ಹೆಣ್ಣು ಮಕ್ಕಳನ್ನು ಅಡುಗೆ ಕೋಣೆಗೆ ಸೀಮಿತ ಮಾಡಿ ದೇಶದ ಪ್ರತಿಭಾ ಸಂಪನ್ಮೂಲಗಳನ್ನು ಮುಚ್ಚಿಡ್ತಾ ಇದ್ದೇವೆ- ಡಿಸಿ ಮುಲ್ಲೈ ಮುಹಿಲನ್‌ 

Most read

ಮಂಗಳೂರು : ಗಂಡು ಮಕ್ಕಳನ್ನು ಓದಿಸುವುದಕ್ಕೂ ಹೆಣ್ಣುಮಕ್ಕಳನ್ನು ಓದಿಸುವುದಕ್ಕೂ ವ್ಯತ್ಯಾಸವಿದೆ. ಗಂಡುಮಗುವನ್ನು ಓದಿಸಿದರೆ ಅದು ಒಂದು ಕುಟುಂಬಕ್ಕಷ್ಟೇ  ಸೀಮಿತವಾಗುತ್ತದೆ. ಹೆಣ್ಣುಮಗುವನ್ನು ಓದಿಸಿದರೆ ಅದರ ಪರಿಣಾಮ ಇಡೀ ಸಮಾಜದ ಮೇಲೆ ಬೀರುತ್ತದೆ. ಅತ್ಯಂತ ಕ್ಷಿಪ್ರಗತಿಯಲ್ಲಿ ಅಭಿವೃದ್ಧಿ ಕಂಡ ಸಿಂಗಾಪುರ್‌ ನಲ್ಲಿ  ಅದರ ನಿರ್ಮಾತೃ  ಮಾಡಿದ ಬಹಳ ದೊಡ್ಡ ಬದಲಾವಣೆಯೆಂದರೆ ಪ್ರತಿ ಮನೆಯ ಅಡುಗೆ ಕೋಣೆಯನ್ನು ಬಂದ್‌ ಮಾಡಿದ್ದು.  ದೇಶದಲ್ಲಿ ಅರ್ಧಕ್ಕಿಂತ ಹೆಚ್ಚು ಸಂಖ್ಯೆಯಲ್ಲಿರುವ ಬುದ್ಧಿವಂತ ಮತ್ತು  ಸಾಕಷ್ಟು ಪ್ರತಿಭಾನ್ವಿತ ಹೆಣ್ಣು ಮಕ್ಕಳನ್ನು ಅಡುಗೆ ಕೋಣೆಗೆ ಸೀಮಿತ ಮಾಡಿ  ಅರ್ಧ ಪರ್‌ಸೆಂಟ್‌  ಪ್ರತಿಭಾ ಸಂಪನ್ಮೂಲಗಳನ್ನು ನಾವು ಮುಚ್ಚಿಡ್ತಾ ಇದ್ದೇವೆ. ಆದ್ದರಿಂದ ಮನೆ ಮನೆಯ ಕಿಚನ್‌ ಬಂದ್‌ ಮಾಡಿ ಕಮ್ಯುನಿಟಿ ಕಿಚನ್‌ ಶುರು ಮಾಡಬೇಕು. ಅಡುಗೆ ಕೆಲಸದಲ್ಲಿ ದಿನ ಪೂರ್ತಿ ನಮ್ಮ ಹೆಣ್ಣು ಮಕ್ಕಳು ಕಳೆದು ಹೋಗದೆ ಅವರು ಹೊರಗೆ ಬಂದು ಎಲ್ಲಾ ರೀತಿಯ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಹಾಗಾಗಬೇಕು. ಹೆಣ್ಣುಮಕ್ಕಳು ಮನೆಯಿಂದ ಹೊರಬಂದು ಕ್ರಿಯಾಶೀಲವಾದರೆ ಅದರ  ಸಕಾರಾತ್ಮಕ ಪರಿಣಾಮ ಸಮಾಜದ ಮೇಲೆ ಬೀರುತ್ತದೆ  ಎಂದು ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್‌ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ನಗರದ ಮಿನಿ ಪುರಭವನದಲ್ಲಿ ಶನಿವಾರ ಡೀಡ್ಸ್‌ ಮಂಗಳೂರು, ಜಿಲ್ಲಾಡಳಿತ, ಶಾಲಾ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಆಶ್ರಯದಲ್ಲಿ ಆಯೋಜಿಸಲಾದ ʼಜೆಂಡರ್‌ ಚಾಂಪಿಯನ್ಸ್‌ ʼಮಕ್ಕಳ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಮುಂದುವರಿದು,  ತಮ್ಮ ತಾಯಿ ಓದಲು ಪಟ್ಟ ಪಡಿ ಪಾಟಲುಗಳನ್ನು ತೆರೆದಿಟ್ಟರು. ʼಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ಇರದ ದಿನಗಳಲ್ಲಿ ನನ್ನ ತಾಯಿ ಹಠ ಹಿಡಿದು ತಮಿಳುನಾಡಿನಲ್ಲಿ ಶಾಲೆಗೆ ಹೋದರೂ ಶಾಲಾ ಶುಲ್ಕ ತೆರಲು ಹಣವಿಲ್ಲದೆ ತಾವೇ ತೋಟದಲ್ಲಿ ಸಿಗುತ್ತಿದ್ದ ಹುಳಿಯನ್ನು ಹೆಕ್ಕಿ ಅದರಿಂದ ಸಿಕ್ಕ ಹಣದಲ್ಲಿ ಪ್ಲಾಸ್ಟಿಕ್‌ ಬುಟ್ಟಿ ಮಾಡಿ ಮಾರಿ ತನ್ನ ಶಾಲೆಯ ಖರ್ಚನ್ನು  ತಾವೇ ಭರಿಸಿ ಊರಿನ ಮೊದಲ ಪದವೀಧರೆ ಅನ್ನಿಸಿಕೊಂಡಿದ್ದರು; ಸರಕಾರಿ ಉದ್ಯೋಗ ಪಡೆದರು. ಅವರು ಕೆಲಸಕ್ಕೆ ಹೋಗುತ್ತಿದ್ದುದರಿಂದ ನಾನು ಮತ್ತು ನನ್ನ ತಂಗಿ ಮನೆ ಕೆಲಸಗಳನ್ನು ಹಂಚಿಕೊಂಡು ಮಾಡುತ್ತಿದ್ದೆವು. ಅಮ್ಮನ ಓದಿನ ಹಠದ ಕಾರಣದಿಂದಾಗಿ ನಾನಿವತ್ತು ಈ ಹುದ್ದೆಯಲ್ಲಿದ್ದೇನೆ ಎಂದು ತಮ್ಮ ಸ್ವ ಅನುಭವವನ್ನು ಹೇಳಿ ಕಲಿಕೆಗೆ ಅಡ್ಡಿಯಾಗುವ ಬಡತನ, ಕಷ್ಟಗಳನ್ನು ಮೆಟ್ಟಿನಿಲ್ಲಬೇಕೆಂದು ಕಿವಿ ಮಾತು ಹೇಳಿದರು.

ಕಷ್ಟ ಸುಖ ಏಳು ಬೀಳು ಎಲ್ಲವನ್ನೂ ಎದುರಿಸಲು ನಮ್ಮಲ್ಲಿ ನಮಗೆ  ಶಕ್ತಿಯಾಗಿರುವುದು ಆತ್ಮ ವಿಶ್ವಾಸ. ಈ ನಿಟ್ಟಿನಲ್ಲಿ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸವನ್ನು ಡೀಡ್ಸ್‌ ಮಾಡಿದೆ. ಅದು ಇಲ್ಲಿ ಮಕ್ಕಳು ವ್ಯಕ್ತಪಡಿಸಿದ ನಿರ್ಭಿಡೆಯ ಸ್ಪಷ್ಟ ಮಾತುಗಳಿಂದ ವ್ಯಕ್ತವಾಗಿದೆ ಎಂದು ಶ್ಲಾಘಿಸಿದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಡೀಡ್ಸ್‌ ಸಂಸ್ಥೆಯ ನಿರ್ದೇಶಕರಾದ ಮರ್ಲಿನ್‌ ಮಾರ್ಟಿಸ್‌ ಜೆಂಡರ್‌ ಚಾಂಪಿಯನ್ಸ್‌ ತರಬೇತಿಯ ಮಾಹಿತಿಯನ್ನು ನೀಡಿದರು. 2024 ರ ಜೂನ್‌ ತಿಂಗಳಿನಿಂದ ಮಂಗಳೂರು, ಮುಲ್ಕಿ, ಉಳ್ಳಾಲ ತಾಲೂಕಿನ ಆಯ್ದ 14 ಸರಕಾರಿ ಪ್ರೌಢ ಶಾಲೆಗಳಲ್ಲಿ ಈ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ದಕ್ಷಿಣ ಕನ್ನಡದ ಶಿಕ್ಷಣ ಇಲಾಖೆಯ ಅನುಮತಿಯೊಂದಿಗೆ 8ನೇ ತರಗತಿಯ ಹುಡುಗಿಯರು, ಹುಡುಗರಿಗೆ ಒಟ್ಟಾಗಿ ಈ ತರಬೇತಿ ಕಾರ್ಯಕ್ರಮವನ್ನು ಆರಂಭಿಸಲಾಗಿದೆ. ನಾಯಕತ್ವ, ಸಂವಹನ, ಹೆಣ್ಣು- ಗಂಡು ಸಮಾನತೆ, ಹದಿಹರೆಯದ ಬೆಳವಣಿಗೆಗಳು, ಹಿಂಸೆ, ಪೋಕ್ಸೋ, ಕೆರಿಯರ್‌ ಗೈಡೆನ್ಸ್‌ ವಿಷಯಗಳ ಮೇಲೆ ಅರಿವು ಮೂಡಿಸಲಾಗಿದೆ. ಪೋಲಿಸ್‌ ಠಾಣೆ, ಸಖಿ ಕೇಂದ್ರ, ನ್ಯಾಯಾಲಯ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಗಳಿಗೆ ಕೇತ್ರ ವೀಕ್ಷಣೆಗೆ ಕರೆದೊಯ್ದು ಅಲ್ಲಿಯ ಕಾರ್ಯವೈಖರಿಯನ್ನು ಪರಿಚಯಿಸಲಾಗಿದೆ. 15 ದಿನಗಳಿಗೊಮ್ಮೆ  ಪ್ರತಿ ಶನಿವಾರ 1-2  ಗಂಟೆಯ  ಅವಧಿಯಲ್ಲಿ ಚಟುವಟಿಕೆಯಾಧಾರಿತವಾಗಿ ತರಬೇತಿ ನಡೆಸಲಾಗಿದೆ. 15 ಮಂದಿ ಸಂಪನ್ಮೂಲ ವ್ಯಕ್ತಿಗಳು, 463 ವಿದ್ಯಾರ್ಥಿಗಳು ಈ ಚಟುವಟಿಕೆಯಲ್ಲಿ ಭಾಗವಹಿಸಿರುತ್ತಾರೆ ಎಂದು ಹೇಳಿದರು. ಮಕ್ಕಳಿಗೆ ಶಾಲೆಗಳಲ್ಲಿ ಕೌನ್ಸೆಲಿಂಗ್‌ ವ್ಯವಸ್ಥೆಯನ್ನು  ಒದಗಿಸುವುದು ಅಗತ್ಯವಾಗಿದೆ ಎಂದೂ ಅವರು ಹೇಳಿದರು

ತರಬೇತಿಯ ಫಲಾನುಭವಿ, ಕಾರ್ನಾಡು ಮುಲ್ಕಿ ಸದಾಶಿವ ನಗರದ ಸರಕಾರಿ ಫ್ರೌಢಶಾಲೆಯ ವಿದ್ಯಾರ್ಥಿನಿ ಗ್ರೀಷ್ಮಾ ತನ್ನ ಅನಿಸಿಕೆಯನ್ನು ಹಂಚಿಕೊಳ್ಳುತ್ತಾ “ನಮ್ಮ ಮನೆಯಲ್ಲಿ ನಾನೊಬ್ಬಳೇ ಮನೆ ಕೆಲಸ ಮಾಡ್ತಿದ್ದೆ. ತಮ್ಮ ಆಟ ಆಡಿಕೊಂಡು ಇರ್ತಿದ್ದ. ಡೀಡ್ಸ್‌ ಸಂಸ್ಥೆಯವರು ನಮ್ಮ ಶಾಲೆಗೆ ಬಂದು ಲಿಂಗ ತಾರತಮ್ಯದ ಬಗ್ಗೆ ಹೇಳಿ ಕೊಟ್ಟದ್ದನ್ನು ಮನೆಯಲ್ಲಿ ತಿಳಿಸಿದೆ. ಈಗ ತಮ್ಮನೂ ಗುಡಿಸುವ ನೆಲ ಒರೆಸುವ ಕೆಲಸ ಮಾಡ್ತಾನೆ. ಅಮ್ಮನಿಗೆ  ಮನೆ ಕೆಲಸದಲ್ಲಿ ಏನೂ ಸಹಾಯ ಮಾಡದಿದ್ದ ಅಪ್ಪ ಕೂಡಾ ಈಗ ಮನೆ ಕೆಲಸದಲ್ಲಿ ನೆರವಾಗುತ್ತಾರೆ. ತರಬೇತಿಯ ಭಾಗವಾಗಿ ನ್ಯಾಯಾಲಯ ಭೇಟಿ ಇತ್ತುʼ ಅಲ್ಲಿ ನ್ಯಾಯಾಧೀಶರನ್ನು ನೋಡಿದ ಮೇಲೆ ನಾನೂ ಓದಿ ನ್ಯಾಯಾಧೀಶೆಯಾಗುತ್ತೇನೆ ಎಂದು ನಿರ್ಧರಿಸಿದ್ದೇನೆ. ಕಷ್ಟದಲ್ಲಿರುವ ಮಹಿಳೆಯರಿಗೆ ನ್ಯಾಯ ಕೊಡಿಸಲು ಪ್ರಯತ್ನಿಸುತ್ತೇನೆ”ಎಂದರು.

ಕಾರ್ನಾಡಿನ ಸರಕಾರಿ ಹೈಸ್ಕೂಲಿನ ವಿದ್ಯಾರ್ಥಿನಿ ವೈಷ್ಣವಿ “ನನಗೆ ಮನೆಯಲ್ಲಿ ಆಹಾರದಲ್ಲಿ ತಾರತಮ್ಯ ಮಾಡುತ್ತಿದ್ದರು. ನನ್ನನ್ನು ಬೇಗ ಮದುವೆ ಮಾಡಲು ಮನೆಯವರು ಯೋಚಿಸಿದ್ದರು. ತರಬೇತಿಯ ಬಳಿಕ ನಾನು ಮುಂದಕ್ಕೆ ಓದುವ ನನ್ನ ನಿರ್ಧಾರವನ್ನು ಮನೆಯವರಲ್ಲಿ ಹೇಳಿಕೊಂಡಾಗ ಅವರು ಒಪ್ಪಿಕೊಂಡು ನೀನೆಷ್ಟು ಓದುವಿಯೋ ಅಷ್ಟು ಓದಿಸುತ್ತೇವೆ ಅಂದರು” ಎಂಬುದಾಗಿ ಹೇಳಿಕೊಂಡರು.

ಕುಪ್ಪೆಪದವಿನ ಕಿಲೆಂಜಾರ್‌ ಅರಮನೆ ಸರಕಾರಿ ಹೈಸ್ಕೂಲಿನ ಸಾತ್ವಿಕ್‌  “ನಾನು ಹಿಂಸೆಯ ಬಗ್ಗೆ ತಿಳಿದುಕೊಂಡ ಮೇಲೆ, ಅಡ್ಡ ಹೆಸರಿನಿಂದ ನನ್ನನ್ನು ಕರೆಯುತ್ತಿದ್ದ ನನ್ನ ಗೆಳೆಯನಿಗೆ ತಿಳಿ ಹೇಳಿ  ಈಗ ಅದು ಕಡಿಮೆಯಾಗಿದೆ. ಕಾನೂನಿನಲ್ಲಿರುವ ಶಿಕ್ಷೆಗಳ ಬಗ್ಗೆ ತಿಳಿದು ಅದನ್ನು ಮನೆಯಲ್ಲಿ ಹೇಳಿದ ಮೇಲೆ ಅಣ್ಣ ತಮ್ಮಂದಿರು ಮಾಡುತ್ತಿದ್ದ  ಹಿಂಸೆ ಕಡಿಮೆ ಆಗಿದೆ” ಎಂದು ಅನುಭವ ಹಂಚಿಕೊಂಡರು.

ತರಬೇತಿ ನಡೆದ ಬಹುತೇಕ ಶಾಲೆಗಳ ವಿದ್ಯಾರ್ಥಿಗಳ  ಪ್ರತಿನಿಧಿಗಳು ತರಬೇತಿಯ ಪ್ರಯೋಜನಗಳನ್ನು ಹಂಚಿಕೊಂಡರು.  

ಮಂಜನಾಡಿ ಕಲ್ಕಟ್ಟ ಸರಕಾರಿ ಶಾಲೆಯ ನಮಿತಾ ರಾಣಿ, ಕುರ್ನಾಡು ಸರಕಾರಿ ಫ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ಸಂಧ್ಯಾ ಹೆಗಡೆ, ಸಂಪನ್ಮೂಲ ವ್ಯಕ್ತಿ ಹರಿಣಿಯವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಉಸ್ಮಾನ್‌ ಎ, ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರ್‌, ರಂಗಕರ್ಮಿ ಮೋಹನ ಚಂದ್ರ, ಪಡಿ ಸಂಸ್ಥೆಯ ಕಾರ್ಯನಿರ್ವಣಾಧಿಕಾರಿ ರೆನ್ನಿ ಡಿಸೋಜ ಉಪಸ್ಥಿತರಿದ್ದರು. 

ತರಬೇತಿಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಮತ್ತು ಶಾಲೆಗಳಿಗೆ ಪ್ರಮಾಣ ಪತ್ರ ವಿತರಿಸಲಾಯ್ತು

ದಾಕ್ಷಾಯಿಣಿ ಸ್ವಾಗತಿಸಿದರು. ಶಾಲಾ ಮಕ್ಕಳು ನಾಡಗೀತೆ ಹಾಡಿದರು. ಸುರೇಖಾ ಮತ್ತು ಜೆಸಿಂತಾ ಕಾರ್ಯಕ್ರಮ ನಿರೂಪಿಸಿದರು. ವಿನಯಾ ವಂದಿಸಿದರು.

ಇದನ್ನೂ ಓದಿ- http://ಜೆಂಡರ್ ಚಾಂಪಿಯನ್ಸ್ -ಲಿಂಗ ಸಂವೇದನೆಯ ಉತ್ತೇಜನಕ್ಕೆ ಡೀಡ್ಸ್‌ ಕೊಡುಗೆ https://kannadaplanet.com/gender-champions-deeds-contribution-to-gender-sensitization/

More articles

Latest article