ಚೆನ್ನೈ: ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸಬೇಕು, ರಾಜ್ಯಗಳಿಗೆ ಹೆಚ್ಚಿನ ಅಧಿಕಾರ ಇರಬೇಕು ಎಂಬ ಪಕ್ಷದ ನೀತಿಯನ್ವಯ ಈ ಬಾರಿ ಚುನಾವಣಾ ಪ್ರಣಾಳಿಕೆಯಲ್ಲೂ ಹಲವು ವಿಷಯಗಳನ್ನು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪ್ರಸ್ತಾಪಿಸಿದ್ದು, ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಬಿಜೆಪಿ ಸರ್ಕಾರದ ಹಲವು ನೀತಿಗಳನ್ನು ಬದಲಿಸಲಾಗುತ್ತದೆ ಎಂದು ಹೇಳಿದೆ.
ಇಂದು ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಡಿಎಂಕೆ ಅಧ್ಯಕ್ಷ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ಸಮಾನ ನಾಗರಿಕ ಸಂಹಿತೆ (ಯುಸಿಸಿ) ಹಾಗು ಒಂದು ದೇಶ, ಒಂದು ಚುನಾವಣೆ ನೀತಿಗಳನ್ನು ಕೈಬಿಡುವುದಾಗಿ ಹೇಳಿದರು.
ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದಲ್ಲಿ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೀಟ್) ತಮಿಳುನಾಡಿಗೆ ಅನ್ವಯಿಸದಂತೆ ನೋಡಿಕೊಳ್ಳುವುದಾಗಿಯೂ ಅವರು ಹೇಳಿದರು.
ಭಾರತೀಯ ಜನತಾ ಪಕ್ಷದ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ ಜಾರಿಗೆ ತಂದಿರುವ ಕಾನೂನುಗಳ ಕುರಿತು ಪುನರ್ ಪರಿಶೀಲನೆ ನಡೆಸಿ, ಜನಕೇಂದ್ರಿತ ಕಾನೂನುಗಳನ್ನು ಜಾರಿಗೊಳಿಸಲಾಗುವುದು ಎಂದು ಡಿಎಂಕೆ ಪ್ರಣಾಳಿಕೆಯಲ್ಲಿ ಹೇಳಲಾಗಿದೆ.
ಬಿಜೆಪಿ ಅವಧಿಯಲ್ಲಿ ಆರಂಭಗೊಂಡ ನೀತಿ ಆಯೋಗವನ್ನು ರದ್ದುಪಡಿಸಿ, ಈ ಹಿಂದೆ ಇದ್ದ ಯೋಜನಾ ಆಯೋಗವನ್ನು ಜಾರಿಗೆ ತಂದು, ರಾಜ್ಯ ಸರ್ಕಾರಗಳ ಬೇಡಿಕೆಗಳ ಆಧಾರದಲ್ಲಿ ಯೋಜನೆಗಳನ್ನು ರೂಪಿಸಲಾಗುವುದು, ತಮಿಳುನಾಡಿನಲ್ಲೂ ಜಾತಿಸಮೀಕ್ಷೆ ಮಾಡಿ, ಬಡತನ ರೇಖೆಗಿಂತ ಕೆಳಗಿರುವವರ ಮಾಹಿತಿಗಳನ್ನು ಸಂಗ್ರಹಿಸಿ ಸಾಮಾಜಿಕ ನ್ಯಾಯ ಒದಗಿಸಲಾಗುವುದು ಎಂದು ಪ್ರಣಾಳಿಕೆ ಹೇಳಿದೆ.
ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಕ್ಷೇತ್ರ ಪುನರ್ ವಿಂಗಡಣೆ (ಡಿಲಿಮಿಟೇಷನ್) ಕುರಿತೂ ಪ್ರಣಾಳಿಕೆಯಲ್ಲಿ ಹೇಳಲಾಗಿತ್ತು, ಒಕ್ಕೂಟ ಅಧಿಕಾರಕ್ಕೆ ಬಂದಲ್ಲಿ ತಮಿಳುನಾಡಿನ ಸಂಸತ್ ಸದಸ್ಯ ಸ್ಥಾನದ ಪ್ರಮಾಣ ಕಡಿಮೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಲಾಗಿದೆ.