ಬೆಂಗಳೂರು: ಅಭಿಮಾನಿಗಳು ಅಭಿಮಾನದಿಂದ ಮಾಡಿರುವ ಕೃತ್ಯ ಇದು. ನಾವು ನಿಮ್ಮೊಂದಿಗೆ ಇದ್ದೇವೇ ಡಿ ಬಾಸ್…. ಇಂಥ ಸಂದೇಶಗಳು ಓಡಾಡುವುದಕ್ಕೆ ಶುರುವಾಗಿದೆ. ಆತ ಏನೋ ತಪ್ಪು ಮಾಡಿದ್ದಾನೆ, ಅದಕ್ಕೆ ಕೊಲೆಯಾಗಿದೆ. ನಮ್ಮ ಬಾಸ್ ತಪ್ಪು ಮಾಡೋದಿಲ್ಲ ಎಂಬ ಸಂದೇಶಗಳೂ ಹೊರಬರುತ್ತಿವೆ.
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಸೇರಿದಂತೆ 11 ಮಂದಿಯನ್ನು ಈಗಾಗಲೇ ಕಾಮಾಕ್ಷಿಪಾಳ್ಯ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇವರೊಂದಿಗೆ ಈಗಷ್ಟೇ ಪವಿತ್ರಾ ಗೌಡ ಅವರ ವಿಚಾರಣೆಯೂ ನಡೆಯುತ್ತಿದೆ.
ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅವರನ್ನು ಮೈಸೂರಿನ ರ‌್ಯಾಡಿಸನ್ ಬ್ಲೂ ಹೋಟೆಲ್ ನಿಂದ ಬಂಧಿಸಿ ಕರೆತರುತ್ತಿದ್ದಂತೆ ಕೇಳಿ ಬಂದ ಹೆಸರು ಪವಿತ್ರಾ ಗೌಡ. ದರ್ಶನ್ ಅವರೊಂದಿಗೆ ಲಿವಿಂಗ್ ಟುಗೆದರ್ ಜೀವನ ಮಾಡುತ್ತಿದ್ದಾರೆ ಎನ್ನಲಾದ ಪವಿತ್ರಾ ಗೌಡ ಅವರಿಗೆ ಈ ರೇಣುಕಾಸ್ವಾಮಿ ಅವರು ಅಸಭ್ಯ ಹಾಗೂ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದರು. ಅದಕ್ಕಾಗಿಯೇ ಈ ಕೊಲೆ ನಡೆದಿದೆ ಎಂಬುದು ಪ್ರಾಥಮಿಕ ಮಾಹಿತಿಗಳು.
ಆದರೆ ಈಗ ಇಡೀ ಪ್ರಕರಣಕ್ಕೆ ‘ಅಭಿಮಾನ’ದ ಲೇಪನ ಹಚ್ಚಿ ಅದರ ತೀವ್ರತೆಯನ್ನು ಕುಗ್ಗಿಸುವ ಪ್ರಯತ್ನಗಳು ನಡೆಯುತ್ತಿವೆ. “ಕೊಲೆಯಾದವರು ಮತ್ತು ಕೊಲೆ ಮಾಡಿದವರು ಇಬ್ಬರೂ ದರ್ಶನ್ ಅಭಿಮಾನಿಗಳೇ. ರೇಣುಕಾಸ್ವಾಮಿ, ದರ್ಶನ್ ಅವರ ಅಭಿಮಾನಿ. ಪವಿತ್ರಾ ಗೌಡ ಅವರ ಆಗಮನದಿಂದ ದರ್ಶನ್ ಅವರ ದಾಂಪತ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ, ಪವಿತ್ರಾ ಗೌಡ ಅವರಿಗೆ ಅವಾಚ್ಯ ಪದಗಳಿಂದ ಸಂದೇಶ ಕಳಿಸಿದ್ದಾರೆನ). ಇದು ದರ್ಶನ್ ಅವರಿಗೆ ಸಿಟ್ಟು ತರಿಸಿದ್ದು, ರೇಣುಕಾಸ್ವಾಮಿ ಅವರನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದಾರೆ. ದರ್ಶನ್ ಅವರ ಬೇರೆ ಅಭಿಮಾನಿಗಳೇ. ಕೊಲೆ ಆರೋಪ ಹೊತ್ತವರು ಸಹ ದರ್ಶನ್ ಅಭಿಮಾನಿಗಳೇ. ಈ ಸಂದರ್ಭದಲ್ಲಿ ದರ್ಶನ್ ಸಹ ಹಾಜರಿದ್ದಷ್ಟೇ.” ಎಂಬ ನರೇಟಿವ್ ಗಳನ್ನು ಈಗ ಹರಡಲಾಗುತ್ತಿದೆ.
ಹಾಗಿದ್ದರೆ ಇದು ಅಭಿಮಾನಿಗಳಿಂದ ಅಭಿಮಾನಕ್ಕೆ ಅಭಿಮಾನಿಯೇ ಕೊಲೆಗೀಡಾದ ಪ್ರಕರಣವೇ? ಖಂಡಿಯ ಅಲ್ಲ. ರೇಣುಕಾಸ್ವಾಮಿ ಕೊಲೆಯ ಪ್ರಕರಣಕ್ಕೆ ‘ಅಭಿಮಾನ’ದ ಬಣ್ಣ ಬಳಿಯುವ ಮೂಲಕ ಕೊಲೆ ಪ್ರಕರಣದ ಗಂಭೀರತೆಯನ್ನು, ಅದರ ತೀವ್ರತೆಯನ್ನು ಕಡಿಮೆ ಮಾಡಿ, ಇಡೀ ಪ್ರಕರಣವನ್ನು ಅಭಿಮಾನದ ಅಲೆಯಲ್ಲಿ ಮುಳುಗಿಸುವ ಪ್ರಯತ್ನ ಮಾಡಲಾಗುತ್ತಿದೆ.
ಇದು ಅಭಿಮಾನದಿಂದ ಅಭಿಮಾನಿಗಳ ಅತಿರೇಕದಿಂದ ಆಗಿರುವ ದುರಂತ ಅಲ್ಲ. ಯಾಕೆಂದರೆ ಈಗಾಗಲೇ ಬಂಧನಕ್ಕೊಳಗಾಗಿರುವ 11 ಮಂದಿಯ ಹಿನ್ನೆಲೆ ನೋಡಿದರೆ ಅವರೆಲ್ಲ ದರ್ಶನ್ ಅವರ ಆಪ್ತರು. ಆರೋಪಿಗಳ ಪೈಕಿ ಲಕ್ಷ್ಮಣ್ ಎಂಬುವವರು ಹಲವು ವರ್ಷಗಳಿಂದ ದರ್ಶನ್ ಅವರಿಗೆ ಕಾರು ಚಾಲಕ ಮತ್ತು ಅಂಗರಕ್ಷಕ ಕೂಡ. ವಿನಯ್ ದರ್ಶನ್ ಅವರ ಪರಮ ಆಪ್ತ. ಉಳಿದವರು ದರ್ಶನ್ ಅವರೊಂದಿಗೆ ಬೇರೆ ಬೇರೆ ಬ್ಯುಸಿನೆಸ್- ವ್ಯವಹಾರಗಳಲ್ಲಿ ಪಾಲುದಾರರು ಮತ್ತು ಸ್ನೇಹಿತರೇ ಆಗಿದ್ದಾರೆ.
ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿರುವುದು ಆರೋಪಿಗಳ ಪೈಕಿ ಒಬ್ಬರಾದ ವಿನಯ್ ಅವರ ಮಾನವ ತೋಟದ ಮನೆಯ ಶೆಡ್ ನಲ್ಲಿ.
ಹೀಗೆ ದರ್ಶನ್ ಅವರ ಸ್ನೇಹಿತರು, ಅಂಗರಕ್ಷರು ಸೇರಿ ಸ್ವತಃ ದರ್ಶನ್ ಅವರ ಹಾಜರಿಯಲ್ಲೇ ನಡೆದಿರುವ ಅಮಾಯಕ ಸಾವಿನ ಪ್ರಕರಣವನ್ನು ಅಭಿಮಾನದ ಫ್ರೇಮ್ ನಲ್ಲಿ ಮರೆಮಾಚುವ ಪ್ರಯತ್ನಗಳು ನಡೆಯುತ್ತಿವೆ. ತಮ್ಮ ನೆಚ್ಚಿನ ನಟನ ಸಿನಿಮಾಗಳ ಬಗ್ಗೆ ಹೊಗಳುವ, ತಮ್ಮ ನಟನ ಚಿತ್ರಗಳ ಬಗ್ಗೆ ಬೇರೆಯವರು ತಪ್ಪು ಮಾತನಾಡಿದಾಗ ಸಾಮಾಜಿಕ ಜಾಲತಾಣಗಳಲ್ಲಿ ಮಾತಿನ ಯುದ್ಧ ಮಾಡುತ್ತಾರೆಯೇ ಹೊರತು, ಕೊಲೆ ಮಾಡುವ ಹಂತಕ್ಕೆ ಯಾವ ಅಭಿಮಾನಿಯೂ ಹೋಗಲಾರ.
ಒಂದು ಇನ್ಸ್ಟಾ ಗ್ರಾಂ ಮೆಸೇಜು ಒಂದು ಕೊಲೆಗೆ ಕಾರಣವಾಗುತ್ತದೆ ಎಂದರೆ ನಾವು ಎಂಥ ಕಾಲದಲ್ಲಿ ಇದ್ದೇವೆ ಎಂದು ಗಾಬರಿಯಾಗುತ್ತದೆ. ಇದು ಅಭಿಮಾನದ ಕೊಲೆಯಲ್ಲ, ದುಡ್ಡಿನ ದೌಲತ್ತು, ಪೊಗರು, ದುರಹಂಕಾರದಿಂದ ನಡೆದ ಕೊಲೆ.