ನವದೆಹಲಿ: ಶೂಟರ್ ಮನು ಭಾಕರ್, ಚೆಸ್ ವಿಶ್ವ ಚಾಂಪಿಯನ್ ದೊಮ್ಮರಾಜು ಗುಕೇಶ್ ಸೇರಿ ನಾಲ್ವರನ್ನು ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕ್ರೀಡಾ ಸಚಿವಾಲಯ ತಿಳಿಸಿದೆ. ಪುರುಷರ ಹಾಕಿ ತಂಡದ ಕ್ಯಾಪ್ಟನ್ ಹರ್ಮನ್‌ಪ್ರೀತ್ ಸಿಂಗ್ ಹಾಗೂ ಪ್ಯಾರಾ ಒಲಿಂಪಿಕ್ ಚಿನ್ನದ ಪದಕ ವಿಜೇತ ಪ್ರವೀಣ್ ಕುಮಾರ್ ಅವರೂ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಖೇಲ್ ರತ್ನ ಭಾರತದಲ್ಲಿ ಕ್ರೀಡಾಪಟುಗಳಿಗೆ ನೀಡಲಾಗುವ ಅತ್ಯುನ್ನತ ಪ್ರಶಸ್ತಿಯಾಗಿದೆ. ಇದೇ ವೇಳೆ ಕ್ರೀಡಾ ಇಲಾಖೆ ಅರ್ಜುನ ಪ್ರಶಸ್ತಿಗೆ 32 ಕ್ರೀಡಾಪಟುಗಳನ್ನು ಆಯ್ಕೆ ಮಾಡಿದೆ. ಇದರಲ್ಲಿ 17 ವಿಶೇಷ ಚೇತನ ಕ್ರೀಡಾಪಟುಗಳೂ ಸೇರಿದ್ದಾರೆ.
ಇತ್ತೀಚೆಗೆ ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಲಾದ ಕ್ರೀಡಾಪಟುಗಳ ಪಟ್ಟಿಯಲ್ಲಿ ಮನು ಭಾಕರ್ ಹೆಸರಿಲ್ಲ ಎಂಬ ವಿಚಾರ ಕೋಲಾಹಲಕ್ಕೆ ಕಾರಣವಾಗಿತ್ತು. ಮನು ಅವರ ತಂದೆ ರಾಮ್ ಕಿಶನ್ ಮತ್ತು ಕೋಚ್ ಜಸ್ಪಾಲ್ ರಾಣಾ ಅವರು ಸರ್ಕಾರದ ನಿರಾಧರಕ್ಕೆ ಆಕ್ರೋಶವನ್ನೂ ವ್ಯಕ್ತಪಡಿಸಿದ್ದರು. ಆದರೆ, ಅರ್ಜಿ ಸಲ್ಲಿಸುವಾಗ ತಮ್ಮ ಕಡೆಯಿಂದ ಲೋಪ ಆಗಿರಬಹುದು ಎಂದು ಸ್ವತಃ ಮನು ಭಾಕರ್ ಅವರೇ ಒಪ್ಪಿಕೊಂಡಿದ್ದರು. 22 ವರ್ಷದ ಮನು ಭಾಕರ್ ಒಲಿಂಪಿಕ್ಸ್‌ನ ಒಂದೇ ಆವೃತ್ತಿಯಲ್ಲಿ ಎರಡು ಪದಕಗಳನ್ನು ಗೆದ್ದ ಸ್ವತಂತ್ರ ಭಾರತದ ಮೊದಲ ಕ್ರೀಡಾಪಟುವಾಗಿದ್ದಾರೆ. ಆಗಸ್ಟ್‌ನಲ್ಲಿ ನಡೆದ 10 ಮೀಟರ್ ಏರ್ ಪಿಸ್ತೂಲ್ ವೈಯಕ್ತಿಕ ಮತ್ತು 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಗಳಲ್ಲಿ ಅವರು ಕಂಚು ಗೆದ್ದಿದ್ದರು.
ಇದೇ ಒಲಿಂಪಿಕ್ಸ್‌ನಲ್ಲಿ ಹರ್ಮನ್‌ಪ್ರೀತ್ ಸಿಂಗ್ ಭಾರತ ಹಾಕಿ ತಂಡವನ್ನು ಸೆಮಿಫೈನಲ್‌ಗೆ ಕೊಂಡೊಯ್ದಿದ್ದರು. ಈ ಪಂದ್ಯದಲ್ಲಿ ಸೋತರೂ ಭಾರತ ತಂಡ ಕಂಚಿನ ಪದಕ ಗೆದ್ದಿತ್ತು. ಕಳೆದ ಒಲಿಂಪಿಕ್ಸ್‌ನಲ್ಲೂ ಹಾಕಿ ತಂಡ ಕಂಚು ಗೆದ್ದಾಗ ಅವರು ನಾಯಕ ಆಗಿದ್ದರು. 18 ವರ್ಷದ ಗುಕೇಶ್ ಕಳೆದ ವರ್ಷ ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತ ತಂಡಕ್ಕೆ ಐತಿಹಾಸಿಕ ಚಿನ್ನ ಗೆಲ್ಲಲು ಸಹಾಯ ಮಾಡಿದ್ದಲ್ಲದೆ, ವರ್ಷದ ಕೊನೆಯಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್‌ನಲ್ಲಿ ಗೆಲ್ಲುವ ಮೂಲಕ ಚಾಂಪಿಯನ್ ಆದ ಅತ್ಯಂತ ಕಿರಿಯ ಕ್ರೀಡಾಪಟು ಎನಿಸಿಕೊಂಡಿದ್ದರು.
ಪ್ಯಾರಿಸ್ ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಟಿ64 ಚಾಂಪಿಯನ್ ಕಿರೀಟವನ್ನು ಮುಡಿಗೇರಿಸಿಕೊಂಡ ಪ್ಯಾರಾ ಹೈಜಂಪರ್ ಪ್ರವೀಣ್ ಕೂಡ ಖೇಲ್ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಟಿ 64ನಲ್ಲಿ ಮೊಣಕಾಲಿನ ಕೆಳಗೆ ಒಂದು ಅಥವಾ ಎರಡೂ ಕಾಲುಗಳನ್ನು ಕಳೆದುಕೊಂಡಿರುವ ಮತ್ತು ಓಟಕ್ಕಾಗಿ ಪ್ರಾಸ್ಥೆಟಿಕ್ ಲೆಗ್ ಅನ್ನು ಅವಲಂಬಿಸಿರುವ ಕ್ರೀಡಾಪಟುಗಳಿಗೆ ಇರುವ ಸ್ಪರ್ಧೆ ಇದಾಗಿದೆ.