ಕುಂಭಮೇಳದಲ್ಲಿ 65 ಕೋಟಿ ಭಕ್ತರು ನಿಜಕ್ಕೂ ಭಾಗಿಯಾಗಿದ್ದರೇ? ನಿಜವಾದಲ್ಲಿ ಹೇಗೆ ಸಾಧ್ಯ?

Most read

ಬೆಂಗಳೂರು: ಉತ್ತರಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆದ ಕುಂಭಮೇಳದಲ್ಲಿ 65 ಕೋಟಿ ಭಕ್ತರು ನಿಜಕ್ಕೂ ಭಾಗಿಯಾಗಿದ್ದರೇ? ಈ ವಿಷಯ ಕುರಿತು ವಿಧಾನಸಭೆಯಲ್ಲಿ ಬಿಸಿ ಬಿಸಿ ಚರ್ಚೆ ನಡೆಯಿತು. ಆಡಳಿತ ಮತ್ತು ಬಿಜೆಪಿ ಸದಸ್ಯರ ನಡುವೆ ಮಾತನ ಚಕಮಕಿಗೂ ಕಾರಣವಾಯಿತು. ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಬಿಜೆಪಿ ಸದಸ್ಯ ಶರಣು ಸಲಗಾರ್ ಕುಂಭಮೇಳದಲ್ಲಿ 65 ಕೋಟಿ ಜನರು ಭಾಗವಹಿಸಿದ್ದರು ಎಂದರು. ಶರಣು ಸಲಗಾರ್ ಮಾತಿಗೆ ಸಂತೋಷ್ ಲಾಡ್ ಆಕ್ಷೇಪ ವ್ಯಕ್ತಪಡಿಸಿದರು.

ಲಾಡ್‌ ವಿವರ ನೀಡಿ ಕುಂಭಮೇಳಕ್ಕೆ 7 ಸಾವಿರ ರೈಲುಗಳು ಹೋಗಿರಬಹುದು, ಈಗಿನದ್ದೂ ಸೇರಿ 10 ಸಾವಿರ ಟ್ರೈನ್‌ ಗಳಲ್ಲಿ ಎಷ್ಟು ಲಕ್ಷ ಮಂದಿ ಹೋಗಿರಬಹುದು? ಇನ್ನು 3 ಸಾವಿರ ವಿಮಾನಗಳು ಹೋಗಿವೆ ಎಂದರೂ ಎಷ್ಟು ಲಕ್ಷ ಮಂದಿ ಹೋಗಿರಬಹುದು?  ಇವರು 65 ಕೋಟಿ ಜನರು ಹೋಗಿದ್ದರು ಎಂದು ಹೇಳುತ್ತಾರೆ. 65 ಕೋಟಿ‌ ಜನ ಹೇಗೆ ಆಗುತ್ತೆ ಹೇಳಿ ಎಂದು  ಪ್ರಶ್ನಿಸಿದರು. 65 ಕೋಟಿ ಜನ ಹೋಗಿಲ್ಲ. ಇದು ಸುಳ್ಳು ಮಾಹಿತಿ. ಸುಳ್ಳು ಹೇಳುವುದೇ ನಿಮ್ಮ ಕೆಲಸ. ಸುಳ್ಳು ಹೇಳುವುದು ಬಿಟ್ಟು ಮತ್ತೇನೂ ಹೇಳುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶರಣು ಸಲಗಾರ್ ಚಾಮರಾಜಪೇಟೆಯಲ್ಲಿ ನಡೆದ ಹಸು ಕೆಚ್ಚಲು ಕೊಯ್ದ ಪ್ರಕರಣ ಪ್ರಸ್ತಾಪಿಸಿದರು. ಗೋತಾಯಿ ಕೆಚ್ಚಲು ಕಡಿದು, ಗೋತಾಯಿ ಕತ್ತು ಕಡಿದು ಸರ್ಕಾರ ಅನ್ಯಾಯ ಮಾಡಿದೆ ಎಂದರು.

ಈ ಹೇಳಿಕೆಗೂ ಸಂತೋಷ್ ಲಾಡ್ ಆಕ್ಷೇಪ ವ್ಯಕ್ತಪಡಿಸಿದರು. ಬಜೆಟ್ ಬಗ್ಗೆ ಭಾವುಕರಾಗಿ ಮಾತನಾಡುತ್ತಿದ್ದೀರಿ, ಹಾಲು, ಕೆಚ್ಚಲು, ತಾಯಿ ಎಂದೆಲ್ಲ ಭಾವನಾತ್ಮಕ ವಿಚಾರ ಸೇರಿಸಬೇಡಿ ಎಂದರು. ನಮ್ಮ ದೇಶ ಗೋಮಾಂಸ ರಫ್ತಿನಲ್ಲಿ ಎರಡನೇ ಸ್ಥಾನದಲ್ಲಿದೆ. ಇದಕ್ಕೆ ಏನು ಹೇಳುತ್ತೀರಿ ಎಂದು ಲಾಡ್‌ ತಿರುಗೇಟು ನೀಡಿದರು. ಈವೇಳೆ ಪರಸ್ಪರ ಉಭಯ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು

More articles

Latest article