ಬೆಂಗಳೂರು: ಪದಾಧಿಕಾರಿಗಳ ವಿಸಿಟ್ ಕಾರ್ಡ್ ಇಟ್ಟುಕೊಂಡು ಓಡಾಡಿದರೆ ಆಗಲ್ಲ. ನಿಮಗೆ ಯಾವುದೇ ಕಾರ್ ಕೊಡಲ್ಲ, ರೂಮ್ ಕೊಡಲ್ಲ. ನಿಮ್ಮದೇ ಕಾರ್ ತೆಗೆದುಕೊಂಡು ಪಕ್ಷ ಸಂಘಟನೆಗೆ ರಾಜ್ಯ ಸುತ್ತಬೇಕು. ಕೆಲಸ ಮಾಡಲಿಲ್ಲ ಎಂದರೆ ಚುನಾವಣೆಯ ನಂತರ ಮಾಜಿಗಳಾಗುತ್ತೀರಿ ಎಂದು ನೂತನ ಪದಾಧಿಕಾರಿಗಳಿಗೆ ಡಿ.ಕೆ. ಶಿವಕುಮಾರ ಎಚ್ಚರಿಸಿದ್ದಾರೆ.
ನಗರದ ಕೆಪಿಸಿಸಿ ಕಚೇರಿಯಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಾವೆಲ್ಲ ವಿದ್ಯಾರ್ಥಿ ಸಂಘಟನೆಯಾದ NSUI ನಿಂದ ಬಂದವರು. ಪಕ್ಷದಲ್ಲಿ ಬೆಳೆಯಲು ಹಲವು ಎಡರು ತೊಡರುಗಳಿರುತ್ತವೆ. ನಾವೂ ಅದನ್ನು ಎದುರಿಸಿದ್ದೇವೆ. ಮಾಜಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸತೀಶ ಜಾರಕಿಹೊಳಿ, ರಾಮಲಿಂಗಾರೆಡ್ಡಿ, ಸಲೀಂ ಅಹ್ಮದ್, ದ್ರುವನಾರಾಯಣ್ ಅವರ ಸೇವೆಯನ್ನು ನೆನಪಿಸಿಕೊಳ್ಳಬೇಕು. ಎಲ್ಲರೂ ಅವರದೇ ಆದ ರೀತಿಯಲ್ಲಿ ಪಕ್ಷಕ್ಕೆ ಅಪಾರ ಕೊಡುಗೆಗಳನ್ನು ನೀಡಿದ್ದಾರೆ. ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದ ಎಂಬಿ ಪಾಟೀಲ ಅವರ ಕೊಡುಗೆ ಸಹ ಪಕ್ಷಕ್ಕೆ ಅಪಾರವಾಗಿದೆ ಎಂದರು.
ನೂತನ ಕಾರ್ಯಾಧ್ಯಕ್ಷರ ಪದಗ್ರಹಣ
ಇಂದು ಐವರು ನಾಯಕರು ನೂತನ ಕಾರ್ಯಾಧ್ಯಕ್ಷರಾಗಿ ಪದ ಸ್ವೀಕಾರ ಮಾಡಿದರು. ನೂತನ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾದ ತನ್ವೀರ್ ಸೇಠ್, ವಿನಯ್ ಕುಲಕರ್ಣಿ, ಜಿ.ಸಿ. ಚಂದ್ರಶೇಖರ, ಮಂಜುನಾಥ ಭಂಡಾರಿ, ವಸಂತ್ ಕುಮಾರ್ ಅಧಿಕಾರ ಸ್ವೀಕರಿಸಿದರು. ಪ್ರಚಾರ ಸಮಿತಿ ಅಧ್ಯಕ್ಷರಾಗಿ ವಿನಯ್ ಸೊರಕೆ ಅಧಿಕಾರ ವಹಿಸಿಕೊಂಡರು