Wednesday, December 11, 2024

ಡಬಲ್ ಡೆಕ್ಕರ್ ಸ್ಲೀಪರ್ ಬಸ್ ನೀರಿನ ಟ್ಯಾಂಕರ್‌ಗೆ ಡಿಕ್ಕಿ; 8ಸಾವು

Most read

ಲಕ್ನೋ: ಉತ್ತರ ಪ್ರದೇಶದ ಕನೌಜ್ ಸಮೀಪ ಲಕ್ನೋ-ಆಗ್ರಾ ಎಕ್ಸ್‌ ಪ್ರೆಸ್‌ವೇ ನಲ್ಲಿ ಇಂದು ಮಧ್ಯಾಹ್ನ ಡಬಲ್ ಡೆಕ್ಕರ್ ಸ್ಲೀಪರ್ ಬಸ್ ನೀರಿನ ಟ್ಯಾಂಕರ್‌ಗೆ ಡಿಕ್ಕಿ ಹೊಡೆದ ಪರಿಣಾಮ 8 ಮಂದಿ ಸಾವನ್ನಪ್ಪಿದ್ದಾರೆ ಮತ್ತು 19ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮುಂದೆ ಚಲಿಸುತ್ತಿದ್ದ ಯುಪಿಡಿಎ ನೀರಿನ ಟ್ಯಾಂಕರ್‌ಗೆ ಡಿಕ್ಕಿ ಹೊಡೆದು ಬಸ್ ಪಲ್ಟಿಯಾಗಿ ಕಂದಕಕ್ಕೆ ಬಿದ್ದಿದೆ. ಈ ಬಸ್ ಲಕ್ನೋದಿಂದ ದೆಹಲಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ. ಮೃತರೆಲ್ಲರೂ ಉದ್ಯೋಗ ಅರಸಿಕೊಂಡು  ದೆಹಲಿಗೆ ಪ್ರಯಾಣಿಸುತ್ತಿದ್ದರು. ಎಂದು ತಿಳಿದು ಬಂದಿದೆ. ಬಸ್ ಚಾಲಕ ನಿದ್ರೆಗೆ ಜಾರಿದ ಕಾರಣ ಡಿಕ್ಕಿ ಸಂಭವಿಸಿದೆ ಎಂದು ಪ್ರಾಥಮಿಕ ಮೂಲಗಳು ತಿಳಿಸಿವೆ. ಕನೌಜ್‌ನ ಸಕ್ರವಾ ಪೊಲೀಸ್ ಠಾಣೆ ವ್ಯಾಪ್ತಿಯ ಔರೈಯಾ ಗಡಿಯಲ್ಲಿರುವ ಮಿಶ್ರಾಬಾದ್ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ.

ಅದೇ ಮಾರ್ಗವಾಗಿ ಪ್ರಯಾಣಿಸುತ್ತಿದ್ದ ಜಲಶಕ್ತಿ ಸಚಿವ ಸ್ವತಂತ್ರದೇವ್ ಸಿಂಗ್ ಅವರು ತಮ್ಮ ಬೆಂಗಾವಲು ಪಡೆಯನ್ನು ನಿಲ್ಲಿಸಿ ಗಾಯಾಳುಗಳನ್ನು ಬಸ್‌ನಿಂದ ಹೊರತರುವಲ್ಲಿ ನೆರವಾದರು. ಅಪಘಾತ ಕುರಿತು ಯುಪಿಡಿಎ ಸೇರಿದಂತೆ ಜಿಲ್ಲೆಯ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಹಿರಿಯ ಪೊಲೀಸ್ ಮತ್ತು ಆಡಳಿತ ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದಾರೆ. ಗಾಯಾಳುಗಳಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡಲು ಅವರಿಗೆ ಸೂಚಿಸಲಾಗಿದೆ ಎಂದು ಸ್ವತಂತ್ರದೇವ್ ಸಿಂಗ್ ತಿಳಿಸಿದ್ದಾರೆ.

ಇದೊಂದು ದುರದೃಷ್ಟಕರ ಘಟನೆ. ರಸ್ತೆಗಳಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ಸಂಚಾರ ನಿಯಮಗಳು, ಸುರಕ್ಷತಾ ಕ್ರಮಗಳಿಗೆ ಬದ್ಧವಾಗಿರಬೇಕು ಎಂದು ಸಚಿವ ಸ್ವತಂತ್ರದೇವ್ ಸಿಂಗ್ ಹೇಳಿದ್ದಾರೆ.  

More articles

Latest article