ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ , ವಿಪಕ್ಷ ನಾಯಕ ಆರ್.ಅಶೋಕ್, ಶಾಸಕ ಮುನಿರತ್ನ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ಬಳಸುತ್ತಿರುವ ಪದ ಬಳಕೆ ಕುರಿತು ಕಾಂಗ್ರೆಸ್ ಮುಖಂಡರು ಆರ್ಎಸ್ಎಸ್ ಕಚೇರಿಗೆ ಪತ್ರ ಬರೆದಿದ್ದಾರೆ. ನಮ್ಮ ಮೂಲ ಆರ್ಎಸ್ಎಸ್ ಎಂದು ಬೀಗುವ ಬಿಜೆಪಿ ನಾಯಕರು ಸಂಸ್ಕಾರ ಮೀರಿ ಮಾತನಾಡುತ್ತಿದ್ದಾರೆ. ಇಂತಹವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಿ. ಸಂಸ್ಕೃತಿ ಮರೆತು ಮಾತನಾಡುತ್ತಿರುವ ನಾಯಕರ ಸದಸ್ಯತ್ವ ರದ್ದುಗೊಳಿಸಿ ಎಂದು ಕಾಂಗ್ರೆಸ್ನ ಗೌತಮ್ ಕುಮಾರ್, ಎಸ್.ಮನೋಹರ, ಶಂಕರ ಗುಹಾ ಸೇರಿದಂತೆ 70 ಕಾರ್ಯಕರ್ತರು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಆರ್ಎಸ್ಎಸ್ನ ಕೇಶವಕೃಪಾ ಕಚೇರಿಗೆ ಪತ್ರ ಬರೆದು ಮನವಿ ಸಲ್ಲಿಸಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವ ಸಂಘಟನೆಯ ಕರ್ನಾಟಕದ ಮುಖ್ಯಸ್ಥ ಭಾರತೀಯ ಜನತಾ ಪಕ್ಷ ಪ್ರತಿ ಸಂದರ್ಭದಲ್ಲಿ ಎಲ್ಲ ಸಭೆಗಳಲ್ಲೂ ನಾವು ಆರ್.ಎಸ್.ಎಸ್.ನಲ್ಲಿ ತರಬೇತಿಯನ್ನು ಪಡೆದಿದ್ದೇವೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಇಡೀ ಆರ್.ಎಸ್.ಎಸ್ನ ಕಟ್ಟಾಳುಗಳಲ್ಲಿ ಒಬ್ಬರಾದ ಸಿ.ಟಿ.ರವಿ ವಿಧಾನಸಭೆಯಲ್ಲಿ ಬಳಸಿರುವ ಪದವನ್ನು ನಾವು ಹೇಳಲು ಸಾಧ್ಯವಿಲ್ಲ, ಅದನ್ನು ನೀವೇ ಅರ್ಥೈಸಿಕೊಳ್ಳಿ. ಎಂದು ಹೇಳಿದ್ದಾರೆ.
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಅಧಿಕಾರಿಗಳ ವಿರುದ್ಧ ಬಳಸಿರುವ ಆ ಪದ ಯಾವುದೆಂದು ನಿಮ್ಮ ಶಾಖೆಗೆ ಅರಿವಿದೆ ಎಂದು ನಾವು ಭಾವಿಸಿದ್ದೇವೆ. ಇನ್ನು ಬಿಜೆಪಿ ಶಾಸಕ ಮುನಿರತ್ನಂ ನಾಯ್ಡು ಎಂದ ಕೂಡಲೇ ನಿಮಗೆ ಈಗಾಗಲೇ ಅರ್ಥವಾಗಿರಬೇಕು. ಇಂತಹ ವ್ಯಕ್ತಿಗಳು ಬಳಸಿದ ಪದವನ್ನು ನಿಮ್ಮ ಶಾಖೆಯಲ್ಲಿ ತರಬೇತಿ ಹೊಂದಿರುವ ಬಿಜೆಪಿ ನಾಯಕರು ಅತ್ಯಂತ ಹೆಮ್ಮೆಯಿಂದ ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೂ ಸಹ ಇನ್ನೂ ಇವರ ವಿರುದ್ಧ ಏಕೆ ಆರ್.ಎಸ್.ಎಸ್ನ ಮುಖ್ಯಸ್ಥರು ಮೌನವಾಗಿದ್ದಾರೆ ? ಇದುವರೆಗೂ ಏಕೆ ಇವರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂಬುದರ ಬಗ್ಗೆ, ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವರು ಭ್ರಷ್ಟಾಚಾರದ ಪ್ರಕರಣಗಳಲ್ಲಿ ಜೈಲಿಗೆ ಹೋಗಿ ಬಂದರೂ ಸಹ ಅವರನ್ನು ಸಮರ್ಥಿಸಿಕೊಂಡಿರುವುದು ಆರ್.ಎಸ್.ಎಸ್ ನೀತಿ ಎಂದು ಈಗಾಗಲೇ ಬಹಿರಂಗವಾಗಿದೆ. ಆರ್ ಟಿ ಜಿ ಎಸ್ ಮತ್ತು ವಕ್ಫ್ ಬೋರ್ಡ್ ಹಗರಣ ಮುಚ್ಚಿ ಹಾಕಲು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಕೋಟಿ ರೂ. ಆಮಿಷ ಒಡ್ಡಿದರ ಬಗ್ಗೆ, ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ಅನ್ನರ್ ಅನ್ವರ್ ಮಾಣಿಪ್ಪಾಡಿ ಅವರೇ ಬಹಿರಂಗಪಡಿಸಿದ್ದಾರೆ. ಇವರ ವಿರುದ್ಧ ಅನೇಕ ಭ್ರಷ್ಟಾಚಾರದ ಪ್ರಕರಣಗಳು ಇವೆ ಎಂದು ನಿಮ್ಮ ಸಂಘದ ಮತ್ತೊಬ್ಬ ನಿಷ್ಠಾವಂತ ನಾಯಕ ಮತ್ತು ಶಾಸಕ ಬಸನಗೌಡ ಪಾಟೀಲ ಯತ್ನಾಳರವರೇ ಅನೇಕ ಬಾರಿ ಬಹಿರಂಗಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತೇವೆ ಎಂಬ ಬಿಜೆಪಿ ನಾಯಕರ ಹೇಳಿಕೆಗಳನ್ನು ಆರ್ಎಸ್ಎಸ್ ಗಮನಿಸಬೇಕು. ಯಾರು ಭ್ರಷ್ಟಾಚಾರದಲ್ಲಿ ಅತಿ ಹೆಚ್ಚು ಭಾಗಿಯಾಗಿದ್ದಾರೋ ಅವರೇ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತೇವೆ ಎಂದು ಹೇಳುತ್ತಾರೆ. ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವವರೆಲ್ಲರೂ ನಾವು ಆರ್ಎಸ್ಎಸ್ನ ಕಟ್ಟಾಳುಗಳು ಎಂದು ಹೇಳಿಕೊಳ್ಳುತ್ತಾರೆ. ಈ ನಾಯಕರೆಲ್ಲರೂ ಆರ್ಎಸ್ಎಸ್ನ ಶಾಖೆಯಲ್ಲಿ ತರಬೇತಿ ಪಡೆದಿದ್ದಾರೆಯೇ ಎಂಬುದರ ಬಗ್ಗೆ ಸೃಷ್ಟಪಡಿಸಬೇಕು. ಅವರು ಬಳಸಿರುವ ಪದ ನಿಮ್ಮ ಶಾಖೆಯಲ್ಲಿ ತರಬೇತಿ ಪಡೆದಿದ್ದರಿಂದ ಬಂದಿದ್ದರೆ ಅದರ ಬಗ್ಗೆಯೂ ಸ್ಪಷ್ಟನೆ ನೀಡಬೇಕು. ಇಲ್ಲವೇ ಇಂತಹ ಪದ ಬಳಕೆಯನ್ನು ಖಂಡಿಸುತ್ತೇವೆ ಎಂಬುದನ್ನಾದರೂ ಹೇಳಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.