ELECTORAL BOND: ಅಂಬಾನಿ ಸಂಬಂಧಿತ ಸಂಸ್ಥೆಗಳಿಂದಲೂ ಬಿಜೆಪಿಗೆ ಹರಿದುಬಂದಿದೆ ದೇಣಿಗೆ

Most read

ಹೊಸದಿಲ್ಲಿ: ಚುನಾವಣಾ ದೇಣಿಗೆ ಬಾಂಡ್‌ ಹಗರಣ ಬಯಲಿಗೆ ಬರುತ್ತಿದ್ದಂತೆ, ಪ್ರಧಾನಿ ಮೋದಿಯವರ ಆಪ್ತ ಮಿತ್ರರಾದ ಅಂಬಾನಿ, ಅದಾನಿಗಳ ಹೆಸರು ಯಾಕೆ ಬಾಂಡ್‌ ಖರೀದಿಸಿದವರ ಪಟ್ಟಿಯಲ್ಲಿಲ್ಲ ಎಂಬ ಪ್ರಶ್ನೆ ಉದ್ಭವಿಸಿತ್ತು. ಆದರೆ ಮುಖೇಶ್‌ ಅಂಬಾನಿಯವರ ರಿಲಯನ್ಸ್‌ ಗ್ರೂಪ್‌ ಜೊತೆ ಸಂಬಂಧವಿರುವ ಎರಡು ಸಂಸ್ಥೆಗಳು 410 ಕೋಟಿ ರುಪಾಯಿಗಳನ್ನು ಬಾಂಡ್‌ ಮೂಲಕ ದೇಣಿಗೆ ನೀಡಿರುವುದು ಇದೀಗ ಸ್ಪಷ್ಟವಾಗಿದೆ.

ಸುಪ್ರೀಂ ಕೋರ್ಟ್‌ನಿಂದ ತರಾಟೆಗೆ ಒಳಗಾಗಿ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (SBI) ಸೀರಿಯಲ್‌ ನಂಬರ್‌ ಗಳನ್ನು ಒಳಗೊಂಡಂತೆ ದಾಖಲಾತಿಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ನಂತರ ಯಾವ ಸಂಸ್ಥೆ/ವ್ಯಕ್ತಿ ಯಾವ ರಾಜಕೀಯ ಪಕ್ಷಕ್ಕೆ ಬಾಂಡ್‌ ಮೂಲಕ ದೇಣಿಗೆ ನೀಡಿದ್ದಾರೆ ಎಂಬುದು ಬಹಿರಂಗವಾಗಿದೆ.

ರಿಲಯನ್ಸ್‌ ಸಮೂಹದ ಅತ್ಯುನ್ನತ ಅಧಿಕಾರಿಗಳಲ್ಲಿ ಒಬ್ಬರಾದ ಲಕ್ಷ್ಮಿದಾಸ್‌ ವಲ್ಲಭದಾಸ್‌ ಮರ್ಚೆಂಟ್ ಸುಪ್ರೀಂಕೋರ್ಟ್‌ ನಿಂದ ಅಸಂವಿಧಾನಿಕ ಎಂದು ಘೋಷಿಸಲಾಗಿರುವ ಚುನಾವಣಾ ಬಾಂಡ್‌ ಮೂಲಕ ತಾನು ಮಾಡಿರುವ ಎಲ್ಲ ದೇಣಿಗೆಯನ್ನು ಅಧಿಕಾರಾರೂಢ ಭಾರತೀಯ ಜನತಾ ಪಕ್ಷಕ್ಕೆ ವರ್ಗಾವಣೆ ಮಾಡಿದ್ದಾರೆ.

ಲಕ್ಷ್ಮಿದಾಸ್‌ ವಲ್ಲಭದಾಸ್‌ ಮರ್ಚೆಂಟ್‌ 2023ರ ನವೆಂಬರ್‌ 17ರಂದು 25 ಕೋಟಿ ರುಪಾಯಿಗಳನ್ನು ಚುನಾವಣಾ ಬಾಂಡ್‌ ಮೂಲಕ ದೇಣಿಗೆ ನೀಡಿದ್ದರು. ಛತ್ತೀಸ್‌ ಘಡ, ಮಧ್ಯಪ್ರದೇಶ, ರಾಜಸ್ತಾನ, ತೆಲಂಗಾಣ, ಮಿಜೋರಾಂ ಚುನಾವಣೆಗಳ ಸಂದರ್ಭದಲ್ಲಿ ಈ ದೇಣಿಗೆಯನ್ನು ನೀಡಲಾಗಿತ್ತು.

ರಿಲಯನ್ಸ್‌ ಸಮೂಹದೊಂದಿಗೆ ಸಂಬಂಧ ಹೊಂದಿರುವ ಮತ್ತೊಂದು ಸಂಸ್ಥೆ ಕ್ವಿಕ್‌ ಸಪ್ಲೈ ಚೈನ್‌ ಲಿಮಿಟೆಡ್‌ 375 ಕೋಟಿ ರುಪಾಯಿಗಳನ್ನು ಭಾರತೀಯ ಜನತಾ ಪಕ್ಷಕ್ಕೆ ದೇಣಿಗೆ ನೀಡಿದ್ದು, ಮಿಕ್ಕಂತೆ ಮಹಾರಾಷ್ಟ್ರದ ಶಿವಸೇನೆಗೆ 25 ಕೋಟಿ ಮತ್ತು ಎನ್‌ ಸಿಪಿಗೆ ಹತ್ತು ಕೋಟಿ ರುಪಾಯಿ ನೀಡಿದೆ. ಕ್ವಿಕ್‌ ಸಪ್ಲೈ ಚೈನ್‌ ಲಿಮಿಟೆಡ್ ಚುನಾವಣಾ ಬಾಂಡ್‌ ಮೂಲಕ ದೇಣಿಗೆ ನೀಡಿದವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ಕ್ವಿಕ್‌ ಸಪ್ಲೈ ಚೈನ್‌ ಲಿಮಿಟೆಡ್ ರಿಯಲನ್ಸ್‌ ಸಮೂಹದ್ದೇ ಇನ್ನೊಂದು ಸಂಸ್ಥೆಯಾಗಿದ್ದು, ರಿಯಲನ್ಸ್‌ ಸಂಸ್ಥೆಯ ದಾಖಲಾತಿಗಳ ಮೂಲಕ ಇದು ಬಹಿರಂಗವಾಗಿದೆ.

More articles

Latest article