ಶಿಕ್ಷಣೋದ್ಯಮದ ದುಷ್ಪರಿಣಾಮಗಳು

Most read

ಕಾಲದ ಧಾವಂತ ಹೇಗಿದೆ ಅಂದರೆ ಈಗಿನ ಪೀಳಿಗೆಗೆ ತಮ್ಮ ಹಿರಿಯರ ಹೋರಾಟದ ಹಿನ್ನೆಲೆಯ ಪರಿಚಯ ಇಲ್ಲ. ಜನಪದ ಕಥಾನಕವಾಗಿ ಸಮಾಜವಾದಿ ಹೋರಾಟ ಬರಲೇ ಇಲ್ಲ. ಸಮಾಜವಾದ, ಲೋಹಿಯಾ, ಗೋಪಾಲ ಗೌಡರು, ಕಾಗೋಡು ಸತ್ಯಾಗ್ರಹ ಇವುಗಳೆಲ್ಲಾ ಪಠ್ಯದಲ್ಲಿ ಉರುಹೊಡೆಯುವ ಅಕ್ಷರಗಳಾಗಿ ಕುಳಿತಿವೆ. ನಿಜ ಇತಿಹಾಸದ ಮರೆವು ಒಂದು ಪೀಳಿಗೆಯನ್ನು ಎಷ್ಟು ದುರ್ಬಲಗೊಳಿಸುತ್ತದೆ ಎಂದರೆ ಅದು ಅತೀ ಸುಲಭವಾಗಿ ವ್ಯವಸ್ಥೆ ಒಡ್ಡುವ ಉರುಳಿಗೆ ಕತ್ತನ್ನು ಚಾಚುತ್ತದೆ -ವೃಂದಾ ಹೆಗ್ಡೆ , ಉಪನ್ಯಾಸಕರು.

ಎರಡು ವಿಶ್ವವಿದ್ಯಾಲಯಗಳು  ಮತ್ತು ಒಂದು ವಿಶ್ವವಿದ್ಯಾಲಯ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮಕ್ಕೆ ಒಂದು ಸರ್ಕಾರಿ ಕಾಲೇಜಿನ ಉಪನ್ಯಾಸಕರು ಮತ್ತು ವಿಭಾಗದ ಮುಖ್ಯಸ್ಥರು ವಿದ್ಯಾರ್ಥಿಗಳನ್ನು ಕಳಿಸುವ ನಿರ್ಧಾರ ಮಾಡುತ್ತಾರೆ. ಆದರೆ ಪ್ರಾಂಶುಪಾಲರು ಅನುಮತಿ ನಿರಾಕರಿಸುತ್ತಾರೆ. ಅವರು ಕೊಡುವ ಕಾರಣವು ಪ್ರಸ್ತುತ ಶಿಕ್ಷಣ ವ್ಯವಸ್ಥೆಯನ್ನು ಪ್ರತಿಫಲಿಸುವಂತಿರುತ್ತದೆ. ”ಸುಮ್ಮನೆ ಹೋಗಿ ಉಪನ್ಯಾಸ ಕೇಳಿ ಬರುವುದರಿಂದ ನಮಗೆ ಆಗುವ ಲಾಭ ಏನು? ಮಕ್ಕಳು ಮತ್ತು ನೀವು ಅಲ್ಲಿ ಪೇಪರ್ ಪ್ರೆಸೆಂಟ್ ಮಾಡುತ್ತೀರಾದರೆ ಹೋಗಿ. ಆ ಕಾಲೇಜಿನವರು ತಮ್ಮ ಅವಶ್ಯಕತೆಗಾಗಿ ಕಾರ್ಯಕ್ರಮ ಮಾಡಿಕೊಳ್ಳುತ್ತಿದ್ದಾರೆ. ನೀವ್ಯಾಕೆ ಅವರನ್ನು ಉದ್ಧಾರ ಮಾಡ್ತೀರಾ? ನಮ್ಮ ಕಾಲೇಜಿನಲ್ಲಿ ಅಂತಾ ಕಾರ್ಯಕ್ರಮ ಮಾಡಲು ಪ್ರಯತ್ನಿಸಿ. ಮಕ್ಕಳು ಮತ್ತು ನೀವು ಪೇಪರ್ ಪ್ರೆಸೆಂಟ್ ಮಾಡುವುದು, ಪಬ್ಲಿಶ್ ಮಾಡುವುದರತ್ತ ಗಮನ ಹರಿಸಿ ಹೋಗಿ”. ಇದು ಒಂದು ಪದವಿ ಕಾಲೇಜಿನ ಪ್ರಾಂಶುಪಾಲರಿಂದ ಬರಬಾರದ ಆದರೆ ಸಹಜವೆಂಬಂತೆ ಹೊರಬರುವ ಪ್ರತಿಸ್ಪಂದನೆ!!!

ಕಾಲೇಜುಗಳಲ್ಲಿ ಪಾಠ ಪ್ರವಚನಗಳು ಏಕತಾನತೆಯಿಂದ ಸೊರಗಿ ಹೋಗುತ್ತಿವೆ. ಮಕ್ಕಳಲ್ಲಿ ಓದುವ ಆಸಕ್ತಿ ಹುಟ್ಟಿಸಲು ಕೆಲವೇ ಕೆಲವು ಶಿಕ್ಷಕರು ನಾನಾ ರೀತಿಯ ಸರ್ಕಸ್ ಮಾಡುತ್ತಿದ್ದಾರೆ. ಪ್ರಸ್ತುತ ಕಾಲದ ಆಕರ್ಷಣೆಗಳಿಂದ ಮಕ್ಕಳನ್ನು ವಿಮುಖರಾಗಿಸಿ, ರಚನಾತ್ಮಕವಾಗಿ ಯೋಚಿಸುವ ಕ್ರಿಯಾಶೀಲ ವ್ಯಕ್ತಿಗಳಾಗಿ ರೂಪಿಸಲು ವಿವಿಧ ರೀತಿಯ ಚಟುವಟಿಕೆಗಳನ್ನು ಹಮ್ಮಿಕೊಳ್ಳ ಬೇಕಾಗುತ್ತದೆ. ಅವುಗಳ ಮೂಲಕ ವಾಸ್ತವದ ಅರಿವಿನ ಜೊತೆ ಬದುಕಿನಲ್ಲಿ ಮುನ್ನಡೆಯಲು ಮಾನವೀಯ ಕಾಳಜಿಯನ್ನೂ ಮಕ್ಕಳಲ್ಲಿ ಉದ್ದೀಪಿಸುವ ಅವಶ್ಯಕತೆ ಇರುತ್ತದೆ. ಇವು ಶಿಕ್ಷಣದ ಮೂಲ ಮಂತ್ರಗಳು. ಮಕ್ಕಳು ಭೂಮಿ ಇದ್ದಂತೆ. ಈಗಿನ ಪರಿಸ್ಥಿತಿ ಹೇಗಿದೆ ಅಂದರೆ ರಾಸಾಯನಿಕ ಗೊಬ್ಬರದಿಂದ ಫಲವತ್ತತೆ ಕಳೆದುಕೊಂಡ ಭೂಮಿಯನ್ನು ಸರಿಪಡಿಸಿಕೊಂಡು ಸಾವಯವ ಬೀಜ ಬಿತ್ತಬೇಕಿದೆ. ಆದರೆ ವ್ಯವಸ್ಥೆ ಮೊನ್ಸಾಂಟೋ ಕಂಪನಿಯ ರೀತಿ ವರ್ತಿಸುತ್ತದೆ.

ಶಿಕ್ಷಣ ಉದ್ಯಮವಾಗಿದೆ ಎಂಬುದು ತುಂಬಾ ಹಳೆಯ ಮಾತು.  ಕ್ಲೀಷೆಯಾಗಿ ಹೋದ ಈ ಮಾತು ಈಗಲೂ ಕೇಳಿದಾಕ್ಷಣ ವಿಮರ್ಶೆ ಖಾಸಗಿ ಶಿಕ್ಷಣ ಸಂಸ್ಥೆಗಳು ವಿಧಿಸುವ ದುಬಾರಿ ಶುಲ್ಕ, ಅದಕ್ಕೆ ನ್ಯಾಯ ಒದಗಿಸದ ಅವುಗಳ ಶಿಕ್ಷಣ ಮಟ್ಟ, ಶ್ರೀಮಂತರಿಗೆ ಮಾತ್ರ ಸಿಗಬಹುದಾದ, ಬಡವರಿಗೆ ಕೈಗೆಟುಕದ ಶಿಕ್ಷಣ ಇವುಗಳತ್ತಲೇ ಗಿರಕಿ ಹೊಡೆಯುತ್ತದೆ. ಇದರಿಂದ ಸರ್ಕಾರಿ ಸಂಸ್ಥೆಗಳು ಕಣ್ತಪ್ಪಿಸಿ ಕೊಳ್ಳುತ್ತವೆ. ಉದ್ಯಮೀಕರಣಗೊಂಡ ಶಿಕ್ಷಣ ವ್ಯವಸ್ಥೆ ಸರ್ಕಾರಿ ಶಿಕ್ಷಣ ವಲಯದಲ್ಲಿ ಬೀರುವ ಪರಿಣಾಮ ಏನು ಎಂಬುದು ಸಾರ್ವಜನಿಕರ ಕಣ್ಣಳತೆಗೆ ಸಿಗದೇ ಹೋಗುತ್ತದೆ.


 ಶಿಕ್ಷಣವೆಂಬ ಉದ್ಯಮ ಎಲ್ಲಾ ಬಂಡವಾಳಶಾಹಿ ಉದ್ಯಮಗಳಂತೆ ಮೊದಲಿಗೇ  ಉತ್ಪಾದನೆ ಮಾಡಿ ನಂತರ ಮಾರುಕಟ್ಟೆ ಸೃಜಿಸಿ ಕೊಳ್ಳುವ ತಂತ್ರವನ್ನು ಅನುಸರಿಸುತ್ತದೆ. ಶಿಕ್ಷಕರ ತರಬೇತಿಯತ್ತ ಸ್ವಲ್ಪವೂ ಗಮನ ಹರಿಸದೆ ತಾನು ನೇಮಿಸಿಕೊಂಡ ಶಿಕ್ಷಕರಿಂದ ಉತೃಷ್ಟ ಮಟ್ಟದ ಸಾಧನೆಯನ್ನು ಬಯಸುತ್ತದೆ. ಆ ‘ಸಾಧನೆ’ ಬಾಹ್ಯ ಕಣ್ಣಿಗೆ ಗೋಚರಿಸುವಂತಿರಬೇಕು. ಶಿಕ್ಷಕರು ಹೆಚ್ಚು ಹೆಚ್ಚು ಸಂಶೋಧನೆಗಳನ್ನು ಮಾಡಬೇಕು. ಲೇಖನ, ಪುಸ್ತಕಗಳನ್ನು ಪ್ರಕಟಿಸಬೇಕು. ಒತ್ತಡಕ್ಕೆ ಬಿದ್ದ ಶಿಕ್ಷಕರು ಹಿಂದಿನ ಬಾಗಿಲಿನಿಂದ ಇಂಥವುಗಳನ್ನು ಮಾರಾಟ ಮಾಡುವ ವ್ಯಾಪಾರಿಗಳಿಂದ ಖರೀದಿಸಲು ಮುಂದಾಗುತ್ತಾರೆ.  ಪುಸ್ತಕ, ಲೇಖನಗಳಲ್ಲದೆ ಪಿಎಚ್‌ಡಿ ಪದವಿ ಕೂಡಾ ದುಡ್ಡಿಗೆ ಸಿಗುವ ವಸ್ತುವಾಗಿದೆ. ಇದೇ ತಂತ್ರವನ್ನು ಮಕ್ಕಳಿಗೂ ಬೋಧಿಸುತ್ತಾರೆ. ಪರೀಕ್ಷೆಗಳು, ಅಂಕಗಳಿಕೆ, ಪಠ್ಯೇತರ ಪ್ರಮಾಣ ಪತ್ರಗಳು ಮುಂತಾದವನ್ನು ಅನಾಯಾಸವಾಗಿ ಪಡೆದುಕೊಳ್ಳುವ ತಂತ್ರಗಳನ್ನು ಹೇಳಿಕೊಡುವುದು ಶಿಕ್ಷಣ ಎಂಬಂತಾಗಿದೆ.

ಇದು ಮಕ್ಕಳಲ್ಲಿ ಒಂದು ಋಣಾತ್ಮಕ ಭ್ರಮೆಯನ್ನು ಹುಟ್ಟು ಹಾಕುತ್ತದೆ. ತಾನು ‘ಗಳಿಸಿದ’ ಅಂಕ, ಪ್ರಮಾಣ ಪತ್ರಗಳನ್ನು ಗುಡ್ಡೆ ಹಾಕಿಕೊಂಡು ಉನ್ನತ ನೌಕರಿಯನ್ನು ಅಪೇಕ್ಷಿಸುತ್ತಾ ಅಲೆಯುವ ಮಕ್ಕಳು ಅಲ್ಲಿ ಭ್ರಮನಿರಸನಗೊಂಡು ಡಿಪ್ರೆಶನ್ ಗೆ ಜಾರುತ್ತವೆ. ಇಲ್ಲದಿದ್ದರೆ ಫ್ರಸ್ಟ್ರೇಶನ್ ಗೆ ಒಳಗಾಗಿ ವಿದ್ರೋಹದ ಕೆಲಸ ಮಾಡಲು ಮುಂದಾಗುತ್ತಾರೆ.
ಇದ್ಯಾವುದರ ಕಣ್ಣಂದಾಜೂ ಇಲ್ಲದೆ ವ್ಯವಸ್ಥೆಯ ಭಾಗವಾಗಿರುವ ಶಿಕ್ಷಕರು ಗಾಳಿ ಬಂದಾಗ ತೂರಿಕೋ ಎಂಬಂತೆ ತಮ್ಮನ್ನು ವ್ಯವಸ್ಥೆಗೆ ಒಗ್ಗಿಸಿಕೊಂಡು ಅದರ ತಾಳಕ್ಕೆ ತಕ್ಕಂತೆ ಕುಣಿಯ ತೊಡಗುತ್ತಾರೆ.


ಉನ್ನತ ವಲಯದಿಂದ ಹಿಡಿದು ತಳಮಟ್ಟದವರೆಗೂ ‘ಲಾಭಗಳಿಕೆ’ ಎಂಬ ಮಂತ್ರ ಮೌಲ್ಯವಾಗಿ ಪರಿಣಮಿಸಿದೆ. ಈ ಮೌಲ್ಯ ಎಷ್ಟು ಹುಸಿ ಎಂಬ ಪರಿವೆಯೇ ಇಲ್ಲದೆ ಮೇಲೆ ಹೇಳಿದ ಪ್ರಾಂಶುಪಾಲರಂಥವರು ತಮ್ಮ ಅಧಿಕಾರ ಬಳಸಿ ಹುಸಿ ಮೌಲ್ಯಗಳನ್ನು ಗಟ್ಟಿಯಾಗಿ ಊರಲು ಪ್ರಯತ್ನಿಸುತ್ತಾರೆ. ಅವರಿಗೆ ಬೇಕಾಗಿರುವುದು ಪರಿಶೀಲಕರು ಬಂದಾಗ ತೋರಿಸಲು ದಾಖಲೆಗಳು. ಪರಿಶೀಲಕರೂ ತಮ್ಮಂಥದೇ ‘ಮನುಷ್ಯ’ರು ಎನ್ನುವ ಸತ್ಯವನ್ನು ಕಂಡುಕೊಂಡಿರುವ ಇವರು ಈ ಹುಸಿ ದಾಖಲೆಗಳನ್ನು ಪೇರಿಸುವುದರತ್ತಲೇ ಗಮನಹರಿಸುತ್ತಾರೆ.


ಈ ಅವ್ಯವಸ್ಥೆಯ ಪರಿಣಾಮ ಮುಂದಿನ ಪೀಳಿಗೆಯ ಮೇಲಾಗುತ್ತದೆ. ಜಾಗತೀಕರಣ, ಉದಾರೀಕರಣದ ನೆಪದಲ್ಲಿ ಜನರಿಂದ ಉದ್ಯೋಗದ, ನೆಮ್ಮದಿಯ ಬದುಕಿನ ಹಕ್ಕನ್ನು ಕಸಿದುಕೊಂಡು ಸರ್ಕಾರಗಳು ಸಾರ್ವಜನಿಕರ ಗಮನವನ್ನು ಧರ್ಮ, ಕೋಮು, ಮೂಢನಂಬಿಕೆ ಮುಂತಾದ ವಿಷಯಗಳ ಕಡೆ ಸೆಳೆದು ಬದುಕನ್ನು ಅಸ್ವಸ್ಥಗೊಳಿಸಿವೆ. ವಿದ್ಯಾರ್ಥಿಗಳು ಪದವಿ ಪಡೆದುಕೊಂಡು ಕೋಚಿಂಗ್ ಸೆಂಟರ್ ಗಳತ್ತ ದಾಪುಗಾಲು ಹಾಕುತ್ತಾರೆ. ಅಲ್ಲಿನ ಪ್ರಮಾಣಪತ್ರವೇ ಮಹತ್ವದ್ದು ಎಂದು ಭಾವಿಸುತ್ತಾರೆ.

ಪ್ರಮಾಣಪತ್ರ ………

ಹಿಜಾಬ್‌ ಗಲಾಟೆಯಲ್ಲಿ ವಿದ್ಯಾರ್ಥಿಗಳು

ಬೌದ್ಧಿಕ ವಿಕಸನ ಇಲ್ಲದೆ ಪ್ರಮಾಣ ಪತ್ರದ ಹಿಂದೆ ಬೀಳುವ ವಿದ್ಯಾರ್ಥಿಗಳು ಯಾವುದೇ ಆರೋಗ್ಯಕರ ಕಾರ್ಯಕ್ರಮ ಕ್ಕೆ ಹೋಗಲು ಆರೋಗ್ಯಕರ ಪುಸ್ತಕಗಳನ್ನು ಓದಲು ನಿರಾಕರಿಸುತ್ತಾರೆ. ಬದುಕಿನ ವಾಸ್ತವವನ್ನು ಅರಿಯಲು ಬಿಲ್ಕುಲ್ ತಯಾರಿರುವುದಿಲ್ಲ. ಇದು ಬಹಳ ಅಪಾಯಕಾರೀ ಬೆಳವಣಿಗೆ. ಬೌದ್ಧಿಕ ಗಣಿಗಾರಿಕೆಯಿಂದ ಪ್ರಕೃತಿ ಸಹಜ ಮನಸ್ಸನ್ನು ಅಗೆದೂ ಅಗೆದೂ ಮಾಡಿಕೊಂಡ ದುರಂತ ಪರಿಸ್ಥಿತಿ ಇದು.
ಈ ಥರದ ಜನರನ್ನು ಹುಟ್ಟುಹಾಕಿದ ವ್ಯವಸ್ಥೆ ಮಾತ್ರ ತನ್ನ ಉಳಿವಿರುವವರೆಗೆ ಆದಷ್ಟು ‘ಗಳಿಸಿ’ ಕೊಂಡೊಯ್ಯಲು ಗಂಟುಮೂಟೆ ಸಿದ್ಧಗೊಳಿಸಿ ಕೊಳ್ಳುತ್ತಿರುತ್ತದೆ.


ಸಾಮಾಜಿಕ ಸ್ಥಿತ್ಯಂತರದ ಕಡೆಗೂ ಗಮನ ಹರಿಸಬೇಕಿದೆ. ಹಿಂದುಳಿದ ವರ್ಗಗಳಿಂದ ಅತಿ ಹೆಚ್ಚು ವಿದ್ಯಾರ್ಥಿಗಳು ಪದವಿ ಶಿಕ್ಷಣ ಪಡೆಯಲು ಬರುತ್ತಿರುವ ಕಾಲ ಇದು. ಹಿಂದಿನ ಮೇಲ್ವರ್ಗದ, ಮೇಲ್ಜಾತಿಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವಾಗಿನ  ಸ್ಥಿತಿ ಈಗಿನದಲ್ಲ.. ಹೆಚ್ಚಿನ ವಿದ್ಯಾರ್ಥಿಗಳು ಪ್ರಥಮ ಶಿಕ್ಷಿತ ಪೀಳಿಗೆಯವರು. ಇವರನ್ನು ರೂಪಿಸುವ ಗುರುತರ ಜವಾಬ್ದಾರಿ  ವ್ಯವಸ್ಥೆಯ ಮೇಲಿರುತ್ತದೆ. ಆದರೆ ‘ತಾಯ ಮೊಲೆವಾಲೇ ನಂಜಾಗಿ ಕೊಂದೊಡೆ ‘ಎಂಬ ಸ್ಥಿತಿ ಇದೆ. ಕಾಲದ ಧಾವಂತ ಹೇಗಿದೆ ಅಂದರೆ ಈಗಿನ ಪೀಳಿಗೆಗೆ ತಮ್ಮ ಹಿರಿಯರ ಹೋರಾಟದ ಹಿನ್ನೆಲೆಯ ಪರಿಚಯ ಇಲ್ಲ. ಜನಪದ ಕಥಾನಕವಾಗಿ ಸಮಾಜವಾದಿ ಹೋರಾಟ ಬರಲೇ ಇಲ್ಲ. ಸಮಾಜವಾದ, ಲೋಹಿಯಾ, ಗೋಪಾಲಗೌಡರು, ಕಾಗೋಡು ಸತ್ಯಾಗ್ರಹ ಇವುಗಳೆಲ್ಲಾ ಪಠ್ಯದಲ್ಲಿ ಉರುಹೊಡೆಯುವ ಅಕ್ಷರಗಳಾಗಿ ಕುಳಿತಿವೆ.

ನಿಜ ಇತಿಹಾಸದ ಮರೆವು ಒಂದು ಪೀಳಿಗೆಯನ್ನು ಎಷ್ಟು ದುರ್ಬಲಗೊಳಿಸುತ್ತದೆ ಎಂದರೆ ಅದು ಅತೀ ಸುಲಭವಾಗಿ ವ್ಯವಸ್ಥೆ ಒಡ್ಡುವ ಉರುಳಿಗೆ ಕತ್ತನ್ನು ಚಾಚುತ್ತದೆ. ಇಲ್ಲಿ ಹಿಜಾಬ್ ಗಲಾಟೆಯನ್ನು ಜ್ಞಾಪಿಸಿಕೊಳ್ಳಬಹುದು. ನಿರುದ್ಯೋಗ, ವಂಚನೆ, ಆರ್ಥಿಕ ಅಸಮಾನತೆ ಸೃಷ್ಟಿಸುವ ಆಳ ಕಂದರ, ಖಾಸಗೀಕರಣದ ಪರಿಣಾಮ ಇದ್ಯಾವುದರತ್ತಲೂ ಗಮನ ಹರಿಸದ ವಿದ್ಯಾರ್ಥಿಗಳು ಹಿಜಾಬ್ ಗಲಾಟೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ತಮ್ಮ ಊರಿನ ಒಳಗೊಳ್ಳುವ ಹಬ್ಬವಾದ ಜಾತ್ರೆಯಲ್ಲಿ ಕುತ್ಸಿತ ಮನಸ್ಸುಗಳು ಒಂದು ನಿರ್ದಿಷ್ಟ ಕೋಮಿನ ಜನರ ವ್ಯಾಪಾರ ವ್ಯವಹಾರವನ್ನು ನಿರ್ಬಂಧಿಸುವುದು, ಜನರ ಮಧ್ಯೆ ಒಡಕು ಮೂಡಿಸುವ ವಿದ್ಯಮಾನಗಳು ಇವ್ಯಾವುವೂ ಯಾವುದೇ ರೀತಿಯಲ್ಲಿ ಮನಕ್ಕೆ ತಟ್ಟದ ವಿದ್ಯಾರ್ಥಿಗಳಿಗೆ ತಮ್ಮ ತರಗತಿಗಳಲ್ಲಿ ಕುಳಿತು ಪಾಠ ಕೇಳುವ ಸಹಪಾಠಿಯ ತಲೆವಸ್ತ್ರ ತೊಂದರೆ ಕೊಡುತ್ತದೆ!!!


ಶಿಕ್ಷಣ ಮನುಷ್ಯನ ಬದುಕಿನ ಮಹತ್ತರ ಘಟ್ಟ ಅನ್ನುವುದನ್ನು ಯಾರೂ ಅಲ್ಲಗಳೆಯರು. ಆದರೆ ಆ ಘಟ್ಟವನ್ನು ಸುಸ್ಥಿರದಿಂದಿರಿಸಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕಾಗಿದೆ. ಬದುಕಿನ ಹಿನ್ನೆಲೆಯ ಕಥಾನಕ ಬೇಕಿದೆ.

ವೃಂದಾ ಹೆಗ್ಡೆ

ಉಪನ್ಯಾಸಕರು

ಇದನ್ನೂ ಓದಿ- ಗುರುತುಗಳ ಹೊರೆ ಹೊತ್ತುಕೊಂಡವರ ವರ್ತಮಾನದ ಕತೆ

More articles

Latest article