ಯೂಟ್ಯೂಬರ್ ಧ್ರುವ್ ರಾಥಿ ಇತ್ತೇಚೆಗೆ AI ಬಳಸಿ ಮಾಡಿದ ವಿಡಿಯೋದಿಂದ ಸಿಖ್ ಧರ್ಮದ, ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ ಎಂದು ಸಿಖ್ ಧರ್ಮದವರಿಂದ ಸಾಕಷ್ಟು ಟೀಕೆಗೆ ಗುರಿಯಾಗಿದ್ದಾರೆ.
ಇತ್ತೀಚೆಗೆ ಧ್ರುವ್ ರಾಥಿ “ದಿ ಸಿಖ್ ವಾರಿಯರ್ ಹೂ ಟೆರಿಫೈಡ್ ದಿ ಮೊಘಲ್ಸ್” ಎಂಬ ಶಿರ್ಷಿಕೆ ಬಳಸಿ AI ಮೂಲಕ ವಿಡಿಯೋವೊಂದನ್ನು ಮಾಡಿದ್ದರು. ಆ ವಿಡಿಯೋದಲ್ಲಿ ಸಿಖ್ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿರುವ ಕುರಿತು, ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿ (SGPC), ಶಿರೋಮಣಿ ಅಕಾಲಿ ದಳ (SAD), ಮತ್ತು ಅಕಾಲ್ ತಖ್ತ್ ಸೇರಿದಂತೆ ಪ್ರಮುಖ ಸಿಖ್ ಸಂಸ್ಥೆಗಳ ಆಕ್ಷೇಪಣೆಯ ನಂತರ, ಸೋಮವಾರ ವೀಡಿಯೊವನ್ನು ಯೂಟ್ಯೂಬ್ನಿಂದ ಡಿಲಿಟ್ ಮಾಡಿದ್ದಾರೆ.
ಸಿಖ್ ಗುರುಗಳನ್ನು ಮಾನವ ರೂಪದಲ್ಲಿ ತೋರಿಸಲು ಧ್ರುವ್ ರಾಥಿ AI ತಂತ್ರಜ್ಞಾನವನ್ನು ಬಳಸಿದ್ದರು. ಆ ವಿಡಿಯೋವನ್ನು ಕೆಲವು ವಿಕ್ಷಕರೂ ಮೆಚ್ಚಿದ್ದರು ಇನ್ನು ಕೆಲವರು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.
ದೆಹಲಿಯ ಸಚಿವರಾದ ಮಂಜಿಂದರ್ ಸಿಂಗ್ ಸಿರ್ಸಾ ಕೂಡ ಈ ವಿಡಿಯೋವನ್ನು ಖಂಡಿಸಿ “ಧೈರ್ಯ ಮತ್ತು ದೈವತ್ವದ ಸಾಕಾರ ರೂಪವಾದ ಶ್ರೀ ಗುರು ಗೋವಿಂದ ಸಿಂಗ್ ಜಿ ಅವರಿಗೆ ಮಾಡಿದ ಅವಮಾನ” ಎಂದು ಅವರು “ಎಕ್ಸ್” ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಧ್ರುವ್ “ಇತ್ತೀಚಿನ ವಿಡಿಯೋದ ಕುರಿತು ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ನಿಮ್ಮಲ್ಲಿ ಹಲವರು ವೀಡಿಯೊವನ್ನು ಮೆಚ್ಚಿಕೊಂಡಿದ್ದರೂ ಮತ್ತು ಅದು ಚಾನೆಲ್‌ನಲ್ಲಿ ಉಳಿಯಬೇಕೆಂದು ಬಯಸಿದ್ದರೂ, ಸಿಖ್ ಗುರುಗಳ ಯಾವುದೇ ಅನಿಮೇಟೆಡ್ ಚಿತ್ರಣವು ಅವರ ನಂಬಿಕೆಗೆ ವಿರುದ್ಧವಾಗಿದೆ ಎಂದು ಕೆಲವು ವೀಕ್ಷಕರು ಬಲವಾಗಿ ಭಾವಿಸುವುದರಿಂದ ನಾನು ಅದನ್ನು ತೆಗೆದುಹಾಕಲು ನಿರ್ಧರಿಸಿದ್ದೇನೆ” ಎಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದಿದ್ದಾರೆ.
“ಇದು ರಾಜಕೀಯ ಅಥವಾ ಧಾರ್ಮಿಕ ವಿವಾದವಾಗಬೇಕೆಂದು ನಾನು ಬಯಸುವುದಿಲ್ಲ, ಏಕೆಂದರೆ ಈ ವಿಡಿಯೋ ನಮ್ಮ ಭಾರತೀಯ ವೀರರ ಕಥೆಗಳನ್ನು ಹೊಸ ಶೈಕ್ಷಣಿಕ ಸ್ವರೂಪದಲ್ಲಿ ಪ್ರದರ್ಶಿಸುವ ಪ್ರಯತ್ನವಾಗಿತ್ತು” ಎಂದು ಯೂಟ್ಯೂಬರ್ ಧ್ರುವ್ ಹೇಳಿದ್ದಾರೆ.