ಮಂಗಳೂರು: ಲೋಕಸಭಾ ಚುನಾವಣೆಯ ಕಾವು ಹೆಚ್ಚಾಗುತ್ತಿದ್ದಂತೆ ಹಳೆಯ ದೂರು, ನೋವು, ಸಿಟ್ಟು ಈಗ ಹೊರಗೆ ಬರುತ್ತಿದ್ದು, ದಕ್ಷಿಣ ಕನ್ನಡದ ಬಿಲ್ಲವ ಸಮಾಜದ ಹಲವರು ನರೇಂದ್ರ ಮೋದಿಗೆ ಈಗ ನಾರಾಯಣಗುರುಗಳ ನೆನಪಾಯಿತೆ ಎಂದು ಪ್ರಶ್ನಿಸಿದ್ದಾರೆ.
ಬಿಲ್ಲವ ಸಮಾಜ, ದಕ್ಷಿಣ ಕನ್ನಡದ ಹೆಸರಿನಲ್ಲಿ ವಾಟ್ಸಾಪ್ ಸಂದೇಶವೊಂದು ಈಗ ಜಿಲ್ಲೆಯಾದ್ಯಂತ ವಾಟ್ಸಾಪ್ ಗುಂಪುಗಳಲ್ಲಿ ವೈರಲ್ ಆಗಿದ್ದು, ಹನ್ನೆರಡು ಬಾರಿ ಮಂಗಳೂರಿಗೆ ಭೇಟಿ ನೀಡಿದ ಪ್ರಧಾನಿಗಳಿಗೆ ಒಮ್ಮೆಯೂ ನೆನಪಾಗದ ನಾರಾಯಣ ಗುರುಗಳು ಈಗ ನೆನಪಾಗಿದ್ದು ಯಾಕೆಂದರೆ ಕಾಂಗ್ರೆಸ್ ಅಭ್ಯರ್ಥಿ ಬಿಲ್ಲವ ಸಮಾಜದವರು, ಅದಕ್ಕಾಗಿ ಎಂದು ಸಂದೇಶದಲ್ಲಿ ಹೇಳಲಾಗಿದೆ.
ವೈರಲ್ ಆಗಿರುವ ವಾಟ್ಸಾಪ್ ಸಂದೇಶ ಹೀಗಿದೆ:
12 ಬಾರಿ ಮಂಗಳೂರಿಗೆ ಭೇಟಿ ನೀಡಿದ ಪ್ರಧಾನಿಗಳಿಗೆ ಒಮ್ಮೆಯೂ ನಾರಾಯಣ ಗುರುಗಳ ನೆನಪಾಗಲಿಲ್ಲ.
ಕೇಂದ್ರ ಸರಕಾರ ನಾರಾಯಣ ಗುರುಗಳ ಸ್ಥಬ್ಧ ಚಿತ್ರವನ್ನು ಗಣರಾಜ್ಯೋತ್ಸವ ಪೆರೇಡ್ ನಿಂದ ತಿರಸ್ಕರಿಸಿದಾಗ ನಾರಾಯಣ ಗುರುಗಳ ಕುರಿತು ಪ್ರಧಾನಿಗಳಿಗೆ ಕನಿಷ್ಠ ಗೌರವೂ ಇರಲಿಲ್ಲ
ಪಠ್ಯಪುಸ್ತಕ ಪರಿಷ್ಕರಣೆಯ ನೆಪದಲ್ಲಿ ನಾರಾಯಣ ಗುರುಗಳ ಪಠ್ಯವನ್ನು ಕರ್ನಾಟಕದ ಬಿಜೆಪಿ ಸರಕಾರ ಕಿತ್ತು ಹಾಕಿದಾಗ ರಾಜ್ಯ ಸರಕಾರಕ್ಕೆ ಬುದ್ಧಿ ಹೇಳಬೇಕೆಂದು ಪ್ರಧಾನಿಗಳಿಗೆ ಅನ್ನಿಸಲಿಲ್ಲ.
ಈಗ ಚುನಾವಣೆ ಬಂದಾಗ ಸರ್ಕಲ್ ನಲ್ಲಿ ಇರಿಸಲಾಗಿರುವ ನಾರಾಯಣಗುರುಗಳ ಮೂರ್ತಿಯ ನೆನಪಾಗಿದೆ… ಕಾರಣ ಕಾಂಗ್ರೆಸ್ ನಿಂದ ನಿಂತ ಅಭ್ಯರ್ಥಿ ಬಿಲ್ಲವ ಸಮುದಾಯಕ್ಕೆ ಸೇರಿದವನು ಎಂಬುದಾಗಿದೆ.
ಬಿಲ್ಲವರು ಎಲ್ಲವನ್ನೂ ಬಲ್ಲವರು ಎನ್ನುವುದನ್ನು ಪ್ರಧಾನಿಯ ಈ ಮೋಸದ ಆಟಕ್ಕೆ ತಕ್ಕ ಪಾಠ ಕಲಿಸುವ ಮೂಲಕ ನಾವು ನಿರೂಪಿಸಬೇಕಾಗಿದೆ.
-ಬಿಲ್ಲವ ಸಮಾಜ ದಕ್ಷಿಣ ಕನ್ನಡ