗೆದುಕೊಳ್ಳುವ ತೀರ್ಮಾನ ಹಾಗೂ ತೀರ್ಪುಗಳು ಉತ್ತರ ನೀಡಬಹುದಾಗಿವೆ.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ- ಹಿಂದಿ ಹೇರಿಕೆ | ಆಳ-ಅಗಲ ಮತ್ತು ಭೀಕರ ಅಪಾಯಗಳು