ಮಾನವ ಜನಾಂಗದ ಅಸ್ತಿತ್ವವು ಇರುವವರೆಗೂ ಮಾನವನಿಗೆ ಈ ದ್ವಂದದಿಂದ ಮುಕ್ತಿಯಿರುವಂತೆ ಕಾಣುತ್ತಿಲ್ಲ. ಹೊಸ ಪರಿಧಿಗಳನ್ನು ಸೃಷ್ಟಿಸುತ್ತಾ ಹೋದಂತೆ ಅವುಗಳಿಂದ ಕಳಚಿಕೊಳ್ಳುವ ಹಂಬಲವೂ ಅವನಲ್ಲಿ ಹೆಚ್ಚುತ್ತಾ ಹೋಗಲಿದೆ. ಇವೆಲ್ಲದರಾಚೆಗಿನ ನಿರಾಕರಣವಾದವಾದರೂ ಯಾವುದು ಎಂಬುದು ನನ್ನ ಸದ್ಯದ ಅಚ್ಚರಿ! – ಪ್ರಸಾದ್ ನಾಯ್ಕ್, ದೆಹಲಿ.
ಹೊಸವರ್ಷದ ಹೊಸ್ತಿಲಲ್ಲಿ ಹವಾಮಾನ ವೈಪರೀತ್ಯದ ಬಗ್ಗೆ ಮಾತಾಡುತ್ತಿದ್ದಾಗಲೇ ಚಿಕ್ಕದೊಂದು ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿ ಹೋಯಿತು.
“ನಿಹಿಲಿಸ್ಟ್ ಪೆಂಗ್ವಿನ್” ಎಂಬ ಹೆಸರಿನಲ್ಲಿ ಹೀಗೆ ಎಲ್ಲೆಡೆ ಹಬ್ಬಿದ ವೀಡಿಯೋ ಅನ್ನು ನೀವೂ ನೋಡಿರಬಹುದು. ಧ್ರುವಪ್ರದೇಶಗಳಲ್ಲಿ ಕಾಣಸಿಗುವ ಪೆಂಗ್ವಿನ್ ಗಳು ಸಾಮಾನ್ಯವಾಗಿ ಸಂಘಜೀವಿಗಳೆಂದೇ ಕರೆಯಲ್ಪಡುವ ಜೀವಿಗಳು. ದೊಡ್ಡದಾದ ಒಂದು ಗುಂಪಿನಲ್ಲಿ ಜೀವಿಸುವುದು ಪೆಂಗ್ವಿನ್ ಗಳ ಸ್ವಭಾವ ಮಾತ್ರವಲ್ಲ ಧ್ರುವಪ್ರದೇಶಗಳಲ್ಲಿ ಕಂಡುಬರುವ ವಿಪರೀತ ಚಳಿ ಮತ್ತು ತತ್ಸಂಬಂಧಿ ಸವಾಲುಗಳನ್ನೆದುರಿಸಿ ಬದುಕುವ ನಿಟ್ಟಿನಲ್ಲಿ ಅದು ಅತ್ಯಾವಶ್ಯಕವೂ ಹೌದು.
ಹೀಗಿರುವಾಗ ತನ್ನ ಗುಂಪಿನಿಂದ ಬೇರೆಯಾಗಿ, ಏಕಾಂಗಿಯಾಗಿ ಮತ್ತೆಲ್ಲೋ ಸಾಗುತ್ತಿರುವ ಪೆಂಗ್ವಿನ್ ಹಕ್ಕಿಯದ್ದೊಂದು ವೀಡಿಯೋ ಇಂಟರ್ನೆಟ್ ಜಗತ್ತಿನಲ್ಲಿ ಸಾಕಷ್ಟು ಜನರ ಗಮನ ಸೆಳೆಯಿತು. ಅಷ್ಟಕ್ಕೂ ಈ ವೀಡಿಯೋದ ಮೂಲವಿರುವುದು 2007ರಲ್ಲಿ ಬಿಡುಗಡೆಯಾಗಿದ್ದ “Encounters at the end of the World” ಸಾಕ್ಷ್ಯಚಿತ್ರವೊಂದರಲ್ಲಿ. ತನ್ನ ಪ್ರಕೃತಿಸಹಜ ಧರ್ಮ ಮತ್ತು ಪುಟ್ಟ ಜಗತ್ತನ್ನು ಬಿಟ್ಟು, ಏಕಾಂಗಿಯಾಗಿ ಮತ್ತೆಲ್ಲೋ ಸಾಗುತ್ತಿರುವ ಪೆಂಗ್ವಿನ್ ಅನ್ನು ಹಲವರು “ನಿರಾಕರಣವಾದಿ”, “ಶೂನ್ಯವಾದಿ” ಅಂತೆಲ್ಲ ಕರೆದರು. ಅಂತೂ ಗುಂಪಿನಲ್ಲಿ ಗೋವಿಂದವಾಗಬೇಕಿದ್ದ ಸಾಮಾನ್ಯ ಪಕ್ಷಿಯೊಂದು ಜಗತ್ತಿನಾದ್ಯಂತ ಎಲ್ಲರ ಬಾಯಿಯಲ್ಲಿ “ನಿಹಿಲಿಸ್ಟ್ ಪೆಂಗ್ವಿನ್” ಆಗಿ ಬದಲಾಗಿದ್ದು ಹೀಗೆ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ತಮಾಷೆಯ ಧಾಟಿಯಲ್ಲೇ ಬಹಳಷ್ಟು ಮಂದಿ ತಮ್ಮನ್ನು ತಾವು ಆ ಪೆಂಗ್ವಿನ್ ನೊಂದಿಗೆ ಗುರುತಿಸಿಕೊಂಡಿದ್ದು ಮತ್ತು ಈ ಮೂಲಕ ತಮ್ಮನ್ನೇ ಶೂನ್ಯವಾದಿ ಎಂದು ಕರೆದುಕೊಂಡಿದ್ದು. ಇಷ್ಟು ವರ್ಷಗಳ ಕಾಲ ನಾನು ಇದರ ಬಗ್ಗೆ ಯೋಚಿಸುತ್ತಿದ್ದೆ, ಆದರೆ ಈ ಪೆಂಗ್ವಿನ್ ಮಾಡಿ ತೋರಿಸಿದೆ ಎಂದು ಹಲವರು ಮಾತಾಡಿಕೊಂಡರು. ತಾವಿರುವ ವ್ಯವಸ್ಥೆಯ ಬಗ್ಗೆ ಭ್ರಮನಿರಸನಗಳಾಗುವುದು ಮನುಷ್ಯರಲ್ಲಿ ಸಾಮಾನ್ಯವಾಗಿರುವುದರಿಂದ ಅಲ್ಲೂ ಹಾಗಾಗಿರಬಹುದೇ ಎಂದು ಪೋಸ್ಟ್, ರೀಟ್ವೀಟು ಮತ್ತು ಲೇಖನಗಳಲ್ಲಿ ಜೋರು ಚರ್ಚೆಗಳಾದವು. ಒಟ್ಟಿನಲ್ಲಿ ನಿಹಿಲಿಸಂ (ನಿರಾಕರಣವಾದ) ಎಂಬ ಬಗ್ಗೆ ಅಷ್ಟಾಗಿ ಕೇಳಿರದಿದ್ದ ಮಂದಿಗೂ ಕೂಡ ಪೆಂಗ್ವಿನ್ನಿನ ನೆಪದಲ್ಲಿ ಈ ಪದದ ಪರಿಚಯವಾದಂತಾಯಿತು. ಇನ್ನು ಗೊತ್ತಿದ್ದು ಮರೆತುಹೋದ ನನ್ನಂಥವರಿಗೂ ಆ ಕಡೆ ಮತ್ತೆ ಹೊರಳುವಂತಾಯಿತು.
ಅಂದಹಾಗೆ ಈ ಪೆಂಗ್ವಿನ್ ಗಲಾಟೆಯಲ್ಲಿ ನಿಹಿಲಿಸಂ (ನಿರಾಕರಣವಾದ / ಶೂನ್ಯವಾದ) ಬಗ್ಗೆ ಗೂಗಲ್/ಚಾಟ್-ಜಿಪಿಟಿ ಮಾಡಿ ತಿಳಿದುಕೊಂಡವರಿಗೆ ಪದವು ಹೊಸತಾಗಿದ್ದರೂ ಭಾವವು ಹೊಸತೇನಲ್ಲ. ಈಗಿರುವ ಎಲ್ಲವನ್ನು ತೊರೆದು ಬೇರೆಯದೇ ಒಂದು ಹೊಸ ತಲಾಶೆಯಲ್ಲಿ ಹರಡುವುದು ನಮ್ಮೊಳಗಿನ ಸುಪ್ತಮನಸ್ಸಿನ ಮೋಹಕ ಕಲ್ಪನೆಗಳಲ್ಲೊಂದು. ಆದರೆ ಈ ಫ್ಯಾಂಟಸಿಯನ್ನು ರಿಯಾಲಿಟಿಯಾಗಿ ಪರಿವರ್ತಿಸಲು ಮಾತ್ರ ದೊಡ್ಡ ಮಟ್ಟಿನ ಧೈರ್ಯ, ಸಾಹಸ, ಇಚ್ಛಾಶಕ್ತಿಯ ಅಗತ್ಯವಿರುತ್ತದೆ. “ನಾವು ಬಯಸಿದಂತೆ ಬದುಕುವ ಸ್ವಾತಂತ್ರ್ಯವು ಯಾವತ್ತೂ ಭಯಾನಕ ಹೋರಾಟದ ಫಲವೇ ಹೊರತು ಸುಲಭಕ್ಕೆ ಸಿಗುವುದಿಲ್ಲ”, ಎಂದು ಬರೆಯುತ್ತಾರೆ ತೇಜಸ್ವಿ. ಇತ್ತ ಲೌಕಿಕದ ಎಲ್ಲವನ್ನು ಬಿಟ್ಟು ಅಲೌಕಿಕ ಶಕ್ತಿಯ ನೆರಳಿಗೆ ಹೋದರೂ “ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ”, ಎಂದು ಹಾಡುತ್ತಾರೆ ಕನಕದಾಸರು. ಅಷ್ಟರಮಟ್ಟಿಗೆ ಲೌಕಿಕ-ಅಲೌಕಿಕಗಳೆರಡರಲ್ಲೂ ಮನುಷ್ಯನು ಮತ್ತೇನನ್ನೋ ಬಯಸುತ್ತಿರುತ್ತಾನೆ. ಇರುವುದನ್ನು ದಾಟಿಹೋಗಲು ತವಕಿಸುತ್ತಾನೆ. ಇಲ್ಲಿರದ ಸುಖವು ಬೇರೆಲ್ಲೋ ಇದೆಯೇನೋ ಎಂದು ಹಂಬಲಿಸುತ್ತಿರುತ್ತಾನೆ.

ವಿಶ್ವವಿಖ್ಯಾತ “ಸೇಪಿಯನ್ಸ್” ಕೃತಿಯ ಲೇಖಕರೂ, ಈ ಶತಮಾನದ ಬಹುದೊಡ್ಡ ಚಿಂತಕರೂ ಆಗಿರುವ ಯುವಾಲ್ ನೋಆ ಹರಾರಿಯವರು ಮನುಷ್ಯನ ಈ ದ್ವಂದ್ವಗಳ ಬಗ್ಗೆ ಸ್ವಾರಸ್ಯಕರವಾಗಿ ಬರೆಯುತ್ತಾರೆ. ಇದಕ್ಕೊಂದು ಅತ್ಯುತ್ತಮ ಉದಾಹರಣೆಯೆಂದರೆ ಅಂದಾಜು 12,000 ವರ್ಷಗಳ ಹಿಂದೆ ನಡೆದಿರಬಹುದು ಎಂದು ಹೇಳಲಾಗುವ ಕೃಷಿ ಕ್ರಾಂತಿ. ಅಸಲಿಗೆ ಲಕ್ಷಗಟ್ಟಲೆ ವರ್ಷಗಳ ಕಾಲ ಅಲೆಮಾರಿಯಾಗಿದ್ದ ಮನುಷ್ಯ ನಿಧಾನವಾಗಿ ಒಂದೆಡೆ ನೆಲೆನಿಲ್ಲಲು ಆರಂಭಿಸಿದ. ಬರೋಬ್ಬರಿ 12,000 ವರ್ಷಗಳ ಹಿಂದೆ ಮಧ್ಯಪ್ರಾಚ್ಯದ ಭೂಭಾಗದಲ್ಲಿ ಮೊದಲ ಬಾರಿಗೆ ಗೋಧಿಯನ್ನು ಬೆಳೆಯತೊಡಗಿದಾಗ ಜಂಗಮವಾಗಿದ್ದ ಆದಿಮಾನವನು ಸ್ಥಾವರವಾಗುವುದು ಅನಿವಾರ್ಯವೂ ಆಗಿಹೋಯಿತು. ಕ್ರಮೇಣ ತನ್ನದೇ ಮನೆ, ಸಮುದಾಯ, ಹಳ್ಳಿ, ರಾಜ್ಯ, ದೇಶ, ಸಾಮ್ರಾಜ್ಯಗಳೆಂಬ ಪರಿಕಲ್ಪನೆಗಳು ಮೈದಾಳುತ್ತಾ ಹೋದಂತೆ, ಇವುಗಳೊಂದಿಗಿನ ಮೋಹವೂ ಮನುಷ್ಯನಿಗೆ ಹೆಚ್ಚುತ್ತಾ ಹೋಯಿತು.
ಇಲ್ಲಿಯ ಸ್ವಾರಸ್ಯವೆಂದರೆ ಆ ದಿನಗಳಲ್ಲಿ ಕೃಷಿಯು ಮನುಷ್ಯನ ಜೀವನವನ್ನು ಸಾಕಷ್ಟು ಸುಲಭವಾಗಿಸಿತು ಎಂದು ಇಪ್ಪತ್ತೊಂದನೇ ಶತಮಾನದಲ್ಲಿ ಜುಮ್ಮನೆ ಕೂತಿರುವ ನಾವು ಅಗತ್ಯಕ್ಕಿಂತ ಹೆಚ್ಚಾಗಿ ಸರಳೀಕರಿಸಿಬಿಡುವುದು. ಆದರೆ ಸಂಶೋಧಕರು ಹೇಳುವ ಪ್ರಕಾರ ನಿಜಾಂಶ ಬೇರೆಯೇ ಇತ್ತು. ಅಸಲಿಗೆ ಕೃಷಿಪ್ರಧಾನ ವ್ಯವಸ್ಥೆ ಆರಂಭವಾಗುವ ಹಿಂದಿದ್ದ ಮಾನವನು ಕೃಷಿ ಮಾಡುವವನಿಗಿಂತ ಹೆಚ್ಚು ಆರಾಮವಾಗಿದ್ದ. ಆಗೊಮ್ಮೆ ಈಗೊಮ್ಮೆ ಹುಲಿಯೋ, ಸಿಂಹವೋ ಮೈಮೇಲೆ ಎಗರಿ ಅದಕ್ಕೆ ಆಹಾರವಾಗಬಹುದು ಅನ್ನುವುದನ್ನು ಬಿಟ್ಟು ಆತನಿಗೆ ಹೆಚ್ಚಿನ ಭಯಗಳೇನೂ ಇರಲಿಲ್ಲ. ನಿರಂತರ ಓಡಾಟದಲ್ಲಿ ಹಸಿವು-ಬಾಯಾರಿಕೆಗಳು ನೀಗುತ್ತಿದ್ದವು. ಸಂತಾನೋತ್ಪತ್ತಿಗೆ ತನ್ನ ಬಳಗದ ಜೊತೆಯಿತ್ತು. ರೋಗಗಳು ಭಯ ಹುಟ್ಟಿಸುವಂತಿದ್ದರೂ ಸಾವು-ನೋವುಗಳು ಹಲವು ಕಾರಣಗಳಿಂದಾಗಿ ಆ ದಿನಗಳಲ್ಲಿ ಸಾಮಾನ್ಯವಾಗಿದ್ದವು. ಹೀಗೆ ಬೆರಳೆಣಿಕೆಯ ಕೆಲ ಸಂಗತಿಗಳನ್ನು ಹೊರತುಪಡಿಸಿ ದೀರ್ಘಕಾಲ ತಲೆಕೆಡಿಸಿಕೊಳ್ಳುವಂಥದ್ದೇನೂ ಆ ಕಾಲದ ಮಾನವನಿಗಿರಲಿಲ್ಲ.
ಆದರೆ ಕೃಷಿಯ ಆರಂಭದ ನಂತರದಲ್ಲಿ ಮಾತ್ರ ಇದು ತಲೆಕೆಳಗಾಗಿಬಿಟ್ಟಿತು. ಮೊಟ್ಟಮೊದಲ ಬಾರಿಗೆ ಮಾನವನು ಅಲೆಮಾರಿಯಾಗುವುದನ್ನು ಸಂಪೂರ್ಣವಾಗಿ ನಿಲ್ಲಿಸಿ ಒಂದೆಡೆ ನೆಲೆ ನಿಲ್ಲಬೇಕಾಯಿತು. ಇದು ಏಕಾಏಕಿ ಆಗದಿದ್ದರೂ ತಿರುಗಾಟದ ಪ್ರಮಾಣವು ಹಿಂದಿಗಿಂತ ಬಹಳಷ್ಟು ಕಡಿಮೆಯಾಯಿತು ಅಂತ ಅಂದಾಜಿಸುತ್ತಾರೆ ತಜ್ಞರು. ಕೃಷಿಗಾಗಿ ಭೂಮಿಯನ್ನು ಸಮತಟ್ಟುಗೊಳಿಸುವುದು, ಉಳುವುದು, ಬೀಜ-ಬಿತ್ತನೆ, ನೀರಿನ ವ್ಯವಸ್ಥೆಯನ್ನು ಸಿದ್ಧಪಡಿಸುವುದು, ನೀರನ್ನು ಹೊತ್ತು ತರುವುದು… ಹೀಗೆ ಅಪಾರ ದೈಹಿಕ ಶ್ರಮವನ್ನು ಬೇಡುವ ಹಲವಾರು ಕೆಲಸಗಳು ಹೊಸದಾಗಿ ಹುಟ್ಟಿಕೊಂಡವು. ಕೃಷಿಭೂಮಿಯ ನಿರಂತರ ಪೋಷಣೆಗಾಗಿ ಪಕ್ಕದಲ್ಲೇ ಡೇರೆಗಳನ್ನು ಹಾಕಬೇಕಾಯಿತು. ಪೈರುಗಳನ್ನು ಕಾಡುಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಕಾವಲು ಕಾಯಬೇಕಾಯಿತು. ಕೀಟಗಳಿಂದ ಬೆಳೆಯನ್ನು ರಕ್ಷಿಸಲು ಮತ್ತಷ್ಟು ಕಸರತ್ತುಗಳನ್ನು ಮಾಡಬೇಕಿತ್ತು.
ಎಲ್ಲಕ್ಕಿಂತ ಮಿಗಿಲಾಗಿ ಮಾನವ ಇದೇ ಮೊದಲ ಬಾರಿಗೆ ಭವಿಷ್ಯದ ಬಗ್ಗೆ ಯೋಚಿಸತೊಡಗಿದ್ದ. ಇಂದು ಬಿತ್ತಿದರೆ ನಾಳೆ ಫಲ ಸಿಗಲಿದೆ ಎಂಬ ಹೊಸ ಯೋಚನೆಯೇ ಕೊಂಚ ಸಾಹಸ ಮತ್ತು ಗೊಂದಲದ್ದಾಗಿತ್ತು. ಏಕೆಂದರೆ ಬಿತ್ತಿದ್ದೆಲ್ಲ ಫಸಲಾಗಲೇಬೇಕು ಅಂತಿಲ್ಲವಲ್ಲ. ಇನ್ನು ಕೃಷಿಯ ಒಟ್ಟಾರೆ ಫಲಿತಾಂಶದ ಬಗ್ಗೆ ಸಂಪೂರ್ಣ ನಿಯಂತ್ರಣವೂ ಅವನ ಕೈಯಲ್ಲಿರದ ಕಾರಣದಿಂದಾಗಿ ಇಡೀ ಪ್ರಕ್ರಿಯೆಯೇ ಅನಿಶ್ಚಿತತೆಯಿಂದ ಕೂಡಿತ್ತು. ಇವೆಲ್ಲದರ ಹೊರತಾಗಿಯೂ ನಮ್ಮ ಪೂರ್ವಜರು ಭಯಂಕರ ಹೋರಾಟವೆಂಬಂತೆ ಕೃಷಿ ಮಾಡಿದರು. ಇಂದಲ್ಲ ನಾಳೆ ಒಳ್ಳೆಯದು ಆಗಿಯೇ ಆಗುತ್ತೆ ಎಂದು ಅವುಡುಗಚ್ಚಿ ಮೈಮುರಿದು ದುಡಿಯುತ್ತಾ ಮಣ್ಣಿನ ಮಕ್ಕಳಾದರು.

ಇದರಿಂದಾದ ದೊಡ್ಡ ಪ್ರಯೋಜನವೆಂದರೆ ಕುಪೋಷಣೆ ಮತ್ತು ಆಹಾರದ ಕೊರತೆಯಿಂದಾಗಿ ಸಾಯುತ್ತಿದ್ದ ಮಕ್ಕಳನ್ನು ಉಳಿಸಿಕೊಳ್ಳಲು ಈ ಮಂದಿ ತಕ್ಕಮಟ್ಟಿಗೆ ಯಶಸ್ವಿಯಾಗಿದ್ದು. ಕ್ರಮೇಣ ಇದರಿಂದಾಗಿ ಜನಸಂಖ್ಯೆಯೂ ದೊಡ್ಡ ಪ್ರಮಾಣದಲ್ಲಿ ಹೆಚ್ಚಲು ಪ್ರಾರಂಭವಾಯಿತು. ಜೊತೆಗೇ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಕೃಷಿಯನ್ನು ದೊಡ್ಡ ಮಟ್ಟದಲ್ಲಿ ವಿಸ್ತರಿಸುವುದು ಆಯಾ ಸಮಾಜಗಳಿಗೆ ಅನಿವಾರ್ಯವಾಗಿಬಿಟ್ಟಿತು. ಅಂತೂ ಈ ಸುದೀರ್ಘ ಮತ್ತು ಅಂತ್ಯವಿಲ್ಲದಂತೆ ಕಾಣುವ ಪ್ರಕ್ರಿಯೆಯಲ್ಲಿ ಹಲವು ಪೀಳಿಗೆಗಳು ಮೂಡಿ-ಮರೆಯಾಗಿ, ನಂತರ ಬಂದ ಹೊಸ ಪೀಳಿಗೆಯ ಮಂದಿಗೆ ಈಗ ಅಲೆಮಾರಿಯಾಗಿ ಬದುಕುವುದು ಅಸಾಧ್ಯವೆಂಬಷ್ಟು ಮರೆತುಹೋಗಿತ್ತು. ಹೀಗಾಗಿ ತಮ್ಮನ್ನು ತಾವು ಕೃಷಿಪ್ರಧಾನ ವ್ಯವಸ್ಥೆಗೆ ಎಲ್ಲರಂತೆ ಒಡ್ಡಿಕೊಳ್ಳುವುದನ್ನು ಬಿಟ್ಟು ಬೇರೆ ಯಾವ ಆಯ್ಕೆಗಳೇ ಅವರಿಗಿರಲಿಲ್ಲ.
ಇದರ ವಿವಿಧ ಆಯಾಮಗಳು ಅದೇನೇ ಇರಲಿ. ಒಟ್ಟಿನಲ್ಲಿ ಆಗಿದ್ದೇನೆಂದರೆ ತಾನು ಸೃಷ್ಟಿಸಿಕೊಂಡ ಸಂಕೀರ್ಣ ಲೋಕವೊಂದರಲ್ಲಿ ಮನುಷ್ಯ ತಾನಾಗಿಯೇ ಸಿಲುಕಿಕೊಂಡಿದ್ದ. ಒಂದು ಹಂತದ ನಂತರ ತಾನು ಸ್ವತಃ ಬಯಸಿದರೂ ಆ ವ್ಯವಸ್ಥೆಯಿಂದ ಬೇರೆಯಾಗುವ ಸಾಮರ್ಥ್ಯವು ಅವನಲ್ಲಿ ಉಳಿದಿರಲಿಲ್ಲ. ವಿಶೇಷವೆಂದರೆ ಮಾನವನ ಈ ಪ್ರವೃತ್ತಿಯು ಮುಂದಿನ ಕಾಲಮಾನದಲ್ಲೂ ಇದೇ ಮಾದರಿಯಲ್ಲಿ ಮುಂದುವರಿಯಿತು. ಇಂದು ಇಂಜಿನಿಯರಿಂಗ್ / ವೈದ್ಯಕೀಯ / ವಕೀಲಿಕೆಯನ್ನು ಓದುತ್ತಿರುವ ವಿದ್ಯಾರ್ಥಿಯೊಬ್ಬ ತನ್ನ ವಿದ್ಯಾಭ್ಯಾಸ ಮುಗಿದ ಬೆನ್ನಲ್ಲೇ ವಾರ್ಷಿಕ 10-25 ಲಕ್ಷ ರೂಪಾಯಿ ಆದಾಯವಿರುವ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿ ಸೇರಿಕೊಳ್ಳುವ ಕನಸು ಕಾಣುತ್ತಾನೆ. ಹೀಗೆ ದೊಡ್ಡ ಸಂಬಳದ ವೃತ್ತಿಯೊಂದಕ್ಕೆ ಸೇರಿಕೊಂಡು 35-40ರ ವಯಸ್ಸಿನಲ್ಲೇ ನಿವೃತ್ತಿ ತೆಗೆದುಕೊಂಡು ಹಾಯಾಗಿರಬಹುದು ಎಂಬ ಲೆಕ್ಕಾಚಾರ ಅವನದ್ದು.
ಆದರೆ 35-40ರ ವಯಸ್ಸಿಗೆ ಬರುವಷ್ಟರಲ್ಲಿ ಉಬ್ಬಿರುವ ಬ್ಯಾಂಕ್ ಬ್ಯಾಲೆನ್ಸ್ ಜೊತೆಗೆ ಆತನ ಜವಾಬ್ದಾರಿಗಳೂ ಹೆಚ್ಚಾಗಿರುತ್ತವೆ. ನಾಲ್ಕಾರು ಸಾಲಗಳು, ಮುಗಿಯದಂತೆ ಕಾಣುವ ಸಾಲದ ಕಂತುಗಳು, ಇನ್ನೂ ಫಲ ನೀಡದ ಹೂಡಿಕೆಗಳು, ಕುಟುಂಬದ ಪೋಷಣೆ, ಮಕ್ಕಳ ವಿದ್ಯಾಭ್ಯಾಸ, ಹಿರಿಯರ ಆರೈಕೆ, ಭಡ್ತಿಯ ಗಳಿಕೆ-ಸಾಮಾಜಿಕ ಸ್ಥಾನಮಾನಗಳ ಉಳಿಕೆಯ ಕಡೆಗಿರುವ ಒತ್ತಡ, ಭರಿಸಬೇಕಾಗಿರುವ ಬಿಲ್ಲುಗಳು, ತೆರಬೇಕಾಗಿರುವ ತೆರಿಗೆಗಳು… ಹೀಗೆ ಹತ್ತಾರು ಸಂಗತಿಗಳು ಹೆಬ್ಬಾವಿನಂತೆ ಸುತ್ತಿಕೊಂಡು ಉಸಿರುಗಟ್ಟಿಸಲು ತೊಡಗಿರುತ್ತವೆ. ಈ ಅಂತ್ಯವಿಲ್ಲದ ಜವಾಬ್ದಾರಿ-ಜಂಜಾಟಗಳನ್ನು ತೊರೆದು ಎಲ್ಲಿಗಾದರೂ ಹೋಗಿಬಿಡೋಣ ಅಂತ ಒಂದರೆಕ್ಷಣ ಅನಿಸಿದರೂ ನೈಜಸ್ಥಿತಿ ಬೇರೆಯದನ್ನೇ ಮುಖಕ್ಕೆ ರಾಚುತ್ತಿರುತ್ತದೆ. ನೀನೊಬ್ಬ ಬಲಹೀನ ಎಂದು ತಣ್ಣಗೆ ಹೆದರಿಸುತ್ತಿರುತ್ತದೆ. ದಾಸರ “ಬೊಂಬೆಯಾಟವಯ್ಯಾ” ಹಾಡು ತನ್ನ ಬದುಕಿನದ್ದೇ ಅಂತ ಮತ್ತೊಮ್ಮೆ ಸಾಬೀತಾಗುತ್ತದೆ.
ಆವಾಗಲೇ ಬರ್ನೌಟ್ ಎಂಬುದು ಭೂತದಂತೆ ಬೆನ್ನು ಬೀಳುತ್ತದೆ. ಒತ್ತಡಗಳು ಇನ್ನಿಲ್ಲದಂತೆ ಕಾಡತೊಡಗುತ್ತವೆ. ಖಾಯಿಲೆಗಳು ದಿನಚರಿಯಾಗತೊಡಗುತ್ತವೆ. ಎಲ್ಲವನ್ನೂ ನಿರಾಕರಿಸಿ ಆ ಪೆಂಗ್ವಿನ್ ಎದ್ದುಹೋದಂತೆ ಹೋಗಿಬಿಡೋಣ ಅನ್ನಿಸುತ್ತದೆ. ಹೀಗೆ “ನಿಹಿಲಿಸ್ಟ್ ಪೆಂಗ್ವಿನ್” ಅಂತೆಲ್ಲ ಹೇಳುತ್ತಾ ಬಹಳಷ್ಟು ಮಂದಿ ತಮ್ಮ ಬರ್ನೌಟ್ ಕತೆಗಳನ್ನೇ ತೆರೆದಿಡುತ್ತಿದ್ದರು. ಸ್ವತಃ ಜಗತ್ತಿನ ಅತ್ಯದ್ಭುತ ಮಹಾನಗರಗಳಲ್ಲಿ ವಾಸಿಸುತ್ತಿದ್ದರೂ ಬದುಕು ಹೇಗೆ ಅಗೋಚರ ಬಂಧ-ಸಿಕ್ಕುಗಳಲ್ಲಿ ಕಳೆದುಹೋಗಿದೆ ಎಂದು ನಿಡುಸುಯ್ಯುತ್ತಿದ್ದರು. ಶೂನ್ಯವೆಂದರೇನು, ಶೂನ್ಯದ ನಂತರ ಮುಂದೇನು ಎಂಬ ಬಗ್ಗೆ ಅಂಥಾ ಸ್ಪಷ್ಟತೆಯಿರದಿದ್ದರೂ, ಸದ್ಯ ಇಲ್ಲಿಯ ಗೋಜಲುಗಳಿಂದ ಮುಕ್ತರಾದರೆ ಸಾಕಪ್ಪ ಎಂಬ ಹಂಬಲವೇ ಅವರಲ್ಲಿ ಎದ್ದು ಕಾಣುತ್ತಿತ್ತು.
ಆದರೆ ಹರಾರಿ ಹೇಳುವ ಪ್ರಕಾರ ಇದಕ್ಕೆ ಪರಿಹಾರವೂ ಅಷ್ಟು ಸುಲಭದ್ದಲ್ಲ. “ಆ ಕಾಲದ ಆದಿಮಾನವನಿಗೆ ಹೆಚ್ಚು ಕ್ಯಾಲೋರಿಯ ಆಹಾರ ಸಿಗುವುದು ಬಹಳ ಅಪರೂಪವಾಗಿತ್ತು. ಹೀಗಾಗಿ ಅಪರೂಪಕ್ಕೆ ಸಿಕ್ಕಾಗಲೆಲ್ಲ ಅವುಗಳನ್ನು ಗಬಗಬನೆ ತಿನ್ನುತ್ತಿದ್ದ. ನಮ್ಮ ಫ್ರಿಡ್ಜಿನಲ್ಲಿಟ್ಟಿರುವ ಒಂದಿಡೀ ಐಸ್-ಕ್ರೀಂ ಟಬ್ಬನ್ನು (ಅದು ತಪ್ಪೆಂದು ತಿಳಿದಿದ್ದರೂ) ಒಂದೇ ಏಟಿಗೆ ತಿಂದು ಮುಗಿಸುವ ನಮ್ಮ ಹಪಾಹಪಿ ಕೂಡ ಈ ಬಗೆಯದ್ದೇ”, ಎಂದು ಒಂದು ಕಡೆ ಬರೆಯುತ್ತಾರೆ ಹರಾರಿ. ಅಂದರೆ ಒಂದು ಲಕ್ಷ ವರ್ಷಗಳ ಹಿಂದೆ ಬದುಕುತ್ತಿದ್ದ ಆದಿಮಾನವನು ಯೋಚಿಸುತ್ತಿದ್ದ ಶೈಲಿಗೂ, ಇಂದಿನ ನಮ್ಮ ಯೋಚನಾಶೈಲಿಗೂ ಹೆಚ್ಚಿನ ಬದಲಾವಣೆಗಳೇನಿಲ್ಲ ಎಂಬುದು ಅವರ ವಾದ.
ಒಟ್ಟಿನಲ್ಲಿ ಮಾನವ ಜನಾಂಗದ ಅಸ್ತಿತ್ವವು ಇರುವವರೆಗೂ ಮಾನವನಿಗೆ ಈ ದ್ವಂದ್ವದಿಂದ ಮುಕ್ತಿಯಿರುವಂತೆ ಕಾಣುತ್ತಿಲ್ಲ. ಹೊಸ ಪರಿಧಿಗಳನ್ನು ಸೃಷ್ಟಿಸುತ್ತಾ ಹೋದಂತೆ ಅವುಗಳಿಂದ ಕಳಚಿಕೊಳ್ಳುವ ಹಂಬಲವೂ ಅವನಲ್ಲಿ ಹೆಚ್ಚುತ್ತಾ ಹೋಗಲಿದೆ. ಇವೆಲ್ಲದರಾಚೆಗಿನ ನಿರಾಕರಣವಾದವಾದರೂ ಯಾವುದು ಎಂಬುದು ನನ್ನ ಸದ್ಯದ ಅಚ್ಚರಿ!
ಪ್ರಸಾದ್ ನಾಯ್ಕ್, ದೆಹಲಿ
ಇದನ್ನೂ ಓದಿ- ಯುಜಿಸಿ ಅಧಿಸೂಚನೆಗೆ ಮೇಲ್ಜಾತಿಗಳ ಆಕ್ರೋಶ | ಮರೆಯಲ್ಲಿ ಮನುವಾದಿಗಳ ಷಡ್ಯಂತ್ರ


