ಬೆಂಗಳೂರಿನ ನ್ಯಾಷನಲ್ ಕಾಲೇಜಿನ ಪ್ರಾಧ್ಯಾಪಕರಾದ ಡಾ. ರವಿಕುಮಾರ್ ಬಾಗಿ ಅವರನ್ನು ಬಸವನಗುಡಿ ಡಿಗ್ರಿ ಕಾಲೇಜಿನಿಂದ ಜಯನಗರದಲ್ಲಿರುವ ಪಿಯು ಕಾಲೇಜಿಗೆ ವಿನಾಕಾರಣ ಡಿಮೋಶನ್ ವರ್ಗಾವಣೆ ಮಾಡಿದ್ದ ಕುರಿತು ನಾಡಿನ ಪ್ರಜ್ಞಾವಂತ ಚಿಂತಕರು ಎನ್ ಇ ಎಸ್ ಆಡಳಿತ ಮಂಡಳಿಯೊಂದಿಗೆ ಎರಡು ತಾಸುಗಳ ಕಾಲ ಮಾತುಕತೆ ನಡೆಸಿ ನ್ಯಾಯ ದೊರಕಿಸಿಕೊಡುವಲ್ಲಿ ಯಶಸ್ವಿಯಾದರು. ಎರಡೂ ಕಡೆಯ ಮಾತುಕತೆಗಳ ನಂತರ ಆಡಳಿತ ಮಂಡಳಿ ಡಾ. ರವಿ ಬಾಗಿಯವರನ್ನು ಅವರ ಬೇಡಿಕೆಯಂತೆ ಬಸವನಗುಡಿ ಡಿಗ್ರಿ ಕಾಲೇಜಿನಲ್ಲೇ ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ಶೀಘ್ರವಾಗಿ ತೀರ್ಮಾನ ತೆಗೆದುಕೊಳ್ಳುವ ಭರವಸೆ ನೀಡಿದರು.
ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ. ರವಿಕುಮಾರ್ ಬಾಗಿ ಅವರನ್ನು ಕಾಲೇಜಿನ ಆಡಳಿತ ಮಂಡಳಿ ಯಾವುದೇ ಕಾರಣ ನೀಡದೆ ಡಿಗ್ರಿ ಕಾಲೇಜಿನಿಂದ ಕೆಲ ದಿನಗಳ ಹಿಂದೆ ಪಿಯು ಕಾಲೇಜಿಗೆ ವರ್ಗಾವಣೆ ಮಾಡಿತ್ತು.
ಈ ಕುರಿತು ಅವರು ಕಾಲೇಜಿನ ಆಡಳಿತ ಮಂಡಳಿಯವರನ್ನು ಕೇಳಿದಾಗ ಯಾವುದೇ ಉತ್ತರ ನೀಡದೆ ನಿರ್ಲಕ್ಷ್ಯ ಮಾಡಿದ್ದ ಕುರಿತು ರವಿಕುಮಾರ್ ಆರೋಪಿಸಿದ್ದರು. ಈ ವಿಷಯವಾಗಿ ಕರ್ನಾಟಕದ ಪ್ರಜ್ಞಾವಂತ ಚಿಂತಕರು, ಪ್ರಗತಿಪರ ಸಂಘಟನೆಗಳ ಪ್ರತಿನಿಧಿಗಳು ಎರಡು ಸಲ ಮಾತುಕತೆ ನಡೆಸಿದ್ದಾರೆ.
ಕಳೆದ ಶುಕ್ರವಾರ ನಡೆದ ಸಭೆಯಲ್ಲಿ ನ್ಯಾಯ ನೀಡುವ ಭರವಸೆ ನೀಡಿದ್ದರೂ ಸೋಮವಾರ ಆಡಳಿತ ಮಂಡಳಿ ರವಿಯವರನ್ನು ಜಯನಗರ ಡಿಗ್ರಿ ಕಾಲೇಜಿಗೆ ವರ್ಗಾಯಿಸುವ ತೀರ್ಮಾನ ತೆಗೆದು ಕೊಂಡಿತ್ತು. ಹೀಗೆ ಮಾಡುವುದರಿಂದ ಡಾ. ರವಿಕುಮಾರ್ ಅವರಿಗೆ ಪಿ ಎಚ್ ಡಿ ಮಾರ್ಗದರ್ಶಕರಾಗುವ ಅವಕಾಶ ತಪ್ಪಿ ಹೋಗುವುದರಿಂದ ಇಂದು ಮತ್ತೊಂದು ಸುತ್ತಿನ ಮಾತುಕತೆ ನಡೆಯಿತು. ಒಂದು ಹಂತದಲ್ಲಿ ಒಂದು ತಾಸು ಕಾಲ ಎಲ್ಲರನ್ನೂ ಆಡಳಿತ ಮಂಡಳಿ ಕಾಲೇಜಿನ ಹೊರಗೆ ನಿಲ್ಲಿಸಿ, ಪೊಲೀಸರ ಮೂಲಕ ನಿಯಂತ್ರಿಸಿದ ಕಾರಣ ಮಾತಿನ ಚಕಮಕಿ ನಡೆಯಿತು. ನಂತರ ಮತ್ತೆ ಎಲ್ಲರನ್ನೂ ಎಚ್ ನರಸಿಂಹಯ್ಯ ಸಭಾಂಗಣದಲ್ಲಿ ಕೂರಿಸಿ ಮಾತುಕತೆ ನಡೆಸಲಾಯಿತು.
ನ್ಯಾಯವಾದಿಗಳಾದ ಸಿ ಎಸ್ ದ್ವಾರಕನಾಥ್, ಸಾಹಿತಿಗಳಾದ ಬಂಜಗೆರೆ ಜಯಪ್ರಕಾಶ್, ಅಗ್ರಹಾರ ಕೃಷ್ಣಮೂರ್ತಿ, ದಲಿತ ಮುಖಂಡರಾದ ಮಾವಳ್ಳಿ ಶಂಕರ್, ಜಿ ಎನ್ ನಾಗರಾಜ್, ಹಿರಿಯ ಪತ್ರಕರ್ತರಾದ ಬಿ ಸಿ ಬಸವರಾಜ್, ದೊಡ್ಡಿಪಾಳ್ಯ ನರಸಿಂಹಮೂರ್ತಿ, ಶ್ರೀಪಾದ್ ಭಟ್, ಗೌರಿ, ಹರ್ಷಕುಮಾರ್ ಕುಗ್ವೆ, ಡಾ. ಹುಲಿಕುಂಟೆ ಮೂರ್ತಿ, ಡಾ. ದೇವರಾಜ್, ಡಾ. ಪ್ರಕಾಶ್ ಮಂಟೇದ, ರಾಮಕೃಷ್ಣ, ನಾಗೇಶ್, ಅಶ್ವಿನಿ ಮತ್ತಿತರರು ಭಾಗಿಯಾಗಿದ್ದರು. ಕಾಲೇಜಿನ ಆಡಳಿತ ಮಂಡಳಿಯ ವೆಂಕಟಶಿವಾ ರೆಡ್ಡಿ, ಅರುಣ್ ಕುಮಾರ್ ಮತ್ತು ಕೆಲವರು ಪಾಲ್ಗೊಂಡಿದ್ದರು.