ಬೆಳಗಾವಿ: ಹೆಣ್ಣುಮಕ್ಕಳು ತಿರುಗಿಬಿದ್ದ ಮೇಲೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರಿಗೆ ಜ್ಞಾನೋದಯವಾಗಿದೆ. ಅದಕ್ಕಾಗಿ ವಿಷಾದ ವ್ಯಕ್ತಪಡಿಸಿದ್ದಾರೆ. ಆದರೆ ಗ್ಯಾರೆಂಟಿಗಳಿಂದ ಹಳ್ಳಿಗಳ ತಾಯಂದಿರು ದಾರಿತಪ್ಪಿದ್ದಾರೆ ಎಂಬ ಹೇಳಿಕೆ ವಿರುದ್ಧ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಹೆಣ್ಮಕ್ಕಳ ಬಗ್ಗೆ ಬಾಯಿಗೆ ಬಂದಂತೆ ಮಾತಾಡಿದ್ದಾರೆ. ಪ್ರತಿಯೊಂದು ತಾಲೂಕಿನಲ್ಲಿ ಹೆಣ್ಣುಮಕ್ಕಳು ಹೋರಾಟ ಮಾಡಬೇಕು. ನಿಮ್ಮ ಸ್ವಾಭಿಮಾನ ಉಳಿಸಿಕೊಳ್ಳಲು ಪ್ರತಿಭಟನೆ ಮಾಡಬೇಕು ಎಂದು ಕರೆ ನೀಡಿದರು.
ಹೆಣ್ಣುಮಕ್ಕಳ ಅನುಕೂಲಕ್ಕಾಗಿ ಎರಡು ಸಾವಿರ ರೂಪಾಯಿ ಕೊಟ್ಟಿದ್ದೇವೆ. ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆ ಅಂದ್ರೆ ಏನು ಅರ್ಥ? ಹೆಣ್ಣು ಮಕ್ಕಳಿಗೆ ಇದು ಸ್ವಾಭಿಮಾನದ ಪ್ರಶ್ನೆ ಎಂದು ಅವರು ನುಡಿದರು.
ಎಚ್ ಡಿಕೆ ಮೋಸ ಮಾಡಿ ಬೇರೆ ಜಿಲ್ಲೆಗೆ ಹೋಗಿದ್ದಾರೆ. ನನ್ನ ಆಸ್ತಿಯ ಬಗ್ಗೆ ಮಾತಾಡಿದ್ದಾರೆ. ಈ ಬಗ್ಗೆ ವಿಧಾನಸಭೆಯಲ್ಲೇ ಚರ್ಚಿಸೋಣ. ಹೇಗಿದ್ದರೂ ಕುಮಾರಸ್ವಾಮಿ ಸಂಸದರಾಗಿ ಆಯ್ಕೆಯಾಗಿ ಹೋಗಲ್ಲ. ಶಾಸಕರಾಗಿಯೇ ಇರುತ್ತಾರೆ. ನನ್ನ ಆಸ್ತಿ ಬಗ್ಗೆ ದಾಖಲೆ ಇಟ್ಟು ಚರ್ಚೆ ಮಾಡೋಣ ಬನ್ನಿ ಎಂದು ಪಂಥಾಹ್ವಾನ ನೀಡಿದ ಅವರು ಮಂಡ್ಯದಲ್ಲಿ ಹೊರಗಿನವರನ್ನು ಗೆಲ್ಲಿಸಿದ ಉದಾಹರಣೆ ಇಲ್ಲ, ನೀವು ಸಹ ಗೆಲ್ಲಲ್ಲ ಎಂದು ತಿವಿದರು.
ಬಿಜೆಪಿಗೆ ಜನರ ಪರ ಕೆಲಸ ಮಾಡುವ ಅವಕಾಶ ಇತ್ತು. ಅಧಿಕಾರದಲ್ಲಿ ಇದ್ದಾಗ ಬಿಜೆಪಿಗೆ ಅವಕಾಶ ಇತ್ತು. ಆದರೆ ಅವರು ಮಾಡಿಲ್ಲ. ಕೇವಲ ಹತ್ತು ತಿಂಗಳ ಹಿಂದೆ ಮೋದಿ ಜೆಡಿಎಸ್ ಪಕ್ಷವನ್ನು ವಂಶಪಾರಂಪರ್ಯ ಪಕ್ಷ ಎಂದು ಟೀಕಿಸಿದ್ದರು. ಇದೀಗ ಅದೇ ಮೈಸೂರಿನಲ್ಲಿ ಜೆಡಿಎಸ್ ಪಕ್ಷವನ್ನು ಹೊಗಳಿದ್ದಾರೆ ಎಂದು ನುಡಿದರು.
100ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಅಭ್ಯರ್ಥಿಗಳ ಬದಲಾವಣೆ ಮಾಡಿದ್ದೀರಿ. 14 ಅಭ್ಯರ್ಥಿಗಳ ಕ್ಷೇತ್ರಗಳನ್ನು ಬದಲಾಯಿಸಿದ್ದೀರಿ. 5 ಬಾರಿ ಗೆದ್ದ ಅಭ್ಯರ್ಥಿಗಳನ್ನು ಕೂಡ ಬದಲಾಯಿಸಿದ್ದೀರಿ. ಈ ಬಾರಿ ಗೆಲ್ಲೋದಿಲ್ಲವೆಂಬುದು ನಿಮಗೇ ಗೊತ್ತಾಗಿದೆ ಅದಕ್ಕೇ ಈ ಬದಲಾವಣೆ ಎಂದು ಲೇವಡಿ ಮಾಡಿದ ಅವರು ಈ ಬಾರಿ ಈ ಬಾರಿ ಬಿಜೆಪಿಗೆ ಬಹುಮತ ಬರುವುದಿಲ್ಲ ಎಂದು ಭವಿಷ್ಯ ನುಡಿದರು.