SSLC, PUC ತೇರ್ಗಡೆ ಅಂಕ ಕಡಿಮೆ ಮಾಡುವುದು ಕನ್ನಡಕ್ಕೆ ಮಾರಕ; ನಿರ್ಧಾರ ಮರುಪರಿಶೀಲನೆಗೆ ಬಿಳಿಮಲೆ ಆಗ್ರಹ

Most read

ಬೆಂಗಳೂರು: ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ತೇರ್ಗಡೆಯಾಗುವ ಕನಿಷ್ಠ ಅಂಕಗಳನ್ನು ೩೩ಕ್ಕೆ ಇಳಿಸಿರುವುದು ಅತ್ಯಂತ ಅವೈಜ್ಞಾನಿಕವಾಗಿದ್ದು ಕನ್ನಡ ಭಾಷಾ ಕಲಿಕೆಗೆ ಮಾರಕವಾಗಿರುವ ಈ ತೀರ್ಮಾನವನ್ನು ಸರ್ಕಾರ ಕೂಡಲೇ ಮರುಪರಿಶೀಲಿಸಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಮನವಿ ಮಾಡಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯಕ್ರಮಗಳನ್ನು ಸ್ಥಳೀಯ ಹಂತದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ನೇಮಿಸಲಾಗಿರುವ ಕನ್ನಡ ಜಾಗೃತಿ ಸಮಿತಿ ಸದಸ್ಯರ ಕಮ್ಮಟದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಕೇಂದ್ರ ಪಠ್ಯಕ್ರಮದ ಶಾಲೆಗಳ ವಿದ್ಯಾರ್ಥಿಗಳೊಂದಿಗೆ ಸಮಾನ ಭೂಮಿಕೆಯನ್ನು ಹೊಂದಬೇಕೆನ್ನುವ ಪ್ರಮುಖ ಕಾರಣಕ್ಕೆ ಸರ್ಕಾರವು ತೆಗೆದುಕೊಂಡಿರುವ ನಿರ್ಧಾರ ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ ಕನ್ನಡ ಭಾಷೆಗೆ ಮಾರಕವಾಗಿದೆ. ವಿದ್ಯಾರ್ಥಿಗಳ ಭಾಷಾ ಕಲಿಕೆಗೆ ಅವಶ್ಯಕವಿರುವ ಗಂಭೀರತೆಯನ್ನು ಈ ತೀರ್ಮಾನವು ಕಸಿದುಕೊಳ್ಳಲಿದ್ದು, ಮುಂದಿನ ದಿನಗಳಲ್ಲಿ ಇದು ಶಿಕ್ಷಣದಲ್ಲಿ ಕನ್ನಡ ಕಲಿಕೆಗೆ ಪ್ರತಿಕೂಲವಾಗಲಿದೆ. ಇದನ್ನು ಎಲ್ಲರೂ ವಿರೋಧಿಸಬೇಕಿದೆ ಎಂದರು.

ಈ ಶತಮಾನವು ಅಪೇಕ್ಷಿಸುತ್ತಿರುವ ಕೌಶಲ್ಯವನ್ನು ಪಡೆಯುವಲ್ಲಿ ನಮ್ಮ ವಿದ್ಯಾರ್ಥಿಗಳು ಈಗಾಗಲೇ ಹಿಂದಿದ್ದು, ಸರ್ಕಾರದ ಇಂತಹ ತೀರ್ಮಾನಗಳು ಕೌಶಲ್ಯಯುಕ್ತ ಸಮಾಜವನ್ನು ನಿರ್ಮಿಸುವಲ್ಲಿ ನಕಾರಾತ್ಮಕವಾದ ಪ್ರಭಾವವನ್ನು ಬೀರುತ್ತವೆ ಎಂದು ಹೇಳಿದ ಬಿಳಿಮಲೆ,  ೫೦ ವರ್ಷ ಹಿಂದಿರುವ ನಮ್ಮ ಬೋಧನ ಕ್ರಮ ಆಧುನಿಕ ಕಾಲಘಟ್ಟಕ್ಕೆ ಸಂವಾದಿಯಾಗಬೇಕಾದ  ತುರ್ತು ಅವಶ್ಯಕತೆ ಇದೆ ಎಂದರು.

ರಾಜ್ಯ ಶಿಕ್ಷಣ ನೀತಿ ಸಾರ್ವಜನಿಕ ಚರ್ಚೆಗೆ ಒಳಪಡಲಿ:

ನಾಡಿನ ಅತ್ಯುತ್ತಮ ಶಿಕ್ಷಣ ತಜ್ಞರುಗಳನ್ನೊಳಗೊಂಡ ಸಮಿತಿಯು ರಾಜ್ಯ ಶಿಕ್ಷಣ ನೀತಿಯನ್ನು ಸರ್ಕಾರಕ್ಕೆ ಸಲ್ಲಿಸಿ ೬ ತಿಂಗಳು ಕಳೆದರೂ ಇದನ್ನು ಸರ್ಕಾರವು ಸಾರ್ವಜನಿಕ ಚರ್ಚೆಗೆ ಒಳಪಡಿಸದೆ ಇರುವುದು ಆಕ್ಷೇಪಾರ್ಹ ಎಂದ ಬಿಳಿಮಲೆ, ಅತ್ಯಾಧುನಿಕವಾದ ಬೋಧನಾ ಕ್ರಮಗಳನ್ನು ವಿಷದಪಡಿಸಿರುವ ರಾಜ್ಯ ಶಿಕ್ಷಣ ನೀತಿಯನ್ನು ಕೂಡಲೇ ಸರ್ಕಾರವು ಅಳವಡಿಸಿಕೊಳ್ಳುವ ಕ್ರಮಕ್ಕೆ ಮುಂದಾಗಬೇಕು ಎಂದು ಹೇಳಿದರು.

  ಸರ್ಕಾರವು ಖಾಸಗಿ ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳ ಕೌಶಲ್ಯವನ್ನು ವೃದ್ಧಿಸುವ ಕೆಲಸ ಮಾಡಿದರೆ ಮಾತ್ರ ಕನ್ನಡಿಗರು ಜಾಗತಿಕ ಪೈಪೋಟಿಯನ್ನು ಸಮರ್ಥವಾಗಿ ಎದುರಿಸಲು ಸಾಧ್ಯ ಎಂದ ಅವರು, ರಾಜ್ಯ ಶಿಕ್ಷಣ ನೀತಿಯು ಈ ಎಲ್ಲ ಸವಾಲುಗಳಿಗೆ ಉತ್ತರವಾಗಿದ್ದು, ಇದನ್ನು ಆದಷ್ಟು ಶೀಘ್ರ ಸರ್ಕಾರವು ಪರಿಗಣಿಸುವ ವಾತಾವರಣವನ್ನು ಸೃಷ್ಠಿಸಬೇಕಿದೆ ಎಂದು ತಿಳಿಸಿದರು.

ಕನ್ನಡಪರವಾದ ಕೆಲಸಗಳನ್ನು ಮಾಡಲು ಮಾರ್ಗಸೂಚಿ ರಚಿಸಿ:

ಹಿರಿಯ ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪನವರು ಮಾತನಾಡಿ, ಸೇವಾ ಕ್ಷೇತ್ರಗಳು ಉದ್ಯಮ ಕ್ಷೇತ್ರಗಳಾಗಿ ರೂಪಾಂತರಗೊಳ್ಳುತ್ತಿರುವ ಕಾಲಘಟ್ಟದಲ್ಲಿ ನಾವಿದ್ದು, ಇಂತಹ ಸವಾಲಿನ ಸಂದರ್ಭದಲ್ಲಿ ಕನ್ನಡವನ್ನು ಹೇಗೆ ಉಳಿಸಬೇಕೆನ್ನುವ ಕುರಿತಂತೆ ಕನ್ನಡದ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸಾಮಾನ್ಯ ಕನ್ನಡ ಮಾರ್ಗಸೂಚಿಯನ್ನೇ ಹೊರತರಬೇಕಿದೆ ಎಂದರು.

ಇಂತಹ ನೀತಿಯು ಕಾನೂನಿನಲ್ಲಿಯೂ ಊರ್ಜಿತವಾಗುವ ಹಾಗೆ ರೂಪುಗೊಳ್ಳಬೇಕಿದ್ದು, ವಿಭಜಿತಗೊಂಡಿರುವ ವಿಚಾರ ವಲಯ ಇರುವ ಈ ಕಾಲಘಟ್ಟದಲ್ಲಿ  ನಾಡಿನ ಎಲ್ಲ ಚಿಂತಕರು ಒಗ್ಗಟ್ಟಾಗುವ ಮೂಲಕ ಕನ್ನಡದ ಉಳಿವಿಗೆ ಮುಂದಾಗಬೇಕಿದೆ ಎಂದ ಬರಗೂರು ರಾಮಚಂದ್ರಪ್ಪ, ಪರಿಭಾಷೆಗಳು ಬದಲಾಗುವ ಇಂದಿನ ಕಾಲವು ಕೇವಲ ಬದಲಾವಣೆಯಲ್ಲದೆ, ನಮ್ಮ ಸಾಮಾಜಿಕ, ಆರ್ಥಿಕ ಸಂರಚನೆಯ ಸ್ಥಿತ್ಯಂತರಕ್ಕೂ ಕಾರಣವಾಗುತ್ತಿದ್ದು, ಸಾಮಾನ್ಯ ಕನ್ನಡ ಕಾರ್ಯಸೂಚಿಯು ಈ ಎಲ್ಲ ಅಂಶಗಳನ್ನು ಒಳಗೊಂಡ ಸಮಗ್ರ ನೀತಿಯಾದರೆ ಇಂದಿನ ಆಧುನಿಕ ಕಾಲಘಟ್ಟದಲ್ಲಿ ಕನ್ನಡವನ್ನು ಉಳಿಸಿಕೊಳ್ಳುವ ಭರವಸೆ ಮೂಡುತ್ತದೆ ಎಂದರು.

ಕನ್ನಡಿಗರನ್ನು ಉಳಿಸಬೇಕಿದೆ:

 ಭಾಷಾ ನೆಲೆಯಲ್ಲಿ ಜನರನ್ನು ನೋಡುವ ಕ್ರಮ ನಿಲ್ಲಬೇಕಿದ್ದು, ಜನರ ಮುಖಾಂತರ ಭಾಷೆಯನ್ನು ನೋಡುವ ಕ್ರಮವನ್ನು ನಾವು ಅನುಸರಿಸಿದಲ್ಲಿ ನೀತಿ ನಿಲುವುಗಳಿಗೆ ಬೇರೆಯೇ ಆಯಾಮ ದೊರಕುತ್ತದೆ ಎಂದ ಅವರು, ಕನ್ನಡಿಗರನ್ನು ಉಳಿಸಿದರೆ ಅವರೇ ಕನ್ನಡವನ್ನು ಉಳಿಸಿಕೊಳ್ಳುತ್ತಾರೆ. ಸಾವಿರಾರು ವರ್ಷಗಳಿಂದ ನಮ್ಮ ಅಭಿವ್ಯಕ್ತಿ ಮಾಧ್ಯಮವಾಗಿರುವ ಕನ್ನಡ ಉಳಿದಿರುವುದೇ ಕನ್ನಡಿಗರು ಉಳಿದಿರುವುದರಿಂದ ಎಂದರು.

ಕನ್ನಡವನ್ನು ಉಳಿಸಿರುವುದು ಸಾಹಿತಿಗಳು ಚಿಂತಕರು ಮಾತ್ರ  ಎನ್ನುವ ಮನೋಭಾವ ಕೂಡಲೇ ಬದಲಾಗಬೇಕೆಂದು ಅಭಿಪ್ರಾಯಿಸಿದ ಬರಗೂರು ರಾಮಚಂದ್ರಪ್ಪ, ಕನ್ನಡವು ಜನ ಕೇಂದ್ರೀತವಾಗಿರುವುದರಿಂದಲೇ  ಅದು ಉಳಿಯಲು ಸಾಧ್ಯವಾಗಿದ್ದು, ಕನ್ನಡಕ್ಕೆ ಸವಾಲುಗಳಿವೆಯೇ ಹೊರತು ಅದಕ್ಕೆ ಸಾವಿಲ್ಲ ಎನ್ನುವುದನ್ನು ನಾವು ಅರ್ಥೈಸಿಕೊಳ್ಳಬೇಕಿದೆ ಎಂದರು. ಬಹಳ ಮುಖ್ಯವಾಗಿ ಶಿಕ್ಷಣ ಕ್ಷೇತ್ರದಲ್ಲಿ ಕನ್ನಡವು ಉಳಿಯಬೇಕು. ಕನ್ನಡವನ್ನು ಶಿಕ್ಷಣದಲ್ಲಿ ನೆಲೆಗೊಳಿಸುವ ಕುರಿತಂತೆ ಚರ್ಚೆ ಚಿಂತನೆಗಳು ಹೆಚ್ಚಾಗಬೇಕು. ಕನ್ನಡದ ಮೂಲಕ ಜಾಗತಿಕ ಜ್ಞಾನ ಕೊಡುವ ಕೆಲಸವಾಗಬೇಕು ಎಂದ ಬರಗೂರು ರಾಮಚಂದ್ರಪ್ಪ, ಕನ್ನಡವನ್ನು ಕಲಿಯದಿದ್ದರೆ ಕರ್ನಾಟಕದಲ್ಲಿ ಉದ್ಯೋಗ ಸಿಗಬಾರದೆನ್ನುವ ವ್ಯವಸ್ಥೆ ನಿರ್ಮಾಣವಾದಾಗ ಮಾತ್ರ ಕನ್ನಡಪರ ವಾತಾವರಣವು ಸೃಷ್ಠಿಯಾಗುತ್ತದೆ ಎಂದರು.

ಖಾಸಗಿ ಕನ್ನಡ ಮಾಧ್ಯಮ ಶಾಲೆಗಳಿಗೆ ಪ್ರೋತ್ಸಾಹ ನೀಡಿ:

ರಾಜ್ಯದ ಕೆಲವೆಡೆ ಖಾಸಗಿ ಸಂಸ್ಥೆಗಳು ಕನ್ನಡ ಮಾಧ್ಯಮ ಶಾಲೆಗಳನ್ನು ನಡೆಸುತ್ತಿದ್ದು, ಕನ್ನಡ ಉಳಿಯುವಲ್ಲಿ ಈ ಸಂಸ್ಥೆಗಳು ಅಪಾರವಾದ ಕೊಡುಗೆಯನ್ನು ನೀಡುತ್ತಿರುವ ಕಾರಣ ಸರ್ಕಾರವು ಇಂತಹ ಶಾಲೆಗಳನ್ನು ಪ್ರೋತ್ಸಾಹಿಸಬೇಕು ಎಂದ ಬರಗೂರು ರಾಮಚಂದ್ರಪ್ಪ, ಇಂತಹ ಶಾಲೆಗಳಿಗೆ ವಿಶೇಷ ಅನುವಾದವನ್ನು ನೀಡಲು ಸರ್ಕಾರವು ಮುಂದಾಗಬೇಕು ಎಂದರು.

ಕಮ್ಮಟದಲ್ಲಿ ಕನ್ನಡದ ಸಬಲೀಕರಣ, ಕನ್ನಡದ ಸಬಲೀಕರಣದಲ್ಲಿ ಜಾಗೃತಿ ಸಮಿತಿ ಸದಸ್ಯರ ಪಾತ್ರ, ಔದ್ಯೋಗಿಕ ಸಂಸ್ಥೆಗಳಲ್ಲಿ ಕನ್ನಡದ ಅನುಷ್ಠಾನದ ಕುರಿತಂತೆ ವಿಚಾರಗೋಷ್ಠಿಗಳು ಸಹನಡೆದವು. ಕನ್ನಡ ಜಾಗೃತಿ ಸಮಿತಿ ಸದಸ್ಯರೊಂದಿಗೆ ಸಹ ಸಂವಾದವನ್ನು ಏರ್ಪಡಿಸಲಾಗಿತ್ತು.

ಹಿರಿಯ ಸಾಹಿತಿ ಎಲ್.ಹನುಮಂತಯ್ಯ, ಸಮಾರೋಪ ಭಾಷಣ ಮಾಡಿ, ಕನ್ನಡದ ಸವಾಲುಗಳನ್ನು ಎದುರಿಸಲು ಕನ್ನಡದ ಕಟ್ಟಾಳುಗಳಾದ, ಭಾಷಾ ಸೈನಿಕರಾದ ಜಾಗೃತಿ ಸಮಿತಿ ಸದಸ್ಯರು ಬದ್ಧತೆಯಿಂದ ಕಾರ್ಯ ನಿರ್ವಹಿಸಬೇಕೆಂದರು.

ಹಿರಿಯ ಲೇಖಕಿ ಡಾ.ಸಂಧ್ಯಾರೆಡ್ಡಿ, ಕನ್ನಡ ಜಾಗೃತಿ ಸಮಿತಿಯ 249 ಸದಸ್ಯರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಾಮ ನಿರ್ದೇಶಿತ ಸದಸ್ಯರಾದ ಎ.ಬಿ.ರಾಮಚಂದ್ರಪ್ಪ, ನಿರಂಜನಾರಾಧ್ಯ, ರವಿಕುಮಾರ್ ನೀಹ, ಟಿ.ಗುರುರಾಜ್, ಟಿ.ತಿಮ್ಮೇಶ್, ವಿರೂಪಣ್ಣ ಕಲ್ಲೂರ, ಯಾಕೂಬ್ ಖಾದರ್ ಗುಲ್ವಾಡಿ ಹಾಗೂ ದಾಕ್ಷಾಯಿಣಿ ಹುಡೇದ ಮತ್ತು ಕಾರ್ಯದರ್ಶಿ ಡಾ. ಸಂತೋಷ ಹಾನಗಲ್ಲ ಉಪಸ್ಥಿತರಿದ್ದರು.

More articles

Latest article