ಕೊಡೆಗಳ ಮೇಲೆ ಸರ್ಕಾರದ ಪಂಚ ಗ್ಯಾರಂಟಿಗಳೇ ಮುಂತಾದ ಕಾರ್ಯಕ್ರಮಗಳನ್ನು ಮುದ್ರಿಸಿ ಬೀದಿಬದಿ ವ್ಯಾಪಾರಿಗಳಿಗೆ ಹಂಚಿದರೆ ಜಾಹೀರಾತೂ ನೀಡಿದಂತಾಗುತ್ತದೆ. ರಣಬಿಸಿಲು, ಮಳೆಯಲ್ಲಿ ವ್ಯಾಪಾರ ಮಾಡುವ ಶ್ರಮಜೀವಿಗಳಿಗೆ ಆಸರೆಯನ್ನೂ ನೀಡಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯವಾದಿ ಮತ್ತು ಕಾಂಗ್ರೆಸ್ ಮುಖಂಡ ಡಾ.ಸಿ.ಎಸ್. ದ್ವಾರಕಾನಾಥ್ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಬಹಿರಂಗ ಪತ್ರ ಬರೆದಿರುವ ಅವರು, ಕರ್ನಾಟಕ ಸರ್ಕಾರದಿಂದ ಈಗಾಗಲೇ ‘ಗೃಹಲಕ್ಷ್ಮಿ ‘, ‘ಗೃಹಜ್ಯೋತಿ’, ‘ಅನ್ನಬಾಗ್ಯ’, ‘ಮಹಿಳೆಯರಿಗೆ ಉಚಿತ ಪ್ರಯಾಣ’ ಮತ್ತು ‘ಯುವನಿಧಿ’ ಮುಂತಾದ ಜನಪ್ರಿಯ ಕಾರ್ಯಕ್ರಮಗಳನ್ನು ನೀಡಿದ್ದೀರಿ. ಈ ಕಾರ್ಯಕ್ರಮಗಳು ಈಗಾಗಲೇ ಜನಜನಿತವಾಗಿವೆ. ಇವುಗಳ ಕುರಿತು ಜಾಹೀರಾತು ನೀಡಲು ಬೀದಿಬದಿ ವ್ಯಾಪಾರಿಗಳನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ದಿನನಿತ್ಯ ಕನ್ನಡ ಮತ್ತು ಇಂಗ್ಲಿಷ್ ದಿನ ಪತ್ರಿಕೆಗಳಿಗೆ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ವರ್ಣಮಯವಾದ ಪೂರ್ಣ ಪುಟದ ಜಾಹೀರಾತುಗಳನ್ನು ನೀಡುತಿದ್ದೀರಿ. ಇದರೊಂದಿಗೆ ಸರ್ಕಾರದ ಇತರೇ ಕಾರ್ಯಕ್ರಮಗಳಿಗೆ ಪ್ರಚಾರ ನೀಡಲು ಸಾಮಾಜಿಕ ಜಾಲತಾಣವೂ ಸೇರಿದಂತೆ ಅನೇಕ ಮಾದ್ಯಮಗಳಿಗೆ ಕೋಟ್ಯಾಂತರ ರೂಪಾಯಿ ಸರ್ಕಾರದ ಹಣ ಬಳಕೆಯಾಗುತ್ತಿದೆ. ಈ ರಾಜ್ಯದ ನಗರ, ಪಟ್ಟಣ, ಮಹಾನಗರಗಳಲ್ಲಿ ದಿನನಿತ್ಯ ಬೀದಿಬದಿ ಪುಟ್ಪಾತ್ ಗಳಲ್ಲಿ ತರಕಾರಿ, ಸೊಪ್ಪು, ಹಣ್ಣು, ಹೂವು ಮುಂತಾದ ದಿನೋಪಯೋಗಿ ವಸ್ತುಗಳನ್ನು ಮಾರುವವರು ಸಹಜವಾಗಿ ದಲಿತರು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರೇ ಮುಂತಾದ ತಳಸಮುದಾಯಗಳಿಗೆ ಸೇರಿದವರು. ಇವರು ಸದಾ ರಣಬಿಸಿಲು, ಗಾಳಿ, ಚಳಿ, ಭೀಕರ ಮಳೆಯಲ್ಲಿ ನಿಂತು ತಮ್ಮ ಕಾಯಕ ಮಾಡುತ್ತಿರುವವರನ್ನು ತಾವು ಗಮನಿಸಿರುತ್ತೀರಿ. ಈ ಸಣ್ಣ ಮತ್ತು ಬಡ ವ್ಯಾಪಾರಿ ಸಮುದಾಯದವರಿಗೆ ತಲೆಯ ಮೇಲೆ ಒಂದು ಸೂರಿನ ತುರ್ತು ಅವಶ್ಯಕತೆಯಿದೆ. ಇವರಿಗೊಂದು ಕೊಡೆ ಕೊಟ್ಟರೆ ತಮ್ಮನ್ನು ತಾವು ಬಿಸಿಲು, ಮಳೆ,ಗಾಳಿ,ಚಳಿಗಳಿಂದ ರಕ್ಷಿಸಿಕೊಳ್ಳುತ್ತಾ ತಮ್ಮ ಸಣ್ಣ ವ್ಯಾಪಾರ ವಹಿವಾಟು ನಡೆಸುತ್ತಾ ಜೀವ ಸವೆಸಬಲ್ಲರು. ಅಂತೆಯೇ ನೀವು ನೀಡಲಾಗುವ ಕೊಡೆಯನ್ನು ಜೋಪಾನವಾಗಿ ಇಟ್ಟುಕೊಳ್ಳಬಲ್ಲರು ಎಂದು ಡಾ.ಸಿ.ಎಸ್. ದ್ವಾರಕಾನಾಥ್ ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.
ತಾವು ತಮ್ಮ ಪಂಚ ಗ್ಯಾರಂಟಿಗಳ ಬಗ್ಗೆ ದಿನನಿತ್ಯ ಪೂರ್ಣಪುಟದ ಜಾಹೀರಾತನ್ನು ಪತ್ರಿಕೆಗಳಿಗೆ ಮತ್ತು ಸಾಮಾಜಿಕ ಜಾಲತಾಣವೇ ಮುಂತಾದ ಮಾಧ್ಯಮಗಳಿಗೆ ನೀಡುವ ಬದಲು ಅದೇ ಜಾಹೀರಾತನ್ನು ದೊಡ್ಡ ಕೊಡೆಗಳ ಮೇಲೆ ಮುದ್ರಿಸಿ ಬೀದಿಬದಿಯ ಈ ವ್ಯಾಪಾರಿಗಳಿಗೆ ಹಂಚಿದರೆ ಅವರಿಗೆ ಸೂರೂ ಆಗುತ್ತದೆ, ನಿಮ್ಮ ಜಾಹೀರಾತು ಬೀದಿಬದಿಯಲ್ಲಿ ನಳನಳಿಸುತ್ತಿರುತ್ತೆ. ಅಂತೆಯೇ ಬೀದಿಬದಿ ವ್ಯಾಪಾರಿಗಳು ಮಳೆ, ಗಾಳಿ, ಚಳಿ, ಬಿಸಿಲುಗಳಿಂದ ರಕ್ಷಣೆ ನೀಡುವ ಅಮೂಲ್ಯ ಕೊಡೆಯನ್ನು ಭದ್ರವಾಗಿ ಕಾಪಾಡಿಕೊಂಡು ದಿನನಿತ್ಯ ಬಳಸುತ್ತಾರೆ. ಆದ್ದರಿಂದ ನಿಮ್ಮ ಪಂಚ ಗ್ಯಾರಂಟಿಗಳನ್ನು ಕೊಡೆಗಳ ಮೇಲೆ ವರ್ಣರಂಜಿತವಾಗಿ ಮುದ್ರಿಸಿ ಬೀದಿಬದಿಯ ವ್ಯಾಪಾರಿಗಳಿಗೆ ಹಂಚಿದರೆ. ನಿಮ್ಮ ಜಾಹೀರಾತಿನ ಉದ್ದೇಶವೂ ಈಡೇರುತ್ತೆ. ಕೊಡೆ ಪಡೆದ ಬಡ ವ್ಯಾಪಾರಸ್ಥರು ನಿಮ್ಮ ಪಕ್ಷ ಮತ್ತು ಸರ್ಕಾರದ ಬಗ್ಗೆ ಪ್ರೀತಿಯನ್ನೂ ಹೊಂದಿರುತ್ತಾರೆ. ಆದ್ದರಿಂದ ಬೀದಿಬದಿ ವ್ಯಾಪಾರಿಗಳಿಗೆ ಉತ್ತಮ ಗುಣಮಟ್ಟದ, ಪಂಚ ಗ್ಯಾರಂಟಿಗಳ ಜಾಹೀರಾತಿರುವ ಕೊಡೆಗಳನ್ನು ಸರ್ಕಾರದಿಂದಲೇ ಹಂಚಬೇಕೆಂದು ಕೋರುತ್ತೇನೆ. ದಯವಿಟ್ಟು ನನ್ನ ಈ ಸಲಹೆಯನ್ನು ಪರಿಗಣಿಸಬೇಕೆಂದು ನಮ್ರವಾಗಿ ವಿನಂತಿಸುತ್ತೇನೆ ಎಂದು ಅವರು ಮನವಿ ಮಾಡಿದ್ದಾರೆ.