ಶ್ರೀಶಾನಂದ ನ್ಯಾಯಮೂರ್ತಿಗಳ ಮುಸ್ಲಿಂವಿರೋಧಿ ಹಾಗೂ ಮಹಿಳಾ ವಿರೋಧಿ ನಿಲುವುಗಳ ವಿಡಿಯೋ ಸುಪ್ರೀಂ ಕೋರ್ಟ್ ನ್ಯಾಯ ಪೀಠದ ಗಮನಕ್ಕೂ ಬಂದಿದೆ. ಒಂದು ವೇಳೆ ವಿಚಾರಣೆ ನಡೆದು ಇಂತಹ ನ್ಯಾಯಮೂರ್ತಿಗಳನ್ನು ನ್ಯಾಯಾಂಗ ವ್ಯವಸ್ಥೆಯಿಂದ ಬಿಡುಗಡೆ ಗೊಳಿಸಿದಲ್ಲಿ ಇದೇ ರೀತಿಯ ಮನಸ್ಥಿತಿ ಇರುವ ಬೇರೆ ನ್ಯಾಯಮೂರ್ತಿಗಳಿಗೆ ಎಚ್ಚರಿಕೆ ಕೊಟ್ಟಂತಾಗುತ್ತದೆ. ನ್ಯಾಯಾಂಗ ವ್ಯವಸ್ಥೆ ಸಂವಿಧಾನ ಹಾಕಿಕೊಟ್ಟ ಮಾರ್ಗಸೂಚಿಗಳ ಚೌಕಟ್ಟಿನಲ್ಲೇ ಕಾರ್ಯನಿರ್ವಹಿಸುವ ಶಿಸ್ತಿಗೆ ಒಳಪಡುತ್ತದೆ-ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
ಬೇಲಿಯೇ ಎದ್ದು ದ್ವೇಷಕ್ಕೆ ಬಿದ್ದು ತನ್ನದೇ ಹೊಲದ ಭಾಗವೊಂದು ನನ್ನದಲ್ಲವೆಂದರೆ ಹೇಗೆ? ನ್ಯಾಯಾಂಗ ವ್ಯವಸ್ಥೆ ಇರುವುದೇ ದೇಶದ ದೇಶವಾಸಿಗಳಲ್ಲಿ ಸೌಹಾರ್ದತೆ ಹಾಗೂ ದೇಶದ ಸಮಗ್ರತೆಯನ್ನು ಕಾಪಾಡಲು. ಆದರೆ ಪರಧರ್ಮ ಸಹಿಷ್ಣುತತೆಯ ಬದಲಾಗಿ ಅನ್ಯಧರ್ಮ ದ್ವೇಷವನ್ನು ನ್ಯಾಯಮೂರ್ತಿಗಳೊಬ್ಬರು ನ್ಯಾಯಾಲಯದ ಓಪನ್ ಕೊರ್ಟಲ್ಲಿ ಯಾವುದೇ ಹಿಂಜರಿಕೆ ಇಲ್ಲದೇ ವ್ಯಕ್ತಪಡಿಸುತ್ತಾರೆ ಎಂಬುದೇ ಅತಿರೇಕದ ಪರಮಾವಧಿ.
ಕಳೆದೊಂದು ದಶಕದಲ್ಲಿ ಇಸ್ಲಾಮೋಫೋಭಿಯಾ ಎನ್ನುವ ಮತೀಯ ಖಾಯಿಲೆ ಅಲ್ಲಲ್ಲಿ ತೀವ್ರಗೊಳ್ಳುತ್ತಿದೆ. ಹಿಂದುತ್ವವಾದಿ ಸಂಘ ಪರಿವಾರ ಈ ಅಂಟು ಜಾಡ್ಯವನ್ನು ಪಸರಿಸಲು ಪ್ರಯತ್ನಿಸುತ್ತಲೇ ಇದೆ. ಅದು ನ್ಯಾಯಾಂಗ ವ್ಯವಸ್ಥೆಯಲ್ಲೂ ಹರಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಈಗ ಆಗಿದ್ದಾದರೂ ಏನೆಂದರೆ. ಕರ್ನಾಟಕದ ಉಚ್ಚ ನ್ಯಾಯಾಲಯದಲ್ಲಿ ನ್ಯಾಯಾಧೀಶರೊಬ್ಬರಿದ್ದಾರೆ. ಹೆಸರು ವೇದವ್ಯಾಸಾಚಾರ್ಯ ಶ್ರೀಶಾನಂದ. ಯಾವುದೋ ಬ್ರಾಹ್ಮಣ ಮಠದ ಸ್ವಾಮಿಗಳೋ ಇಲ್ಲಾ ದೇವಸ್ಥಾನದ ಪುರೋಹಿತರ ಹೆಸರಿನಂತಿದೆಯಲ್ಲಾ ಎಂದುಕೊಳ್ಳಬಹುದಾದರೂ ಹೆಸರಿನಲ್ಲೇನಿದೆ? ನ್ಯಾಯಮೂರ್ತಿಗಳು ಎಂದಾದ ಮೇಲೆ ಹೆಸರು, ಸಂಪ್ರದಾಯ, ವ್ಯಕ್ತಿಗತ ಆಚಾರಗಳೆಲ್ಲವನ್ನೂ ಮೀರಿ ಸರ್ವ ಧರ್ಮ ಸಮಾನತಾ ಭಾವವನ್ನು ಹೊಂದಿರ ಬೇಕೆಂಬುದು ಅಪೇಕ್ಷಣೀಯ.
ಆದರೆ.. ಇತ್ತೀಚೆಗೆ ಹೈಕೋರ್ಟಲ್ಲಿ ನಡೆದ ಕಲಾಪದಲ್ಲಿ ಬೆಂಗಳೂರಿನ ಮುಸ್ಲಿಂ ಬಾಹುಳ್ಯದ ಪ್ರದೇಶಗಳನ್ನು ಪಾಕಿಸ್ತಾನಕ್ಕೆ ಹೋಲಿಸಿ ಶ್ರಿಶಾನಂದರು ಮಾತಾಡಿದ್ದಾರೆ. ಮುಸಲ್ಮಾನರು ಪಾಕಿಸ್ತಾನಿಗಳು ಎನ್ನುವ ಅರ್ಥದಲ್ಲಿ ಪ್ರತಿಕ್ರಿಯಿಸಿದ್ದಾರೆ. ಅವರ ಒಂದೊಂದು ಮಾತಿನಲ್ಲೂ ಮತಾಂಧತೆಯೇ ತುಂಬಿದ್ದು ನ್ಯಾಯಮೂರ್ತಿಗಳು ಇಸ್ಲಾಮೋಫೋಬಿಯಾ ಕಾಯಿಲೆಯಿಂದ ಬಳಲುತ್ತಿರುವ ಅನುಮಾನವನ್ನು ಹೆಚ್ಚಿಸಿತು.
ನ್ಯಾಯಮೂರ್ತಿಗಳೇ ಹೀಗೆಂದಮೇಲೆ ಹಿಂದುತ್ವದ ಸಮರ್ಥಕರಾದ ಕೆಲವು ವಕೀಲರಲ್ಲಿ ಹಾಗೂ ಸಂಘಿ ಮನಸ್ಥಿತಿಯ ಜನರಲ್ಲಿ ಕೋಮುದ್ವೇಷ ಭಾವನೆ ಪ್ರಚೋದನೆಗೊಳಗಾಗದೇ ಇರದು. ಈಗಾಗಲೇ ಶ್ರಿಶಾನಂದರ ವಿಡಿಯೋ ಸಾಮಾಜಿಕ ಜಾಲತಾಣಗಳ ಮೂಲಕ ಜನರನ್ನು ತಲುಪಿಯಾಗಿದೆ. ನ್ಯಾಯಾಧೀಶರ ಈ ಮುಸ್ಲಿಂ ವಿರೋಧಿ ಹೇಳಿಕೆ ಕೋಮುವಾದಿ ಪೀಡಿತರಿಗೆ ಸಂತಸವನ್ನುಂಟು ಮಾಡಿದ್ದರೆ, ಕೋಮು ಸೌಹಾರ್ದತೆ ಬಯಸುವ ಬಹುಸಂಖ್ಯಾತರಲ್ಲಿ ಆತಂಕವನ್ನುಂಟು ಮಾಡಿದೆ. ನ್ಯಾಯಾಧೀಶರ ಈ ರೀತಿಯ ಧರ್ಮದ್ವೇಷದ ನುಡಿಗಳನ್ನು ಬಹಿರಂಗವಾಗಿ ವಿರೋಧಿಸಬೇಕೆಂದರೂ ನ್ಯಾಯಾಂಗ ನಿಂದನೆಯ ಭಯ ಕಾಡುತ್ತದೆ. ಹೀಗಾಗಿ ಇಂತಹ ಕೆಲವು ಜಡ್ಜ್ ಗಳು ಏನು ಹೇಳಿದರೂ ನಡೆಯುತ್ತದೆ ಎಂದು ಕೊಂಡಿರುತ್ತಾರೆ. ಯಾಕೆಂದರೆ ಕಾನೂನು ಕಾಪಾಡಬೇಕಾದ ಇವರಿಗೆ ಕಾನೂನಿನ ಭಯ ಹಾಗೂ ಶಿಕ್ಷೆಯ ಆತಂಕ ಎರಡೂ ಇಲ್ಲವಾಗಿರುತ್ತದೆ. ಆದರೂ ನ್ಯಾಯಾಂಗ ವ್ಯವಸ್ಥೆ ಇಂತವರನ್ನು ನಿಯಂತ್ರಿಸಲು ಪ್ರಯತ್ನಿಸಿದ್ದು ಆಶಾದಾಯಕ ಬೆಳವಣಿಗೆಯಾಗಿದೆ.
ಈ ಕುರಿತು ಸುಪ್ರೀಂ ಕೋರ್ಟ್ ತೆಗೆದುಕೊಂಡ ನಿಲುವನ್ನು ಇಲ್ಲಿ ಶ್ಲಾಘಿಸಲೇ ಬೇಕಿದೆ. ನ್ಯಾಯಮೂರ್ತಿಗಳಾದ ಶ್ರೀಶಾನಂದರವರ ವಿವಾದಾತ್ಮಕ ಹೇಳಿಕೆಯ ಕುರಿತು ಸರ್ವೋಚ್ಚ ನ್ಯಾಯಾಲಯವು ಸ್ವಯಂಪ್ರೇರಿತ ಪ್ರಕರಣವನ್ನು ಸೆ.19 ರಂದು ದಾಖಲಿಸಿಕೊಂಡಿದೆ. ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸಲು ಸುಪ್ರೀಂ ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡರ ನೇತೃತ್ವದಲ್ಲಿ ಐವರು ನ್ಯಾಯಾಧೀಶರುಗಳ ಪೀಠವು ಕರ್ನಾಟಕದ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ರವರಿಂದ ವರದಿಯನ್ನೂ ಕೇಳಿದೆ.
“ನ್ಯಾಯಾಂಗ ವಿಚಾರಣೆಯ ಸಂದರ್ಭದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ಮಾಡಿದ ವಚನ ವಿವಾದಾತ್ಮಕ ಉಲ್ಲೇಖಗಳು ನಮ್ಮ ಗಮನಕ್ಕೆ ಬಂದಿವೆ. ಈ ಕುರಿತು ಸುಪ್ರೀಂ ಕೋರ್ಟಿಗೆ ವರದಿ ಸಲ್ಲಿಸಲು ಹೈಕೋರ್ಟಿನ ರಿಜಿಸ್ಟ್ರಾರ್ ಜನರಲ್ ರವರಲ್ಲಿ ವರದಿ ಕೇಳಿದ್ದೇವೆ. ಈ ಪ್ರಕರಣವನ್ನು 2 ವಾರಗಳಲ್ಲಿ ಕೈಗೊಳ್ಳಬಹುದು ಎಂದು ಸುಪ್ರೀಂ ಕೋರ್ಟ್ ನಿರ್ದೇಶಿಸುತ್ತದೆ” ಎಂದು ಆದೇಶಿಸಲಾಗಿದೆ. ಈಗ ಸಂವಿಧಾನವನ್ನು ಗೌರವಿಸುವ ಜನರಿಗೆ ಸ್ವಲ್ಪ ಸಮಾಧಾನ ಸಿಗುವಂತಾಯ್ತು. ನ್ಯಾಯಾಂಗ ವ್ಯವಸ್ಥೆಯಲ್ಲಿರುವ ಕೋಮುದ್ವೇಷ ಮನಸ್ಥಿತಿಯವರಿಗೆ ಕಾನೂನಿನ ಭಯವನ್ನು ಹುಟ್ಟಿಸುವಂತಾಯ್ತು.
ಈಗ ಉಚ್ಚ ನ್ಯಾಯಾಲಯದ ಕೋರ್ಟ್ ಕಲಾಪಗಳು ಮೊದಲಿನಂತೆ ಕೇವಲ ನಾಲ್ಕು ಗೋಡೆಗಳಿಗೆ ಸೀಮಿತವಾಗಿಲ್ಲ. ಎಲ್ಲವನ್ನೂ ವಿಡಿಯೋ ಚಿತ್ರೀಕರಣ ಮಾಡಿ ಸಾರ್ವಜನಿಕ ವೀಕ್ಷಣೆಗೆ ದೊರಕುವಂತಹ ಪಾರದರ್ಶಕ ವ್ಯವಸ್ಥೆಯನ್ನು ಸುಪ್ರೀಂ ಕೋರ್ಟ್ ಜಾರಿಗೊಳಿಸಿದೆ. ಹೀಗಾಗಿ ಯಾವ ನ್ಯಾಯಮೂರ್ತಿಗಳು ಯಾವ ರೀತಿಯಲ್ಲಿ ತಮ್ಮ ಅನಿಸಿಕೆಗಳನ್ನು ಹೇಳುತ್ತಾರೆ ಎಂಬುದೆಲ್ಲಾ ಈಗ ಜಗಜ್ಜಾಹೀರಾಗುತ್ತಿದೆ. ಇದೇ ಶ್ರೀಶಾನಂದರು ಮಹಿಳಾ ವಕೀಲರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ವೀಡಿಯೋ ಕೂಡಾ ವೈರಲ್ ಆಗಿದೆ. ಈ ನ್ಯಾಯಮೂರ್ತಿಗಳ ಮುಸ್ಲಿಂವಿರೋಧಿ ಹಾಗೂ ಮಹಿಳಾ ವಿರೋಧಿ ನಿಲುವುಗಳ ವಿಡಿಯೋ ಸುಪ್ರೀಂ ಕೋರ್ಟ್ ನ್ಯಾಯ ಪೀಠದ ಗಮನಕ್ಕೂ ಬಂದಿದೆ. ಒಂದು ವೇಳೆ ವಿಚಾರಣೆ ನಡೆದು ಇಂತಹ ನ್ಯಾಯಮೂರ್ತಿಗಳನ್ನು ನ್ಯಾಯಾಂಗ ವ್ಯವಸ್ಥೆಯಿಂದ ಬಿಡುಗಡೆ ಗೊಳಿಸಿದಲ್ಲಿ ಇದೇ ರೀತಿಯ ಮನಸ್ಥಿತಿ ಇರುವ ಬೇರೆ ನ್ಯಾಯಮೂರ್ತಿಗಳಿಗೆ ಎಚ್ಚರಿಕೆ ಕೊಟ್ಟಂತಾಗುತ್ತದೆ. ನ್ಯಾಯಾಂಗ ವ್ಯವಸ್ಥೆ ಸಂವಿಧಾನ ಹಾಕಿಕೊಟ್ಟ ಮಾರ್ಗಸೂಚಿಗಳ ಚೌಕಟ್ಟಿನಲ್ಲೇ ಕಾರ್ಯನಿರ್ವಹಿಸುವ ಶಿಸ್ತಿಗೆ ಒಳಪಡುತ್ತದೆ.
ಆದರೆ.. ಹಿಂದುತ್ವವಾದಿ ಮತೀಯತೆ ಎನ್ನುವುದು ಎಲ್ಲಾ ಕ್ಷೇತ್ರಗಳಲ್ಲಿ ಪಸರಿಸಿದಂತೆ ನ್ಯಾಯಾಂಗ ವ್ಯವಸ್ಥೆಯಲ್ಲೂ ಬೇರು ಬಿಡುತ್ತಿದೆ. ಕೆಲವಾರು ನ್ಯಾಯಮೂರ್ತಿಗಳು ಹಿಂದುತ್ವವಾದಿಗಳ ಅಜೆಂಡಾ ಪರವಾಗಿ ತೀರ್ಪುಗಳನ್ನು ಕೊಟ್ಟಿರುವುದೇ ಈ ಮಾತಿಗೆ ಸಾಕ್ಷಿಯಾಗಿವೆ. ಪ್ರಭುತ್ವದ ಪರವಾಗಿ ತೀರ್ಪುಗಳನ್ನು ಕೊಟ್ಟು ತದನಂತರ ಪ್ರಭುತ್ವದ ಫಲಾನುಭವಿಗಳಾದ ನ್ಯಾಯಮೂರ್ತಿಗಳ ಪಟ್ಟಿಯೇ ಇದೆ.
ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕ್ರಮದಲ್ಲಿ 30ಕ್ಕೂ ಅಧಿಕ ನಿವೃತ್ತ ನ್ಯಾಯಾಧೀಶರು ಭಾಗವಹಿಸುತ್ತಾರೆ. ನ್ಯಾಯಮೂರ್ತಿ ಗೊಗೋಯಿಯವರು ಬಿಜೆಪಿ ಮೂಲಕ ರಾಜ್ಯಸಭೆ ಸದಸ್ಯರಾಗುತ್ತಾರೆ, ರಾಮಮಂದಿರ ಕುರಿತು ತೀರ್ಪು ನೀಡಿದ ಜಸ್ಟಿಸ್ ಅಬ್ದುಲ್ ನಜೀರ್ ಬಿಜೆಪಿ ಮೂಲಕ ಗವರ್ನರ್ ಆಗುತ್ತಾರೆ. ಸರಕಾರದ ಪರ ನಿಂತ ನ್ಯಾ. ಅರುಣ್ ಮಿಶ್ರಾ ಎನ್ ಎಚ್ ಆರ್ ಸಿ ಮುಖ್ಯಸ್ಥರಾಗುತ್ತಾರೆ, ನ್ಯಾಯಮೂರ್ತಿಗಳಾಗಿದ್ದ ಕಾನ್ವಿಲ್ಕರ್ ಲೋಕಪಾಲರಾಗುತ್ತಾರೆ. ಸ್ವತಃ ಸುಪ್ರೀಂ ಕೋರ್ಟಿನ ಹಾಲಿ ಮುಖ್ಯನ್ಯಾಯಮೂರ್ತಿಗಳು ತಮ್ಮ ನಿವಾಸದಲ್ಲಿ ನಡೆದ ಖಾಸಗಿ ಗಣೇಶನ ಪೂಜೆಗೆ ಪ್ರಧಾನ ಮಂತ್ರಿಗಳನ್ನೇ ಆಹ್ವಾನಿಸುತ್ತಾರೆ.. ಇಂತಹ ಹಲವಾರು ಘಟನೆಗಳು ನ್ಯಾಯಾಂಗ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಅನುಮಾನದಿಂದ ನೋಡುವಂತೆ ಮಾಡುತ್ತವೆ.
ಸಂವಿಧಾನವನ್ನೇ ಬದಲಾಯಿಸುತ್ತೇವೆ ಎಂದು ಅಧಿಕಾರಕ್ಕೆ ಬಂದು ಅದಕ್ಕಾಗಿ ಪ್ರಯತ್ನಿಸುತ್ತಿರುವ ಬಿಜೆಪಿ ಪಕ್ಷ ಹಾಗೂ ಅದನ್ನೇ ಮುಖ್ಯ ಅಜೆಂಡಾವಾಗಿ ಇರಿಸಿಕೊಂಡ ಆ ಪಕ್ಷದ ಮಾತೃಪಕ್ಷವಾದ ಆರೆಸ್ಸೆಸ್ ಗಳು ಧರ್ಮ ನಿರಪೇಕ್ಷ ದೇಶವನ್ನು ಹಿಂದೂ ರಾಷ್ಟ್ರ ಮಾಡುವ ಮೂಲಕ ಮನುವಾದಿ ಸಿದ್ಧಾಂತವನ್ನು ಜಾರಿಗೆ ತರಲು ಬಯಸುತ್ತಿವೆ. ಬಹುತ್ವ ಸಂಸ್ಕೃತಿಯನ್ನು ನಾಶಗೊಳಿಸಿ ದೇಶಾದ್ಯಂತ ಮನುಸ್ಮೃತಿ ಆಧಾರಿತ ಏಕ ಸಂಸ್ಕೃತಿಯನ್ನು ಹೇರಲು ಉತ್ಸುಕವಾಗಿವೆ. ಸರ್ವರಿಗೂ ಸಮಾನತೆ ಸಾರುವ ಸಂವಿಧಾನವನ್ನೇ ಬದಲಾಯಿಸಿ ವರ್ಣಾಧಾರಿತ ಮನುಶಾಸ್ತ್ರ ಪ್ರೇರಿತ ಹಿಂದುತ್ವವಾದಿ ವೈದಿಕಶಾಹಿ ಸ್ಮೃತಿಯನ್ನು ಜಾರಿಗೆ ತರುವ ಎಲ್ಲಾ ಪ್ರಯತ್ನ ಪರಿಶ್ರಮಗಳು ಎಲ್ಲಾ ಹಂತದಲ್ಲೂ ನಡೆಯುತ್ತಿವೆ. ಈಗಾಗಲೇ ಕಾರ್ಯಾಂಗ ಮತ್ತು ಶಾಸಕಾಂಗಗಳಲ್ಲಿ ಮನುವ್ಯಾಧಿಯನ್ನು ಹರಡಲಾಗಿದೆ. ಇನ್ನು ನ್ಯಾಯಾಂಗ ವ್ಯವಸ್ಥೆಯಲ್ಲೂ ಹಿಂದುತ್ವವಾದಿ ನೆಲೆಯನ್ನು ಗಟ್ಟಿಗೊಳಿಸಿದರೆ ಸಂಘದ ಮಹೋನ್ನತ ಮಹತ್ವಾಕಾಂಕ್ಷೆಗೆ ಅಡೆತಡೆಗಳಿಲ್ಲದಂತಾಗುತ್ತವೆ. ಪತ್ರಿಕಾಂಗವಂತೂ ಬಹುತೇಕ ಸಂಘದ ಸುಪರ್ದಿಯಲ್ಲಿದೆ.
ಆದರೆ ಈ ದೇಶದ ಬಹುಸಂಖ್ಯಾತ ಜನರು ಸಂವಿಧಾನದ ಪರವಾಗಿದ್ದಾರೆ. ಅದರ ರಕ್ಷಣೆಗೆ ಬದ್ದರಾಗಿದ್ದಾರೆ. ಹಾಗೂ ಅದರಲ್ಲೇ ಅವರ ಸ್ವಾತಂತ್ರ್ಯ ಸಮಾನತೆ ಹಾಗೂ ಅಸ್ತಿತ್ವವೂ ಇದೆ. ಹೀಗಾಗಿ ಹಿಂದುತ್ವವಾದಿಗಳ ವೈದಿಕಶಾಹಿ ಹಿಂದೂರಾಷ್ಟ್ರ ನಿರ್ಮಾಣದ ಕನಸು ನನಸಾಗಲು ಸಾಧ್ಯವಿಲ್ಲ.
ಶ್ರೀಶಾನಂದನವರಂತಹ ನ್ಯಾಯಮೂರ್ತಿಗಳು ತಮ್ಮ ಅನ್ಯ ಧರ್ಮ ದ್ವೇಷವನ್ನು ವ್ಯಕ್ತಪಡಿಸಿದಷ್ಟೂ ಸಂವಿಧಾನದ ಮುಂದೆ ಬೆತ್ತಲಾಗುತ್ತಲೇ ಹೋಗುತ್ತಾರೆ. ಪ್ರಭುತ್ವದ ಪರವಾಗಿ ಒಲವನ್ನು ತೋರಿ ಫಲಾನುಭವಿಗಳಾದ ನ್ಯಾಯಮೂರ್ತಿಗಳು ಜನಸಮೂಹದ ಕಣ್ಣಲ್ಲಿ ಗೌರವವನ್ನು ಕಳೆದುಕೊಳ್ಳುತ್ತಾರೆ. ಯಾರು ಏನೇ ಹೇಳಲಿ, ಯಾರು ಅದೆಷ್ಟೇ ಪ್ರಯತ್ನಿಸಲಿ, ಅಂತಿಮ ಗೆಲುವು ಸಂವಿಧಾನದ ಪರವಾಗಿರುತ್ತದೆ, ಇರಬೇಕು.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು, ಪತ್ರಕರ್ತರು.
ಇದನ್ನೂ ಓದಿ- ಜೈಲುಗಳೋ? ಅಕ್ರಮ ಚಟುವಟಿಕೆಗಳ ಕೇಂದ್ರಗಳೋ?