ರಂಗಾಯಣಗಳ ಇತಿಹಾಸದಲ್ಲಿಯೇ ಇಲ್ಲಿಯವರೆಗೂ ಮೈಸೂರು ರಂಗಾಯಣವನ್ನು ಹೊರತು ಪಡಿಸಿ ಯಾವುದೇ ರಂಗಾಯಣಗಳಿಗೂ ಮಹಿಳೆಯರ ನೇಮಕಾತಿ ಮಾಡಿಲ್ಲ. ಮಾಡಲೇಬೇಕು ಎಂಬ ಆಗ್ರಹವೂ ಬಂದಿರಲಿಲ್ಲ. ಹಾಗೇನಾದರೂ ಪ್ರತಿರೋಧ ಬಂದಿದ್ದರೆ ಸರಕಾರ ಒತ್ತಡಕ್ಕೊಳಗಾಗಿ ಕನಿಷ್ಟ ಎರಡು ರಂಗಾಯಣಗಳಿಗಾದರೂ ಮಹಿಳಾ ನಿರ್ದೇಶಕಿಯರನ್ನು ನೇಮಕಾತಿ ಮಾಡುವ ಒತ್ತಡಕ್ಕೆ ಒಳಗಾಗುತ್ತಿತ್ತು -ಶಶಿಕಾಂತ ಯಡಹಳ್ಳಿ, ರಂಗಕರ್ಮಿ.
ಹೀಗೊಂದು ಪ್ರಶ್ನೆ ಕೇಳಲಾಗುತ್ತಿದೆ ಹಾಗೂ ಪ್ರತಿರೋಧವೂ ವ್ಯಕ್ತವಾಗುತ್ತಿದೆ.
ಕರ್ನಾಟಕ ಸರಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ 15 ತಿಂಗಳುಗಳ ದೀರ್ಘಾವಧಿಯ ನಂತರ ಕರ್ನಾಟಕದ ಆರೂ ರಂಗಾಯಣಗಳಿಗೆ ನಿರ್ದೇಶರನ್ನು ನೇಮಕ ಮಾಡಿ ಸರಕಾರ ಆ. 12 ರಂದು ಆದೇಶ ಹೊರಡಿಸಿತು. ಸದ್ಯ ಕೋಮಾದಲ್ಲಿದ್ದ ರಂಗಾಯಣಗಳಿಗೆ ಮರುಜೀವ ಬಂದಂತಾಯ್ತು. ಈಗಲಾದರೂ ಸರಕಾರ ನೇಮಕಾತಿ ಮಾಡಿತಲ್ಲಾ ಎಂದು ಸಮಾಧಾನವಾಗಿತ್ತು. ಆದರೆ ನೇಮಕಾತಿಯ ಜೊತೆಗೆ ವಿವಾದಗಳೂ ಮುನ್ನಲೆಗೆ ಬಂದವು. ಅದರಲ್ಲೂ ಲಿಂಗಸೂಕ್ಷ್ಮತೆ, ಲಿಂಗ ಸಮಾನತೆ, ಮಹಿಳಾ ಪ್ರಾತಿನಿಧ್ಯದ ಕುರಿತ ಆಕ್ಷೇಪಣೆಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಧ್ವನಿಸಿದವು. ಅರ್ಹ ನಿರ್ದೇಶಕರುಗಳ ಆಯ್ಕೆಯ ಹೊಣೆಗಾರಿಕೆ ಹೊತ್ತ ರಂಗಸಮಾಜದ ಹಾಗೂ ಸರಕಾರದ ಮೇಲೆಯೂ ಪಿತೃಪ್ರಧಾನ ಧೋರಣೆಯ ಆರೋಪ ಕೇಳಿಬಂದವು. ಈ ನೇಮಕಾತಿಯಲ್ಲಿ ಅರ್ಧದಷ್ಟು ಸ್ಥಾನಗಳಿಗೆ ಮಹಿಳಾ ಪ್ರಾತಿನಿಧ್ಯತೆ ಕೊಡಬೇಕಿತ್ತು, ಕನಿಷ್ಟ 33% ಪ್ರಾತಿನಿಧ್ಯತೆಯಾದರೂ ನಿರೀಕ್ಷಿಸಲಾಗಿತ್ತು ಎನ್ನುವ ಆಗ್ರಹವೂ ಕೇಳಿಬಂದಿತು.
“ರಂಗಾಯಣದ ನಿರ್ದೇಶಕರುಗಳ ನೇಮಕಾತಿ ಅಸೂಕ್ಷ್ಮತೆಯಿಂದ ಕೂಡಿದ್ದು ಮಹಿಳಾ ಸಮೂಹಕ್ಕೆ ನಿರಾಸೆಯನ್ನು ಮೂಡಿಸಿದೆ” ಎಂದು ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವು ಪುರುಷಾಧಿಪತ್ಯದ ರಾಜಕೀಯ ನೇಮಕಗಳ ವಿರುದ್ಧ ತನ್ನ ತೀವ್ರ ಪ್ರತಿರೋಧವನ್ನು ವ್ಯಕ್ತಪಡಿಸಿತ್ತು. “ಮಹಿಳಾ ನಿರ್ದೇಶಕಿಯರಿಗೆ ಅವರ ಕ್ಷಮತೆ, ದಕ್ಷತೆ ಹಾಗೂ ಪ್ರತಿಭೆಯನ್ನು ಹೊರಹಾಕುವ ಅವಕಾಶವನ್ನೇ ನೀಡದಿದ್ದರೆ ಅವರಲ್ಲಿರುವ ಸಾಮರ್ಥ್ಯ ಕೌಶಲ ಮತ್ತು ಸಾಧನೆಗಳು ಸಮಾಜಕ್ಕೆ ತಿಳಿಯುವುದಾದರೂ ಹೇಗೆ?” ಎಂದೂ ಪ್ರಶ್ನಿಸಲಾಯ್ತು.
ಇವೆಲ್ಲವೂ ಮೌಲಿಕವಾದ ಪ್ರಶ್ನೆಗಳೇ. ಮಹಿಳೆಯರಿಗೆ ಎಷ್ಟು ಸಾಧ್ಯವೋ ಅಷ್ಟು ಪ್ರಾತಿನಿಧ್ಯತೆ ದೊರೆಯಬೇಕು ಎನ್ನುವುದೂ ಅಪೇಕ್ಷಣೀಯವೇ. ಆದರೆ ಈ ಆಕ್ಷೇಪಗಳು ಈ ಹಿಂದೆ ರಂಗಾಯಣಕ್ಕೆ ನಡೆದ ನೇಮಕಾತಿಗಳ ಸಮಯದಲ್ಲಿ ಕೇಳಿಬರಬೇಕಿತ್ತು. ಬಿಜೆಪಿ ಸರಕಾರ ಇದ್ದಾಗ ಯಾವುದೇ ರಂಗಾಯಣಕ್ಕೂ ಮಹಿಳೆಯರನ್ನು ನಿರ್ದೇಶಕರನ್ನಾಗಿ ಆಯ್ಕೆ ಮಾಡದೇ ಇರುವಾಗ ಪ್ರತಿರೋಧ ಬರಬೇಕಿತ್ತು. ರಂಗಾಯಣಗಳ ಇತಿಹಾಸದಲ್ಲಿಯೇ ಇಲ್ಲಿಯವರೆಗೂ ಮೈಸೂರು ರಂಗಾಯಣವನ್ನು ಹೊರತು ಪಡಿಸಿ ಯಾವುದೇ ರಂಗಾಯಣಗಳಿಗೂ ಮಹಿಳೆಯರ ನೇಮಕಾತಿ ಮಾಡಿಲ್ಲ. ಮಾಡಲೇಬೇಕು ಎಂಬ ಆಗ್ರಹವೂ ಬಂದಿರಲಿಲ್ಲ. ಹಾಗೇನಾದರೂ ಪ್ರತಿರೋಧ ಬಂದಿದ್ದರೆ ಸರಕಾರ ಒತ್ತಡಕ್ಕೊಳಗಾಗಿ ಕನಿಷ್ಟ ಎರಡು ರಂಗಾಯಣಗಳಿಗಾದರೂ ಮಹಿಳಾ ನಿರ್ದೇಶಕಿಯರನ್ನು ನೇಮಕಾತಿ ಮಾಡುವ ಒತ್ತಡಕ್ಕೆ ಒಳಗಾಗುತ್ತಿತ್ತು. ಹೋಗಲಿ ಈ ಸಲ ನೇಮಕಾತಿಗಳು ಆಗುವುದಕ್ಕಿಂತಲೂ ಮುಂಚೆ ಮಹಿಳೆಯರಿಗೆ ಹೆಚ್ಚು ಪ್ರಾತಿನಿಧ್ಯತೆ ಕೊಡಬೇಕೆಂಬ ಒತ್ತಾಯವನ್ನಾದರೂ ಮಾಧ್ಯಮಗಳ ಮೂಲಕ ಮಾಡಬಹುದಾಗಿತ್ತು, ಯಾರೂ ಮಾಡಲಿಲ್ಲ. ಹೀಗಾಗಿ ಈ ಬಾರಿ ಆರು ರಂಗಾಯಣಗಳಲ್ಲಿ ಕಲಬುರ್ಗಿ ರಂಗಾಯಣಕ್ಕಾದರೂ ಮಹಿಳಾ ಪ್ರಾತಿನಿಧ್ಯತೆ ದೊರಕಿರುವುದೇ ಸಮಾಧಾನಕರ.
ಇರುವ ಆರು ರಂಗಾಯಣಗಳಲ್ಲಿ ಮೂರಕ್ಕಾದರೂ ಮಹಿಳೆಯರ ಆಯ್ಕೆ ಮಾಡಬೇಕು ಎನ್ನುವುದು ಮಹಿಳಾ ರಂಗಕರ್ಮಿಗಳು ಹಾಗೂ ಅವರ ಸಮರ್ಥಕರ ಅಭೀಷ್ಟೆ. ಆದರೆ ರಂಗಾಯಣಕ್ಕೆ ನಿರ್ದೇಶಕರಾಗಲು ಉತ್ಸಾಹ ತೋರಿದವರು ಮೂರ್ನಾಲ್ಕು ಮಹಿಳೆಯರು ಅಷ್ಟೇ. ರಂಗ ಸಮಾಜದ ಸಭೆಯಲ್ಲಿ ಚರ್ಚೆಗೆ ಬಂದ ಒಟ್ಟು ಹೆಸರುಗಳು ಸರಿ ಸುಮಾರು 52. ಅದರಲ್ಲಿ ಬಯೋಡೇಟಾ ಕಳುಹಿಸಿ ನೇಮಕಾತಿ ಬಯಸಿದ ಮಹಿಳೆಯರ ಹೆಸರು ಕೇವಲ ಮೂರ್ನಾಲ್ಕು. ಈ ಹೆಸರುಗಳಿಗೂ ಆದ್ಯತೆ ಕೊಡಲಾಗಿತ್ತು. ಧಾರವಾಡ ರಂಗಾಯಣಕ್ಕೆ ವಿಶ್ವೇಶ್ವರಿ ಹಿರೇಮಠ, ಶಿವಮೊಗ್ಗ ರಂಗಾಯಣಕ್ಕೆ ಸುಮತಿ ಜನಾರ್ಧನ್ ಹಾಗೂ ಯಕ್ಷ ರಂಗಾಯಣಕ್ಕೆ ಪ್ರಮಿಳಾ ಅವರ ಹೆಸರುಗಳನ್ನು (ತಲಾ ಮೂರು ಹೆಸರುಗಳ ಪೈಕಿ) ರಂಗ ಸಮಾಜವು ಸರಕಾರಕ್ಕೆ ಶಿಫಾರಸ್ಸು ಮಾಡಿತ್ತು. ಆದರೆ ಸಂಸ್ಕೃತಿ ಇಲಾಖೆಯ ಸಚಿವರಿಗೆ ಅದೇನು ಒತ್ತಡಗಳಿದ್ದವೋ ಆಯ್ಕೆ ಪಟ್ಟಿಯಲ್ಲಿದ್ದ ಈ ಮೂವರೂ ಮಹಿಳೆಯರ ಹೆಸರನ್ನು ಕೈಬಿಟ್ಟು ಪುರುಷರನ್ನೇ ನೇಮಕಾತಿ ಮಾಡಿದರು. ಎನ್ ಎಸ್ ಡಿ ಪದವೀಧರೆ ಹಾಗೂ ಅನುಭವಿ ರಂಗ ನಿರ್ದೇಶಕಿಯಾದ ಸುಮತಿಯವರ ನೇಮಕಾತಿ ಶಿವಮೊಗ್ಗ ರಂಗಾಯಣಕ್ಕೆ ಖಾತ್ರಿಯಾಗಿತ್ತು. ಆದರೆ ಕೊನೆಯ ಕೆಲವೇ ಗಂಟೆಗಳಲ್ಲಿ ಅವರ ಹೆಸರನ್ನೂ ಹಿನ್ನೆಲೆಗೆ ಸರಿಸಿ ಪಟ್ಟಿಯಲ್ಲಿದ್ದ ಮೂರನೇ ಹೆಸರನ್ನು ಮೊದಲನೆಯದಾಗಿ ಘೋಷಿಸಿ ಸುಮತಿಯವರಿಗೆ ಅನ್ಯಾಯ ಮಾಡಲಾಯ್ತು. ಅದೇ ರೀತಿ ಕಲಬುರ್ಗಿ ರಂಗಾಯಣದ ಆಯ್ಕೆ ಪಟ್ಟಿಯಲ್ಲಿ ಹೆಸರೇ ಇರದಿದ್ದ ಸುಜಾತ ಜಂಗಮಶೆಟ್ಟಿಯವರನ್ನು ನಿರ್ದೇಶಕಿಯಾಗಿ ಆಯ್ಕೆ ಮಾಡಲಾಗಿತ್ತು. ಸಧ್ಯ ಈ ಒಬ್ಬರಾದರೂ ಮಹಿಳೆ ಒಂದಾದರೂ ರಂಗಾಯಣಕ್ಕೆ ನೇಮಕವಾದರಲ್ಲಾ ಎನ್ನುವುದೇ ಸಮಾಧಾನ.
ಈ ಆಯ್ಕೆ ಪ್ರಕ್ರಿಯೆಯಲ್ಲಿ ಮಹಿಳೆಯ ನೇಮಕಾತಿ ಆಗದಂತೆ ಶ್ರಮಿಸಿದ ಹೆಸರಾಂತ ರಂಗಕರ್ಮಿಗೆ ಧಿಕ್ಕಾರ ಹೇಳಲೇಬೇಕಿದೆ. ಸುಮತಿಯವರು ಮೈಸೂರು ರಂಗಾಯಣದ ನಿರ್ದೇಶಕಿಯಾಗಲು ಆಸಕ್ತಿ ವಹಿಸಿದ್ದರು. “ಮೈಸೂರು ರಂಗಾಯಣವನ್ನು ನಿರ್ವಹಿಸುವುದು ಮಹಿಳೆಯಾದ ನಿಮಗೆ ಸಾಧ್ಯವಾಗುವುದಿಲ್ಲ, ಶಿವಮೊಗ್ಗ ರಂಗಾಯಣವಾದರೆ ನಿಮಗೆ ಅನುಕೂಲ” ಎಂದು ಸಂದೇಶ ರವಾನಿಸಿ ಸುಮತಿಯವರನ್ನು ನಿರುತ್ಸಾಹಗೊಳಿಸಲು ಪ್ರಯತ್ನಿಸಿ ಮೈಸೂರು ರಂಗಾಯಣಕ್ಕೆ ನಿರ್ದೇಶಕಿಯಾಗಬಹುದಾಗಿದ್ದ ಅವಕಾಶವನ್ನು ತಪ್ಪಿಸಲಾಯ್ತು. ರಂಗಸಮಾಜದ ಸದಸ್ಯರೊಬ್ಬರು ಫೋನ್ ಮಾಡಿ “ಸುಮತಿಯವರೇ ನಿಮಗೆ ಶಿವಮೊಗ್ಗ ರಂಗಾಯಣವನ್ನು ನಿರ್ವಹಿಸುವುದು ಕಷ್ಟಕರವಾಗಲಿದೆ” ಎಂದು ಹೇಳಿ ಮತ್ತೆ ನಿರುತ್ಸಾಹಗೊಳಿಸುವ ಪ್ರಯತ್ನ ಮುಂದುವರೆಸಲಾಯ್ತು. ಯಾವಾಗ ಸುಮತಿಯವರು ಶಿವಮೊಗ್ಗ ರಂಗಾಯಣದ ಆಫರ್ ನ್ನೂ ಒಪ್ಪಿಕೊಂಡರೋ ಆಗ “ಸುಮತಿಯವರಿಗೆ ಮೈಸೂರು ಬಿಟ್ಟು ಶಿವಮೊಗ್ಗ ರಂಗಾಯಣಕ್ಕೆ ಹೋಗಲು ಇಷ್ಟವಿಲ್ಲ” ಎನ್ನುವ ಸುಳ್ಳು ಸುದ್ದಿಯನ್ನು ಹಬ್ಬಿಸಿ ಅವಕಾಶ ವಂಚಿತರನ್ನಾಗಿಸಲಾಯ್ತು. ಮಹಿಳೆಯರ ಸಾಮರ್ಥ್ಯವನ್ನು ಅಂಡರ್ ಎಸ್ಟಿಮೇಟ್ ಮಾಡುವ ಇಂತಹ ಪುರುಷ ಶ್ರೇಷ್ಟತೆಯ ವ್ಯಸನಪೀಡಿತ ರಂಗಕರ್ಮಿಗಳ ವಿರುದ್ಧ ಪ್ರತಿಭಟಿಸಬೇಕಿದೆ. ಎಲ್ಲಾ ಕ್ಷೇತ್ರದಲ್ಲೂ ಇರುವಂತೆ ರಂಗಭೂಮಿಯಲ್ಲಿರುವ ಪುರುಷಪ್ರಧಾನ ವ್ಯವಸ್ಥೆಯ ವಿರುದ್ಧ ಪ್ರತಿಭಟಿಸಬೇಕಿದೆ.
ರಂಗಾಯಣಕ್ಕೆ ನಿರ್ದೇಶಕರ ಹೆಸರನ್ನು ಶಿಫಾರಸ್ಸುಮಾಡಬಹುದಾದ ರಂಗಸಮಾಜಕ್ಕೆ ಸದಸ್ಯರುಗಳನ್ನು ಆಯ್ಕೆ ಮಾಡುವಲ್ಲೇ ಸರಕಾರ ಲಿಂಗ ತಾರತಮ್ಯ ತೋರಿತ್ತು. ಆಯ್ಕೆಯಾದ ಏಳು ಜನ ಸದಸ್ಯರಲ್ಲಿ ಲಕ್ಷ್ಮೀ ಚಂದ್ರಶೇಖರ್ ಒಬ್ಬರನ್ನು ಹೊರತು ಪಡಿಸಿ ಉಳಿದವರೆಲ್ಲಾ ಪುರುಷರೇ. ಏಳರಲ್ಲಿ ಕನಿಷ್ಟ ಮೂವರು ಮಹಿಳೆಯರನ್ನಾದರೂ ಸದಸ್ಯರನ್ನಾಗಿಸಿ ಆಯ್ಕೆ ಮಾಡಬೇಕಿತ್ತು. ಮಾಡಲಿಲ್ಲ. ಈ ಲಿಂಗ ತಾರತಮ್ಯವನ್ನು ಮಹಿಳಾ ರಂಗಕರ್ಮಿಗಳಾದರೂ ಪ್ರಶ್ನಿಸಬೇಕಿತ್ತು, ಪ್ರಶ್ನಿಸಲಿಲ್ಲ. ಬಹುತೇಕ ಪುರುಷರೇ ತುಂಬಿದ ರಂಗಸಮಾಜದಲ್ಲಿ ಹೆಚ್ಚು ಜನ ಮಹಿಳೆಯರನ್ನು ರಂಗಾಯಣಕ್ಕೆ ಆಗ್ರಹಪೂರ್ವಕ ಶಿಫಾರಸ್ಸು ಮಾಡುತ್ತಾರೆಂಬುದನ್ನು ನಂಬಲು ಸಾಧ್ಯವಿಲ್ಲ. ಈ ಸಲ ಆರೂ ರಂಗಾಯಣಗಳಿಗೆ ತಲಾ ಮೂವರ ಹೆಸರನ್ನು ರಂಗಸಮಾಜ ಶಿಫಾರಸ್ಸು ಮಾಡಿದೆ. ಆದರೆ ಯಾವ ಮಹಿಳೆಯ ಹೆಸರೂ ಯಾವ ಪಟ್ಟಿಯಲ್ಲೂ ಮೊದಲ ಸ್ಥಾನದಲ್ಲಿಲ್ಲ. ಹೋಗಲಿ, ರಂಗಾಯಣಗಳಿಗೆ ನಿರ್ದೇಶಕರಾಗಲು ಮೂವರು ಅರ್ಹ ವ್ಯಕ್ತಿಗಳ ಹೆಸರನ್ನು ಸೂಚಿಸಿ ಎಂದು ನಿಯಮ ಬಾಹಿರವಾಗಿ ಸಂಸ್ಕೃತಿ ಸಚಿವರು ರಂಗಾಯಣದ ಮಾಜಿ ನಿರ್ದೇಶಕರನ್ನು ಕೇಳಿಕೊಂಡಿದ್ದರು. ಹಾಗೆ ಕೇಳಿಕೊಂಡವರೆಲ್ಲಾ ಪುರುಷರೇ ಆಗಿದ್ದರು. ಅವರುಗಳು ಸೂಚಿಸಿದ ಹೆಸರುಗಳೂ ಪುರುಷರದ್ದೇ ಆಗಿದ್ದವು. ಇನ್ನು ಮಹಿಳೆಯರಿಗೆ ಹೆಚ್ಚು ಪ್ರಾತಿನಿಧ್ಯತೆ ಸಿಗಬೇಕು ಎಂದರೆ ಅದು ಹೇಗೆ ಸಾಧ್ಯ?
ಹೆಚ್ಚು ಮಹಿಳಾ ಪ್ರತಿಭೆಗಳಿಗೆ ಪ್ರಾತಿನಿಧ್ಯತೆ ದೊರೆಯಬೇಕು ಎಂಬುದು ಅಪೇಕ್ಷಣೀಯ ನಿಜ. ಜನಸಂಖ್ಯೆ ಆಧಾರದಲ್ಲಿ 50% ಇಲ್ಲವೇ 33% ಪ್ರಾತಿನಿಧ್ಯತೆ ಮಹಿಳೆಯರಿಗೆ ಬೇಕೆಂಬುದಕ್ಕೆ ಇದು ಸಂಸತ್ತು ಇಲ್ಲವೇ ಪರಿಷತ್ತು ಅಲ್ಲ. ಪುರುಷರಿಗೆ ಹೋಲಿಸಿದರೆ ರಂಗಭೂಮಿಯಲ್ಲಿ ಕ್ರಿಯಾಶೀಲವಾಗಿರುವ ಮಹಿಳೆಯರು ಕಡಿಮೆ. ಅದಕ್ಕೆ ನಮ್ಮ ಪುರುಷಪ್ರಧಾನ ಸಾಮಾಜಿಕ ವ್ಯವಸ್ಥೆಯೂ ಕಾರಣವಾಗಿದೆ. ಇರುವುದರಲ್ಲೇ ಕ್ರಿಯಾಶೀಲತೆಯಿಂದ ರಂಗಭೂಮಿಯಲ್ಲಿ ತೊಡಗಿಸಿಕೊಂಡ ಮಹಿಳಾ ರಂಗಕರ್ಮಿಗಳನ್ನು ಕನಿಷ್ಠ ಮೂರು ರಂಗಾಯಣಗಳಿಗಾದರೂ ನೇಮಕಾತಿ ಮಾಡಬೇಕಿತ್ತು. ಆದರೆ ರಂಗಾಯಣಗಳ ನಿರ್ದೇಶಕರ ನೇಮಕಾತಿ ಇತಿಹಾಸದಲ್ಲೇ ಮಹಿಳೆಯರ ಕುರಿತ ನಿರ್ಲಕ್ಷ್ಯ ಅಕ್ಷಮ್ಯವಾಗಿದೆ. ಇಲ್ಲಿಯವರೆಗೂ ಮೈಸೂರು ರಂಗಾಯಣದ 35 ವರ್ಷಗಳ ಅವಧಿಯಲ್ಲಿ ಭಾಗೀರಥಿ ಬಾಯಿ ಕದಂರವರು ಮಾತ್ರ ನಿರ್ದೇಶಕಿಯಾಗಿ ಪೂರ್ಣಾವಧಿ ಪೂರೈಸಿದ್ದಾರೆ. ಬಿ.ಜಯಶ್ರೀಯವರಿಗೆ ಅವಕಾಶ ಸಿಕ್ಕಿದ್ದರೂ ಅವರು ರಾಜೀನಾಮೆ ಕೊಟ್ಟರು. ಅದು ಬಿಟ್ಟು ಇಲ್ಲಿವರೆಗೂ ಯಾಕೆ ರಂಗಾಯಣಗಳಿಗೆ ಮಹಿಳೆಯರ ನೇಮಕಾತಿ ಮಾಡಲಾಗಿಲ್ಲವೆಂದು ಸರಕಾರವನ್ನು ಕೇಳಬೇಕಿತ್ತು, ಕೇಳಲಿಲ್ಲ. ಮೊದಲಿನಿಂದಲೂ ಮಹಿಳೆಯರಿಗಾದ ಅನ್ಯಾಯಕ್ಕೆ ಪರಿಹಾರವಾಗಿ ಈ ಸಲವಾದರೂ ಕನಿಷ್ಟ ನಾಲ್ಕು ರಂಗಾಯಣಗಳಿಗಾದರೂ ಮಹಿಳೆಯರ ನೇಮಕಾತಿ ಆಗಲೇಬೇಕೆಂದು ಮಹಿಳಾ ಸಂಘಟನೆಗಳು ಆಗ್ರಹಿಸಬೇಕಿತ್ತು. ಈಗ ಸಮಯ ಮಿಂಚಿ ಹೋಗಿದೆ. ನೇಮಕಾತಿ ಮಾಡಲಾಗಿದೆ. ಮೂರು ವರ್ಷಗಳ ನಂತರವಾದರೂ ಮಹಿಳಾ ರಂಗಕರ್ಮಿಗಳು, ಮಹಿಳಾ ಸಂಘಟನೆಗಳು ರಂಗಸಮಾಜದ ಸದಸ್ಯರುಗಳ ಮೇಲೆ, ಸಂಸ್ಕೃತಿ ಇಲಾಖೆಯ ಸಚಿವರು ಹಾಗೂ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕಿ ಎಲ್ಲಾ ಆರೂ ರಂಗಾಯಣಗಳಿಗೂ ಮಹಿಳಾ ರಂಗಕರ್ಮಿಗಳನ್ನೇ ನಿರ್ದೇಶಕರನ್ನಾಗಿ ನೇಮಕಾತಿ ಮಾಡಿ, ಇಷ್ಟು ದಿನ ಆದ ಅನ್ಯಾಯಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಪ್ರತಿಭಟನಾಪೂರ್ವಕ ಆಗ್ರಹವನ್ನು ಮಾಡಬೇಕಿದೆ. ಇದಕ್ಕೆ ಸಮಸ್ತ ರಂಗಕರ್ಮಿಗಳು ಸಹಕಾರ ಕೊಡಬೇಕಾಗಿದೆ. ರಂಗಾಯಣಗಳ ಬೆಳವಣಿಗೆಯಲ್ಲಿ ಮಹಿಳೆಯರ ಕೊಡುಗೆಗೂ ಅವಕಾಶ ಕೊಡಲೇಬೇಕಿದೆ.
ಶಶಿಕಾಂತ ಯಡಹಳ್ಳಿ
ರಂಗಕರ್ಮಿ, ಪತ್ರಕರ್ತರು
ಇದನ್ನೂ ಓದಿ- ರಂಗಾಯಣ ನಿರ್ದೇಶಕರ ನೇಮಕದಲ್ಲಿ ಅಧಿಕಾರಶಾಹಿಯ ಛಾಯೆ ಎದ್ದು ಕಾಣುವಂತಿದೆ