ಕೋಲಾರ : ಯಾವುದೇ ವೈದ್ಯಕೀಯ ವಿದ್ಯಾರ್ಹತೆ ಇಲ್ಲದೇ ಅಕ್ರಮವಾಗಿ ನಡೆಸುತ್ತಿದ್ದ ಜಿಲ್ಲೆಯ ಮೂರು ನಕಲಿ ಕ್ಲಿನಿಕ್ ಗಳ ನೋಂದಣಿಯನ್ನು ರದ್ಧು ಗೊಳಿಸಿರುವ ಜಿಲ್ಲಾಡಳಿತ ನಾಲ್ಕು ಅನಧಿಕೃತ ಕ್ಲಿನಿಕ್ ಗಳಿಗೆ ದಂಡವನ್ನು ವಿಧಿಸುವುದರ ಜೊತೆಗೆ ಅವುಗಳ ವೈದ್ಯಕೀಯ ಸೇವೆಗಳನ್ನು ರದ್ಧುಗೊಳಿಸಲು ಆದೇಶಿಸಿದೆ.
ಜಿಲ್ಲಾ ಕೆಪಿಎಂಇಎ ಕುಂದು ಕೊರತೆಗಳ ನಿವಾರಣಾ ಸಮಿತಿ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಂಡಿರುವ ಜಿಲ್ಲಾಡಳಿತವು ಒಟ್ಟು 148 ನಕಲಿ ಕ್ಲಿನಿಕ್ ಗಳ ಪೈಕಿ, 48 ಕ್ಲಿನಿಕ್ ಗಳನ್ನು ಸೀಜ್ ಮಾಡಿದ್ದುˌ, 60 ನಕಲಿ ವೈದ್ಯರುಗಳು, ಮಳಿಗೆಗಳನ್ನು ಬಿಟ್ಟು ಪರಾರಿಯಾಗಿದ್ದು ನಾಲ್ಕು ಕ್ಲಿನಿಕ್ ಗಳ ವಿರುದ್ಧ ಎಫ್ ಐಆರ್ ದಾಖಲಿಗಿದೆ.
ನೋಂದಣಿ ರದ್ಧು ಮಾಡಲಾದ ನಕಲೀ ಕ್ಲಿನಿಕ್ ಗಳು
ಸುಂದರಪಾಳ್ಯದ ಭಾರತ್ ಕ್ಲಿನಿಕ್, ಮುದುವತ್ತಿಯ ಪುನರ್ ಜೀವ ರಿಹ್ಯಾಬಿಲಿಟೇಷನ್ ಸೆಂಟರ್, ಹಾಗೂ ಟೇಕಲ್ ನ ಟೇಕಲ್ ಹಾಸ್ಪಿಟಲ್.
ಇನ್ನು ದಂಡ ವಿಧಿಸಲಾದ ಕ್ಲಿನಿಕ್ ಗಳೆಂದರೆ ವಡ್ಡಹಳ್ಳಿಯ ಶಂಕರ್ ಕ್ಲಿನಿಕ್, ಬೇತಮಂಗಲದ ರಾಜು ಕ್ಲಿನಿಕ್, ಮತ್ತು ಮುಳಬಾಗಿಲು ತಾಲ್ಲೂಕು ಪೂಜಾರಹಳ್ಳಿಯ ವೆಂಕಟರಾಮಪ್ಪ, ಸೂಲಿಕುಂಟೆಯ ಅರುಲ್ ಕ್ಲಿನಿಕ್ ಗಳಿಗೆ ದಂಡ ವಿಧಿಸಿ ಅವುಗಳ ವೈದ್ಯಕೀಯ ಸೇವೆಯನ್ನು ರದ್ದುಗೊಳಿಸಲು ಆದೇಶಿಸಲಾಗಿದೆ.
ಅಲ್ಲದೆ ಈಗಾಗಲೇ ನೋಂದಾಯಿತ ವೈದ್ಯರು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯಿದೆ ಪದ್ಧತಿಯಂತೆ, ಚಿಕಿತ್ಸೆ ನೀಡುತ್ತಿರುವುದರ ಕುರಿತು ನಿಗಾ ವಹಿಸಲು ಸಹ ಸೂಚಿಸಲಾಗಿದೆ.


