ನವದೆಹಲಿ: ಚಿಕ್ಕಮಗಳೂರು ಜಿಲ್ಲೆಯ ದತ್ತಪೀಠದ ಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಸಂಸ್ಥೆಯನ್ನು ನಿರ್ವಹಿಸಲು ಜಿಲ್ಲಾ ಮಟ್ಟದ ಸಮಿತಿ ರಚಿಸಲು ಗೃಹ ಸಚಿವ ಡಾ. ಜಿ. ಪರಮೇಶ್ವರ ನೇತೃತ್ವದ ಸಚಿವ ಸಂಪುಟ ಉಪಸಮಿತಿ ನಿರ್ಧರಿಸಿದೆ ಎಂದು ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಮಾರ್ಚ್ 19ರಂದು ನಡೆದ ಚರ್ಚೆಯ ಸಂದರ್ಭದಲ್ಲಿ, ಪ್ರಸ್ತಾವಿತ ಸಂಸ್ಥೆಯು ಎರಡೂ ಧರ್ಮಗಳಿಂದ ಪೂಜಿಸಲ್ಪಡುವ ಸಂಯೋಜಿತ ಸಂಸ್ಥೆಯಾಗಿದೆ ಎಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ತಿಳಿಸಿದ್ದಾರೆ. ಕೋಮು ಸಾಮರಸ್ಯ ಕಾಪಾಡಲು ಮತ್ತು ಜಾತ್ಯತೀತ ರಾಜ್ಯವು ಹೇಗಿರಬೇಕು ಎಂಬುದಕ್ಕೆ ಉದಾಹರಣೆಯಾಗಿರಲು ಸಂಪುಟ ಉಪಸಮಿತಿ ತನ್ನ ಶಿಫಾರಸುಗಳನ್ನು ಸಲ್ಲಿಸಿದೆ ಎಂದು ರಾಜ್ಯ ಸರ್ಕಾರ ಹೇಳಿದೆ.
ಇದು ತನ್ನ ಯಾವುದೇ ನಾಗರಿಕರ ಹಕ್ಕುಗಳನ್ನು ಉಲ್ಲಂಘಿಸುವುದಿಲ್ಲ ಮತ್ತು ಎಲ್ಲ ಪಾಲುದಾರರ ನಡುವಿನ ವಿವಾದವನ್ನು ಕೊನೆಗೊಳಿಸಲಿದೆ ಎಂದು ಸರ್ಕಾರ ಹೇಳಿದೆ. ಸ್ಥಳೀಯವಾಗಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಮೂಲಕ ಎರಡೂ ಧರ್ಮಗಳ ಆಚರಣೆಗಳು ಮತ್ತು ಸಂಪ್ರದಾಯಗಳನ್ನು ನಿರ್ವಹಿಸುವುದು ಅಗತ್ಯ. ಜಿಲ್ಲಾಡಳಿತದ ಮೇಲ್ವಿಚಾರಣೆಯಲ್ಲಿ ಎರಡೂ ಧರ್ಮಗಳಿಗೆ ಸಮಾನ ಪ್ರಾತಿನಿಧ್ಯ ನೀಡುವ ಸಮಿತಿ ರಚಿಸುವ ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಬಹುದು ಎಂದು ರಾಜ್ಯ ಸರ್ಕಾರ ಸಲ್ಲಿಸಿದ ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ.
ಪ್ರಸ್ತಾವಿತ ಸಂಸ್ಥೆಯನ್ನು ನಿರ್ವಹಿಸಲು ಜಿಲ್ಲಾ ಮಟ್ಟದ ಸಮಿತಿ ರಚಿಸಬೇಕು ಎಂದು ಸಚಿವ ಸಂಪುಟ ಉಪ ಸಮಿತಿ ನಿರ್ಧರಿಸಿತು. ಇದರಲ್ಲಿ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿ, ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಶಾಶ್ವತ ಸದಸ್ಯರಾಗಿ, ಶಾಖಾದ್ರಿ ಕಾಯಂ ನಾಮನಿರ್ದೇಶಿತ ಸದಸ್ಯರಾಗಿ, ಸರ್ಕಾರದಿಂದ ನಾಮನಿರ್ದೇಶನಗೊಂಡಿರುವ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ಸಮಾನ ಸಂಖ್ಯೆಯ ಸದಸ್ಯರು ಇರಲಿದ್ದಾರೆ. ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿರಲಿದ್ದಾರೆ.
ಸಮಿತಿಯ ನಿರ್ಣಯದ ಪ್ರಕಾರ, ಜಿಲ್ಲಾ ಮಟ್ಟದ ಸಮಿತಿಯ ಶಿಫಾರಸುಗಳ ಆಧಾರದಲ್ಲಿ ಸಂಸ್ಥೆಯ ಆಚರಣೆಗಳ (ದೈನಂದಿನ ಮತ್ತು ವಿಶೇಷ ಸಂದರ್ಭಗಳಲ್ಲಿ) ಕುರಿತು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಲಿದೆ. ಜಿಲ್ಲಾ ಸಮಿತಿಯ ಶಿಫಾರಸಿನ ಪ್ರಕಾರ ಅರ್ಚಕ ಮತ್ತು ಮುಜಾವರ್ ಅವರನ್ನು ರಾಜ್ಯ ಸರ್ಕಾರ ನೇಮಿಸಲಿದೆ. ಜಿಲ್ಲಾ ಸಮಿತಿಯ ಮಾರ್ಗದರ್ಶನದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಯವರು ಸಂಸ್ಥೆಯನ್ನು ನಿರ್ವಹಿಸುತ್ತಾರೆ ಎಂದು ಸರ್ಕಾರ ಮಾಹಿತಿ ನೀಡಿದೆ.
ದತ್ತಪೀಠದ ಪೂಜೆ ನೆರವೇರಿಸಲು ಮುಜಾವರ್ ನೇಮಕ ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರ ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್‌ನ 2023ರ ಮಾರ್ಚ್ 6ರ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಲಾಗಿದೆ.