ಚಿಕ್ಕಮಗಳೂರು: ಕೊಡಗು ಜಿಲ್ಲೆಯ ವಿನಯ್ ಸೋಮಯ್ಯ ಅವರ ಆತ್ಮಹತ್ಯೆ ಒಂದು ದುರಂತ. ಈ ಬಗ್ಗೆ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಆದರೆ, ಹೆಣದ ಮೇಲೆ ರಾಜಕೀಯ ಮಾಡುವುದು ಸರಿಯಲ್ಲ ಎಂದು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿಯೂ ಆಗಿರುವ ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ವಿನಯ್ ಸೋಮಯ್ಯ ಆತ್ಮಹತ್ಯೆ ಮಾಡಿಕೊಳ್ಳಬಾರದಿತ್ತು. ಈ ಪ್ರಕರಣದಲ್ಲಿ ಈಗಾಗಲೇ ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಯಾರದ್ದೇ ತಪ್ಪಿದ್ದರೂ ಅವರಿಗೆ ತಕ್ಕ ಶಿಕ್ಷೆ ಆಗಬೇಕು. ಅವರ ಸಾವಿನಲ್ಲಿ ರಾಜಕೀಯ ಮಾಡುವುದು ಸರಿಯಲ್ಲ”, ಎಂದರು.
“ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕರಾದ ಎ.ಎಸ್.ಪೊನ್ನಣ್ಣ ಮತ್ತು ಮಂಥರ್ ಗೌಡ ಅವರ ಮೇಲೆ ಪ್ರಕರಣ ದಾಖಲಿಸಬೇಕು ಎಂದು ಬಿಜೆಪಿ ನಾಯಕರ ಒತ್ತಾಯ ರಾಜಕೀಯವಲ್ಲವೇ? ಯಾರ ಮೇಲೆ ತನಿಖೆ ಮಾಡಬೇಕು ಎಂಬುದು ಪೊಲೀಸರಿಗೆ ಗೊತ್ತು. ಅವರು ತನಿಖೆ ಮಾಡುತ್ತಾರೆ. ಅದಕ್ಕೆ ಸಹಕರಿಸಬೇಕು”, ಎಂದರು.
ಶಾಸಕರಾದ ಎ.ಎಸ್.ಪೊನ್ನಣ್ಣ ಮತ್ತು ಮಂಥರ್ ಗೌಡ ಅವರೊಂದಿಗೆ ವಿನಯ್ ಸೋಮಣ್ಣ ಸಂಪರ್ಕದಲ್ಲಿದ್ದರೇ ಎಂದು ಪ್ರಶ್ನಿಸಿದ ಅವರು, “ವಿನಯ್ ಸೋಮಣ್ಣ ವಿರುದ್ಧ ನೀಡಿದ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಾಗಿತ್ತು. ಪ್ರಕರಣದಲ್ಲಿ ಅವರಿಗೆ ಜಾಮೀನು ಸಿಗುತ್ತಿತ್ತು. ಈ ವಿಚಾರದಲ್ಲಿ ವಿನಯ್ ಸೋಮಣ್ಣ ಆತ್ಮಹತ್ಯೆ ಮಾಡಿಕೊಂಡಿರುವುದು ಸರಿಯಲ್ಲ”, ಎಂದು ಹೇಳಿದರು.
“ಈ ಪ್ರಕರಣದ ಬಗ್ಗೆ ತನಿಖೆಯಾಗಿ ಸತ್ಯ ಹೊರಬರಲಿ. ಆದರೆ, ಕೆ.ಜಿ. ಬೋಪಯ್ಯ ಅವರನ್ನು ವಿಧಾನಸಭೆ ಚುನಾವಣೆಯಲ್ಲಿ ಸೋಲಿಸಿದ್ದರಿಂದ ಎ.ಎಸ್.ಪೊನ್ನಣ್ಣ ಮೇಲೆ ಬಿಜೆಪಿಯವರಿಗೆ ಸಿಟ್ಟು ಇದೆ. ಅದನ್ನು ಈ ರೀತಿ ತೋರಿಸುತ್ತಿದ್ದಾರೆ”, ಎಂದು ಆರೋಪಿಸಿದ ಸಚಿವ ಕೆ.ಜೆ.ಜಾರ್ಜ್, ಹೆಣದ ಮಲೆ ರಾಜಕೀಯ ಮಾಡುವುದನ್ನು ಬಿಟ್ಟು ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡಲಿ. ಅಷ್ಟೂ ತಾಳ್ಮೆ ಬಿಜೆಪಿಯವರಿಗೆ ಇಲ್ಲವೇ ಎಂದು ಪ್ರಆಶ್ನಿಸಿದರು.
“ಹಿಂದೆ ಡಿವೈಎಸ್ಪಿ ಗಣಪತಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣವನ್ನು ನನ್ನ ತಲೆಗೆ ಕಟ್ಟಲು ಇದೇ ಬಿಜೆಪಿಯವರು ಯತ್ನಿಸಿದ್ದರು. ವಿನಾ ಕಾರಣ ಆರೋಪ ಮಾಡಿದ್ದರಿಂದ ನನ್ನ ಕುಟುಂಬದವರು ಮಾನಸಿಕವಾಗಿ ನೋವು ಅನುಭವಿಸಿದ್ದರು. ಯಾರ ಮೇಲೂ ಈ ರೀತಿಯ ರಾಜಕೀಯ ಪ್ರೇರಿತ ಆರೋಪ ಮಾಡಬಾರದು”, ಎಂದು ಬಿಜೆಪಿ ನಾಯಕರಿಗೆ ಕಿವಿ ಮಾತು ಹೇಳಿದರು.