ನ್ಯಾಯದೇವತೆಯ ಸ್ವರೂಪ ಬದಲಾದರೆ ನ್ಯಾಯಾಂಗ ವ್ಯವಸ್ಥೆ ಬದಲಾದೀತೆ?

Most read

ಯಾರು ಯಾವ ನ್ಯಾಯದೇವತೆಯ ಸ್ವರೂಪ ಅದೆಷ್ಟು ಬದಲಾಯಿಸಿದರೇನು, ನ್ಯಾಯಾಂಗ ವ್ಯವಸ್ಥೆ ಬದಲಾಗಲು ಸಾಧ್ಯವೇ? ನ್ಯಾಯಾಂಗ ವ್ಯವಸ್ಥೆಯೇ ಪ್ರಭುತ್ವದ ಪರ ವಾಲಿದರೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಾಪಾಡುವವರು ಯಾರು? -ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.

ನ್ಯಾಯದೇವತೆಯ ಸ್ವರೂಪ ಬದಲಾಯಿಸಲಾಗಿದೆ. ಕಣ್ಣಿಗೆ ಕಟ್ಟಿದ್ದ ಬಟ್ಟೆ ಬಿಚ್ಚಿಟ್ಟು ನ್ಯಾಯ ಅನ್ಯಾಯವನ್ನು ಕಣ್ಬಿಟ್ಟು ನೋಡುವಂತೆ ಮಾಡಲಾಗಿದೆ. ಹಿಂಸೆಯ ಸಂಕೇತವಾಗಿದ್ದ ಕೈಯಲ್ಲಿದ್ದ ಖಡ್ಗವನ್ನು ಕಿತ್ತೆಸೆದು ಹೊತ್ತಿಗೆಯೊಂದನ್ನು ಹಿಡಿಸಲಾಗಿದೆ. ನ್ಯಾಯದ ತಕ್ಕಡಿ ಮಾತ್ರ ಹಾಗೆಯೇ ಇದೆ. 

ಈ ದೇಶದ ನ್ಯಾಯಾಂಗ ವ್ಯವಸ್ಥೆಯ ಸಂಕೇತವಾಗಿದ್ದ ತಕ್ಕಡಿ ಹಿಡಿದ ನ್ಯಾಯದೇವತೆಯ ಸ್ವರೂಪವನ್ನು ಹಾಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಚಂದ್ರಚೂಡರವರು ಬದಲಾಯಿಸಿದ್ದಾರೆ. ವಿಭಿನ್ನ ವಿನ್ಯಾಸದಲ್ಲಿ ನ್ಯಾಯದೇವತೆಯ ಪ್ರತಿಮೆಯನ್ನು ಸುಪ್ರೀಂ ಕೋರ್ಟ್ ಮುಂದೆ ಪ್ರತಿಷ್ಠಾಪಿಸಿದ್ದಾರೆ. ನ್ಯಾಯದೇವತೆಯ ಕೈಯಲ್ಲಿರುವ ಹೊತ್ತಿಗೆ ಸಂವಿಧಾನವೇ ಆಗಿದ್ದರೆ ಸ್ವಾಗತಾರ್ಹವಾದ ಕ್ರಮ. ಸಂಘಿ ಮನಸ್ಥಿತಿಯ ನ್ಯಾಯಮೂರ್ತಿಗಳಿಗೆ ಅದು ಮನುಸ್ಮೃತಿಯಂತೆ ಕಂಡರೆ ಸಂವಿಧಾನಕ್ಕೆ ಅಪಾಯ ಹಾಗೂ ಪ್ರಜಾಪ್ರಭುತ್ವಕ್ಕೆ ಆತಂಕ.

ನ್ಯಾಯದೇವತೆಯ ಹಳೆಯ ಮತ್ತು ಹೊಸ ಪ್ರತಿಮೆ

ನ್ಯಾಯದೇವತೆಯ ಸ್ವರೂಪವನ್ನೇನೋ ಬದಲಾಯಿಸಲಾಗಿದೆ, ಆದರೆ ನ್ಯಾಯಾಂಗ ವ್ಯವಸ್ಥೆಯನ್ನು ಬದಲಾಯಿಸುವವರು ಯಾರು? ಯಾವಾಗ? ಹೇಗೆ? ಕಳೆದ ಹತ್ತು ವರ್ಷಗಳಿಂದ ನಮ್ಮ ನ್ಯಾಯಾಲಯಗಳಿಂದ ಹೊರಬಂದ ಹಲವು ಪ್ರಮುಖ ತೀರ್ಪುಗಳು ತಾರತಮ್ಯದಿಂದ ಕೂಡಿವೆ, ಆಳುವ ಪಕ್ಷದ ಪರವಾಗಿವೆ ಎಂಬ ಆರೋಪಗಳೂ ಇವೆ. ಸಂವಿಧಾನಕ್ಕೆ ಬದ್ಧವಾಗಿರುತ್ತೇನೆಂದು ಪ್ರತಿಜ್ಞೆ ಮಾಡಿ ನ್ಯಾಯದಂಡಾಧಿಕಾರ ಪಡೆದ ಕೆಲವು ನ್ಯಾಯಮೂರ್ತಿಗಳು ಬಲಪಂಥೀಯ ಸಿದ್ಧಾಂತದ ಪರವಾಗಿ ತೀರ್ಮಾನಗಳನ್ನು ತೆಗೆದುಕೊಂಡಿರುವುದು, ಸಾಕ್ಷಿ ಪುರಾವೆಗಳ ಬದಲಾಗಿ ಭಾವನಾತ್ಮಕತೆಯನ್ನು ಆಧರಿಸಿ ತೀರ್ಪುಗಳನ್ನು ಕೊಟ್ಟಿರುವುದು, ನ್ಯಾಯಾಂಗದ ವಿಶ್ವಾಸಾರ್ಹತೆಯನ್ನೇ ಅನುಮಾನಕ್ಕೆ ಈಡುಮಾಡಿದೆ. ಅದಕ್ಕೆ ಪೂರಕವಾಗಿ ಪ್ರಭುತ್ವದ ಪರವಾಗಿ ತೀರ್ಪುಗಳನ್ನು ಕೊಟ್ಟ ಕೆಲವು ನ್ಯಾಯಮೂರ್ತಿಗಳು ಆಳುವ ಪಕ್ಷದ ಫಲಾನುಭವಿಗಳಾಗಿರುವುದು ಈ ರೀತಿಯ ಸಂದೇಹಗಳಿಗೆ ಪುಷ್ಟಿಕೊಡುವಂತಿದೆ.

ಅಕ್ಟೋಬರ್ 19 ರಂದು ಗುಜರಾತಿನ ನ್ಯಾಯಮೂರ್ತಿಗಳ ವಾರ್ಷಿಕ ಸಮ್ಮೇಳನದಲ್ಲಿ ಮಾತನಾಡಿದ ಸುಪ್ರೀಂ ಕೋರ್ಟಿನ ನ್ಯಾಯಾಧೀಶರಾಗಿರುವ ಬಿ.ಆರ್. ಗವಾಯಿಯವರು “ನ್ಯಾಯಮೂರ್ತಿಗಳು ಚುನಾವಣೆಗಳಿಗೆ ಸ್ಪರ್ಧಿಸಲು ತಮ್ಮ ಹುದ್ದೆಗೆ ರಾಜೀನಾಮೆ ನೀಡುವುದು ಅವರ ನಿಷ್ಪಕ್ಷಪಾತ ನಡೆಯ ಬಗ್ಗೆ ಇರುವ ಸಾರ್ವಜನಿಕ ನಂಬಿಕೆ ಮೇಲೂ ಪರಿಣಾಮ ಬೀರಬಹುದು” ಎಂದು ಅಭಿಪ್ರಾಯ ಪಟ್ಟಿದ್ದಾರೆ. 

ಮುಂದುವರೆದು ” ನ್ಯಾಯಮೂರ್ತಿಗಳು ಪೀಠದಲ್ಲಿರುವಾಗ ಮತ್ತು ಪೀಠದ ಹೊರಗಿರುವಾಗ ನ್ಯಾಯಾಂಗದ ನೀತಿ ನಿಯಮಗಳ ಅತ್ಯುನ್ನತ ಮಾನದಂಡಗಳಿಗೆ ಅನುಗುಣವಾಗಿ ನಡೆದುಕೊಳ್ಳಬೇಕು. ನ್ಯಾಯಮೂರ್ತಿಗಳು ತಮ್ಮ ಕಚೇರಿ ಇಲ್ಲವೇ ಹೊರಗಡೆ ರಾಜಕಾರಣಿ ಅಥವಾ ಅಧಿಕಾರಿಯನ್ನು ಹೊಗಳಿದರೆ ಅದು ನ್ಯಾಯಾಂಗದಲ್ಲಿ ಸಾರ್ವಜನಿಕರಿಗೆ ಇರುವ ನಂಬಿಕೆಯ ಮೇಲೆ ಪರಿಣಾಮ ಬೀರಬಹುದು. ನಿರ್ದಿಷ್ಟ ಪ್ರಕರಣಗಳ ವ್ಯಾಪ್ತಿಯ ಆಚೆಗೆ ಲಿಂಗ, ಧರ್ಮ, ಜಾತಿ ಹಾಗೂ ರಾಜಕೀಯದಂತಹ ಸೂಕ್ಮ ವಿಷಯಗಳಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳು ವ್ಯಾಪಕ ಹೇಳಿಕೆಗಳನ್ನು ನೀಡುವುದು ಕಳವಳಕಾರಿ” ಎಂದು ನ್ಯಾ.ಗವಾಯಿಯವರು ವ್ಯಕ್ತಪಡಿಸಿದ ಕಳವಳ, ಆತಂಕ ಈ ದೇಶದ ಸಮಸ್ತ ಪ್ರಜ್ಞಾವಂತರದ್ದೂ ಆಗಿದೆ. ಪ್ರಕರಣದ ಚೌಕಟ್ಟಿನಾಚೆ ಅನಗತ್ಯವಾದ ಹೇಳಿಕೆ ಕೊಡುವ ನ್ಯಾಯಮೂರ್ತಿಗಳಿಗೆ ಕಿವಿಮಾತೂ ಆಗಿದೆ. ತಮ್ಮ ರಾಜಕೀಯ ಆಕಾಂಕ್ಷೆಗಳಿಗೆ ಅವಕಾಶವಾದಿತನ ತೋರುವ ನ್ಯಾಯಮೂರ್ತಿಗಳಿಗೆ ಎಚ್ಚರಿಕೆಯೂ ಆಗಿದೆ. 

ನ್ಯಾಯಮೂರ್ತಿ ಬಿ ಆರ್‌ ಗವಾಯಿ

ನ್ಯಾಯಾಂಗದ ನ್ಯೂನತೆಗಳನ್ನು, ನ್ಯಾಯಮೂರ್ತಿಗಳ ಅಸಾಂವಿಧಾನಿಕ ನಿರ್ಣಯಗಳನ್ನು ಪ್ರಶ್ನಿಸುವುದು ಅಷ್ಟು ಸುಲಭವಲ್ಲ. ನ್ಯಾಯಾಂಗ ನಿಂದನಾಸ್ತ್ರವನ್ನು ಬಳಸಿ ಪ್ರಶ್ನಿಸುವವರನ್ನೇ ಶಿಕ್ಷಿಸುವ ಸಾಧ್ಯತೆಗಳಿಂದಾಗಿ ಜನರು ಮೌನವಾಗಿರುತ್ತಾರೆ. ಆದರೆ ನ್ಯಾಯಾಂಗದ ಇತಿ ಮಿತಿ ಹಾಗೂ ನ್ಯಾಯಾಧೀಶರುಗಳ ಕಾನೂನು ವಿರೋಧಿ ಕ್ರಮಗಳನ್ನು ಪ್ರಶ್ನಿಸುವ ಕೆಲಸ ನ್ಯಾಯಾಂಗದ ಒಳಗಿನವರಿಂದಲೇ ಆಗಬೇಕಿದೆ. ಈ ನಿಟ್ಟಿನಲ್ಲಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿಯವರ ಮಾತುಗಳು ಪ್ರಸ್ತುತ ನ್ಯಾಯಾಂಗ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ. 

ಪ್ರಭುತ್ವ ಎನ್ನುವುದು ಸಂವಿಧಾನದ ಪ್ರಮುಖ ಅಂಗವಾಗಿರುವ ಶಾಸಕಾಂಗ ಮತ್ತು ಕಾರ್ಯಾಂಗಗಳನ್ನು ಈಗಾಗಲೇ ತನ್ನ ಅಡಿಯಾಳಾಗಿಸಿಕೊಂಡಿದೆ. ಇನ್ನು ಬಾಕಿ ಇರುವ ನ್ಯಾಯಾಂಗವನ್ನೂ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ತನಗೆ ಅನುಕೂಲವಾಗುವಂತಹ ತೀರ್ಪುಗಳನ್ನು ಪಡೆದು ಸರ್ವಾಧಿಕಾರಿ ಆಡಳಿತವನ್ನು ಪ್ರತಿಷ್ಠಾಪಿಸಲು ಪ್ರಯತ್ನಿಸುತ್ತಲೇ ಇದೆ. ನ್ಯಾ. ಗವಾಯಿಯವರ ಆತಂಕವೂ ಇದಕ್ಕೆ ಪೂರಕವಾಗಿದೆ.

“ನ್ಯಾಯಾಂಗ ಸಂಸ್ಥೆಗಳ ಮೇಲಿನ ವಿಶ್ವಾಸಾರ್ಹತೆ ಕ್ಷೀಣಿಸುವಿಕೆ ಮತ್ತು ಸತ್ಯದ ಅವನತಿ ತಡೆಯುವ ಮಾರ್ಗಗಳು ಮತ್ತು ವಿಧಾನಗಳು” ಕುರಿತು ಸಮ್ಮೇಳನದಲ್ಲಿ ಮಾತಾಡಿದ ನ್ಯಾ. ಗವಾಯಿಯವರು ” ನ್ಯಾಯಾಂಗವು ಕಾರ್ಯಾಂಗ ಮತ್ತು ಶಾಸಕಾಂಗದಿಂದ ಸ್ವತಂತ್ರವಾಗಿ ಇರಬೇಕು. ರಾಜಕೀಯ ಹಸ್ತಕ್ಷೇಪ, ಶಾಸಕಾಂಗದ ಅತಿಕ್ರಮಣ ಅಥವಾ ಕಾರ್ಯಾಂಗದ ಹಸ್ತಕ್ಷೇಪದ ಮೂಲಕ ನ್ಯಾಯಾಂಗದ ಮೇಲಿನ ಅತಿಕ್ರಮಣವು ನಿಷ್ಪಕ್ಷಪಾತ ನ್ಯಾಯದ ಪರಿಕಲ್ಪನೆಯನ್ನು ದುರ್ಬಲಗೊಳಿಸುತ್ತದೆ” ಎಂದು ಸತ್ಯವನ್ನೇ ಹೇಳಿದರು. 

ಪ್ರಜಾಪ್ರಭುತ್ವದಿಂದ ಸರ್ವಾಧಿಕಾರದತ್ತ ದಾಪುಗಾಲಿಡುತ್ತಿರುವ ಹಿಂದುತ್ವವಾದಿ ಪ್ರಭುತ್ವವು ನ್ಯಾಯಾಂಗದಲ್ಲಿ ಆಗಾಗ ಹಸ್ತಕ್ಷೇಪವನ್ನು ಮಾಡುತ್ತಲೇ ಇರುತ್ತದೆ. ನ್ಯಾಯಮೂರ್ತಿಗಳ ಆಯ್ಕೆಯಲ್ಲೂ ತನ್ನದೇ ನಿರ್ಣಯವನ್ನು ಹೇರಲು ಪ್ರಯತ್ನಿಸುತ್ತಿದೆ. ನ್ಯಾಯಾಂಗದ ಆಯಕಟ್ಟಿನ ಜಾಗಗಳಲ್ಲಿ ಸಂಘಿ ಮನಸ್ಥಿತಿಯ ನ್ಯಾಯಮೂರ್ತಿಗಳನ್ನು ನೇಮಿಸಲಾಗುತ್ತಿದೆ ಎಂಬ ಆರೋಪವೂ ಇದೆ. ನ್ಯಾಯಮೂರ್ತಿಗಳಿಗೆ ನಿವೃತ್ತಿಯ ನಂತರ ಸಾಂವಿಧಾನಿಕ ಹುದ್ದೆಗಳ ಆಮಿಷವನ್ನೂ ಒಡ್ಡಲಾಗುತ್ತಿದೆಯಂತೆ. ರಾಜಕೀಯ ಸ್ಥಾನಮಾನಗಳ ಕೊಡುಗೆಯನ್ನು ಈಗಾಗಲೇ ಕೆಲವರಿಗೆ ಕೊಡಲಾಗಿದೆ.

 ವಾಸ್ತವ ಹೀಗಿರುವಾಗ ಯಾರು ಯಾವ ನ್ಯಾಯದೇವತೆಯ ಸ್ವರೂಪ ಅದೆಷ್ಟು ಬದಲಾಯಿಸಿದರೇನು, ನ್ಯಾಯಾಂಗ ವ್ಯವಸ್ಥೆ ಬದಲಾಗಲು ಸಾಧ್ಯವೇ? ನ್ಯಾ. ಗವಾಯಿಯವರು ಹೇಳಿದ್ದರಲ್ಲಿ ನೂರಕ್ಕೆ ನೂರು ಸತ್ಯ ಇದೆಯಾದರೂ ಅಲಿಸುವವರು ಯಾರು? ಪಾಲಿಸುವವರು ಯಾರು? ನ್ಯಾಯಾಂಗ ವ್ಯವಸ್ಥೆಯೇ ಪ್ರಭುತ್ವದ ಪರವಾಲಿದರೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಾಪಾಡುವವರು ಯಾರು? 

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು, ರಂಗಕರ್ಮಿಗಳು

ಇದನ್ನೂ ಓದಿ- ಕೋಮು ಸೌಹಾರ್ದತೆಗೆ ಧಕ್ಕೆ; ನ್ಯಾಯಾಲಯದ ತೀರ್ಪು ಹೀಗೇಕೆ?

More articles

Latest article