ಪೋಕ್ಸೋ ಕಾಯ್ದೆಯಡಿ ಆರೋಪ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ನೃತ್ಯ ನಿರ್ದೇಶಕರಾದ ಜಾನಿ ಮಾಸ್ಟರ್ ಅವರಿಗೆ ನೀಡಲಾಗಿದ್ದ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ. ಅವರ ಈ ದಿಟ್ಟ ನಿಲುವನ್ನು ನಾನು ಸ್ವಾಗತಿಸುತ್ತೇನೆ. ಆದರೆ ಬಿಎಸ್ ಯಡಿಯೂರಪ್ಪ ಅವರು ಕೂಡ ಇದೇ ತರಹದ ಕೇಸ್ ಎದುರಿಸುತ್ತಿದ್ದಾರೆ. ಭಿನ್ನ ನಿಲುವು ಏಕೆ ಎಂದು ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ಕೆಪಿಸಿಸಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರ ಮೇಲೆ ದೌರ್ಜನ್ಯ ಎಸಗುವವರ ವಿರುದ್ಧ ನಾವು ಸಹನೆ ಇಟ್ಟುಕೊಳ್ಳಬಾರದು. ಅಂತಹವರ ವಿರುದ್ಧ ನಾವು ಸಾಧ್ಯವಾದಷ್ಟು ಹೆಚ್ಚಿನ ಕಠಿಣ ನಿರ್ಧಾರ ಕೈಗೊಳ್ಳಬೇಕು. ಮಹಿಳೆಯರು ಸಾರ್ವಜನಿಕ ಕ್ಷೇತ್ರ, ಉದ್ಯಮ ಹಾಗೂ ವ್ಯಾಪಾರದಲ್ಲಿ ಮಹಿಳೆಯರ ಪಾತ್ರ ಹೆಚ್ಚುತ್ತಿರುವ ಸಂದರ್ಭದಲ್ಲಿ ಅವರಿಗೆ ಮುಜುಗರ ಹಾಗೂ ತೊಂದರೆಯಾಗದಂತಹ ವಾತಾವರಣ ನಿರ್ಮಿಸುವುದು ಎಲ್ಲಾ ಸರ್ಕಾರಗಳ ಜವಾಬ್ದಾರಿ. ಹೀಗಾಗಿ ಈ ನಿರ್ಧಾರವನ್ನು ನಾವು ಅಭಿನಂದಿಸುತ್ತೇವೆ ಎಂದಿದ್ದಾರೆ.
ಕೇಂದ್ರ ಸರ್ಕಾರದ ಮಟ್ಟದಲ್ಲಿ ತೆಗೆದುಕೊಂಡಿರುವ ಈ ನಿರ್ಧಾರ ಒಂದು ಕಡೆಯಾದರೆ, ಬಿಜೆಪಿ ಪಕ್ಷ ಮಟ್ಟದ ವಿಚಾರದಲ್ಲಿ ಯಾಕೆ ದ್ವಂದ್ವ ನಿಲುವು ತಾಳಲಾಗಿದೆ? ಮಾಜಿ ಸಿಎಂ ಯಡಿಯೂರಪ್ಪ ಅವರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದ್ದು, ಸಿಐಡಿ ತನಿಖೆಯಾಗಿ ಜುಲೈ ತಿಂಗಳಲ್ಲಿ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಈಗ ವಿಚಾರಣೆ ನಡೆಯಬೇಕಾಗಿದೆ ಎಙದು ಹೇಳಿದ್ದಾರೆ.
ಸಿಐಡಿಯವರು ಯಡಿಯಬರಪ್ಪ ಹಾಗೂ ಮೂವರು ಸಹಚರರ ವಿರುದ್ಧ 700 ಪುಟಗಳ ಆರೋಪಪಟ್ಟಿ ಸಲ್ಲಿಸಿದ್ದು, ಇವರು ಸಾಕ್ಷಿನಾಶ, ಪ್ರಕರಣ ಮುಚ್ಚಿಹಾಕುವ ವಿಚಾರ, ಸಂತ್ರಸ್ತ ಬಾಲಕಿ ಹೆಳಿಕೆಗಳನ್ನು ಸೇರಿಸಿ ಆರೋಪ ಪಟ್ಟಿ ಸಲ್ಲಿಸಲಾಗಿದೆ ಎಂದಿದ್ದಾರೆ.
ಸಹಾಯಕ್ಕೆಂದು ಬಂದ ಬಾಲಕಿ ಮೇಲೆ ಇಂತಹ ಕೆಟ್ಟ ಅನುಭವ ಆಗಿರುವ ಪ್ರಕರಣವನ್ನು ಬಹಳ ಹಗುರವಾಗಿ ಪರಿಗಣಿಸಲಾಗಿರುವುದು ದುರ್ದೈವ. ರಾಜಕೀಯಕ್ಕೂ ಇದಕ್ಕೂ ಸಂಬಂಧವಿಲ್ಲ. ಸಿಐಡಿ ತನಿಖೆಯಾಗಿ ಆರೋಪಪಟ್ಟಿಯಲ್ಲಿ ಅನೇಕ ಮಾಹಿತಿ ಇದ್ದರೂ ಇದನ್ನು ಪ್ರಶ್ನೆ ಮಾಡಬಾರದೇ? ಈ ವಿಚಾರದಲ್ಲಿ ಬಿಜೆಪಿ ಸ್ಪಷ್ಟ ನಿಲುವು ತೋರುತ್ತಿಲ್ಲ ಯಾಕೆ? ಯಡಿಯೂರಪ್ಪ ಅವರನ್ನು ಬಿಜೆಪಿ ಸಂಸದೀಯ ಮಂಡಳಿ ಸದಸ್ಯರಾಗಿ ಯಾಕೆ ಉಳಿಸಿಕೊಂಡಿದ್ದಾರೆ? ಕನಿಷ್ಠಪಕ್ಷ ಬಿಜೆಪಿಯು ಈ ಪ್ರಕರಣದ ವಿಚಾರಣೆ ಮುಗಿಯುವವರೆಗೂ ಪಕ್ಷದ ಎಲ್ಲಾ ಹುದ್ದೆಗಳಿಂದ ಅವರನ್ನು ತೆಗೆದುಹಾಕುವ ನಿರ್ಧಾರ ಯಾಕೆ ಮಾಡುತ್ತಿಲ್ಲ? ಮಹಿಳೆಯರ ಪರವಾಗಿ ಅವರ ನಿಲುವೇನು? ಎಂದು ಪ್ರಶ್ನಿಸಿದ್ದಾರೆ.
ಯಾವ ಒತ್ತಡಕ್ಕೆ ಅವರು ಮಣಿದಿದ್ದಾರಾ? ಬಿಜೆಪಿ ನಾಯಕರ ಹೇಳಿಕೆ ಪ್ರಕಾರ ಬಿಜೆಪಿ ರಾಜ್ಯಾಧ್ಯಕ್ಷರ ಬ್ಲಾಕ್ ಮೇಲ್ ನಿಂದಾಗಿ ಯಡಿಯೂರಪ್ಪ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಹೇಳುತ್ತಿದ್ದಾರೆ.
ಒಂದುಕಡೆ ಆ ಆರೋಪ ಹೊತ್ತಿರುವ ಕಾರಣ ನೃತ್ಯ ನಿರ್ದೇಶಕನಿಗೆ ಕೊಟ್ಟಿರುವ ಪ್ರಶಸ್ತಿ ಹಿಂಪಡೆಯಲಾಗಿದೆ, ಮತ್ತೊಂಡೆದೆ ಇದೇ ಆರೋಪ ಹೊತ್ತಿರುವ ಯಡಿಯೂರಪ್ಪ ಅವರ ಮೇಲೆ ಆರೋಪಪಟ್ಟಿ ದಾಖಲಾಗಿದ್ದರೂ ಯಾಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ? ಈ ವಿಚಾರದಲ್ಲಿ ಬಿಜೆಪಿ ಮನಸ್ಥಿತಿ ಏನು? ಯಡಿಯೂರಪ್ಪ ವಿರುದ್ಧ ಕ್ರಮ ಕೈಗೊಳ್ಳಲು ಬಿಜೆಪಿ ಹೈಕಮಾಂಡ್ ಹಿಂದೇಟು ಹಾಕುತ್ತಿರುವುದೇಕೆ?
ಪೋಕ್ಸೋ ಪ್ರಕರಣ ಹಾಗೂ ಈ ಕಾಯ್ದೆ ಮಾನದಂಡಗಳು ಬಹಳ ಗಂಭೀರವಾಗಿವೆ. ಈ ಆರೋಪ ಸಾಬೀತಾದರೆ ಗಂಭೀರವಾದ ಶಿಕ್ಷೆ ಒಳಗುವ ಸಾಧ್ಯತೆ ಇದೆ. ಬಿಜೆಪಿಯ ಅನೇಕ ನಾಯಕರ ಮೇಲೆ ಇಂತಹ ಆರೋಪಗಳಿವೆ. ಶಾಸಕ ಮುನಿರತ್ನ ಅವರ ಪ್ರಕರಣದಲ್ಲಿ ಬಿಜೆಪಿ ಸ್ಪಷ್ಟ ನಿಲುವು ತಾಳಿಲ್ಲ. ಹೆಚ್.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ಅವರ ವಿಚಾರದಲ್ಲೂ ಬಿಜೆಪಿ ಸ್ಪಷ್ಟ ನಿಲುವು ತೆಗೆದುಕೊಂಡಿಲ್ಲ. ಮಹಿಳೆಯರ ಮೇಲಿನ ಎಲ್ಲಾ ದೌರ್ಜನ್ಯ ಪ್ರಕರಣಗಳನ್ನು ಬಿಜೆಪಿಯವರು ರಾಜಕೀಯವಾಗಿ ನೋಡುತ್ತಿದ್ದು, ರಾಜಕೀಯವಾಗಿ ನೋಡುವ ಅಗತ್ಯವಿಲ್ಲ.
ದೇಶದ ಕುಸ್ತಿಪಟುಗಳು ತಮ್ಮ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ವಿರೋಧಿಸಿ ಬೀದಿಯಲ್ಲಿ ಹೋರಾಟ ಮಾಡಿದರು. ಈ ಪ್ರಕರಣದಲ್ಲೂ ಬಿಜೆಪಿ ನಾಯಕರು ಸಹಾನುಭೂತಿ ತೋರಲಿಲ್ಲ, ಆರೋಪಿ ಬ್ರಿಜ್ ಭೂಷಣ್ ಸಿಂಗ್ ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಈ ನಿಟ್ಟಿನಲ್ಲೇ ಬಿಜೆಪಿಯನ್ನು ಬಲತ್ಕಾರಿ ಜನತಾ ಪಕ್ಷ ಎಂದು ಕರೆಯುತ್ತಾರೆ. ಈ ರೀತಿ ಹೇಳಲು ಕಷ್ಟವಾಗುತ್ತದೆ. ಆದರೆ ಇಂತಹ ಪ್ರಕರಣಗಳು ಮಣಿಪುರದ ಘಟನೆಗಳಲ್ಲಿ ದಿಟ್ಟ ನಿಲುವು ಯಾಕೆ ತೋರುತ್ತಿಲ್ಲ?
ಮಹಿಳೆಯರ ವಿಚಾರದಲ್ಲಿ ಬಿಜೆಪಿ ಸಮರ್ಥವಾಗಿದ್ದರೆ ಯಡಿಯೂರಪ್ಪ ಅವರನ್ನು ಅವರ ಸ್ಥಾನದಿಂದ ತೆಗೆದುಹಾಕಬೇಕು. ಜಾನಿ ಮಾಸ್ಟರ್ ಪ್ರಕರಣದಲ್ಲಿನ ನಿಲುವು, ಯಡಿಯೂರಪ್ಪನವರ ಪ್ರಕರಣದಲ್ಲಿ ಯಾಕಿಲ್ಲ? ಎಂದು ಪ್ರಶ್ನಿಸಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷರ ರಾಜಕೀಯ ಹಾಗೂ ಮಾಧ್ಯಮ ಕಾರ್ಯದರ್ಶಿ ದಿಪಕ್ ತಿಮಯ್ಯ, ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥರಾದ ರಮೇಶ್ ಬಾಬು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಮಚಂದ್ರಪ್ಪ, ಕೆಪಿಸಿಸಿ ವಕ್ತಾರರಾದ ನಟರಾಜ್ ಗೌಡ ಅವರು ಉಪಸ್ಥಿತರಿದ್ದರು.