ಸುಪ್ರೀಂ ಕೋರ್ಟ್, ಎಲ್ಲಾ ನ್ಯಾಯಾಧೀಶರುಗಳ ನಡಾವಳಿಗಳ ಕಾರ್ಯಸೂಚಿಗಳನ್ನು ಇನ್ನಷ್ಟು ಕಟ್ಟಿನಿಟ್ಟಾಗಿಸಬೇಕಿದೆ. ವ್ಯಕ್ತಿಗತ ಆಚಾರ ವಿಚಾರ ಅಭಿಪ್ರಾಯಗಳನ್ನು ಯಾವುದೇ ನ್ಯಾಯಾಧೀಶರುಗಳು ಎಂದೂ ವ್ಯಕ್ತಪಡಿಸದೇ ಕಾನೂನಿನ ಚೌಕಟ್ಟಿನಲ್ಲಿ ನ್ಯಾಯನಿರ್ಣಯ ತೆಗೆದುಕೊಳ್ಳುವಂತೆ ನಿರ್ದೇಶಿಸಬೇಕಿದೆ. ಸಂವಿಧಾನದ ಆಶಯಕ್ಕೆ ಭಂಗ ತರುವ, ಕಾನೂನಿನ ಚೌಕಟ್ಟನ್ನು ಉಲ್ಲಂಘಿಸುವ ನ್ಯಾಯಾಧೀಶರುಗಳನ್ನು ಶಿಸ್ತು ಕ್ರಮಕ್ಕೆ ಆಳವಡಿಸಿ ಶಿಕ್ಷೆಗೆ ಗುರಿಪಡಿಸುವ ವ್ಯವಸ್ಥೆಯೊಂದನ್ನು ರೂಪಿಸಬೇಕಿದೆ – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
ಕೊನೆಗೂ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳಾದ ಶ್ರೀಶಾನಂದರು ತಮ್ಮ ಆಕ್ಷೇಪಾರ್ಹ ಹೇಳಿಕೆಗಳಿಗೆ ವಿಶಾದ ವ್ಯಕ್ತಪಡಿಸಿದ್ದಾರೆ. “ನನ್ನ ಆಕ್ಷೇಪಾರ್ಹ ಹೇಳಿಕೆಗಳು ಯಾರಿಗಾದರೂ ನೋವುಂಟು ಮಾಡಿದ್ದರೆ ಅದಕ್ಕಾಗಿ ಪ್ರಾಮಾಣಿಕವಾಗಿ ವಿಷಾದ ವ್ಯಕ್ತಪಡಿಸುತ್ತೇನೆ” ಎಂದು ಸೆ.21 ರಂದು ಹೈಕೋರ್ಟ್ ಹಾಲ್ ನಲ್ಲಿ ಹೇಳಿದ್ದಾರೆ.
ಕ್ಷಮೆಯಾಚಿಸುವುದು ಅವರ ಸ್ಥಾನಮಾನಕ್ಕೆ ಘನತೆ ಗೌರವಕ್ಕೆ ತಕ್ಕುದಲ್ಲವೆಂದು ಬಗೆದು ಕೇವಲ ವಿಷಾದ ವ್ಯಕ್ತಪಡಿಸಿ ಸುಪ್ರೀಂ ಕೋರ್ಟ್ ಬೀಸಬಹುದಾಗಿದ್ದ ವಿಚಾರಣೆ ಕ್ರಮದಿಂದ ಪಾರಾಗಲು ವಿಷಾದವೆಂಬ ಗುರಾಣಿ ಪ್ರಯೋಗ ಮಾಡಿದ್ದಾರೆ. ಈ ನ್ಯಾಯಮೂರ್ತಿಗಳ ಮತಾಂಧ ಹೇಳಿಕೆಯ ಕುರಿತು ಸುದ್ದಿ ಮಾಧ್ಯಮಗಳು ಮೌನವಹಿಸಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಸುಪ್ರೀಂ ಕೋರ್ಟ್ ಸಹ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ರವರಿಗೆ ಪ್ರಕರಣದ ಕುರಿತು ಎರಡು ದಿನಗಳಲ್ಲಿ ವರದಿ ಸಲ್ಲಿಸಬೇಕೆಂದು ಆದೇಶಿಸಿತ್ತು. ಹೀಗಾಗಿ ನ್ಯಾ. ಶ್ರೀಶಾನಂದರು ಓಪನ್ ಕೋರ್ಟ್ ನಲ್ಲಿ ವಿಷಾದ ವ್ಯಕ್ತ ಪಡಿಸಬೇಕಾಯ್ತು.
ಏನಾಗಿದೆ ಕೆಲವು ನ್ಯಾಯಮೂರ್ತಿಗಳಿಗೆ? ಯಾಕೆ ತಮ್ಮ ವ್ಯಕ್ತಿಗತ ಅನಿಸಿಕೆ ಅಭಿಪ್ರಾಯಗಳನ್ನು ಸಾರ್ವತ್ರೀಕರಣ ಗೊಳಿಸುತ್ತಿದ್ದಾರೆ?. ಪ್ರಶ್ನಾತೀತ ನ್ಯಾಯನಿರ್ಣಯ ಅಧಿಕಾರ ಸಿಕ್ಕಿದೆ ಎಂದು ಸರ್ವಾಧಿಕಾರಿ ಮನೋಭಾವ ತೋರುತ್ತಿದ್ದಾರೆ?. ತಾವು ಅಂದುಕೊಂಡಿದ್ದು ಆಡಿದ್ದೆಲ್ಲಾ ಸರಿಯಾದದ್ದು ಎನ್ನುವ ಶ್ರೇಷ್ಠತೆಯ ವ್ಯಸನ ಕೆಲವು ನ್ಯಾಯಮೂರ್ತಿಗಳನ್ನು ಕಾಡುತ್ತಿದೆಯೆ? ಇಂತಹ ಆರೋಪಕ್ಕೆ ಇನ್ನೊಂದು ಪ್ರಕರಣ ಹೀಗಿದೆ.
ಹೈಕೋರ್ಟ್ ನ ನ್ಯಾಯಾಧೀಶರಾದ ಶ್ರೀಕೃಷ್ಣ ದೀಕ್ಷಿತ್ ರವರ ಮುಂದೆ ವಿಚ್ಚೇದನದ ಪ್ರಕರಣವೊಂದು ವಿಚಾರಣೆಗೆ ಬಂದಿತ್ತು. ವಿಚಾರಣೆ ಮಾಡಿ ನ್ಯಾಯಯುತವಾದ ತೀರ್ಮಾನ ತೆಗೆದುಕೊಳ್ಳಬೇಕಾಗಿದ್ದ ನ್ಯಾಯಮೂರ್ತಿಗಳು ಡೈವೋರ್ಸ್ ಬಯಸಿದ್ದ ದಂಪತಿಗಳನ್ನು ನ್ಯಾಯಾಲಯದ ಮಧ್ಯಸ್ಥಿಕೆ ಕೇಂದ್ರಕ್ಕೆ ಕಳುಹಿಸುವ ಬದಲಾಗಿ ದಾಂಪತ್ಯದ ಸಮಸ್ಯೆ ಇತ್ಯರ್ಥ ಪಡಿಸಿಕೊಳ್ಳಲು ಗವಿಸಿದ್ದೇಶ್ವರ ಸ್ವಾಮಿಗಳ ಬಳಿ ಪತ್ರ ಬರೆದು ಕಳಿಸಿದರು. ಸಾಂವಿಧಾನಿಕ ವ್ಯವಸ್ಥೆಯಲ್ಲಿ ಧಾರ್ಮಿಕ ವ್ಯಕ್ತಿಗಳು ಕಾನೂನಿಗಿಂತಲೂ ದೊಡ್ಡವರೇನಲ್ಲ. ಸ್ವಾಮೀಜಿಗಳೇ ನ್ಯಾಯನಿರ್ಣಯ ಮಾಡಿ ತೀರ್ಪು ಕೊಡುವುದಾದರೆ ಕೋರ್ಟುಗಳಾದರೂ ಯಾಕೆ ಬೇಕು? ಎಲ್ಲಾ ಧರ್ಮದ ಮಠ ಪೀಠಗಳನ್ನೇ ನ್ಯಾಯಾಲಯಗಳಾಗಿ ಪರಿವರ್ತಿಸಿ ಅಲ್ಲಿಯ ಮಠಾಧೀಶರನ್ನೇ ನ್ಯಾಯಾಧೀಶರನ್ನಾಗಿ ಮಾಡಿದರೆ ಸಾಕು? ಇಂತಹ ಪರ್ಯಾಯ ನ್ಯಾಯಾಲಯದ ವ್ಯವಸ್ಥೆಯೊಂದು ಸಿರಿಗೆರೆ ಬ್ರಹನ್ಮಠದಲ್ಲಿ ಈಗಾಗಲೇ ಹಲವಾರು ದಶಕಗಳಿಂದ ಕಾರ್ಯನಿರ್ವಹಿಸುತ್ತಿದೆ. ಇದೇ ಮಾದರಿಯನ್ನು ಎಲ್ಲಾ ಧಾರ್ಮಿಕ ಕ್ಷೇತ್ರಗಳಿಗೆ ವಿಸ್ತರಿಸಿದರೆ ನ್ಯಾಯಾಂಗದ ಸಮಯ ಹಣ ಎಲ್ಲವೂ ಉಳಿತಾಯವಾಗುತ್ತದೆ ಅಲ್ಲವೇ?
ಆದರೆ ಇಂತಹುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಸಾಧ್ಯ. ಇದು ಎಲ್ಲಾ ನ್ಯಾಯಾಧೀಶರಿಗೂ ಗೊತ್ತಿದೆ. ಆದರೂ ಕೆಲವೊಮ್ಮೆ ಕಾನೂನಿನ ಚೌಕಟ್ಟನ್ನು ಮೀರಿ ನ್ಯಾಯಾಧೀಶರು ತಮ್ಮ ವೈಯಕ್ತಿಕ ನಂಬಿಕೆಗಳನ್ನು ಆಧರಿಸಿ ಕಾನೂನುಬಾಹಿರ ಕ್ರಮಕ್ಕೆ ಅನಧಿಕೃತವಾಗಿ ಆದೇಶಿಸುತ್ತಲೇ ಇರುತ್ತಾರೆ. ನ್ಯಾಯಾಂಗ ವ್ಯವಸ್ಥೆಗೆ ಮುಜುಗರವನ್ನುಂಟು ಮಾಡುತ್ತಾರೆ. ನ್ಯಾಯಾಲಯದ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವಂತೆ ಮಾಡುತ್ತಾರೆ.
ಪಾಪ.. ವಿಚ್ಛೇದನೆ ಬಯಸಿ ಬಂದ ಆ ದಂಪತಿಗಳು ನ್ಯಾಯಮೂರ್ತಿಗಳ ಮಾರ್ಗದರ್ಶನದಂತೆ ಆ ಗವಿಮಠಕ್ಕೆ ಹೋದರಾದರೂ ಮಠದ ಗವಿಸಿದ್ದೇಶ್ವರ ಸ್ವಾಮಿಗಳೋ ದಿವ್ಯಮೌನವೃತದಲ್ಲಿದ್ದಾರಂತೆ. ಬಹುಷಃ ಮಾತಿಗಿಂತ ಮೌನವೇ ದಾಂಪತ್ಯದ ವಿರಸ ಸಂಘರ್ಷಗಳಿಗೆ ಪರಿಹಾರವೆಂದು ಸ್ವಾಮಿಗಳು ಸಾಂಕೇತಿಕವಾಗಿ ಮೌನದ ಮೂಲಕ ಸೂಚಿಸಿರಬಹುದೇನೋ.
ಕಾನೂನು ಎಲ್ಲರಿಗೂ ಒಂದೇ ಎಂಬುದು ಹಲವಾರು ಸಲ ಸುಳ್ಳಾಗಿದೆ. ಬೇರೆ ಯಾರಾದರೂ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ಕೊಟ್ಟರೆ ಅಂತಹ ದುರುಳರ ಮೇಲೆ ನಾನ್ ಬೇಲೇಬಲ್ ಪೋಕ್ಸೊ ಪ್ರಕರಣ ದಾಖಲಿಸಿ ಜೈಲಿಗೆ ಹಾಕಲಾಗುತ್ತದೆ. ಅದೇ ಯಡಿಯೂರಪ್ಪನವರಂತಹ ಪ್ರಭಾವಿಗಳ ಮೇಲೆ ಪೋಕ್ಸೋ ಪ್ರಕರಣ ದಾಖಲಾದರೆ ಹೈಕೋರ್ಟ್ ಒಂದೇ ಒಂದು ದಿನವೂ ನ್ಯಾಯಾಂಗ ಬಂಧನಕ್ಕೆ ಕಳುಹಿಸದೆ ಜಾಮೀನು ನೀಡುತ್ತದೆ. ಪ್ರಭಾವ ವಯಸ್ಸು ಅಂತೆಲ್ಲಾ ಹೇಳಿ ನ್ಯಾಯಾಲಯದ ವಿಚಾರಣೆಗೆ ಖುದ್ದು ಹಾಜರಾಗುವುದರಿಂದಲೂ ನ್ಯಾಯಾಧೀಶರು ರಿಯಾಯಿತಿ ನೀಡುತ್ತಾರೆ. ಹಾಗಾದರೆ ಕಾನೂನು ಎಲ್ಲರಿಗೂ ಒಂದೇ ಎಂಬುದನ್ನು ನಂಬುವುದಾದರೂ ಹೇಗೆ? ವಿರೋಧ ಪಕ್ಷದವರ ಮೇಲೆ ಆರೋಪ ಬಂದಾಗ ಜಾಮೀನನ್ನೂ ನೀಡದೆ ಕೆಲವು ಜಡ್ಜ್ ಗಳು ಜೈಲಿಗೆ ಕಳಿಸುತ್ತಾರೆ. ಆಳುವ ಪಕ್ಷದಲ್ಲಿರುವವರು ಮಾಡುವ ಕುಕೃತ್ಯದ ಕುರಿತು ಜಾಣಮೌನಕ್ಕೆ ಜಾರುತ್ತಾರೆ. ಇಂತಹ ಅನೇಕಾನೇಕ ಉದಾಹರಣೆಗಳನ್ನು ಕೊಡಬಹುದಾಗಿದೆ.
ಎಲ್ಲಾ ನ್ಯಾಯಾಧೀಶರೂ ಹೀಗೆ ಎಂದು ಹೇಳಲಾಗದು. ಆದರೆ ಪ್ರಭುತ್ವದ ಪರವಾಗಿರುವ, ಸನಾತನ ವಿಚಾರಗಳಿಂದ ಪ್ರೇರೇಪಿತರಾಗಿರುವ, ಸರ್ವಾಧಿಕಾರಿ ಮನೋಭಾವದ ಕೆಲವು ನ್ಯಾಯಾಧೀಶರುಗಳು ಮಾತ್ರ ನ್ಯಾಯಾಂಗ ವ್ಯವಸ್ಥೆಗೆ ಆಗಾಗ ಅಪಚಾರ ಮಾಡುತ್ತಿರುತ್ತಾರೆ. ತಮ್ಮನ್ನು ಯಾರೂ ಪ್ರಶ್ನಿಸಲು ಸಾಧ್ಯವಿಲ್ಲ, ತಾವು ಪ್ರಶ್ನಾತೀತರು ಎನ್ನುವ ಮನೋಭಾವವೇ ಇಂತಹ ನಡವಳಿಕೆಗಳಿಗೆ ಕಾರಣವಾಗಿದೆ. ಯಾರಾದರೂ ಪ್ರಶ್ನಿಸುವ ಉದ್ಧಟತನ ತೋರಿದರೆ ಜಳಪಿಸಲು ನ್ಯಾಯಾಂಗ ನಿಂದನೆಯ ಅಸ್ತ್ರ ನ್ಯಾಯಾಧೀಶರ ಬಳಿ ಸದಾಸಿದ್ದವಾಗಿರುತ್ತದೆ. ಅಂತಹ ಕಾನೂನಾಸ್ತ್ರದ ಬಲದಿಂದಾಗಿ ನ್ಯಾಯಮೂರ್ತಿಗಳಿಗೆ ಭಯವೇ ಇಲ್ಲವಾಗಿದೆ, ಅವರು ಮಾತಾಡಿದ್ದೆಲ್ಲಾ ಅಂತವರಿಗೆ ವೇದವಾಖ್ಯವಾಗಿದೆ. ಯಾರೋ ಕೆಲವು ನ್ಯಾಯಾಧೀಶರ ಇಂತಹ ಸರ್ವಾಧಿಕಾರಿ ಮನೋಭಾವದ ಕೃತ್ಯದಿಂದಾಗಿ ಇಡೀ ನ್ಯಾಯಾಂಗ ವ್ಯವಸ್ಥೆಯ ವಿಶ್ವಾಸಾರ್ಹತೆ ಅನುಮಾನಕ್ಕೆ ಕಾರಣವಾಗುತ್ತದೆ.
ಇಂತಹುದಕ್ಕೆಲ್ಲಾ ಕಡಿವಾಣ ಹಾಕಲು ಸುಪ್ರೀಂ ಕೋರ್ಟು ಎಲ್ಲಾ ನ್ಯಾಯಾಧೀಶರುಗಳ ನಡಾವಳಿಗಳ ಕಾರ್ಯಸೂಚಿಗಳನ್ನು ಇನ್ನಷ್ಟು ಕಟ್ಟಿನಿಟ್ಟಾಗಿಸ ಬೇಕಿದೆ. ವ್ಯಕ್ತಿಗತ ಆಚಾರ ವಿಚಾರ ಅಭಿಪ್ರಾಯಗಳನ್ನು ಯಾವುದೇ ನ್ಯಾಯಾಧೀಶರುಗಳು ಎಂದೂ ವ್ಯಕ್ತಪಡಿಸದೇ ಕಾನೂನಿನ ಚೌಕಟ್ಟಿನಲ್ಲಿ ನ್ಯಾಯನಿರ್ಣಯ ತೆಗೆದುಕೊಳ್ಳುವಂತೆ ನಿರ್ದೇಶಿಸ ಬೇಕಿದೆ. ಸಂವಿಧಾನದ ಆಶಯಕ್ಕೆ ಭಂಗ ತರುವ, ಕಾನೂನಿನ ಚೌಕಟ್ಟನ್ನು ಉಲ್ಲಂಘಿಸುವ ನ್ಯಾಯಾಧೀಶರುಗಳನ್ನು ಶಿಸ್ತು ಕ್ರಮಕ್ಕೆ ಆಳವಡಿಸಿ ಶಿಕ್ಷೆಗೆ ಗುರಿಪಡಿಸುವ ವ್ಯವಸ್ಥೆಯೊಂದನ್ನು ಸರ್ವೋಚ್ಚ ನ್ಯಾಯಾಲಯ ರೂಪಿಸಬೇಕಿದೆ.
ಸರಕಾರಗಳು ಬರುತ್ತವೆ ಹೋಗುತ್ತವೆ, ಅಧಿಕಾರಸ್ಥರು ಬರುತ್ತಾರೆ ಹೋಗುತ್ತಾರೆ. ನ್ಯಾಯಮೂರ್ತಿಗಳೂ ಬರುತ್ತಾರೆ ಹೋಗುತ್ತಾರೆ. ಆದರೆ ಡಾ.ಅಂಬೇಡ್ಕರ್ ರಚಿಸಿದ ಸಮಾನತೆಯನ್ನು ಆಧರಿಸಿದ ಸಂವಿಧಾನ ಇರುವವರೆಗೂ ನ್ಯಾಯಾಂಗ ವ್ಯವಸ್ಥೆ ಮಾತ್ರ ಖಾಯಂ ಆಗಿರುತ್ತದೆ. ಅದರ ಆಶಯಗಳಿಗೆ ತಕ್ಕುದಾಗಿ ನ್ಯಾಯ ನಿರ್ಣಯ ಮಾಡುವುದಷ್ಟೇ ನ್ಯಾಯಾಧೀಶರುಗಳ ಕರ್ತವ್ಯವಾಗಿದೆ. ಪ್ರತಿಯೊಬ್ಬ ನ್ಯಾಯಾಧೀಶರುಗಳೂ ತಮ್ಮ ಸಾಂವಿಧಾನಿಕ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದರೆ ಈ ದೇಶ ಉದ್ದಾರವಾಗುತ್ತದೆ. ಇಲ್ಲದೇ ಹೋದರೆ ವಿಧ್ವಂಸಕ ಶಕ್ತಿಗಳ ಪಾಲಾಗಿ ಹಾಳಾಗುತ್ತದೆ. ಕಾರ್ಯಾಂಗ ಶಾಸಕಾಂಗ ಅಷ್ಟೇ ಯಾಕೆ ಪತ್ರಿಕಾಂಗವೂ ಭ್ರಷ್ಟವಾಗಿರುವ ಪ್ರಸ್ತುತ ಸನ್ನಿವೇಶದಲ್ಲಿ ಈ ದೇಶದ ಜನತೆ ಇನ್ನೂ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆಗಳನ್ನು ಇಟ್ಟುಕೊಂಡಿದ್ದಾರೆ. ಆ ನಂಬಿಕೆ ನಾಶವಾದ ದಿನವೇ ಪ್ರಜಾಪ್ರಭುತ್ವದ ಸೋಲು. ಸಂವಿಧಾನದ ಆಶಯವೇ ಹಾಳು.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು, ಪತ್ರಕರ್ತರು.
ಇದನ್ನೂ ಓದಿ- ಕಾನೂನಿನ ಕುಣಿಕೆಯಲ್ಲಿ ಹನಿಟ್ರ್ಯಾಪ್ ಮುನಿ