ಕೃಷಿಕರ ಪಾಲಿಗೆ ನಿರಾಶಾದಾಯಕ ಬಜೆಟ್:‌ ಚಲುವರಾಯಸ್ವಾಮಿ

Most read

ಬೆಂಗಳೂರು: ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ 2025 -26ನೇ ಸಾಲಿನ    ಕೇಂದ್ರ ಬಜೆಟ್ ಕೃಷಿಕರ ಪಾಲಿಗೆ ನಿರಾಶಾದಾಯಕವಾಗಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ. ಈ ಬಾರಿಯೂ ಕೇಂದ್ರ ಬಜೆಟ್ ನಲ್ಲಿ ರೈತರು, ಕೃಷಿ ಕ್ಷೇತ್ರವನ್ನು ನಿರ್ಲಕ್ಷಿಸಲಾಗಿದೆ, ಕೃಷಿಗೆ ಕಡಿಮೆ ಆದ್ಯತೆ ನೀಡಲಾಗಿದೆ ಎಂದಿದ್ದಾರೆ.

ಕೃಷಿ ವೈಜ್ಞಾನಿಕ ಸಂಶೋಧನೆಗಳಿಗೆ ಸಾಕಷ್ಟು ಹಣಕಾಸು ಒದಗಿಸಲಾಗಿಲ್ಲ, ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಮಾರ್ಗಗಳನ್ನು ಅಭಿವೃದ್ಧಿಪಡಿಸಲು ಹಣಕಾಸು ನೀಡಲಾಗಿಲ್ಲ. ಪ್ರಮುಖ ಆಹಾರ, ತರಕಾರಿ ಮತ್ತು ಹಣ್ಣಿನ ಬೆಳೆಗಳಿಗೆ ಮಂಡಳಿಗಳನ್ನು ರಚಿಸಬೇಕೆಂಬ ಬೇಡಿಕೆ ನಿರೀಕ್ಷೆಯಾಗಿಯೇ ಉಳಿದಿದೆ. ರಸಗೊಬ್ಬರಗಳ ಬೆಲೆ ಇಳಿಕೆ ಮಾಡಲಾಗುವ ನಿರೀಕ್ಷೆ ಹುಸಿಯಾಗಿದೆ. ಆರ್.ಕೆ.ವಿ.ವೈ ಯೋಜನೆಯ ಅನುದಾನ ಕಡಿತಗೊಳಿಸಲಾಗಿದ್ದು, ರಾಜ್ಯಗಳಿಗೆ ಅನ್ಯಾಯವಾಗಿದೆ ಎಂದು  ಸಚಿವರು ತಿಳಿಸಿದ್ದಾರೆ.

ಕೃಷಿ ವಲಯಕ್ಕೆ ನಬಾರ್ಡ್ ನಲ್ಲಿ ನೀಡಲಾಗುವ ಅನುದಾನ ಕಡಿಮೆಯಾಗಿದ್ದು, ಕರ್ನಾಟಕ ರಾಜ್ಯವನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಕೃಷಿ ಮೂಲಭೂತ ಸೌಕರ್ಯ ವಲಯಕ್ಕೆ ಆದ್ಯತೆ ನೀಡಿಲ್ಲ. ಸಿರಿಧಾನ್ಯಕ್ಕೆ ಪ್ರೋತ್ಸಾಹ ನೀಡಬೇಕೆಂಬ ರಾಜ್ಯ ಸರ್ಕಾರದ ಮನವಿಯ ಬಗ್ಗೆ ಹೆಚ್ಚಿನ ಗಮನ ಹರಿಸಿಲ್ಲ. ಆಹಾರ ಸಂಸ್ಕರಣೆ ರಫ್ತು ಉತ್ತೇಜನಕ್ಕೆ ಪ್ರೋತ್ಸಾಹಕರ ಹೊಸ ಯೋಜನೆಗಳಿಲ್ಲ ಎಂದು ಅವರು ಅವಲೋಕಿಸಿದ್ದಾರೆ

ಕಳೆದ ಬಜೆಟ್ನಲ್ಲಿ ಘೋಷಣೆಯಾಗಿದ್ದ ಅಗ್ರಿ ಡಿಜಿಟಲ್ ಇಂಡಿಯಾ ಪ್ರಗತಿ ಕಂಡಿಲ್ಲ ಈ ಬಾರಿ ಬಜೆಟ್ನಲ್ಲಿ ಇದು ಮಾಯವಾಗಿದೆ. ಕೃಷಿ ಮೂಲಭೂತ ಸೌಕರ್ಯ ನಿಧಿಗೆ ಸರಿಯಾದ ಅನುಷ್ಠಾನ ಯೋಗ್ಯವಲ್ಲದ ನೀತಿ ಇರುವುದರಿಂದ ಯಾವುದೇ ರಾಜ್ಯದಲ್ಲಿ ಸರಿಯಾಗಿ ಅನುಷ್ಠಾನ ಕಂಡಿಲ್ಲ.  ಅನುಷ್ಠಾನ ಯೋಗ್ಯ ಯೋಜನೆ ರೂಪಿಸುವ ಆಶಯವಿತ್ತು, ಆದರೆ ನಿರಾಸೆಯಾಗಿದೆ ಎಂದು ಅವರು ತಿಳಿಸಿದ್ದಾರೆ

More articles

Latest article