ಹೊಸದಿಲ್ಲಿ: ಕರ್ನಾಟಕದ ಪಲ್ಟಿ ಕುಮಾರ್ ಎಂದೇ ಹೆಸರಾದ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಉದ್ದೇಶಿತ ಬಿಜೆಪಿ ಪಾದಯಾತ್ರೆ ಕುರಿತು ಹರಿಹಾಯ್ದು, ರಾಜ್ಯದಲ್ಲಿ ನೆರೆ, ಪ್ರವಾಹದ ಸ್ಥಿತಿ ಇದ್ದು, ರೈತರು ಸಂಕಟದಲ್ಲಿರುವಾಗ ಪಾದಯಾತ್ರೆ ಯಾಕೆ ಬೇಕಿತ್ತು ಎಂದು ಪ್ರಶ್ನಿಸಿ ಎರಡು ದಿನಗಳಾಗಿವೆಯಷ್ಟೆ. ಇದೀಗ, ಇದೇ ಕುಮಾರಸ್ವಾಮಿಯವರು ಆ.3ರಂದು ನಡೆಯುವ ಪಾದಯಾತ್ರೆಯನ್ನು ಉದ್ಘಾಟಿಸುವ ಮಾಹಿತಿ ಹೊರಬಿದ್ದಿದೆ.
ಸ್ವತಃ ಬಿಜೆಪಿ ಮುಖಂಡರೇ ಈ ವಿಷಯವನ್ನು ಹೊಸದಿಲ್ಲಿಯಲ್ಲಿಂದು ಸ್ಪಷ್ಟಪಡಿಸಿದ್ದು, ಪಾದಯಾತ್ರೆ ವಿಚಾರದಲ್ಲಿ ಸಣ್ಣ- ಪುಟ್ಟ ಗೊಂದಲಗಳಿದ್ದವು. ಎಲ್ಲರೂ ಕೂತು ಸಮಸ್ಯೆ ಬಗೆಹರಿಸಿಕೊಂಡಿದ್ದೇವೆ, ಎಚ್.ಡಿ.ಕುಮಾರಸ್ವಾಮಿಯವರೇ ಪಾದಯಾತ್ರೆ ಉದ್ಘಾಟಿಸಲಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ.
ಆಗಸ್ಟ್ 3ರಂದು ನಡೆಯುವ ಬೆಂಗಳೂರು-ಮೈಸೂರು ಪಾದಯಾತ್ರೆಯಲ್ಲಿ ಮಾಜಿ ಶಾಸಕ ಪ್ರೀತಂ ಗೌಡ ಅವರಿಗೆ ಯಾವುದೇ ಮಹತ್ವ ನೀಡುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ.
ದೇವೇಗೌಡರ ಕುಟುಂಬಕ್ಕೆ ವಿಷ ಹಾಕಲು ಹೊರಟಿದ್ದ ಪ್ರೀತಂ ಗೌಡ ಅವರಿಗೆ ಪಾದಯಾತ್ರೆಯ ಜವಾಬ್ದಾರಿಯನ್ನು ನೀಡಿದ್ದು ಯಾಕೆ ಎಂದು ಕುಮಾರಸ್ವಾಮಿ ಕೆಂಡಾಮಂಡಲವಾಗಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.
ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಆಗಸ್ಟ್ 3ರಿಂದ ನಡೆಯುವ ಪಾದಯಾತ್ರೆಯನ್ನು ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ನಡೆಯುವ ಪಾದಯಾತ್ರೆಯಲ್ಲಿ ಬಿಜೆಪಿ-ಜೆಡಿಎಸ್ ಶಾಸಕರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.
ಸಿದ್ಧರಾಮಯ್ಯ ಸರ್ಕಾರ ಬಡವರ ಹಣ ಲೂಟಿ ಮಾಡುವ ಸರ್ಕಾರವಾಗಿದೆ. ಭ್ರಷ್ಟಾಚಾರದ ಹಣವನ್ನು ಚುನಾವಣೆಗೆ ಬಳಕೆ ಮಾಡಿಕೊಂಡಿದೆ. ಲೋಕಸಭೆ ಚುನಾವಣೆಯಲ್ಲಿ ಜನ ಉತ್ತರ ನೀಡಿದ್ದಾರೆ. ಚುನಾವಣೆ ನಂತರವೂ ಭ್ರಷ್ಟಾಚಾರ ಮುಂದುವರೆಸಿದ್ದಾರೆ. ಸಿಎಂಗೆ ಸೇರಿದ 3.16 ಎಕರೆಯ ಭೂಮಿಯ ಬದಲಾಗಿ ಭ್ರಷ್ಟಾಚಾರದಿಂದ ಬೆಲೆ ಬಾಳುವ 14 ಸೈಟ್ ಪಡೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ , ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಪಾಲ್ಗೊಂಡಿದ್ದರು.